ಇರಾನ್ ಬಿಕ್ಕಟ್ಟು: ಭಾರತದಲ್ಲಿ ತೈಲ, ನೈಸರ್ಗಿಕ ಅನಿಲ ಬೆಲೆ ಏರುವುದೇ? ಎಷ್ಟು ದಿನಕ್ಕಿದೆ ದಾಸ್ತಾನು?
ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಇದರ ನೇರ ಪರಿಣಾಮ ಜಾಗತಿಕ ತೈಲ ಪೂರೈಕೆಯ ಮೇಲಾಗುತ್ತಿದೆ. ಇರಾನ್ ಬಿಕ್ಕಟ್ಟಿನಿಂದ ಭಾರತದಲ್ಲಿ ತೈಲ, ನೈಸರ್ಗಿಕ ಬೆಲೆ ಏರಿಕೆಯಾಗಬಹುದೇ?. ಮಾರುಕಟ್ಟೆ ವಿಶ್ಲೇಷಕರು, ಅಧಿಕಾರಿಗಳು ಹೇಳವುದೇನು?

Published : March 2, 2026 at 8:05 AM IST
ನವದೆಹಲಿ: ಇರಾನ್ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಭಾರತ ತೈಲ ಸರಬರಾಜಿನಲ್ಲಿ ಯಾವುದೇ ತಕ್ಷಣದ ಅಡಚಣೆ ಎದುರಿಸುವ ಸಾಧ್ಯತೆ ಇಲ್ಲ. ಆದರೆ, ಕಚ್ಚಾ ತೈಲ ಬೆಲೆಗಳ ಹೆಚ್ಚಳ ಮತ್ತು ಆರ್ಥಿಕ ಒತ್ತಡಗಳನ್ನು ಅಲ್ಪಾವಧಿಯಲ್ಲಿ ನಿರೀಕ್ಷಿಸಲಾಗುತ್ತಿದೆ.
ಎಷ್ಟಿದೆ ತೈಲ ದಾಸ್ತಾನು?: ಭಾರತೀಯ ಸಂಸ್ಕರಣಾಗಾರಗಳು ಇದೀಗ ಕನಿಷ್ಠ 10 ದಿನಗಳ ಅವಶ್ಯಕತೆ ಪೂರೈಸಲು ಬೇಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಹೊಂದಿವೆ. ಇಂಧನ ದಾಸ್ತಾನು 5ರಿಂದ 7 ದಿನಗಳಿಗೆ ಸಾಕಾಗುವಷ್ಟಿದೆ. ಹಾಗಾಗಿ, ಅಲ್ಪಾವಧಿಯ ಅಡಚಣೆಯ ಪರಿಣಾಮವನ್ನು ಇದು ಕಡಿಮೆ ಮಾಡಬಲ್ಲದು ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಮಾತು.
ಪಶ್ಚಿಮ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಳವಣಿಗೆಗಳು ಭೌಗೋಳಿಕ ರಾಜಕೀಯದ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿವೆ ನಿಜ. ಆದರೆ ಅಮೆರಿಕ, ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ರಷ್ಯಾದಿಂದ ತೈಲ ಪಡೆಯುವ ಯೋಜನೆಗಳು ನಮ್ಮ ಮುಂದಿವೆ ಎಂದು ಅವರು ಹೇಳುತ್ತಿದ್ದಾರೆ.
ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್: ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ ಎಂದು ಇರಾನ್ ರಾಜ್ಯ ಮಾಧ್ಯಮ ನಿನ್ನೆ ತಿಳಿಸಿತ್ತು.
ಹಾರ್ಮುಜ್ ಜಲಸಂಧಿಯ ಪ್ರಾಮುಖ್ಯತೆ:
- ವಿಶ್ವದ ಅತ್ಯಂತ ಮುಖ್ಯವಾದ ಇಂಧನ ಸರಬರಾಜು ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಜಾಗತಿಕ ಪೆಟ್ರೋಲಿಯಂನ ಸುಮಾರು ಶೇ.20 ಮತ್ತು ಜಾಗತಿಕ ಎಲ್‌ಎನ್‌ಜಿ(ನೈಸರ್ಗಿಕ ಅನಿಲ) ಸಾಗಣೆಯ ಐದನೇ ಒಂದು ಭಾಗವನ್ನು ನಿರ್ವಹಿಸುತ್ತದೆ.
- ಈ ಜಲಸಂಧಿಯಿಂದ ದಿನಕ್ಕೆ ಸುಮಾರು 2.5ರಿಂದ 2.7 ಮಿಲಿಯನ್ ಬ್ಯಾರೆಲ್‌ಗಳು ಅಥವಾ ಭಾರತದ ಕಚ್ಚಾ ತೈಲದ ಸುಮಾರು ಶೇ.50ರಷ್ಟು ಆಮದುಗಳು ನಡೆಯುತ್ತವೆ.
- ಇವುಗಳನ್ನು ಹೆಚ್ಚಾಗಿ ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಪಡೆಯಲಾಗುತ್ತದೆ.
- ಭಾರತದ ನೈಸರ್ಗಿಕ ಅನಿಲ(LNG) ಆಮದುಗಳಲ್ಲಿ ಸುಮಾರು ಶೇ.60 ಮತ್ತು ಅದರ ಬಹುತೇಕ ಎಲ್ಲಾ ಎಲ್‌ಪಿಜಿ ಸಾಗಣೆಗಳೂ ಸಹ ಇದೇ ಜಲಸಂಧಿಯ ಮೂಲಕವೇ ಹಾದು ಬರುತ್ತವೆ. ಇದು ಭಾರತದ ಇಂಧನ ಭದ್ರತೆಗೆ ಈ ಜಲಸಂಧಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
- ಅಲ್ಪಾವಧಿಯ ಪೂರೈಕೆಯ ತೊಂದರೆಗಳು ಸೀಮಿತ ಪೂರೈಕೆಯ ಪರಿಣಾಮಗಳನ್ನು ಹೊಂದಿದ್ದು, ಇವು ತೈಲ ಬೆಲೆಗಳಲ್ಲಿ ಪ್ರತಿಫಲಿಸುವ ನಿರೀಕ್ಷೆ ಇದೆ.
ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಸುಮಾರು 73 ಡಾಲರ್ ತಲುಪಿದೆ. ಇದು ವರ್ಷದಿಂದ ಇಲ್ಲಿಯವರೆಗೆ ಬ್ಯಾರೆಲ್‌ಗೆ 12 ಡಾಲರ್‌ಗಳಿಗಿಂತ ಹೆಚ್ಚಾಗಿದೆ. ಕೆಲವು ಸನ್ನಿವೇಶಗಳು ಪೂರೈಕೆಯ ಹರಿವಿನ ಮೇಲೆ ತೀವ್ರ ಬೆದರಿಕೆವೊಡ್ಡಿದರೆ ಬೆಲೆ ಬ್ಯಾರೆಲ್‌ಗೆ 80 ಡಾಲರ್ ತಲುಪುವ ಸಾಧ್ಯತೆಯೂ ಗೋಚರಿಸಿದೆ.
ಭಾರತದ ಮುಂದಿರುವ ಆಯ್ಕೆಗಳೇನು?: ಭಾರತದ ಇಂಧನ ಅಗತ್ಯತೆಗಳನ್ನು ಪೂರೈಸಲು ವಿವಿಧ ಸರಬರಾಜು ವ್ಯವಸ್ಥೆಗಳು ಇರುವುದರಿಂದ ಅಲ್ಪಾವಧಿಗೆ ಈ ಜಲಸಂಧಿಯನ್ನು ಮುಚ್ಚಿದರೆ ಹೆಚ್ಚು ಪರಿಣಾಮ ಆಗುವುದಿಲ್ಲ. ಆದರೆ, ಜಲಸಂಧಿಯಲ್ಲಿ ದೀರ್ಘಕಾಲದ ಸಮಸ್ಯೆಗಳು ಉದ್ಭವಿಸಿದರೆ ಭಾರತ ಆಮದುಗಳನ್ನು ಮರುಮಾಪನ ಮಾಡಬಹುದು. ರಷ್ಯಾದಿಂದ ತೈಲದ ಖರೀದಿಯನ್ನು ಹೆಚ್ಚಿಸುವುದೂ ಸೇರಿದಂತೆ ಇತರೆ ಪೂರೈಕೆದಾರರಿಂದ ತೈಲ ಪಡೆಯುವ ಅವಕಾಶಗಳಿವೆ.
ಹೀಗಿದ್ದೂ ಸೌದಿ ಅರೇಬಿಯಾ ಮತ್ತು ಕತಾರ್‌ನಂತಹ ದೇಶಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದರಿಂದ ಆರ್ಥಿಕವಾಗಿ ಭಾರೀ ಹೊಡೆತ ಬೀಳುತ್ತವೆ. ಹಾಗಾಗಿ, ಈ ನಿಟ್ಟಿನಲ್ಲಿ ಆ ದೇಶಗಳು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಈಗ ವಾಯುದಾಳಿ, ಮುಂದೆ ಜಲಸಂಧಿಗೋಸ್ಕರ ನೌಕಾ ದಾಳಿ?: ಒಂದು ವೇಳೆ ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ಮುಚ್ಚಿದ್ದೇ ಆದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಿರುದ್ಧ ಅಮೆರಿಕ ಮತ್ತು ಈ ಪ್ರದೇಶದ ಇತರ ಶಕ್ತಿಗಳು ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ವಿಶ್ಲೇಷಕರೊಬ್ಬರು ಹೇಳಿದರು.
ಸದ್ಯಕ್ಕೆ, ಜಲಸಂಧಿಯ ಮುಚ್ಚುವಿಕೆ ಕಡಿಮೆ ಅವಧಿಯದ್ದಾಗಿರುತ್ತದೆ. ಒಂದು ವಾರಕ್ಕಿಂತ ಕಡಿಮೆ ಅವಧಿಯವರೆಗೆ ಇರಬಹುದು ಎಂಬ ಊಹೆಯ ಮೇಲೆ ಭಾರತ ಕಾರ್ಯನಿರ್ವಹಿಸುತ್ತಿದೆ.
ಅಧಿಕಾರಿಗಳ ಮಾತು: ಭಾರತೀಯ ತೈಲ ಸಂಸ್ಕರಣಾಗಾರಗಳು ಟ್ಯಾಂಕ್‌ಗಳು ಮತ್ತು ಸಾಗಣೆಯಲ್ಲಿ 10ರಿಂದ 15 ದಿನಗಳ ಕಚ್ಚಾ ದಾಸ್ತಾನು ಹೊಂದಿರುತ್ತವೆ. ಇದಲ್ಲದೆ, ಅವುಗಳ ಎಲ್ಲಾ ಇಂಧನ ಟ್ಯಾಂಕ್‌ಗಳು ತುಂಬಿರುತ್ತವೆ. ಇದು ದೇಶದ ಇಂಧನ ಅಗತ್ಯದ 7-10 ದಿನಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಇದೇ ವೇಳೆ ಅವರು, ಸದ್ಯಕ್ಕೆ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎಂದರು.
ಇನ್ನೊಬ್ಬ ಅಧಿಕಾರಿ ಪ್ರತಿಕ್ರಿಯಿಸಿ, ಜಗತ್ತಿಗೆ ಸಾಕಷ್ಟು ಕಚ್ಚಾ ತೈಲ ಸರಬರಾಜು ಮಾಡುವ ವ್ಯವಸ್ಥೆಗಳಿವೆ. ಭಾರತವು ಪಶ್ಚಿಮ ಆಫ್ರಿಕಾ ಮತ್ತು ಅಮೆರಿಕವನ್ನು ಹೊರತುಪಡಿಸಿ ದೂರದ ವೆನೆಜುವೆಲಾ ಮತ್ತು ಬ್ರೆಜಿಲ್‌ವರೆಗೂ ತೈಲ ಮಾರಾಟಗಾರರಿಂದ ವ್ಯಾಪಾರ ಮಾಡಬಹುದು ಎಂದರು.
"ಅಮೆರಿಕದ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಭಾರತ ರಷ್ಯಾದಿಂದ ತೈಲ ಖರೀದಿಗಳನ್ನು ಕಡಿತಗೊಳಿಸಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ತೀವ್ರ ಅಡಚಣೆ ಉಂಟಾದರೆ ನಾವು ರಷ್ಯಾದಿಂದ ಖರೀದಿಗೆ ಹಿಂತಿರುಗಬಹುದು" ಎಂದು ಅವರು ಹೇಳಿದರು. "ಆದರೆ ಈ ನಿಟ್ಟಿನಲ್ಲಿ ಒಂದೇ ಪ್ರಶ್ನೆ ಅದು ಸಾಗಣೆ ಸಮಯ. ಮಧ್ಯಪ್ರಾಚ್ಯದಿಂದ ಬರುವ ಹಡಗು ಭಾರತಕ್ಕೆ ಪ್ರಯಾಣಿಸಲು 5 ದಿನ ತೆಗೆದುಕೊಳ್ಳುತ್ತದೆ. ಆದರೆ ರಷ್ಯಾದಿಂದ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಆದ್ದರಿಂದ ಸಮಯ ಇಲ್ಲಿರುವ ಪ್ರಶ್ನೆ" ಎಂದು ಅವರು ಹೇಳುತ್ತಾರೆ.
ನೈಸರ್ಗಿಕ ಅನಿಲ(LNG) ದರ ಏರುವುದೇ?: ಇನ್ನು ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಕೆ ಸ್ಥಗಿತ ದೀರ್ಘಕಾಲದವರೆಗೆ ಮುಂದುವರಿದರೆ ಪರಿಸ್ಥಿತಿ ಅನಿಶ್ಚಿತವಾಗಬಹುದು. ಅಲ್ಪಾವಧಿಯ ಪೂರೈಕೆಯನ್ನು ಖಚಿತಪಡಿಸಿಕೊಂಡರೂ ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ಮುಚ್ಚುವುದರಿಂದ ಭಾರತಕ್ಕೆ ಸಾಕಷ್ಟು ಪರ್ಯಾಯ ಅವಕಾಶಗಳು ಇಲ್ಲದಿರಬಹುದು ಎಂಬುದು ಮತ್ತೊಬ್ಬ ಅಧಿಕಾರಿ ಕಳವಳ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದಿಂದ ಇಂಧನ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಾದ ಭಾರತ ಅಥವಾ ಚೀನಾ ಪರ್ಯಾಯ ಪೂರೈಕೆಗಳನ್ನು ಬಳಸಿಕೊಂಡರೆ ನೈಸರ್ಗಿಕ ಅನಿಲ ಬೆಲೆಗಳು ಏರಿಕೆಯಾಗಬಹುದು ಎಂದು ಅವರು ಹೇಳಿದರು.
ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪರ್ಯಾಯಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಜಾಗತಿಕ ನಾಯಕರು ಹೇಳಿದ್ದೇನು?

