ETV Bharat / business

ಸತತ ಮೂರು ದಿನಗಳ ಕುಸಿತದ ನಂತರ ಏರಿಕೆ ಕಂಡ ಷೇರು ಮಾರುಕಟ್ಟೆ: ಈಗ ಹೇಗಿದೆ ವಹಿವಾಟು?

ಜಾಗತಿಕ ಬೆಳವಣಿಗೆಗಳ ನಡುವೆ ವಿದೇಶಿ ಬಂಡವಾಳ ಒಳಹರಿವು ಹೆಚ್ಚಿದ ಹಿನ್ನೆಲೆ ಷೇರು ಮಾರುಕಟ್ಟೆ ಇಂದು ಚೇತರಿಕೆ ಕಂಡಿದೆ. ಆದರೆ, ಮತ್ತೆ ಇಳಿಕೆ ದಾಖಲಿಸುತ್ತಿದ್ದು ಹೂಡಿಕೆದಾರರಿಗೆ ಭೀತಿಯನ್ನೂ ಉಂಟು ಮಾಡಿದೆ.

SHARE MARKET UPDATES
ಷೇರು ಮಾರುಕಟ್ಟೆ (ANI)
author img

By ETV Bharat Karnataka Team

Published : September 3, 2026 at 1:22 PM IST

3 Min Read
Choose ETV Bharat

ಮುಂಬೈ (ಮಹಾರಾಷ್ಟ್ರ): ಮೂರು ದಿನಗಳ ಸತತ ಇಳಿಕೆಯ ನಂತರ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಬ್ಲೂ ಚಿಪ್ ಬ್ಯಾಂಕ್ ಷೇರುಗಳ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಗಳ ಏರಿಕೆ ಇದಕ್ಕೆ ಕಾರಣವಾಗಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ ಗರಿಷ್ಠ 334.16 ಪಾಯಿಂಟ್‌ಗಳ ಏರಿಕೆ ಕಂಡು 76,904.51 ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ ಗರಿಷ್ಠ 95.45 ಪಾಯಿಂಟ್‌ಗಳ ಏರಿಕೆ ಕಂಡು 24,009.90 ಕ್ಕೆ ತಲುಪಿತು.

ಆರಂಭಿಕ ಲಾಭ ದಾಖಲಿಸಿದ ಷೇರುಗಳಿವು: ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್ ಗ್ರಿಡ್, ಎಟರ್ನಲ್, ಲಾರ್ಸೆನ್ & ಟೂಬ್ರೊ, ಭಾರ್ತಿ ಏರ್‌ಟೆಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ಲಾಭ ಗಳಿಸಿದವು.

ಈ ಷೇರುಗಳಲ್ಲಿ ಹಿನ್ನಡೆ: ಆದರೆ, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಬಜಾಜ್ ಫೈನಾನ್ಸ್, ಟೈಟಾನ್, ಇಂಡಿಗೊ, ಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಐಟಿಸಿ ಕಂಪನಿಗಳು ನಷ್ಟಕ್ಕೀಡಾಗಿವೆ.

ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸುವ ನಿಟ್ಟಿನಲ್ಲಿ ಆರ್‌ಬಿಐ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಡಿ ಯುಎಸ್ ಬಾಂಡ್ ಖರೀದಿ ಇಳಿಕೆ ಮತ್ತು ವಿದೇಶಿ ಬಂಡವಾಳ ಹೂಡಿಕೆ ದಾಖಲೆ ಪ್ರಮಾಣದಲ್ಲಿ ಒಳಬರುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಏರಿಕೆ ಕಂಡು ಬಂದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

"ಯುಎಸ್ ಬಾಂಡ್ ದರದಲ್ಲಿ ಸ್ವಲ್ಪ ಇಳಿಕೆಯಾದ ನಂತರ ಮಾರುಕಟ್ಟೆಯು ಸುಧಾರಿಸಿದೆ. ಎಫ್‌ಸಿಎನ್‌ಆರ್(ಬಿ) ಯೋಜನೆಯಡಿ ಕ್ರೋಢೀಕರಿಸಲಾದ ಯುಎಸ್‌ಡಿ 127 ಬಿಲಿಯನ್ ಒಮ್ಮತದ ಅಂದಾಜುಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ. ಮಾರುಕಟ್ಟೆ ದೃಷ್ಟಿಕೋನದಿಂದ ಇದರ ಅರ್ಥವೇನೆಂದರೆ, ರೂಪಾಯಿ ಸ್ಥಿರಗೊಳ್ಳುತ್ತದೆ. ಇದು ವಿದೇಶಿ ಹೂಡಿಕೆದಾರರಿಗೆ ವಿಶ್ವಾಸವನ್ನು ನೀಡುತ್ತದೆ" ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ತಿಳಿಸಿದ್ದಾರೆ.

ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸುವ ಉದ್ದೇಶದಿಂದ ಆರ್​ಬಿಐ ಆರಂಭಿಸಿರುವ ವಿಶೇಷ ಕಾರ್ಯಕ್ರಮದಡಿ, ಭಾರತವು ವಿದೇಶಿ ಕರೆನ್ಸಿ ಠೇವಣಿಗಳ ಮೂಲಕ ದಾಖಲೆಯ 127.23 ಶತಕೋಟಿ ಡಾಲರ್‌ಗಳನ್ನು ಸಂಗ್ರಹಿಸಿದೆ. ಇದು ಮಾರುಕಟ್ಟೆ ಮೇಲಿನ ಒತ್ತಡವನ್ನು ತಗ್ಗಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಆಗಸ್ಟ್ 31 ರ ಹೊತ್ತಿಗೆ ವಿದೇಶಿ ಕರೆನ್ಸಿ ಅನಿವಾಸಿ ಬ್ಯಾಂಕ್​​ನಿಂದ 127.226 ಬಿಲಿಯನ್​ ಯುಎಸ್​ ಡಾಲರ್‌ಗಳಷ್ಟು ಠೇವಣಿ ಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ತಿಳಿಸಿದೆ.

ಏತನ್ಮಧ್ಯೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 6,688.37 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸಹ 2,812.98 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ದತ್ತಾಂಶ ತಿಳಿಸಿದೆ.

ಎಫ್‌ಐಐಗಳು ಅಂದರೆ ವಿದೇಶಿ ಹೂಡಿಕೆದಾರರು 6,688 ಕೋಟಿ ರೂಪಾಯಿ, ಸಾಂಸ್ಥಿಕ ಹೂಡಿಕೆದಾರರು (ಡಿಐಐ) 2,812 ಕೋಟಿ ರೂಪಾಯಿ ಸೇರಿ ಒಟ್ಟು 9,500 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ ಹೊರತಾಗಿಯೂ ನಿನ್ನೆ (ಬುಧವಾರ) ನಿಫ್ಟಿ 141 ಅಂಕಗಳ ಕುಸಿತ ಕಂಡಿರುವುದು ಅಚ್ಚರಿ ತಂದಿದೆ ಎಂದು ವಿಶ್ಲೇಷಕ ವಿಜಯಕುಮಾರ್ ಹೇಳಿದ್ದಾರೆ.

"ಇದು ಕಡಿಮೆ ಹೂಡಿಕೆದಾರರು, ವ್ಯಾಪಾರಿಗಳ ಕಾರಣಕ್ಕಾಗಿ ಮಾರುಕಟ್ಟೆ ಕುಸಿತ ಕಂಡಿದೆ ಎಂಬುದು ಸ್ಪಷ್ಟವಾಗಿದೆ. ಅವರು ಮಾರುಕಟ್ಟೆಯಲ್ಲಿನ ಏರಿಳಿತವನ್ನು ಗಮನಿಸಿ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿಜಯ್​ ಕುಮಾರ್​ ಅಭಿಪ್ರಾಯಪಟ್ಟಿದ್ದಾರೆ.

ಕಚ್ಚಾ ತೈಲ ಬೆಲೆ ಮತ್ತೆ ಇಳಿಕೆ: ಜಾಗತಿಕ ವಿದ್ಯಮಾನಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಕಾರಣಕ್ಕೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 0.17 ಪ್ರತಿಶತ ಕುಸಿದು 95.47 ಡಾಲರ್‌ಗೆ ತಲುಪಿದೆ.

ಷೇರು ಮಾರುಕಟ್ಟೆಯಲ್ಲಿ ಮತ್ತೆ ಏರಿಳಿತ: ದಿನದ ಆರಂಭಿಕ ವಹಿವಾಟಿನಲ್ಲಿ 350 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್​ ಮಧ್ಯಾಹ್ನದ ಹೊತ್ತಿಗೆ ಅಷ್ಟೂ ಅಂಕಗಳನ್ನು ಕಳೆದುಕೊಂಡಿದೆ. ಸದ್ಯ ಅಂದರೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಮತ್ತೆ 60 ಅಂಕ ಏರಿಕೆ ಕಂಡು 76,637 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ, ನಿಫ್ಟಿ ಕೂಡ ಭಾರಿ ಇಳಿಕೆ ಕಂಡು 23,900 ಅಂಕಕ್ಕೆ ಇಳಿದಿದೆ.

ಇವುಗಳನ್ನೂ ಓದಿ: