ETV Bharat / bharat

'ಅಮೆರಿಕದ ದಾಳಿ ವೆನಿಜುವೆಲಾ ಸಾರ್ವಭೌಮತೆಗೆ ಧಕ್ಕೆ': ಭಾರತ, ರಷ್ಯಾ, ಚೀನಾ ಸೇರಿ ವಿಶ್ವರಾಷ್ಟ್ರಗಳಿಂದ ಖಂಡನೆ

ವೆನಿಜುವೆಲಾದ ಮೇಲಿನ ಅಮೆರಿಕದ ದಾಳಿಯನ್ನು ಭಾರತ, ರಷ್ಯಾ, ಚೀನಾ ಸೇರಿದಂತೆ ವಿಶ್ವ ರಾಷ್ಟ್ರಗಳು ಖಂಡಿಸಿವೆ.

US STRIKES ON VENEZUELA
ಅಮೆರಿಕದ ದಾಳಿಯಿಂದ ವೆನಿಜುವೆಲಾದ ಅತಿದೊಡ್ಡ ಮಿಲಿಟರಿ ನೆಲೆಯಾದ ಫ್ಯೂರ್ಟೆ ಟಿಯುನಾದಲ್ಲಿ ಹೊತ್ತಿಕೊಂಡ ಬೆಂಕಿ (AFP)
author img

By ETV Bharat Karnataka Team

Published : January 4, 2026 at 6:53 PM IST

2 Min Read
Choose ETV Bharat

ನವದೆಹಲಿ: ವೆನಿಜುವೆಲಾದ ಮೇಲೆ ಅಮೆರಿಕ ಸೇನೆಯ ದಾಳಿ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿರುವುದಕ್ಕೆ ಭಾರತ, ಚೀನಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಟೀಕಿಸಿವೆ. ಆದರೆ, ಇಸ್ರೇಲ್​, ಫ್ರಾನ್ಸ್​​, ಅರ್ಜೆಂಟೀನಾ ಅಮೆರಿಕದ ಕ್ರಮವನ್ನು ಬೆಂಬಲಿಸಿವೆ.

ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಕ್ಯಾರಕಸ್‌ನಲ್ಲಿನ ನಿವಾಸದೊಳಗೆ ನುಗ್ಗಿದ ಅಮೆರಿಕ ಸೇನೆಯು ಬಂಧಿಸಿ, ನ್ಯೂಯಾರ್ಕ್‌ಗೆ ಕರೆತಂದಿದೆ. ಇಲ್ಲಿನ ಜೈಲಿನಲ್ಲಿ ಅವರನ್ನು ಬಂಧಿಸಿಡಲಾಗಿದ್ದು, ಕ್ರಿಮಿನಲ್ ಆರೋಪಗಳ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆನಿಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕದ ಸಮರ ವಿಮಾನಗಳು
ವೆನಿಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕದ ಸಮರ ವಿಮಾನಗಳು (AP)

ರಷ್ಯಾ, ಚೀನಾ, ಭಾರತದಿಂದ ಕಳವಳ: ತೈಲ ಸಂಪದ್ಭರಿತ ರಾಷ್ಟ್ರವಾದ ವೆನಿಜುವೆಲಾದ ಮೇಲೆ ಅಮೆರಿಕದ ಕ್ಷಿಪ್ರ ದಾಳಿಯನ್ನು ಭಾರತ, ರಷ್ಯಾ, ಚೀನಾ, ಇಂಗ್ಲೆಂಡ್​ ಸೇರಿದಂತೆ ಹಲವು ವಿಶ್ವ ರಾಷ್ಟ್ರಗಳು ಟೀಕಿಸಿವೆ. ತಕ್ಷಣವೇ ಮಡುರೊ ಮತ್ತು ಅವರ ಪತ್ನಿಯನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿವೆ.

ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ವೆನಿಜುವೆಲಾದ ಮೇಲೆ ಅಮೆರಿಕದ ದಾಳಿಯು ತೀವ್ರ ಕಳವಳಕಾರಿ. ಇದು ದೇಶದ ಸಾರ್ವಭೌಮತೆ ಮತ್ತು ಭದ್ರತೆಯ ಮೇಲಿನ ದಾಳಿಯಾಗಿದೆ. ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಅಮೆರಿಕ ಬಾಂಬ್ ದಾಳಿಯ ಪರಿಣಾಮ
ಅಮೆರಿಕ ಬಾಂಬ್ ದಾಳಿಯ ಪರಿಣಾಮ (AP)

ಅದೇ ರೀತಿ, ರಷ್ಯಾದ ವಿದೇಶಾಂಗ ಸಚಿವಾಲಯವು "ಅಮೆರಿಕ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಸಾರ್ವಭೌಮ ದೇಶದ ಕಾನೂನುಬದ್ಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ಬಿಡುಗಡೆ ಮಾಡಲು ಒತ್ತಾಯಿಸಿತು. ಅಮೆರಿಕದ ಮಿಲಿಟರಿ ಕ್ರಮವು ಸಮರ್ಥನೀಯವಲ್ಲ. ರಾಜತಾಂತ್ರಿಕತೆಗಿಂತ ಸೈದ್ಧಾಂತಿಕ ದ್ವೇಷವು ಇಲ್ಲಿ ಮೇಲುಗೈ ಸಾಧಿಸಿದೆ ಎಂದು ಟೀಕಿಸಿದೆ.

ವೈಮಾನಿಕ ದಾಳಿ ಟೀಕಿಸಿದ ಚೀನಾ: ಚೀನಾ ಕೂಡ ಅಮೆರಿಕದ ವೈಮಾನಿಕ ದಾಳಿಗಳನ್ನು ಖಂಡಿಸಿತು. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಸಾರ್ವಭೌಮ ರಾಷ್ಟ್ರದ ವಿರುದ್ಧ ಅಮೆರಿಕದ ಸ್ಪಷ್ಟ ಬಲಪ್ರಯೋಗ. ಅದರ ಅಧ್ಯಕ್ಷರ ವಿರುದ್ಧದ ಕ್ರಮದಿಂದ ಚೀನಾ ಆಘಾತಕ್ಕೊಳಗಾಗಿದೆ ಮತ್ತು ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಭೀತಿಯಿಂದ ಓಡಿದ ಜನ
ಭೀತಿಯಿಂದ ಓಡಿದ ಜನ (AP)

ಬ್ರೆಜಿಲ್ ಅಧ್ಯಕ್ಷೆ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು, ಅಮೆರಿಕದ ದಾಳಿ ಮತ್ತು ಮಡುರೊ ಅವರ ಸೆರೆಹಿಡಿಯುವಿಕೆ ಸ್ವೀಕಾರಾರ್ಹವಲ್ಲದ ಕ್ರಮ ಎಂದು ಕರೆದಿದ್ದಾರೆ. ಇದು ವೆನಿಜುವೆಲಾದ ಸಾರ್ವಭೌಮತ್ವಕ್ಕೆ ಅವಮಾನ ಮತ್ತು ಇಡೀ ಅಂತರರಾಷ್ಟ್ರೀಯವಾಗಿ ಅತ್ಯಂತ ಅಪಾಯಕಾರಿ ನಿದರ್ಶನ ಎಂದು ಹೇಳಿದ್ದಾರೆ.

ಯುರೋಪಿಯನ್ ಒಕ್ಕೂಟ ಮತ್ತು ಇಂಗ್ಲೆಂಡ್​ ಕೂಡ ಅಮೆರಿಕದ ಕ್ರಮವನ್ನು ಜರಿದಿವೆ. ಯುಎನ್ ಚಾರ್ಟರ್ ಅನ್ನು ಗೌರವಿಸಬೇಕು. ಎರಡೂ ರಾಷ್ಟ್ರಗಳು ಸಂಯಮ ಕಾಪಾಡಿಕೊಳ್ಳಬೇಕು. ನಾಗರಿಕರ ಸುರಕ್ಷತೆಯೇ ಯುರೋಪಿಯನ್ ಒಕ್ಕೂಟದ ಆದ್ಯತೆಯಾಗಿದೆ ಎಂದು ಹೇಳಿದೆ.

ವೆನಿಜುವೆಲಾ ಜನರು
ವೆನಿಜುವೆಲಾ ಜನರು (AP)

ಅಮೆರಿಕ ದಾಳಿಗೆ ಬೆಂಬಲ: ಏತನ್ಮಧ್ಯೆ, ಅಮೆರಿಕದ ದಾಳಿಯನ್ನು ಅರ್ಜೆಂಟೀನಾ, ಈಕ್ವೆಡಾರ್​, ಫ್ರಾನ್ಸ್, ಇಸ್ರೇಲ್​ ಬೆಂಬಲಿಸಿವೆ. ಟ್ರಂಪ್ ಮಿತ್ರರೂ ಆಗಿರುವ ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಈ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದೀರ್ಘಕಾಲ ಬದುಕಲಿ. ಶಾಪಗ್ರಸ್ತ ವೆನಿಜುವೆಲಾ ವಿಮೋಚನೆ ಹೊಂದಿದೆ ಎಂದು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಅಮೆರಿಕ ದಾಳಿಗೆ ಆಕ್ರೋಶ
ಅಮೆರಿಕ ದಾಳಿಗೆ ಆಕ್ರೋಶ (AP)

ಇತ್ತ, ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ, ಎಲ್ಲಾ ನಾರ್ಕೊ ಅಪರಾಧಿಗಳನ್ನು ಶಿಕ್ಷಿಸುವ ಸಮಯ ಬರುತ್ತಿದೆ. ನಿಮ್ಮ ದಬ್ಬಾಳಿಕೆಯು ಸಂಪೂರ್ಣವಾಗಿ ಕುಸಿಯುತ್ತದೆ" ಎಂದು ಜರಿದಿದ್ದಾರೆ.

ಅಮೆರಿಕದ ಕ್ರಮವನ್ನು ಸ್ವಾಗತಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ವೆನಿಜುವೆಲಾದ ಜನರು ಇಂದು ನಿಕೋಲಸ್ ಮಡುರೊ ಅವರ ಸರ್ವಾಧಿಕಾರದಿಂದ ವಿಮೋಚನೆಗೊಂಡಿದ್ದಾರೆ. ಅದನ್ನು ಆಚರಿಸದೆ ಸುಮ್ಮನಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಆತಂಕಗೊಂಡ ವೆನಿಜುವೆಲಾ ಮಹಿಳೆ
ಆತಂಕಗೊಂಡ ವೆನಿಜುವೆಲಾ ಮಹಿಳೆ (AP)

ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ನಿಕೋಲಸ್ ಮಡುರೊ ಬಂಧನವನ್ನು ಸ್ವಾಗತಿಸಿದ್ದಾರೆ. "ಸ್ವಾತಂತ್ರ್ಯ ಮತ್ತು ನ್ಯಾಯದ ಪರವಾಗಿ ದಿಟ್ಟ ಮತ್ತು ಐತಿಹಾಸಿಕ ಕ್ರಮ ಕೈಗೊಂಡ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು" ಎಂದಿದ್ದಾರೆ.

ಇವುಗಳನ್ನೂ ಓದಿ: