ETV Bharat / business

ಹಾರ್ಮುಜ್‌ ಜಲಸಂಧಿಗೆ ಅಮೆರಿಕ ದಿಗ್ಬಂಧನ ಘೋಷಿಸಿದ ಬೆನ್ನಲ್ಲೇ ತೈಲ ಬೆಲೆ ಏರಿಕೆ

ಹಾರ್ಮುಜ್‌ ಜಲಸಂಧಿಗೆ ಇಂದು ದಿಗ್ಬಂಧನ ಹಾಕುವುದಾಗಿ ಅಮೆರಿಕ ಘೋಷಿಸಿದ ತಕ್ಷಣ ಜಾಗತಿಕವಾಗಿ ತೈಲ ಬೆಲೆಗಳು ಏರತೊಡಗಿದ್ದು, ಬ್ಯಾರೆಲ್‌ಗೆ 100 ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : April 13, 2026 at 9:14 AM IST

1 Min Read
Choose ETV Bharat

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಗೆ ನೌಕಾ ದಿಗ್ಬಂಧನ ಘೋಷಿಸಿದ ನಂತರ ಇಂದು (ಸೋಮವಾರ) ಬೆಳಿಗ್ಗೆ ತೈಲ ಬೆಲೆಗಳು ಏರತೊಡಗಿವೆ.

ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ.6.81ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ 101.68 ಯುಎಸ್ ಡಾಲರ್‌ ತಲುಪಿದೆ. ಅದರಂತೆ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲ ಬೆಲೆ ಶೇ.7.97ರಷ್ಟು ಏರಿದ್ದು, 104.26 ಡಾಲರ್‌ಗಳಲ್ಲಿ ವಹಿವಾಟು ನಡೆಯುತ್ತಿದೆ.

ಇರಾನ್ ಹಾರ್ಮುಜ್ ಜಲಮಾರ್ಗದಿಂದ ಲಾಭ ಪಡೆಯುವುದನ್ನು ತಡೆಯಲು ಅಮೆರಿಕ ನೌಕಾಪಡೆ ಈ ಪ್ರದೇಶದಲ್ಲಿ ಹಡಗುಗಳನ್ನು ತಕ್ಷಣವೇ ತಡೆಹಿಡಿಯಲು ಪ್ರಾರಂಭಿಸಲಿದೆ ಎಂದು ಟ್ರಂಪ್ ಟ್ರೂಥ್ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಪ್ರವೇಶಿಸುವ ಅಥವಾ ಬಿಡಲು ಪ್ರಯತ್ನಿಸುವ ಎಲ್ಲಾ ಹಡಗುಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ತಕ್ಷಣವೇ ಅಮೆರಿಕ ನೌಕಾಪಡೆ ಶುರು ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲ ಮಾರ್ಗದಲ್ಲಿ ಜಗತ್ತಿನ ಎಲ್ಲಾ ಹಡಗುಗಳಿಗೂ ಅವಕಾಶ ನೀಡುವ ಪರಿಸ್ಥಿತಿ ಸೃಷ್ಟಿಸುವುದು ನಮ್ಮ ಗುರಿ. ಹೀಗಿದ್ದರೂ, ಸಮುದ್ರದೊಳಗೆ ಸ್ಫೋಟಕಗಳನ್ನಿಟ್ಟಿರುವ ಇರಾನಿನ ಕ್ರಮಗಳಿದಾಗಿ ಇಂಥ ದಿಗ್ಬಂಧನ ಅಗತ್ಯವಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಒಂದು ಹಂತದಲ್ಲಿ ನಾವು ಈ ಜಲಸಂಧಿಯಲ್ಲಿ ಎಲ್ಲರೂ ಒಳ ಹೋಗಲು ಮತ್ತು ಎಲ್ಲರಿಗೂ ಹೊರ ಹೋಗಲು ಮುಕ್ತ ಅವಕಾಶ ನೀಡುವ ಪರಿಸ್ಥಿತಿ ತಲುಪುತ್ತೇವೆ. ಆದರೆ ಜಲಮಾರ್ಗದಲ್ಲಿ ಸ್ಫೋಟಕ ಇರಬಹುದೆಂದು ಎಚ್ಚರಿಸುವ ಮೂಲಕ ಇರಾನ್ ಅದನ್ನು ಸಾಧ್ಯವಾಗಿಸಲು ಅವಕಾಶ ನೀಡುತ್ತಿಲ್ಲ. ಜಲಮಾರ್ಗದಲ್ಲಿ ಎಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂಬುದು ಅವರ ಹೊರತಾಗಿ ಯಾರಿಗೂ ಗೊತ್ತಿಲ್ಲ. ಈ ಮೂಲಕ ಜಗತ್ತು ಮತ್ತು ಅದರಲ್ಲೂ ವಿಶೇಷವಾಗಿ ಅಮೆರಿಕವನ್ನು ಅವರು ಎಂದಿಗೂ ಸುಲಿಗೆ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ನಮ್ಮ ಮೇಲೆ ಅಥವಾ ಶಾಂತಿಯುತವಾಗಿ ಸಾಗುವ ಹಡಗುಗಳ ಮೇಲೆ ಗುಂಡು ಹಾರಿಸುವ ಇರಾನ್‌ನ ಯಾವುದೇ ವ್ಯಕ್ತಿ ನರಕಕ್ಕೆ ತಳ್ಳಲ್ಪಡುತ್ತಾನೆ. ಇರಾನ್‌ನ ನೌಕಾಪಡೆ, ವಾಯುಪಡೆ, ವಿಮಾನ ವಿರೋಧಿ ಮತ್ತು ರಾಡಾರ್ ಈಗಾಗಲೇ ನಾಶವಾಗಿವೆ. ಖಮೇನಿ ಮತ್ತು ಅವರ ಹೆಚ್ಚಿನ ನಾಯಕರು ಸತ್ತಿದ್ದಾರೆ. ಇದೆಕ್ಕೆಲ್ಲಾ ಕಾರಣ ಅವರ ಪರಮಾಣು ಯೋಜನೆಯ ಮಹತ್ವಾಕಾಂಕ್ಷೆ ಎಂದು ಟೀಕಿಸಿದ್ದಾರೆ.

ಒಂದು ವೇಳೆ ದಿಗ್ಬಂಧನ ಮೀರಿ ಪರಿಸ್ಥಿತಿ ಉಲ್ಬಣಿಸಿದರೆ ಮತ್ತಷ್ಟು ದಾಳಿಗೆ ನಮ್ಮ ಸೇನಾಪಡೆಗಳು ಸಿದ್ಧವಾಗಿವೆ. ಇರಾನ್‌ನ ಉಳಿದಿರುವ ಸ್ವಲ್ಪ ಭಾಗವನ್ನೂ ನಾವು ಮುಗಿಸುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಇರಾನ್‌ನ ಬಂದರುಗಳಿಗೆ ದಿಗ್ಬಂಧನ: ಅಮೆರಿಕ ಘೋಷಣೆ