ಮುಂದಿನ 150 ದಿನ ಶೇ.10 ಸುಂಕದೊಂದಿಗೆ ಭಾರತದಿಂದ ಅಮೆರಿಕಕ್ಕೆ ರಫ್ತು
ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರ ರಫ್ತು ಆದೇಶ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಶೇ.10ರಷ್ಟು ಸುಂಕದೊಂದಿಗೆ ಭಾರತ ರಫ್ತು ಮಾಡಲಿದ್ದು, ಇದು ಔಷಧ, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಸರಕಿನ ವಹಿವಾಟಿನಲ್ಲಿ ಸುಧಾರಣೆ ಕಾಣಲಿದೆ.


Published : February 23, 2026 at 5:43 PM IST
ನವದೆಹಲಿ: ಟ್ರಂಪ್ ಆಡಳಿತ ವಿಧಿಸಿದ್ದ ಸುಂಕವನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ಮಂಗಳವಾರದಿಂದ ಮುಂದಿನ 150 ದಿನಗಳವರೆಗೆ ಅಮೆರಿಕಕ್ಕೆ ಭಾರತ ಶೇ.25ರ ಬದಲಾಗಿ ಶೇ.10ರಷ್ಟು ಸುಂಕದೊಂದಿಗೆ ರಫ್ತು ಆರಂಭಿಸಲಿದೆ.
ತಜ್ಞರು ಹೇಳುವಂತೆ, ಡೊನಾಲ್ಡ್ ಟ್ರಂಪ್ ಸುಂಕವನ್ನು ಶೇ.15ಕ್ಕೆ ಹೆಚ್ಚಿಸಿ ಘೋಷಣೆ ಮಾಡಿರುವುದರಿಂದ ವ್ಯಾಪಾರ ಸಮುದಾಯದಲ್ಲಿ ಅನಿಶ್ಚಿತತೆ ಇದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಕಳೆದ ವಾರ ಸುಪ್ರೀಂ ಕೋರ್ಟ್, ಟ್ರಂಪ್ ವಿಧಿಸಿದ್ದ ಸುಂಕವನ್ನು ರದ್ದುಗೊಳಿಸಿದೆ. ಇದಾದ ಬಳಿಕ ಟ್ರಂಪ್ ಭಾರತ ಸೇರಿದಂತೆ ಎಲ್ಲಾ ದೇಶಗಳ ಮೇಲೆ ಫೆಬ್ರವರಿ 24ರಿಂದ 150 ದಿನಗಳವರೆಗೆ ಶೇ.10ರಷ್ಟು ಸುಂಕ ವಿಧಿಸಿದರು. ಈ ಆದೇಶ ಘೋಷಣೆಯಾದ ಕೆಲವೇ ಗಂಟೆಯೊಳಗೆ ಅವರು ಶೇ.15ರಷ್ಟು ಸುಂಕವನ್ನು ಘೋಷಿಸಿದ್ದಾರೆ.
ಸದ್ಯದ ಆದೇಶದ ಅನುಸಾರ, ಫೆ.24ರಿಂದ ಭಾರತ ಉತ್ಪನ್ನಗಳ ಮೇಲೆ ರಫ್ತು ಸುಂಕ ಶೇ.10ರಷ್ಟು ಸುಂಕದೊಂದಿಗೆ ವಹಿವಾಟ ಪ್ರಾರಂಭವಾಗಿದೆ. ಆದರೆ, ಮತ್ತೊಂದು ಸುಂಕವನ್ನು ಟ್ರಂಪ್ ವಿಧಿಸಿರುವುದರಿಂದ ಈ ಕುರಿತು ಗೊಂದಲ ಮುಂದುವರೆದಿದ್ದು, ಮುಂದಿನ 150 ದಿನ ಏನಾಗಲಿದೆ ಎಂಬ ಕುರಿತು ಸ್ಪಷ್ಟನೆ ಇಲ್ಲ ಎಂದು ಭಾರತೀಯ ರಫ್ತು ಸಂಘಟನೆಯ ಪ್ರಧಾನ ನಿರ್ದೇಶಕ ಅಜಯ್ ಸಹೈ ತಿಳಿಸಿದ್ದಾರೆ.
ಭಾರತೀಯ ರಫ್ತುದಾರರಿಗೆ ಅಮೆರಿಕ ಪ್ರಮುಖ ತಾಣ. ಆಮದು ಸುಂಕಗಳ ಮೇಲಿನ ಅನಿಶ್ಚಿತತೆಯು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಸುಂಕದ ನಾಟಕಕ್ಕೆ ತೆರೆ ಎಳೆಯಬೇಕು. ಸುಂಕಗಳ ಕುರಿತು ಸ್ಪಷ್ಟತೆ ಮತ್ತು ಖಚಿತತೆ ಸಿಕ್ಕಾಗ ಅಮೆರಿಕಕ್ಕೆ ರಫ್ತು ಹೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ. ಸುಂಕದ ಅನಿಶ್ಚಿತತೆಯನ್ನು ತೆಗೆದುಹಾಕುವುದರಿಂದ ರಫ್ತುದಾರರಿಗೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ರಫ್ತುದಾರರು ಹೇಳಿದರು.
2025ರ ಆಗಸ್ಟ್ನಲ್ಲಿ ಅಮೆರಿಕ ಭಾರತದ ಮೇಲೆ ಶೇ.25ರಷ್ಟು ಪರಸ್ಪರ ಸುಂಕ ವಿಧಿಸಿತ್ತು. ಬಳಿಕ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಕಾರಣ ನೀಡಿ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ಹೇರಿತು. ಇದರಿಂದಾಗಿ ಭಾರತದ ಮೇಲಿನ ಒಟ್ಟು ಸುಂಕಗಳು ಶೇ.50ಕ್ಕೆ ತಲುಪಿತು.
ಈ ತಿಂಗಳಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಚೌಕಟ್ಟು ರೂಪುಗೊಂಡಿತು. ಇದರ ಬೆನ್ನ್ನಲ್ಲೇ ಟ್ರಂಪ್, ಭಾರತದ ಮೇಲಿನ ಸುಂಕವನ್ನು ಶೇ.18ಕ್ಕೆ ಇಳಿಸಿದ್ದು, ಇಲ್ಲಿಯವರೆಗೆ ದಂಡ ವಿಧಿಸುವ ಶೇ.25 ಅನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದರು.
ಇವುಗಳನ್ನೂ ಓದಿ:

