ಮಧ್ಯಪ್ರಾಚ್ಯ ಸಂಘರ್ಷದಿಂದ ಇಂಧನ, ರಸಗೊಬ್ಬರಗಳ ಬೆಲೆ ದೀರ್ಘಕಾಲ ಹೆಚ್ಚಿರಲಿವೆ: IMF, World Bank, IEA
ಮಧ್ಯಪ್ರಾಚ್ಯ ಸಂಘರ್ಷ ನಿಂತರೂ ಅದು, ಈಗ ಬೀರಿರುವ ಪರಿಣಾಮಗಳು ದೀರ್ಘಕಾಲ ಉಳಿಯಲಿವೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಭವಿಷ್ಯ ನುಡಿದಿವೆ.

Published : April 14, 2026 at 3:08 PM IST
ವಾಷಿಂಗ್ಟನ್, ಅಮೆರಿಕ: ತೈಲ ಸಂಪದ್ಭರಿತ ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್, ಇರಾನ್ ಸಂಘರ್ಷವು ವಿಶ್ವದ ಇಂಧನ ದಿಕ್ಸೂಚಿಯನ್ನೇ ಬದಲಿಸಿದೆ. ಅಲ್ಲಿನ ಅನಿಶ್ಚಿತತೆಯಿಂದಾಗಿ ಇಂಧನ ಮತ್ತು ರಸಗೊಬ್ಬರಗಳ ಬೆಲೆಗಳು ದೀರ್ಘಕಾಲದವರೆಗೆ ಹೆಚ್ಚಿರಬಹುದು ಎಂದು ಐಎಂಎಫ್, ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಇಂಧನ ಸಂಸ್ಥೆ ತಿಳಿಸಿವೆ.
ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ), ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ನ (ಡಬ್ಲ್ಯೂಬಿ) ಮುಖ್ಯಸ್ಥರು ಇಲ್ಲಿ ಸಭೆ ಸೇರಿ, ಮಧ್ಯಪ್ರಾಚ್ಯ ಯುದ್ಧವು ತೈಲ ಮತ್ತು ವಿಶ್ವದ ಆರ್ಥಿಕತೆ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಸಂಘರ್ಷವು ಜನರ ಬದುಕು, ಉದ್ಯೋಗ, ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಕುಗ್ಗಿಸಿದೆ. ಹಿಂದಿನ ಸ್ಥಿತಿ ಮತ್ತೆ ಮರಳಲು ದೀರ್ಘಕಾಲ ಸಮಯ ಹಿಡಿಯಬಹುದು. ಅದರಲ್ಲೂ ಸಣ್ಣ ರಾಷ್ಟ್ರಗಳಲ್ಲಿ ಹೆಚ್ಚಿನ ಸಮಸ್ಯೆ ಸೃಷ್ಟಿಸಬಹುದು ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದಾಜಿಸಿವೆ.
ಯುದ್ಧದಿಂದ ಆಹಾರ, ಉದ್ಯೋಗ ಖೋತಾ: ಈ ಆಘಾತದಿಂದ ತೈಲ, ಅನಿಲ ಮತ್ತು ರಸಗೊಬ್ಬರಗಳ ಬೆಲೆಗಳಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಆಹಾರ ಭದ್ರತೆ ಮತ್ತು ಉದ್ಯೋಗ ನಷ್ಟದ ಬಗ್ಗೆ ಕಳವಳ ಹುಟ್ಟುಹಾಕಿದೆ. ಮಧ್ಯಪ್ರಾಚ್ಯದಲ್ಲಿ ಕೆಲವು ತೈಲ ಮತ್ತು ಅನಿಲ ಉತ್ಪಾದಕರು ರಫ್ತಿನಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿವೆ.
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಇನ್ನೂ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಜಲಸಂಧಿಯ ಮೂಲಕ ನಿಯಮಿತ ಸಾಗಣೆ ಪುನರಾರಂಭವಾದ ನಂತರವೂ, ಪ್ರಮುಖ ಸರಕುಗಳ ಜಾಗತಿಕ ಪೂರೈಕೆಗಳು ಸಂಘರ್ಷ ಪೂರ್ವ ಸ್ಥಿತಿಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ. ಇಂಧನ ಮತ್ತು ರಸಗೊಬ್ಬರಗಳ ಬೆಲೆಗಳು ದೀರ್ಘಕಾಲದವರೆಗೆ ಹೆಚ್ಚಾಗಿರಬಹುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸಂತ್ರಸ್ತ ರಾಷ್ಟ್ರಗಳಿಗೆ ನೆರವಿನ ಅಭಯ: ಯುದ್ಧಾಘಾತದಿಂದಾಗಿ ಹೆಚ್ಚು ಪರಿಣಾಮ ಬೀರುವ ದೇಶಗಳ ಪರಿಸ್ಥಿತಿಗಳು ಮತ್ತಷ್ಟು ಹದಗೆಡಲಿವೆ. ಈ ವೇಳೆ ಅಂತಾರಾಷ್ಟ್ರೀಯ ಸಂಸ್ಥೆಗಳು ಏನು ಮಾಡಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ನಮ್ಮ ತಂಡಗಳು ಪರಿಣತಿ ಬಳಸಿ ಸೂಕ್ತವಾದ ನೀತಿ- ಸಲಹೆಯ ಮೂಲಕ ದೇಶಗಳಿಗೆ ಸಹಾಯ ಮಾಡಲು ಮತ್ತು ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಿಂದ ಅಗತ್ಯ ಇರುವ ರಾಷ್ಟ್ರಗಳಿಗೆ ಆರ್ಥಿಕ ಬೆಂಬಲ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
ಇಂಧನ ಮಾರುಕಟ್ಟೆಗಳು, ಜಾಗತಿಕ ಆರ್ಥಿಕತೆ ಮತ್ತು ದೇಶಗಳ ಮೇಲೆ ಯುದ್ಧದಿಂದ ಆಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ, ಮಾಡಿ ಸೂಕ್ತ ಪರಿಹಾರ ನಿರ್ಣಯಿಸಲಾಗುತ್ತದೆ. ಸ್ಥಿರತೆ, ಬೆಳವಣಿಗೆ ಮತ್ತು ಉದ್ಯೋಗಗಳನ್ನು ನೀಡುವ ಸ್ಥಿತಿಸ್ಥಾಪಕ ಚೇತರಿಕೆಗೆ ಅಡಿಪಾಯ ಹಾಕಲು ಅಗತ್ಯವಿರುವಂತೆ ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಪರಿಣತಿಯೊಂದಿಗೆ ಕೆಲಸ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಹೇಳಿದ್ದಾರೆ.
ಇವುಗಳನ್ನೂ ಓದಿ:

