ಸರ್ಕಾರಿ ಕೆಲಸ, ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿಸಿದ ಮಗಳು!: ಭಯಾನಕ ಪ್ರಕರಣ ಬಯಲು
ತಾಯಿ ಸತ್ತರೆ ಅನುಕಂಪದ ಮೇಲೆ ಸರ್ಕಾರಿ ಕೆಲಸ ಪಡೆಯುವ ಆಸೆ - ಬಾಡಿಗೆ ಕೊಲೆಗಾರರನ್ನು ನೇಮಿಸಿ ಅಮ್ಮನನ್ನೇ ಕೊಲ್ಲಿಸಿದ ಮಗಳು- ಆಘಾತಕಾರಿ ಪ್ರಕರಣ ಬಯಲಿಗೆಳೆದ ಪೊಲೀಸರು.

Published : July 9, 2026 at 5:59 PM IST
ಜೈಪುರ (ರಾಜಸ್ಥಾನ): ಸರ್ಕಾರಿ ಕೆಲಸ ಮತ್ತು ಆಸ್ತಿ ತನ್ನದಾಗಿಸಿಕೊಳ್ಳಲು ಕರುಳು ಹಂಚಿಕೊಂಡು ಹುಟ್ಟಿದ ಮಗಳೇ ತಾಯಿಯನ್ನು ಹತ್ಯೆ ಮಾಡಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆಯಲ್ಲಿ ಕುಟುಂಬದ ಸಂಬಂಧಿಗಳೂ ಭಾಗಿಯಾಗಿರುವುದು ಸಂಚಲನ ಸೃಷ್ಟಿಸಿದೆ.
ನೀರಜ್ ಶರ್ಮಾ ಮೃತ ಮಹಿಳೆ. ಈಕೆಯ ಮಗಳು ಆಯುಷಿ ಸೇರಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಯಿಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಮಾಟಮಂತ್ರ ಕೂಡ ಮಾಡಿಸಿದ್ದೂ ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಗುದ್ದಿಸಿ ಕೊಲೆ: ತನಿಖೆಯ ವೇಳೆ ಆರೋಪಿಗಳು ಆಘಾತಕಾರಿ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ. ಮಹಿಳೆ ನೀರಜ್ ಶರ್ಮಾ ಅವರ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸುತ್ತಿದ್ದರು. ಒಂದು ತಿಂಗಳ ಹಿಂದೆ, ಆರೋಪಿಗಳು ಭರತ್‌ಪುರದಿಂದ ಥಾರ್ ಎಸ್‌ಯುವಿಯಲ್ಲಿ ಆಕೆಯನ್ನು ಜೈಪುರಕ್ಕೆ ಕರೆತಂದಿದ್ದರು. ಅಲ್ಲಿ ಆಕೆಗೆ ಕಾರು ಗುದ್ದಿಸಿ ಕೊಲ್ಲುವ ಯತ್ನ ವಿಫಲವಾಗಿತ್ತು. ಆ ಬಳಿಕ, ಜುಲೈ 4 ರಂದು, ಪಕ್ಕಾ ಪ್ಲಾನ್ ಮಾಡಿ ಆಕೆಗೆ ಕಾರು ಗುದ್ದಿಸಿ ಹತ್ಯೆ ಮಾಡಲಾಗಿದೆ. ಇದನ್ನು ಅಪಘಾತ ಎಂದು ಬಿಂಬಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಾಟ - ಮಂತ್ರದ ವಸ್ತುಗಳು ಪತ್ತೆ: ಆರೋಪಿ ಪುತ್ರಿ ಆಯುಷಿಯ ಮೊಬೈಲ್ ಅನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅದರಲ್ಲಿ ತಾಯಿಯ ಬಟ್ಟೆಗಳನ್ನು ಮನೆಯ ಮೆಟ್ಟಿಲುಗಳ ಮೇಲೆ ಸುಟ್ಟುಹಾಕುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗಳು ವಾಹನ ಡಿಕ್ಕಿ ಹೊಡೆದು ಮಹಿಳೆ ಕೊಲ್ಲಲ್ಪಟ್ಟ ಹಿಂದಿನ ದಿನದಂದು ಚಿತ್ರಿಸಲಾಗಿದೆ. ವಾಹನ ಮತ್ತು ಮನೆಯಲ್ಲಿ ಕುಂಕುಮ ಮತ್ತು ಇತರ ಅತೀಂದ್ರೀಯ ವಸ್ತುಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಲ್ಲಿ ಕುಟುಂಬ ಸಂಬಂಧಿಗಳು ಭಾಗಿ: ವಿಚಾರಣೆಯಲ್ಲಿ ಆಯುಷಿ ತನ್ನ ತಂದೆಯ ಸಂಬಂಧಿಗಳು ಹತ್ಯೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾಳೆ. ಅವರಿಂದಲೇ ಬಾಡಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದರು. ಹತ್ಯೆಗಾಗಿ 7 ಲಕ್ಷ ರೂಪಾಯಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿ ಮಾಹಿತಿ ನೀಡಿದ್ದಾಳೆ.
ತಂದೆ ಸಾವು, ತಾಯಿಗೆ ಸಿಕ್ಕಿದ್ದ ಅನುಕಂಪದ ಕೆಲಸ: ಮೃತ ಮಹಿಳೆ ನೀರಜ್ ಶರ್ಮಾ ಅವರ ಪತಿ ವಿಜಯ್ ಕುಮಾರ್ ಶರ್ಮಾ 1 ವರ್ಷದ ಹಿಂದೆ ನಿಧನರಾಗಿದ್ದರು. ಅವರು ನ್ಯಾಯಾಲಯದಲ್ಲಿ ಎಲ್‌ಡಿಸಿ (ಲೋವರ್ ಡಿವಿಷನ್ ಕ್ಲರ್ಕ್) ಆಗಿ ಕೆಲಸ ಮಾಡುತ್ತಿದ್ದರು. ಪತಿಯ ಮರಣದ ನಂತರ, ಪತ್ನಿ ನೀರಜ್ ಶರ್ಮಾ ಅವರಿಗೆ ಈ ಕೆಲಸ ಅನುಕಂಪದ ಆಧಾರದ ಮೇಲೆ ಸಿಕ್ಕಿತ್ತು. ತಾಯಿ ಮೃತಪಟ್ಟರೆ ಈ ಕೆಲಸ ತನಗೆ ಸಿಗುತ್ತದೆ ಎಂದು ಭಾವಿಸಿದ ಆರೋಪಿ ಪುತ್ರಿ ಆಯುಷಿ ಹತ್ಯೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ಆರೋಪಿಗಳ ಬಂಧನ, ಒಬ್ಬ ಪರಾರಿ: ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಯುಷಿ, ಓರ್ವ ಸಂಬಂಧಿ ಮತ್ತು ಐವರು ಬಾಡಿಗೆ ಕೊಲೆಗಾರರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಸಂಬಂಧಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳನ್ನೂ ಓದಿ:

