ETV Bharat / business

ಲಿಥಿಯಂ ಮೀರಿ ಅಪರೂಪದ ಖನಿಜಗಳವರೆಗೆ ವಿಸ್ತರಿಸಿದ ಅರ್ಜೆಂಟಿನಾದಲ್ಲಿನ ಭಾರತದ ಗಣಿಗಾರಿಕೆ

ಅರ್ಜೆಂಟಿನಾದಲ್ಲಿನ ಭಾರತದ ಗಣಿಗಾರಿಕೆ ಲಿಥಿಯಂ ಮೀರಿ ಅಪರೂಪದ ಖನಿಜಗಳು ಕ್ಷೇತ್ರಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

INDIA MINING IN ARGENTINA
ಬ್ಯೂನಸ್ ಐರಿಸ್‌ನಲ್ಲಿ ನಡೆದ 4ನೇ ಭಾರತ-ಅರ್ಜೆಂಟೀನಾ ಜಂಟಿ ವ್ಯಾಪಾರ ಸಮಿತಿ ಸಭೆ (ETV Bharat via Press Information Bureau)
author img

By ETV Bharat Karnataka Team

Published : August 31, 2026 at 8:32 PM IST

7 Min Read
Choose ETV Bharat

ನವದೆಹಲಿ: ಅರ್ಜೆಂಟಿನಾದ ಗಣಿಗಾರಿಕೆ ಕ್ಷೇತ್ರದಲ್ಲಿ ಭಾರತ ಹೆಜ್ಜೆ ಇಟ್ಟಿರುವುದು ದೇಶದ ಖನಿಜ ಭದ್ರತೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಮಹತ್ವದ ಕ್ರಮವಾಗಿದೆ. ಅದರಲ್ಲೂ ಲಿಥಿಯಂ ಮೂಲಕ ಆರಂಭವಾಗಿರುವ ಈ ಸಹಕಾರ ಮುಂದಿನ ದಿನಗಳಲ್ಲಿ ಪ್ರಮುಖ ಖನಿಜಗಳು ಮತ್ತು ಅಪರೂಪದ ಖನಿಜಗಳು (Rare Earth Elements) ಕ್ಷೇತ್ರಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಭಾರತ – ಅರ್ಜೆಂಟಿನಾ ಜಂಟಿ ವ್ಯಾಪಾರ ಸಮಿತಿಯ (JTC) ನಾಲ್ಕನೇ ಸಭೆ ಆಗಸ್ಟ್ 24ರಂದು ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆಯಿತು. ಭಾರತೀಯ ನಿಯೋಗದ ನೇತೃತ್ವವನ್ನು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ವಹಿಸಿದ್ದರು. ಅರ್ಜೆಂಟಿನಾ ಪರವಾಗಿ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ, ರಾಯಭಾರಿ ಫೆರ್ನಾಂಡೊ ಬ್ರೂನ್ ನೇತೃತ್ವ ವಹಿಸಿದ್ದರು.

“2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟಿನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಿಕೊಂಡಿದ್ದ ಮಾರ್ಗಸೂಚಿಯ ಅನುಷ್ಠಾನದಲ್ಲಿನ ಪ್ರಗತಿಯನ್ನು ಎರಡೂ ದೇಶಗಳು ಪರಿಶೀಲಿಸಿದವು. ಅಲ್ಲದೇ, ಉಭಯ ದೇಶಗಳ ನಡುವಿನ ಕಾರ್ಯತಂತ್ರ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದವು” ಎಂದು ಸಚಿವಾಲಯ ತಿಳಿಸಿದೆ.

ಗಣಿಗಾರಿಕೆ, ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅರ್ಜೆಂಟಿನಾದ ಲಿಥಿಯಂ ಕ್ಷೇತ್ರದಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ (KABIL) ನಡೆಸುತ್ತಿರುವ ಗಣಿಗಾರಿಕೆ ಚರ್ಚೆಯ ಪ್ರಮುಖ ವಿಷಯವಾಗಿದ್ದವು.

“ಅರ್ಜೆಂಟಿನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ KABIL ನಡೆಸುತ್ತಿರುವ ಗಣಿಗಾರಿಕೆ ಗಮನಾರ್ಹ ಪ್ರಗತಿ ಸಾಧಿಸಿವೆ. ಅರ್ಜೆಂಟಿನಾದಲ್ಲಿ ಭಾರತೀಯ ಕಂಪನಿಯೊಂದು ಕೈಗೊಂಡಿರುವ ಮೊದಲ ಲಿಥಿಯಂ ಗಣಿಗಾರಿಕೆ ಯೋಜನೆಯ ಎರಡನೇ ಹಂತದ ಕೊರೆತ ಕಾರ್ಯ ಪೂರ್ಣಗೊಂಡಿದೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಸಾಲ್ಟಾ ಮತ್ತು ಜುಜುಯ್ ಪ್ರಾಂತ್ಯಗಳಲ್ಲಿಯೂ ಹೆಚ್ಚಿನ ಸಹಕಾರದ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಸಚಿವಾಲಯ ಹೇಳಿದೆ.

ಆದರೆ, ವಿದೇಶಗಳಲ್ಲಿ ಪ್ರಮುಖ ಖನಿಜಗಳ ಮೂಲಗಳನ್ನು ಭದ್ರಪಡಿಸಿಕೊಳ್ಳುವ ಭಾರತದ ಪ್ರಯತ್ನಕ್ಕೆ ಅರ್ಜೆಂಟಿನಾದಲ್ಲಿ ಅನುಷ್ಠಾನದ ಸವಾಲು ಎದುರಾಗಿದೆ. KABIL ಸ್ವಾಧೀನಪಡಿಸಿಕೊಂಡಿರುವ ಲಿಥಿಯಂ ಹೊಂದಿರುವ ಐದು ಬ್ಲಾಕ್‌ಗಳ ಅಭಿವೃದ್ಧಿ ನಿರೀಕ್ಷಿಸಿದ್ದಕ್ಕಿಂತ ನಿಧಾನವಾಗಿ ಸಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಸಂಸದೀಯ ಸಮಿತಿಯೊಂದು ಭಾರತದ ವಿದೇಶಿ ಪ್ರಮುಖ ಖನಿಜ ಸ್ವಾಧೀನ ಕಾರ್ಯಕ್ರಮದಲ್ಲಿ “ಸೀಮಿತ ಪ್ರಗತಿ” ಕಂಡುಬಂದಿದೆ ಎಂದು ಹೇಳಿತ್ತು. ಮಾತುಕತೆ, ಸ್ವಾಧೀನ, ಅಭಿವೃದ್ಧಿ ಮತ್ತು ಅಂತಿಮವಾಗಿ ಉತ್ಪಾದನೆ ಆರಂಭಿಸುವ ಹಂತಗಳ ನಡುವೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದನ್ನೂ ಸಮಿತಿ ಗಮನಿಸಿತ್ತು.

ವಿದ್ಯುತ್ ವಾಹನಗಳ ಬ್ಯಾಟರಿಗಳು, ಇಂಧನ ಸಂಗ್ರಹಣಾ ವ್ಯವಸ್ಥೆಗಳು ಹಾಗೂ ಹಲವು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಲಿಥಿಯಂ ಅತ್ಯಗತ್ಯವಾಗಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ. ಲಿಥಿಯಂ ಸೇರಿದಂತೆ ಹಲವು ಪ್ರಮುಖ ಖನಿಜಗಳಿಗಾಗಿ ಭಾರತ ಇನ್ನೂ ಆಮದಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಇದೇ ವೇಳೆ, ಜಾಗತಿಕ ಗಣಿಗಾರಿಕೆ, ಶುದ್ಧೀಕರಣ ಮತ್ತು ಸಂಸ್ಕರಣಾ ಸರಪಳಿಯ ಬಹುಪಾಲಿನ ಮೇಲೆ ಚೀನಾ ಹಿಡಿತ ಹೊಂದಿದೆ.

ಅರ್ಜೆಂಟಿನಾದಲ್ಲಿ KABIL ಯೋಜನೆ: ಅರ್ಜೆಂಟಿನಾದಲ್ಲಿ ಭಾರತದ ಈ ಪ್ರಯತ್ನಕ್ಕೆ 2024ರ ಜನವರಿ 15ರಂದು ಚಾಲನೆ ದೊರೆಯಿತು. ಅಂದು KABIL ಮತ್ತು ಅರ್ಜೆಂಟಿನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿಯಾದ ಕ್ಯಾಟಮಾರ್ಕಾ ಮಿನೆರಾ ವೈ ಎನರ್ಜೆಟಿಕಾ ಸೊಸಿಯೆಡಾಡ್ ಡೆಲ್ ಎಸ್ಟಾಡೊ (CAMYEN) ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದಡಿ, ಐದು ಲಿಥಿಯಂ ಬ್ರೈನ್ ಬ್ಲಾಕ್‌ಗಳಲ್ಲಿ—Cortadera-I, Cortadera-VII, Cortadera-VIII, Cateo-2022-01810132 ಮತ್ತು Cortadera-VI—ಅನ್ವೇಷಣೆ ನಡೆಸುವ ಹಾಗೂ ವಿಶೇಷ ಹಕ್ಕುಗಳನ್ನು KABIL ಪಡೆದುಕೊಂಡಿತು. ಈ ಬ್ಲಾಕ್‌ಗಳು ಒಟ್ಟಾರೆ ಸುಮಾರು 15,703 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿವೆ.

ಅನ್ವೇಷಣೆಯಲ್ಲಿ ಆರ್ಥಿಕವಾಗಿ ಲಾಭದಾಯಕ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪಗಳಿರುವುದು ದೃಢಪಟ್ಟರೆ, ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಈ ಒಪ್ಪಂದ ಅವಕಾಶ ನೀಡುತ್ತದೆ. ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಯೋಜನೆಯ ಅಂದಾಜು ವೆಚ್ಚ ಸುಮಾರು 200 ಕೋಟಿ ರೂ. ಎಂದು ತಿಳಿಸಲಾಗಿತ್ತು.

ಆರಂಭಿಕ ಸರ್ಕಾರಿ ಯೋಜನೆಯ ಪ್ರಕಾರ, ಅನ್ವೇಷಣೆಯಿಂದ ಉತ್ಪಾದನೆಯ ಹಂತಕ್ಕೆ ತ್ವರಿತವಾಗಿ ಸಾಗುವ ನಿರೀಕ್ಷೆ ಇತ್ತು. ಗಣಿ ಸಚಿವಾಲಯದ ಪ್ರಸ್ತುತಿಯೊಂದರ ಪ್ರಕಾರ, ಮೊದಲ ಹಂತದ ಆಕ್ರಮಣಕಾರಿಯಲ್ಲದ ಅನ್ವೇಷಣೆ ಪೂರ್ಣಗೊಂಡಿದ್ದು, ಡಿಸೆಂಬರ್ 2027ರೊಳಗೆ ಕಾರ್ಯಸಾಧ್ಯತಾ ಅಧ್ಯಯನ ಮತ್ತು 2029ರ ಅಂತ್ಯದೊಳಗೆ ಉತ್ಪಾದನೆ ಆರಂಭಿಸುವ ಗುರಿ ಹೊಂದಲಾಗಿತ್ತು.

ಆದರೆ, ಸಂಸದೀಯ ಸಮಿತಿ ನಂತರ ಉತ್ಪಾದನಾ ವೇಳಾಪಟ್ಟಿಯಲ್ಲಿ ವಿಳಂಬವಾಗಿರುವುದನ್ನು ಗಮನಿಸಿದೆ. ಲಿಥಿಯಂ ಉತ್ಪಾದನೆ ಆರಂಭವಾಗುವ ನಿರೀಕ್ಷಿತ ದಿನಾಂಕವನ್ನು ಡಿಸೆಂಬರ್ 2030ಕ್ಕೆ ಮುಂದೂಡಲಾಗಿದೆ. ಅಂದರೆ, ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮೊದಲ ಉತ್ಪಾದನೆ ಆರಂಭವಾಗಲು ಸುಮಾರು ಏಳು ವರ್ಷ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಆಗಸ್ಟ್ 24ರಂದು ಬ್ಯೂನಸ್ ಐರಿಸ್‌ನಲ್ಲಿ ನಡೆದ ಭಾರತ – ಅರ್ಜೆಂಟಿನಾ ಜಂಟಿ ವ್ಯಾಪಾರ ಸಮಿತಿಯ ನಾಲ್ಕನೇ ಸಭೆ ಮಹತ್ವ ಪಡೆದುಕೊಂಡಿದೆ.

ಖನಿಜ ಭದ್ರತೆಗೆ ಭಾರತದ ಪ್ರಯತ್ನ: ಆಮದು ಮಾಡಿಕೊಳ್ಳುವ ಪ್ರಮುಖ ಖನಿಜಗಳ ಮೇಲಿನ ಭಾರತದ ಅವಲಂಬನೆ, ದೇಶದ ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾಗಿರುವ ಹಲವು ಕ್ಷೇತ್ರಗಳಿಗೆ ಅಪಾಯವನ್ನು ಉಂಟು ಮಾಡಬಹುದು. 2025ರಲ್ಲಿ ಆರಂಭಿಸಲಾದ ರಾಷ್ಟ್ರೀಯ ಪ್ರಮುಖ ಖನಿಜ ಮಿಷನ್ (National Critical Mineral Mission), ಅನ್ವೇಷಣೆ ಮತ್ತು ಗಣಿಗಾರಿಕೆಯಿಂದ ಹಿಡಿದು ಖನಿಜ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮರುಬಳಕೆಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸುವ ಗುರಿ ಹೊಂದಿದೆ. ಈ ಮಿಷನ್ ಅಡಿಯಲ್ಲಿ ಒಟ್ಟು 30 ಪ್ರಮುಖ ಖನಿಜಗಳನ್ನು ಗುರುತಿಸಲಾಗಿದೆ.

ಈ ಕಾರ್ಯತಂತ್ರದಲ್ಲಿ ವಿದೇಶಗಳಲ್ಲಿನ ಖನಿಜ ಸಂಪನ್ಮೂಲಗಳನ್ನು ಭದ್ರಪಡಿಸಿಕೊಳ್ಳುವುದೂ ಪ್ರಮುಖ ಭಾಗವಾಗಿದೆ. ಭಾರತದ ಕೈಗಾರಿಕಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಭವಿಷ್ಯದ ಅಗತ್ಯಗಳನ್ನು ಪೂರೈಸಲು ದೇಶೀಯವಾಗಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ಅಥವಾ ವಾಣಿಜ್ಯೀಕವಾಗಿ ಗಣಿಗಾರಿಕೆ ಮಾಡಲು ಸಾಧ್ಯವಾಗದ ಹಲವು ಖನಿಜಗಳಿಗಾಗಿ KABIL ವಿಶೇಷವಾಗಿ ಸ್ಥಾಪಿಸಲಾಗಿದೆ.

ಅರ್ಜೆಂಟಿನಾ ಭಾರತಕ್ಕೆ ಹೆಚ್ಚು ಆಕರ್ಷಕವಾಗಿರುವುದಕ್ಕೆ ಪ್ರಮುಖ ಕಾರಣವೆಂದರೆ ಅದು ಬೊಲಿವಿಯಾ ಮತ್ತು ಚಿಲಿಯೊಂದಿಗೆ ಸೇರಿ ವಿಶ್ವದ ಪ್ರಮುಖ ಲಿಥಿಯಂ ಉತ್ಪಾದನಾ ಪ್ರದೇಶಗಳಲ್ಲಿ ಒಂದಾದ ಲಿಥಿಯಂ ಟ್ರಯಾಂಗಲ್​​ನ ಭಾಗವಾಗಿದೆ. ಹೀಗಾಗಿ, ಅರ್ಜೆಂಟಿನಾದೊಂದಿಗಿನ ಭಾರತದ ಸಹಕಾರವು ವಿಶ್ವದ ಅತ್ಯಂತ ಮಹತ್ವದ ಲಿಥಿಯಂ ಪ್ರದೇಶಗಳಲ್ಲಿ ದೀರ್ಘಕಾಲೀನ ನೆಲೆ ನಿರ್ಮಿಸುವ ಪ್ರಯತ್ನವಾಗಿದೆ.

ಲಿಥಿಯಂ ಗಣಿಗಾರಿಕೆ ಮಾತ್ರ ಸಾಕಾಗುವುದಿಲ್ಲ: KABIL ಕೈಗೊಂಡಿರುವ ಅರ್ಜೆಂಟಿನಾ ಯೋಜನೆಯ ನಿಜವಾದ ಕಾರ್ಯತಂತ್ರದ ಮಹತ್ವ ಅನ್ವೇಷಣೆಯ ನಂತರ ಏನಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಲಿಥಿಯಂ ಅದಿರು ಅಥವಾ ಲಿಥಿಯಂ ಹೊಂದಿರುವ ಉಪ್ಪುನೀರಿನಿಂದ (brine) ಲಿಥಿಯಂ ಹೊರತೆಗೆಯುವುದು ಮೌಲ್ಯ ಸರಪಳಿಯ ಮೊದಲ ಹಂತ ಮಾತ್ರ. ಅದರ ಹೆಚ್ಚಿನ ಆರ್ಥಿಕ ಮೌಲ್ಯವು ಲಿಥಿಯಂ ಸಂಸ್ಕರಣೆ, ಶುದ್ಧೀಕರಣ, ಬ್ಯಾಟರಿ ಗುಣಮಟ್ಟದ ರಾಸಾಯನಿಕಗಳ ಉತ್ಪಾದನೆ, ಕ್ಯಾಥೋಡ್ ಮತ್ತು ಆನೋಡ್ ವಸ್ತುಗಳ ತಯಾರಿಕೆ, ಬ್ಯಾಟರಿ ಸೆಲ್‌ಗಳ ಉತ್ಪಾದನೆ ಹಾಗೂ ಅಂತಿಮವಾಗಿ ಬ್ಯಾಟರಿ ಮರುಬಳಕೆಯಲ್ಲಿ ಅಡಗಿದೆ.

ಖನಿಜ ಹೊರತೆಗೆಯುವಿಕೆಯಿಂದ ಹಿಡಿದು ಸಂಸ್ಕರಣೆ, ಬ್ಯಾಟರಿ ವಸ್ತುಗಳು, ಬಿಡಿಭಾಗಗಳು ಮತ್ತು ಬ್ಯಾಟರಿ ಸೆಲ್‌ಗಳ ತಯಾರಿಕೆಯವರೆಗೆ ಸಹಭಾಗಿತ್ವ ನಿರ್ಮಿಸಲು KABIL ಮುಂದಾಗಿದೆ. ಇದರರ್ಥ, ಭಾರತ – ಅರ್ಜೆಂಟಿನಾ ಸಹಕಾರವು ಮುಂದಿನ ದಿನಗಳಲ್ಲಿ ಅರ್ಜೆಂಟಿನಾದ ಖನಿಜ ಸಂಪನ್ಮೂಲಗಳನ್ನು ಭಾರತದ ಉತ್ಪಾದನಾ ಸಾಮರ್ಥ್ಯದೊಂದಿಗೆ ಜೋಡಿಸುವ ಸಮಗ್ರ ವ್ಯವಸ್ಥೆಯಾಗಿ ರೂಪುಗೊಳ್ಳಬಹುದು.

ಇಂತಹ ಮಾದರಿ ಕೇವಲ ಅರ್ಜೆಂಟಿನಾದಿಂದ ಲಿಥಿಯಂ ಕಾರ್ಬೊನೇಟ್ ಅಥವಾ ಲಿಥಿಯಂ ಸಾಂದ್ರಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕಿಂತ ಭಾರತಕ್ಕೆ ಹೆಚ್ಚಿನ ಲಾಭ ನೀಡಬಹುದು. ಇದು ವಿದ್ಯುತ್ ವಾಹನಗಳು, ಬ್ಯಾಟರಿಗಳು, ನವೀಕರಿಸಬಹುದಾದ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಪ್ರಮುಖ ಉತ್ಪಾದನಾ ಕೇಂದ್ರವಾಗುವ ಭಾರತದ ಗುರಿಗೆ ನೆರವಾಗಬಹುದು. ಆದ್ದರಿಂದ, ಭಾರತ – ಅರ್ಜೆಂಟಿನಾ ಗಣಿಗಾರಿಕೆ ಸಂಬಂಧವನ್ನು ಕೇವಲ ಲಿಥಿಯಂಗೆ ಸೀಮಿತಗೊಳಿಸಿ ನೋಡಬಾರದು.

ಲಿಥಿಯಂ ಮೀರಿ ತಾಮ್ರ ಮತ್ತು ಅಪರೂಪದ ಖನಿಜಗಳು: ಭಾರತಕ್ಕೆ ಲಿಥಿಯಂ ಮಾತ್ರವಲ್ಲದೇ ಕೋಬಾಲ್ಟ್, ನಿಕಲ್, ಗ್ರಾಫೈಟ್, ತಾಮ್ರ, ಅಪರೂಪದ ಭೂಮಿಯ ಮೂಲಧಾತುಗಳು ಸೇರಿದಂತೆ ಹಲವು ಪ್ರಮುಖ ಖನಿಜಗಳ ಅಗತ್ಯವಿದೆ. KABILನ ಕಾರ್ಯವ್ಯಾಪ್ತಿಯೂ ಲಿಥಿಯಂ ಮತ್ತು ಕೋಬಾಲ್ಟ್‌ನಂತಹ ಖನಿಜಗಳನ್ನು ಒಳಗೊಂಡಿದೆ. ಭಾರತದ ವಿಶಾಲ ಪ್ರಮುಖ ಖನಿಜ ಕಾರ್ಯತಂತ್ರದಲ್ಲಿ ವಿದೇಶಿ ಮೂಲಗಳನ್ನು ಭದ್ರಪಡಿಸಿಕೊಳ್ಳುವುದಕ್ಕೂ ಆದ್ಯತೆ ನೀಡಲಾಗಿದೆ.

ಲಿಥಿಯಂ ಹೊರತಾಗಿ ಅರ್ಜೆಂಟಿನಾದಲ್ಲಿ ತಾಮ್ರಕ್ಕೂ ದೊಡ್ಡ ಅವಕಾಶವಿದೆ. ವಿದ್ಯುದೀಕರಣ, ನವೀಕರಿಸಬಹುದಾದ ಇಂಧನ, ವಿದ್ಯುತ್ ಪ್ರಸರಣ, ವಿದ್ಯುತ್ ವಾಹನಗಳು ಮತ್ತು ಡೇಟಾ ಸೆಂಟರ್‌ಗಳ ವಿಸ್ತರಣೆಯಿಂದ ತಾಮ್ರದ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಅರ್ಜೆಂಟಿನಾ ಸರ್ಕಾರ ತನ್ನ ತಾಮ್ರ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಮುಂದಿನ ದಶಕದಲ್ಲಿ ದೇಶದ ಗಣಿಗಾರಿಕೆ ರಫ್ತಿನ ಪ್ರಮುಖ ಚಾಲಕಶಕ್ತಿಗಳಾಗಿ ಲಿಥಿಯಂ ಮತ್ತು ತಾಮ್ರ ಇರಲಿವೆ ಎಂದು ಅಲ್ಲಿನ ಸರ್ಕಾರ ನಿರೀಕ್ಷಿಸಿದೆ.

ನವದೆಹಲಿ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್​ನ ಮಾಜಿ ನಿರ್ದೇಶಕ ಹಾಗೂ ಲ್ಯಾಟಿನ್ ಅಮೆರಿಕ ತಜ್ಞ ಅಶ್ ನಾರಾಯಣ್ ರಾಯ್, ಬ್ಯೂನಸ್ ಐರಿಸ್‌ನಲ್ಲಿ ನಡೆದ ಸಭೆಯನ್ನು ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ಭಾರತದ ಖನಿಜ ಕ್ಷೇತ್ರದ ಅರ್ಜೆಂಟಿನಾ ಸಹಕಾರದಲ್ಲಿ ಇದು ಎರಡನೇ ಹಂತದ ಬೆಳವಣಿಗೆಯನ್ನು ಸೂಚಿಸುತ್ತದೆ. ವಿಶೇಷವಾಗಿ ಗಣಿಗಾರಿಕೆ ಮತ್ತು ಖನಿಜ ಹೊರತೆಗೆಯುವಿಕೆಯಲ್ಲಿ ಸಹಕಾರ ಮತ್ತಷ್ಟು ವಿಸ್ತರಿಸುವ ಸಂಕೇತ ಇದಾಗಿದೆ ಎಂದು ಅವರು ಹೇಳಿದ್ದಾರೆ.

“ಇದು ಎರಡೂ ದೇಶಗಳ ನಡುವೆ ಹೆಚ್ಚಿನ ಸಾಮ್ಯತೆ ಇದೆ ಎಂಬುದನ್ನು ತೋರಿಸುತ್ತದೆ. ಈ ಸಹಕಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಎರಡೂ ದೇಶಗಳು ನಿರ್ಧರಿಸಿವೆ. ಇದು ಅತ್ಯಂತ ಮಹತ್ವದ ಬೆಳವಣಿಗೆ. ಕೇವಲ ಖನಿಜಗಳನ್ನು ಖರೀದಿಸುವ ಅಥವಾ ದೀರ್ಘಾವಧಿಗೆ ಖರೀದಿಸಲು ನಿರ್ಧರಿಸುವುದಷ್ಟೇ ಅಲ್ಲ; ಖನಿಜ ಹೊರತೆಗೆಯುವಿಕೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದೆ” ಎಂದು ರಾಯ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಬೆಲೆ ಮತ್ತು ಪೂರೈಕೆಗೆ ಸಂಬಂಧಿಸಿದ ಇತರ ಪರಿಣಾಮಗಳ ಬಗ್ಗೆಯೂ ಎರಡೂ ದೇಶಗಳ ನಡುವೆ ಸ್ಪಷ್ಟವಾದ ತಿಳುವಳಿಕೆ ಇರಬೇಕು. ಈ ದೃಷ್ಟಿಯಿಂದ ಇದು ಅತ್ಯಂತ ಸಕಾರಾತ್ಮಕ ಬೆಳವಣಿಗೆ. ವಿಶೇಷವಾಗಿ ಇಡೀ ಪ್ರದೇಶದಲ್ಲಿ, ಅದರಲ್ಲೂ ಕಾರ್ಯತಂತ್ರದ ಖನಿಜಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ಚೀನಾ ಪ್ರಬಲ ಸ್ಥಾನ ಹೊಂದಿರುವ ಸಂದರ್ಭದಲ್ಲಿ, ಭಾರತದ ಈ ಹೆಜ್ಜೆ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಕ್ಯಾಟಮಾರ್ಕಾದಲ್ಲಿ ನಡೆಯುತ್ತಿರುವ ಅನ್ವೇಷಣೆಯಲ್ಲಿ ವಾಣಿಜ್ಯಿಕವಾಗಿ ಲಾಭದಾಯಕ ಲಿಥಿಯಂ ಸಂಪನ್ಮೂಲಗಳು ಪತ್ತೆಯಾದರೆ, ಭಾರತದ ಬೆಳೆಯುತ್ತಿರುವ ಬ್ಯಾಟರಿ ಮತ್ತು ಸ್ವಚ್ಛ ಇಂಧನ ಕೈಗಾರಿಕೆಗಳಿಗೆ ವಿದೇಶಿ ಲಿಥಿಯಂ ಮೂಲವೊಂದು ದೊರೆಯಲಿದೆ.

ಆದರೆ, ಇದರ ದೀರ್ಘಕಾಲೀನ ಅವಕಾಶ ಇದಕ್ಕಿಂತಲೂ ದೊಡ್ಡದಾಗಿದೆ. ಕ್ಯಾಟಮಾರ್ಕಾ ಯೋಜನೆಯ ಅನುಭವವನ್ನು ಆಧಾರವನ್ನಾಗಿ ಮಾಡಿಕೊಂಡು ತಾಮ್ರ ಸೇರಿದಂತೆ ಇತರ ಪ್ರಮುಖ ಖನಿಜಗಳು ಮತ್ತು ಮುಂದಿನ ಹಂತದಲ್ಲಿ ಅಪರೂಪದ ಭೂಮಿಯ ಮೂಲಧಾತುಗಳ ಕ್ಷೇತ್ರಕ್ಕೂ ಭಾರತ ತನ್ನ ಸಹಕಾರವನ್ನು ವಿಸ್ತರಿಸಬಹುದು. ಜೊತೆಗೆ, ಅರ್ಜೆಂಟಿನಾದ ಖನಿಜ ಸಂಪನ್ಮೂಲಗಳನ್ನು ಭಾರತದ ಸಂಸ್ಕರಣೆ ಮತ್ತು ಉತ್ಪಾದನಾ ಸಾಮರ್ಥ್ಯದೊಂದಿಗೆ ಜೋಡಿಸುವ ಮೂಲಕ ಎರಡೂ ದೇಶಗಳ ನಡುವಿನ ಆರ್ಥಿಕ ಹಾಗೂ ಕಾರ್ಯತಂತ್ರದ ಸಹಕಾರಕ್ಕೆ ಹೊಸ ಆಯಾಮ ನೀಡಬಹುದು.

ಇವುಗಳನ್ನೂ ಓದಿ: