ETV Bharat / business

ಅಮೆರಿಕದಲ್ಲಿ ಗೂಗಲ್‌ನ ಪರಮಾಣು ವಿದ್ಯುತ್ ಒಪ್ಪಂದ: ಭಾರತದ ಡೇಟಾ ಸೆಂಟರ್​ಗಳಿಗೆ ಮಹತ್ವಾಕಾಂಕ್ಷೆಯ ಸೂಚನೆ!

ಅಮೆರಿಕದಲ್ಲಿ ತಂತ್ರಜ್ಞಾನ ಕಂಪನಿಗಳು ಇತ್ತೀಚೆಗೆ ಮಾಡಿಕೊಂಡಿರುವ ಪರಮಾಣು ವಿದ್ಯುತ್ ಒಪ್ಪಂದಗಳಿಂದ ಭಾರತವು ಕೆಲವು ಪಾಠಗಳನ್ನು ಕಲಿಯಬಹುದು.

Google's Nuclear Power Deal In US Could Be A Pointer To India's Data Centre Ambitions
ಪ್ರಾತಿನಿಧಿಕ ಚಿತ್ರ (ANI)
author img

By R Srinivasan

Published : October 9, 2026 at 12:49 PM IST

3 Min Read
Choose ETV Bharat

ನವದೆಹಲಿ: ಭಾರತದಲ್ಲಿ ಡೇಟಾ ಸೆಂಟರ್​ ವಿಸ್ತರಣೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕದ ಪರಮಾಣು ವಿದ್ಯುತ್ ಉತ್ಪಾದಕ ಸಂಸ್ಥೆಯಾದ ಕಾನ್ಸ್ಟೆಲ್ಲೇಷನ್ ಎನರ್ಜಿಯಿಂದ 890 ಮೆಗಾವ್ಯಾಟ್ ಪರಮಾಣು ವಿದ್ಯುತ್ ಪಡೆಯಲು ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್ ಮಾಡಿಕೊಂಡಿರುವ 20 ವರ್ಷಗಳ ಒಪ್ಪಂದವು ಇದಕ್ಕೆ ಉತ್ತೇಜನ ನೀಡಬಲ್ಲದು. ಇದರ ಪರಮಾಣು ವಿದ್ಯುತ್ ಯೋಜನೆಗಳಿಗೆ ಹೊಸ ಗ್ರಾಹಕರನ್ನು ಸೃಷ್ಟಿಸಬಲ್ಲದು.

ಇಲಿನಾಯ್ಸ್, ಪೆನ್ಸಿಲ್ವೇನಿಯಾ ಮತ್ತು ನ್ಯೂಜೆರ್ಸಿಯಲ್ಲಿರುವ ಕಾನ್ಸ್ಟೆಲ್ಲೇಷನ್ ಒಡೆತನದ 20 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದವು 11 ಪರಮಾಣು ವಿದ್ಯುತ್ ಘಟಕಗಳಲ್ಲಿ ಹೊಸ ಉಪಕರಣಗಳು ಮತ್ತು ತಂತ್ರಜ್ಞಾನದ ಮೇಲಿನ ಹೂಡಿಕೆಗೆ ಅನುವು ಮಾಡಿಕೊಡಲಿದೆ. ಈ ಒಪ್ಪಂದವು ಕಾನ್ಸ್ಟೆಲ್ಲೇಷನ್‌ನಿಂದ 4.3 ಬಿಲಿಯನ್​ ಡಾಲರ್‌ಗಿಂತಲೂ ಹೆಚ್ಚಿನ ಹೊಸ ಹೂಡಿಕೆ ಒಳಗೊಂಡಿದೆ. ಆದಾಗ್ಯೂ, ಎರಡೂ ಪಕ್ಷಗಳು ಈ ಒಪ್ಪಂದದ ಮೌಲ್ಯವನ್ನು ಬಹಿರಂಗಪಡಿಸಿಲ್ಲ.

ಕಾನ್ಸ್ಟೆಲ್ಲೇಷನ್ ಅಮೆರಿಕದ ಅತಿದೊಡ್ಡ ಪರಮಾಣು ವಿದ್ಯುತ್ ಉತ್ಪಾದಕ ಮತ್ತು ನಿರ್ವಾಹಕ ಸಂಸ್ಥೆಯಾಗಿದೆ. ನವೀಕರಿಸಬಹುದಾದ ಇಂಧನ ಮತ್ತು ನೈಸರ್ಗಿಕ ಅನಿಲದಂತಹ ಹೆಚ್ಚು ಪರಿಸರ ಸ್ನೇಹಿ ಇಂಧನ ಮೂಲಗಳ ಕ್ಷೇತ್ರದಲ್ಲೂ ಇದು ಬಲವಾದ ಅಸ್ತಿತ್ವ ಹೊಂದಿದೆ. ವಾಣಿಜ್ಯಿಕ ವಿದ್ಯುತ್ ಉತ್ಪಾದಕ ಸಂಸ್ಥೆಯಾಗಿ ಇದು ಸಗಟು ಮಾರುಕಟ್ಟೆಗಳಲ್ಲಿ ಹಾಗೂ ದೀರ್ಘಕಾಲೀನ ಒಪ್ಪಂದಗಳ ಮೂಲಕ ಪ್ರಮುಖ ಗ್ರಾಹಕರಿಗೆ ವಿದ್ಯುತ್ ಮಾರಾಟ ಮಾಡುತ್ತದೆ.

googles-nuclear-power-deal-in-us-could-be-a-pointer-to-indias-data-centre-ambitions
ಪ್ರಾತಿನಿಧಿಕ ಚಿತ್ರ (Getty Images)

ತಮ್ಮ ಡೇಟಾ ಸೆಂಟರ್‌ಗಳಿಗೆ ವಿದ್ಯುತ್ ಪೂರೈಸಲು ಕಾನ್ಸ್ಟೆಲ್ಲೇಷನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರಮುಖ ತಂತ್ರಜ್ಞಾನ ಕಂಪನಿಗಳ ಸಾಲಿಗೆ ಗೂಗಲ್​ ಸೇರ್ಪಡೆಗೊಂಡಿದೆ. ಡೇಟಾ ಸೆಂಟರ್‌ಗಳು ಅಪಾರ ಪ್ರಮಾಣದ ವಿದ್ಯುತ್ ಬಳಸುತ್ತವೆ. ವಾಸ್ತವವಾಗಿ, ಇವುಗಳ ಸಾಮರ್ಥ್ಯವನ್ನು ಅವು ಬಳಸುವ ವಿದ್ಯುತ್ ಪ್ರಮಾಣದ ಆಧಾರದ ಮೇಲೆ ಅಳೆಯಲಾಗುತ್ತದೆ. ಹೊರತು ಅವುಗಳ ಕಂಪ್ಯೂಟಿಂಗ್ ಸಾಮರ್ಥ್ಯದ ಆಧಾರದ ಮೇಲಲ್ಲ. ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್‌ಗಳೊಂದಿಗೆ ಕಾನ್ಸ್ಟೆಲ್ಲೇಷನ್ ಈಗಾಗಲೇ ಮಾಡಿಕೊಂಡಿರುವ ಇದೇ ರೀತಿಯ ಒಪ್ಪಂದಗಳ ಸರಣಿಯಲ್ಲಿ ಗೂಗಲ್‌ನೊಂದಿಗಿನ ಈ ಒಪ್ಪಂದವು ಇತ್ತೀಚಿನದಾಗಿದೆ.

ತಂತ್ರಜ್ಞಾನ ಸಂಸ್ಥೆಗಳಿಗೆ ಮತ್ತೊಂದು ಸಮಸ್ಯೆ ಇಂಗಾಲ. ಅನೇಕ ದತ್ತಾಂಶ ಕೇಂದ್ರಗಳು ನವೀಕರಿಸಬಹುದಾದ ವಿದ್ಯುತ್ ಮೂಲಗಳೊಂದಿಗೆ ಸಂಪರ್ಕ ಹೊಂದಿದ್ದರೂ, ಇವು ವಿಶ್ವಾಸಾರ್ಹ, 24x7 ವಿದ್ಯುತ್ ಲಭ್ಯತೆಯನ್ನು ನೀಡುವುದಿಲ್ಲ. ಅನೇಕ ಹಸಿರು ದತ್ತಾಂಶ ಕೇಂದ್ರಗಳ ರಹಸ್ಯವೆಂದರೆ, ವಿಶೇಷವಾಗಿ ರಾತ್ರಿಯ ಸಮಯದಲ್ಲಿ ವಿದ್ಯುತ್ ಅನ್ನು ಬೇಸ್ ಲೋಡ್ ಕೇಂದ್ರಗಳಿಂದ ಪಡೆಯಲಾಗುತ್ತದೆ. ಅವುಗಳಲ್ಲಿ ಹೆಚ್ಚಿನವು ಹೆಚ್ಚಿನ ಹೊರಸೂಸುವ ಉಷ್ಣ ಸ್ಥಾವರಗಳಾಗಿವೆ.

ಇಲ್ಲಿ ಪರಮಾಣು ಶಕ್ತಿಯ ಪಾತ್ರ ಮಹತ್ವದ್ದಾಗುತ್ತದೆ. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಇಲ್ಲದೇ ವಿಶ್ವಾಸಾರ್ಹ ಹಾಗೂ ದಿನದ ಇಪ್ಪತ್ತನಾಲ್ಕು ಗಂಟೆಯೂ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತದೆ. ವಾಸ್ತವವಾಗಿ, ಪರಮಾಣು ಶಕ್ತಿಯನ್ನು ಸ್ವಚ್ಛ ಶಕ್ತಿಯ ವರ್ಗದಲ್ಲಿ ಸೇರಿಸಲಾಗಿದೆ. ಏಕೆಂದರೆ ಇದರ ಕೂಲಿಂಗ್ ಟವರ್‌ಗಳಿಂದ ಹೊರಹೊಮ್ಮುವ ಹಬೆಯನ್ನು ಹೊರತುಪಡಿಸಿ ಬೇರೆ ಯಾವುದೇ ಹೊರಸೂಸುವಿಕೆ ಇರುವುದಿಲ್ಲ. ಉತ್ಪತ್ತಿಯಾಗುವ ವಿಕಿರಣಶೀಲ ತ್ಯಾಜ್ಯವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ನಿಯಂತ್ರಿಸಿಡಲಾಗುತ್ತದೆ.

ಅಮೆರಿಕದಲ್ಲಿ ಪರಮಾಣು ವಿದ್ಯುತ್ ಪುನರುಜ್ಜೀವನದ ಪ್ರಯತ್ನಗಳಲ್ಲಿ ತಂತ್ರಜ್ಞಾನ ಕಂಪನಿಗಳು ಮುಂಚೂಣಿಯಲ್ಲಿವೆ. ಕಳೆದ ವರ್ಷ, ಅಯೋವಾದಲ್ಲಿ ಸ್ಥಗಿತಗೊಂಡಿದ್ದ ರಿಯಾಕ್ಟರ್ ಒಂದನ್ನು ಮರುಪ್ರಾರಂಭಿಸುವ ಯೋಜನೆಗೆ ಬೆಂಬಲ ನೀಡಲು ಗೂಗಲ್ ನೆಕ್ಸ್ಟ್‌ಎರಾ ಎನರ್ಜಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಎರಡು ಪರಮಾಣು ವಿದ್ಯುತ್ ಸ್ಥಾವರಗಳ ನವೀಕರಣಕ್ಕೆ ಹಣಕಾಸು ನೆರವು ನೀಡಲು ಅದು ಸದರ್ನ್ ಕಂಪನಿ ಜೊತೆ ಮತ್ತೊಂದು ಒಪ್ಪಂದವನ್ನೂ ಮಾಡಿಕೊಂಡಿದೆ. ಇದೇ ರೀತಿ, ಥ್ರೀ ಮೈಲ್ ಐಲ್ಯಾಂಡ್ ಸ್ಥಾವರದಿಂದ ವಿದ್ಯುತ್ ಖರೀದಿಸಲು ಮೈಕ್ರೋಸಾಫ್ಟ್ ಒಪ್ಪಂದ ಮಾಡಿಕೊಂಡಿದೆ. ಈ ಸ್ಥಾವರವು ಹಿಂದೆ ಮೆಲ್ಟ್‌ಡೌನ್ ಭೀತಿಯಿಂದಾಗಿ ಮುಚ್ಚಲ್ಪಟ್ಟಿತ್ತು. ಈ ರಿಯಾಕ್ಟರ್ ಮುಂದಿನ ವರ್ಷ ಮರುಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

ಈ ಒಪ್ಪಂದ ಭಾರತದ ಆಸಕ್ತಿ ಮೂಡಲು ಕಾರಣ ಡೇಟಾ ಸೆಂಟರ್​ಗಳ ಮೇಲಿನ ಹೂಡಿಕೆಯು ತನ್ನ ಆರ್ಥಿಕ ಬೆಳವಣಿಗೆಗೆ ಹಾಗೂ ಕೃತಕ ಬುದ್ಧಿಮತ್ತೆ ವಲಯದ ಮಹತ್ವಾಕಾಂಕ್ಷೆಗಳಿಗೆ ಚಾಲನೆ ನೀಡಬಲ್ಲದು ಎಂಬುದು. ಆದರೆ, ಇದಕ್ಕೆ ಅಡ್ಡಿಯಾಗಿರುವುದು ಸಾಕಷ್ಟು ಪ್ರಮಾಣದ ವಿದ್ಯುತ್ ಲಭ್ಯತೆಯ ಸಮಸ್ಯೆ. ವಿಶಾಖಪಟ್ಟಣದಲ್ಲಿ ಗೂಗಲ್ ಹೂಡಿಕೆ ಮಾಡುತ್ತಿರುವ 15 ಬಿಲಿಯನ್​ ಡಾಲರ್ ಮೊತ್ತದ ದತ್ತಾಂಶ ಕೇಂದ್ರ ಯೋಜನೆಯಲ್ಲಿ, 2 ಬಿಲಿಯನ್​ ಡಾಲರ್ ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಗಾಗಿ ಮೀಸಲಿಡಲಾಗಿದೆ; ಉಳಿದ ವಿದ್ಯುತ್ ಅಗತ್ಯವನ್ನು ವಿವಿಧ ಮೂಲಗಳಿಂದ ಪೂರೈಸಿಕೊಳ್ಳಲಾಗುತ್ತದೆ.

ತೈಲ ಬೆಲೆಗಳ ಏರಿಕೆ ಮತ್ತು ಗಲ್ಫ್ ಪ್ರದೇಶದ ಪ್ರಮುಖ ತೈಲ ಉತ್ಪಾದಕ ವಲಯಗಳು ಸಂಘರ್ಷಪೀಡಿತ ಪ್ರದೇಶಗಳಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಪರಮಾಣು ಶಕ್ತಿಯ ಬಳಕೆಯ ವಿಷಯವು ಮತ್ತೆ ಮುನ್ನೆಲೆಗೆ ಬಂದಿದೆ. ಭೂಸ್ವಾಧೀನ ಮತ್ತು ಹಿಂದಿನ ನಿರ್ಬಂಧಗಳು ಸಮಸ್ಯೆಗಳಾಗಿ ಉಳಿದಿದ್ದರೂ ಭಾರತದ ಪರಿವರ್ತನೆಗಾಗಿ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಅಭಿವೃದ್ಧಿ ಎಂಬ ಹೊಸ ಕಾಯ್ದೆಯನ್ನು ಸರ್ಕಾರವು ಅಂಗೀಕರಿಸಿದೆ. ಈ ಕಾಯ್ದೆಯು ದೀರ್ಘಕಾಲದ ಅಡೆತಡೆಗಳನ್ನು ನಿವಾರಿಸುವ ಮತ್ತು ಪರಮಾಣು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಆ ಹೆಚ್ಚುವರಿ ವಿದ್ಯುತ್ ಶಕ್ತಿಯು, ತಂತ್ರಜ್ಞಾನ ದಿಗ್ಗಜಗಳಿಗೆ ತಮ್ಮ ಡೇಟಾ ಸೆಂಟರ್‌ಗಳು ಕಾರ್ಯಾಚರಣೆಗೆ ಅಗತ್ಯವಿರುವ ವಿದ್ಯುತ್‌ನೊಂದಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅಮೆರಿಕದಲ್ಲಿ ತಂತ್ರಜ್ಞಾನ ಕಂಪನಿಗಳು ಇತ್ತೀಚೆಗೆ ಮಾಡಿಕೊಂಡಿರುವ ಪರಮಾಣು ವಿದ್ಯುತ್ ಒಪ್ಪಂದಗಳಿಂದ ಭಾರತವು ಕೆಲವು ಪಾಠಗಳನ್ನು ಕಲಿಯಬಹುದು. ಈ ಒಪ್ಪಂದಗಳಲ್ಲಿ ಕಂಪನಿಗಳು ಅಗತ್ಯವಿರುವ ಹೂಡಿಕೆಯ ಒಂದು ಭಾಗವನ್ನು ಮುಂಚಿತವಾಗಿ ಭರಿಸುತ್ತವೆ. ಇದು ಬಂಡವಾಳದ ಅಗತ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನೂ ಪರಿಹರಿಸುತ್ತದೆ.

ಇವುಗಳನ್ನೂ ಓದಿ: ಶಾಕಿಂಗ್​ ನ್ಯೂಸ್​! ಹೆಚ್ಚುತ್ತಿದೆ ಡೇಟಾ ಸೆಂಟರ್​ಗಳಿಗೆ ವಿದ್ಯುತ್ ಬೇಡಿಕೆ! ಕಾರಣವೇನು?

ನೀರೇ ಇಲ್ಲದೆ ತಣ್ಣಗಾಗುವ ಡೇಟಾ ಸೆಂಟರ್: ಹೈದರಾಬಾದ್‌ನಲ್ಲಿ ಮೈಕ್ರೋಸಾಫ್ಟ್‌ನ ವಿಸ್ಮಯ!