ETV Bharat / business

ಚೀನಾ ಹಿಂದಿಕ್ಕಿ ವಿಶ್ವದಲ್ಲಿಯೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ವಿಶ್ವದಲ್ಲಿಯೆ ಅಕ್ಕಿ ರಫ್ತು ಮಾಡುವ ಮೊದಲ ದೇಶವಾಗಿ ಭಾರತ ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಚೀನಾ ಈ ಸ್ಥಾನದಲ್ಲಿತ್ತು.

HIGHEST RICE PRODUCER COUNTRY
ಪ್ರಾತಿನಿಧಿಕ ಚಿತ್ರ (ETV Bharat)
author img

By ETV Bharat Karnataka Team

Published : January 5, 2026 at 5:26 PM IST

2 Min Read
Choose ETV Bharat

ನವದೆಹಲಿ: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಇದೀಗ, ಅಕ್ಕಿ ಉತ್ಪಾದನೆಯಲ್ಲೂ ಡ್ರ್ಯಾಗನ್ ರಾಷ್ಟ್ರವನ್ನು ಹಿಂದಕ್ಕೆ ತಳ್ಳುವ ಮೂಲಕ ವಿಶ್ವದಲ್ಲಿಯೇ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ.

ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಅವರು, ಭಾರತವು 150.18 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ಚೀನಾದ ಅಕ್ಕಿ ಉತ್ಪಾದನೆಯು 145.28 ಮಿಲಿಯನ್ ಟನ್‌ಗಳಷ್ಟಿದೆ. ಭಾರತವು ಹೆಚ್ಚಿನ ಇಳುವರಿ ನೀಡುವ ಬೀಜಗಳ ಅಭಿವೃದ್ಧಿಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ವಿಶ್ವದ ಮಾರುಕಟ್ಟೆಗಳಿಗೆ ಅಕ್ಕಿಯ ಪ್ರಮುಖ ರಫ್ತುದಾರನಾಗಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

184 ಹೊಸ ತಳಿ ಬಿಡುಗಡೆ: ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಭಿವೃದ್ಧಿಪಡಿಸಿದ 25 ವಿವಿಧ ಬೆಳೆಗಳ 184 ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಕೃಷಿ ಸಚಿವರು, ಹೊಸ ತಳಿಗಳ ಪೈಕಿ 122 ಧಾನ್ಯಗಳು, 6 ದ್ವಿದಳ ಧಾನ್ಯಗಳು, 13 ಎಣ್ಣೆಕಾಳುಗಳು, 11 ಮೇವಿನ ಬೆಳೆಗಳು, 6 ಕಬ್ಬು, 24 ಹತ್ತಿ ಮತ್ತು ಸೆಣಬು, ತಂಬಾಕಿನ ತಲಾ ಒಂದು ತಳಿ ಸೇರಿವೆ ಎಂದರು.

ಈ ಹೊಸ ತಳಿಗಳು ರೈತರನ್ನು ತ್ವರಿತವಾಗಿ ತಲುಪುವಂತೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೊಸ ಮುಂದುವರಿದ ತಳಿಗಳ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವರು, ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನದಿಂದ ರೈತರು ಪ್ರಯೋಜನ ಪಡೆಯುತ್ತಾರೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವತ್ತ ಗಮನಹರಿಸಲು ಕೃಷಿ ವಿಜ್ಞಾನಿಗಳಿಗೆ ಸಲಹೆ ನೀಡಿದರು.

1969 ರಿಂದ 2014 ರ ನಡುವೆ 3,969 ತಳಿಗಳನ್ನು ಪರಿಚಯಿಸಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ವರ್ಷಗಳಲ್ಲಿ 3,236 ಅಧಿಕ ಇಳುವರಿ ತರುವ ತಳಿಗಳನ್ನು ಪರಿಚಯಿಸಲಾಗಿದೆ. ಹವಾಮಾನ ಬದಲಾವಣೆ, ಮಣ್ಣಿನ ಲವಣಾಂಶ, ಬರ, ಇತರ ಜೈವಿಕ ಮತ್ತು ಅಜೀವಕ ಒತ್ತಡಗಳಂತಹ ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು, ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಗಳನ್ನು ಬೆಂಬಲಿಸಲು ಹೊಸದಾಗಿ ಬಿಡುಗಡೆ ಮಾಡಿದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಮೊದಲು ಕೊರತೆ, ಈಗ ರಫ್ತುದಾರ ದೇಶ: ಈ ಮೊದಲು ಭಾರತವು ಆಹಾರ ಕೊರತೆಯಿಂದ ಬಳಲುತ್ತಿತ್ತು. ಈ ಹಣೆಪಟ್ಟಿಯನ್ನು ಕಳಚಿಕೊಂಡು ಜಾಗತಿಕ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳ ಪ್ರಮುಖ ಪೂರೈಕೆದಾರನಾಗುವತ್ತ ಭಾರತ ಪ್ರಗತಿ ಸಾಧಿಸಿದೆ ಎಂದು ಸಚಿವರು ಹೇಳಿದರು.

ಹೆಚ್ಚಿನ ಇಳುವರಿ ನೀಡುವ ಮತ್ತು ಹವಾಮಾನ ನಿರೋಧಕ ಬೀಜಗಳ ಅಭಿವೃದ್ಧಿ ಬಲದ ಮೇಲೆ ದೇಶವು ಕೃಷಿ ಕ್ರಾಂತಿಯ ಹೊಸ ಯುಗವನ್ನು ಪ್ರವೇಶಿಸಿದೆ. ಈ ಸಾಧನೆಯು ಐಸಿಎಆರ್‌ನ ಅಖಿಲ ಭಾರತ ಬೆಳೆಗಳ ಸಂಯೋಜಿತ ಯೋಜನೆಗಳು, ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಬೀಜ ಕಂಪನಿಗಳ ಸಾಮೂಹಿಕ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಇವುಗಳನ್ನೂ ಓದಿ: