ETV Bharat / business

ಮಧ್ಯ ಪ್ರಾಚ್ಯ ಉದ್ವಿಗ್ನತೆಯ ಎಫೆಕ್ಟ್; ಕಚ್ಚಾ ತೈಲ ಬೆಲೆ ಶೇ 10ರಷ್ಟು ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆಗಳ ನಡುವೆ ಕಚ್ಚಾ ತೈಲ ಬೆಲೆ ಸುಮಾರು ಶೇ.10ರಷ್ಟು ಏರಿಕೆಯಾಗಿದೆ. ಈ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ಮೀರುವ ಅಪಾಯದ ಬಗ್ಗೆ ಮಾರುಕಟ್ಟೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : March 2, 2026 at 9:42 AM IST

|

Updated : March 2, 2026 at 9:48 AM IST

2 Min Read
Choose ETV Bharat

ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಮಿಲಿಟರಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ಕಂಡುಬರುತ್ತಿದೆ. ಇದರ ಪರಿಣಾಮ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ.10ರಷ್ಟು ಏರಿಕೆಯಾಗಿವೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 78.52 ಯುಎಸ್ ಡಾಲರ್ ತಲುಪಿದೆ. ಈ ಬೆಲೆಗಳು 120 ಡಾಲರ್‌ ಮೀರುವ ಅಪಾಯದ ಬಗ್ಗೆ ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಅವರು ಪ್ರತಿಕ್ರಿಯಿಸಿ, "ದಿನಕ್ಕೆ ಸುಮಾರು 20-22 ಮಿಲಿಯನ್ ಬ್ಯಾರೆಲ್‌ಗಳು ಅಂದರೆ ಜಾಗತಿಕ ತೈಲ ಬಳಕೆಯ ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತವೆ. ಈ ಜಲಸಂಧಿಯ ಮೇಲಿನ ಉಂಟಾಗುವ ತಾತ್ಕಾಲಿಕ ಅಡಚಣೆಗಳೂ ಸಹ ವಿಮಾ ಕಂತುಗಳು, ಸರಕು ಸಾಗಣೆ ವೆಚ್ಚ ಮತ್ತು ಕಚ್ಚಾ ವಸ್ತುಗಳ ಮಾನದಂಡಗಳನ್ನು ಹೆಚ್ಚಿಸುತ್ತವೆ" ಎಂದು ಹೇಳಿದರು.

ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿ ಸರ್ವೋಚ್ಛ ನಾಯಕ ಅಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆಗೈದ ಬಳಿಕ, ಪ್ರತೀಕಾರವಾಗಿ ಇರಾನ್ ಹಾರ್ಮುಚ್ ಜಲಸಂಧಿಯನ್ನು ಬಂದ್ ಮಾಡಿದೆ.

ಈ ಹಿನ್ನೆಲೆಯಲ್ಲಿ ಸಂಭಾವ್ಯ ತೈಲ ಬೆಲೆ ಸನ್ನಿವೇಶಗಳನ್ನು ವಿವರಿಸಿದ ಅವರು, ಸೀಮಿತ ಏರಿಕೆಯ ಸಂದರ್ಭದಲ್ಲಿ ಬ್ರೆಂಟ್ ತೈಲ ಪ್ರತಿ ಬ್ಯಾರೆಲ್‌ಗೆ 100ರಿಂದ 115 ಡಾಲರ್‌ಗೆ ಏರಬಹುದು. ಕಡಲ ಅಡಚಣೆಯ ಸಂದರ್ಭಗಳಲ್ಲಿ ಈ ಬೆಲೆಗಳು 120ರಿಂದ 140 ಡಾಲರ್‌ಗೆ ಹೆಚ್ಚಾಗಬಹುದು. ಆದರೆ, ಹಾರ್ಮುಜ್ ಜಲಸಂಧಿಯನ್ನು ನಿರಂತರವಾಗಿ ಬಂದ್ ಮಾಡಿದ್ದೇ ಆದಲ್ಲಿ ತೈಲ ಬೆಲೆ 150 ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂದು ತಿಳಿಸಿದರು.

OPEC ಪಾತ್ರದ ಕುರಿತು ಮಾತನಾಡಿ, ಸೌದಿ ಅರೇಬಿಯಾ ಮತ್ತು UAE ದಿನಕ್ಕೆ ಸುಮಾರು 4ರಿಂದ 5 ಮಿಲಿಯನ್ ಬ್ಯಾರೆಲ್‌ಗಳ ಬಿಡಿ ಸಾಮರ್ಥ್ಯ ಹೊಂದಿವೆ. ಆದರೆ, ಆ ಪೂರೈಕೆಯ ಬಹುಪಾಲು ಹಾರ್ಮುಜ್ ಸಾಗಣೆಯನ್ನೇ ಅವಲಂಬಿಸಿದೆ ಎಂದರು.

ಭಾರತದ ಯಾವ ವಲಯಗಳ ಮೇಲೆ ಪರಿಣಾಮ?: ತೈಲ ಬೆಲೆ ಏರಿಕೆಯಿಂದ ಭಾರತದ ವಾಯುಯಾನ, ರಾಸಾಯನಿಕಗಳು, ಆಟೋ ವಲಯ, ಬಣ್ಣಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಒತ್ತಡ ಎದುರಿಸಲಿವೆ ಎಂದು ಅವರು ಹೇಳಿದರು.

ಭಾರತ ಜಗತ್ತಿನ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ದೇಶವಾಗಿದೆ. ತನ್ನ ಕಚ್ಚಾ ತೈಲದ ಅವಶ್ಯಕತೆಗಳಲ್ಲಿ ಸುಮಾರು ಶೇ 85ರಿಂದ 90ರಷ್ಟನ್ನು ಆಮದುಗಳ ಮೂಲಕ ಪೂರೈಸಿಕೊಳ್ಳುತ್ತದೆ.

ಇದನ್ನೂ ಓದಿ: ಇರಾನ್ ಬಿಕ್ಕಟ್ಟು: ಭಾರತದಲ್ಲಿ ತೈಲ, ನೈಸರ್ಗಿಕ ಅನಿಲ ಬೆಲೆ ಏರುವುದೇ? ಎಷ್ಟು ದಿನಕ್ಕಿದೆ ದಾಸ್ತಾನು?

Last Updated : March 2, 2026 at 9:48 AM IST