ETV Bharat / bharat

ಪಾಕ್​ ಧ್ವಜ, ಶಸ್ತ್ರಾಸ್ತ್ರಗಳ ಫೋಟೋ ಪೋಸ್ಟ್​ ಮಾಡಿ, ಅಲ್ಲಿನ ಪ್ರಜೆ ಜೊತೆ ಸಂಪರ್ಕದಲ್ಲಿದ್ದವಗೆ ಜಾಮೀನು

ಪಾಕಿಸ್ತಾನದ ಪ್ರಜೆ ಜೊತೆ ಸಂಭಾಷಣೆ ನಡೆಸಿ, ಆ ದೇಶದ ಧ್ವಜ ಮತ್ತು ಮಾರಕ ಶಸ್ತ್ರಾಸ್ತ್ರಗಳ ಫೋಟೋ-ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಬಂಧನಕ್ಕೀಡಾಗಿದ್ದ ಆರೋಪಿಗೆ ಹೈಕೋರ್ಟ್​ ಜಾಮೀನು ನೀಡಿದೆ.

BAIL IN SEDITION CASE
ಹಿಮಾಚಲ ಪ್ರದೇಶ ಹೈಕೋರ್ಟ್​ (ETV Bharat))
author img

By ETV Bharat Karnataka Team

Published : January 8, 2026 at 3:25 PM IST

2 Min Read
Choose ETV Bharat

ಶಿಮ್ಲಾ(ಹಿಮಾಚಲ ಪ್ರದೇಶ): ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನ ಪ್ರಜೆಯೊಂದಿಗೆ ಸಂಭಾಷಣೆ, ಆ ದೇಶದ ಧ್ವಜ ಮತ್ತು ಮಾರಕ ಶಸ್ತ್ರಾಸ್ತ್ರಗಳ ಫೋಟೋ ಹಂಚಿಕೊಂಡು ದೇಶದ್ರೋಹ ಆರೋಪ ಹೊತ್ತಿದ್ದ ಯುವಕನಿಗೆ ಹಿಮಾಚಲ ಪ್ರದೇಶ ಹೈಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದೇಶದ್ರೋಹ ಕಾಯ್ದೆಯಡಿ ಜೈಲುಪಾಲಾಗಿದ್ದ ಆರೋಪಿಯು ಜಾಮೀನು ಕೋರಿ ಸಲ್ಲಿಸದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಅವರು, "ಯುವಕನ ನಡೆಯು ಎರಡು ದೇಶಗಳ ನಡುವೆ ಶಾಂತಿಯನ್ನು ಬಯಸುವುದಾಗಿತ್ತು. ಇದು ದೇಶದ್ರೋಹ ಎಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಯುದ್ಧ ವಿರೋಧಿಸಿದ್ದ ಯುವಕ: "ಆರೋಪಿ ಅಭಿಷೇಕ್ ಸಿಂಗ್ ಭಾರದ್ವಾಜ್, ಎರಡು ರಾಷ್ಟ್ರಗಳ ನಡುವಿನ ಯುದ್ಧವು ಯಾವುದೇ ಗುರುತರ ಉದ್ದೇಶ ಪೂರೈಸುವುದಿಲ್ಲ. ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂದು ಪ್ರತಿಪಾದಿಸಿದ್ದಾರೆ. ಎರಡು ದೇಶಗಳ ಜನರು ದ್ವೇಷವನ್ನು ಕೊನೆಗೊಳಿಸುವ ಮೂಲಕ ಶಾಂತಿಯುತವಾಗಿ ಬದುಕಬೇಕು ಎಂಬ ಬಯಕೆಯು ಹೇಗೆ ದೇಶದ್ರೋಹವಾಗುತ್ತದೆ" ಎಂದು ಪೀಠ ಪ್ರಶ್ನಿಸಿದೆ.

"ಆರೋಪಿಯು ಸಾಮಾಜಿಕ ಮಾಧ್ಯಮದಲ್ಲಿ ಯಾರೊಂದಿಗೋ ಚಾಟ್​ ಮಾಡಿರುವ ಚಿತ್ರಗಳು ಮತ್ತು ವಿಡಿಯೋಗಳು ಲಭ್ಯವಿದೆ. ಆದರೆ, ಆತ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷವನ್ನು ಟೀಕಿಸಿದ್ದಾರೆ. ಎಲ್ಲಾ ಜನರು ಧರ್ಮವನ್ನು ಬದಿಗೊತ್ತಿ ಒಟ್ಟಿಗೆ ಇರಬೇಕು. ಯುದ್ಧವು ಯಾವುದೇ ಫಲಪ್ರದ ಉದ್ದೇಶ ಪೂರೈಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ, ಯುವಕನ ಪೋಸ್ಟ್ ಅಶಾಂತಿಯ ಪರಿಸ್ಥಿತಿ ಸೃಷ್ಟಿಸಿಲ್ಲ. ಹಾಗಾಗಿ, ಅವರ ಪೋಸ್ಟ್‌ಗಳನ್ನು ದೇಶದ್ರೋಹವಾಗಿ ಪರಿಗಣಿಸಲಾಗುವುದಿಲ್ಲ" ಎಂದು ಕೋರ್ಟ್​ ಹೇಳಿದೆ.

ಷರತ್ತುಬದ್ಧ ಜಾಮೀನು: ಹೈಕೋರ್ಟ್ ಜಾಮೀನಿಗೆ ಹಲವಾರು ಷರತ್ತುಗಳನ್ನು ವಿಧಿಸಿದೆ. ಯಾವುದೇ ಉಲ್ಲಂಘನೆಯು ವಿಚಾರಣಾ ನ್ಯಾಯಾಲಯವು ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಅಂತಹ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಜಾಮೀನು ರದ್ದುಗೊಳಿಸಲು ಅರ್ಜಿ ಸಲ್ಲಿಸಲು ಮುಕ್ತವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಆರೋಪಿಗೆ ಐದು ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ. ಅದರಲ್ಲಿ ಆತನ ಪಾಸ್‌ಪೋರ್ಟ್ ನೀಡುವುದು, ಸಾಕ್ಷಿಗಳು ಅಥವಾ ಯಾವುದೇ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು. 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ನೀಡಲು ಸೂಚಿಸಿದೆ.

ಯುವಕನ ಮೇಲಿರುವ ಆರೋಪವೇನು?: 2024ರ ಜೂನ್​​ನಲ್ಲಿ ಆರೋಪಿ ಯುವಕ ಪಾಕಿಸ್ತಾನದ ಧ್ವಜ, ಶಸ್ತ್ರಾಸ್ತ್ರಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ 2025ರ ಮೇ 28ರಂದು ಹಿಮಾಚಲಪ್ರದೇಶ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆಗಳು ಸಹ ತನಿಖೆ ನಡೆಸಿದ್ದವು. ಇದರ ನಂತರ, ಪೊಲೀಸರು ಆತನ ಮೇಲೆ ದೇಶದ್ರೋಹ ಮತ್ತು ಬೇಹುಗಾರಿಕೆ ಆರೋಪ ಹೊರಿಸಿದ್ದರು. ಆರೋಪಿ ಕಾಂಗ್ರಾ ಜಿಲ್ಲೆಯ ಡೆಹ್ರಾ ವ್ಯಾಪ್ತಿಯ ಸುಖಹರ್ ಗ್ರಾಮದ ನಿವಾಸಿಯಾಗಿದ್ದು, ತಂದೆ ಚಾಲಕರಾಗಿದ್ದರೆ, ತಾಯಿ ಸ್ಥಳೀಯ ಹೋಟೆಲ್‌ನಲ್ಲಿ ಕ್ಲೀನರ್ ಆಗಿದ್ದಾರೆ.

ಇವುಗಳನ್ನೂ ಓದಿ: