ಪತ್ನಿ ಅಡುಗೆ ಮಾಡಲು ಸಾಧ್ಯವಿಲ್ಲ ಎಂದ ಮಾತ್ರಕ್ಕೆ ಅದು ಕ್ರೌರ್ಯವಲ್ಲ; ವಿಚ್ಛೇದನಾ ಅರ್ಜಿ ವಜಾಗೊಳಿಸಿದ ತೆಲಂಗಾಣ ಹೈಕೋರ್ಟ್
ಪತಿ - ಪತ್ನಿ ಇಬ್ಬರು ಉದ್ಯೋಗಿಗಳಾಗಿದ್ದು, ಪತ್ನಿ ಮುಂಜಾನೆ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕ್ರೌರ್ಯತೆಗೆ ಸಮಾನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.


Published : January 7, 2026 at 3:09 PM IST
ಹೈದರಾಬಾದ್ (ತೆಲಂಗಾಣ): ಪತಿ ಮತ್ತು ಪತ್ನಿ ಇಬ್ಬರು ಉದ್ಯೋಗಿಗಳಾಗಿದ್ದಾಗ, ಆಕೆ ಗಂಡನಿಗೆ ಅಡುಗೆ ಮಾಡಲಿಲ್ಲ ಎಂಬುದನ್ನು ಕ್ರೂರತೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಕ್ಕ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಎಲ್ಬಿ ನಗರದ ವ್ಯಕ್ತಿಯೊಬ್ಬರು ತಾವು ತಮ್ಮ ಪತ್ನಿಯಿಂದ ಕ್ರೂರತ್ವಕ್ಕೆ ಒಳಗಾಗುತ್ತಿದ್ದು, ತಮ್ಮ ಮದುವೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಕುರಿತು ವಿಚಾರಣೆ ವೇಳೆ ಈ ಅದೇಶ ನೀಡಿದಂತಾಗಿದೆ.
ಕೆಳ ನ್ಯಾಯಾಲಯದಲ್ಲಿ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆ ವ್ಯಕ್ತಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅರ್ಜಿ ಸಲ್ಲಿಸಿರುವ ಪತಿ ಮಧ್ಯಾಹ್ನ 1ರಿಂದ 10ಗಂಟೆಯವರೆಗೆ ಉದ್ಯೋಗದ ಅವಧಿ ಹೊಂದಿದ್ದು, ಪತ್ನಿ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಉದ್ಯೋಗ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಿನ ಹೊತ್ತು ಅಡುಗೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕ್ರೂರತೆಗೆ ಸಮಾನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.
ಅರ್ಜಿದಾರರು ರಾತ್ರಿ 11ಕ್ಕೆ ಕಚೇರಿ ಮುಗಿಸಿ ಮನೆಗೆ ಬರುತ್ತಾರೆ. ಮಧ್ಯಾಹ್ನ 1ಕ್ಕೆ ಕಚೇರಿಗೆ ಹೊರಡುತ್ತಾರೆ. ಪತ್ನಿ 6ಕ್ಕೆ ಎದ್ದು 9ಕ್ಕೆ ಕಚೇರಿಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪತಿಗಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಂಭೀರ ವಿಷಯವಾಗಿ ನೋಡಲು ಸಾಧ್ಯವಿಲ್ಲ. ಇದನ್ನು ಕ್ರೂರತೆ ಎಂದು ಕಾಣಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ದಂಪತಿ 2018ರಲ್ಲಿ ಮದುವೆಯಾಗಿದ್ದು, ಅದೇ ವರ್ಷ ಈ ವಿಚಾರವಾಗಿ ಉಂಟಾದ ಗಂಭೀರ ಸ್ವರೂಪದ ವಿವಾದದಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2019ರಲ್ಲಿ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಪತ್ನಿ ತಮಗೆ ಮನೆಯ ಕೆಲಸ ಕಾರ್ಯದಲ್ಲಿ ಸಹಾಯ ಮಾಡದೇ ಕ್ರೂರತೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೇ ಪತ್ನಿ ಪದೇ ಪದೆ ಆಕೆಯ ಪೋಷಕರ ಮನೆಗೆ ಹೋಗುತ್ತಿದ್ದು, ತನ್ನ ಜೊತೆಗೆ ಇರುತ್ತಿಲ್ಲ ಎಂದು ಆಪಾದಿಸಿದ್ದು, ಅರ್ಜಿದಾರರ ಹೇಳಿಕೆಯಲ್ಲಿ ಗೊಂದಲವಿರುವುದನ್ನು ಕೋರ್ಟ್ ಗಮನಿಸಿದೆ. ಗರ್ಭಪಾತದ ನಂತರ ಆಕೆಯ ಪೋಷಕರೊಂದಿಗೆ ಇರುವುದು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರತ್ಯೇಕ ನಿವಾಸವನ್ನು ಕೋರುವುದು ಕ್ರೌರ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಪ್ರತಿಯೊಂದು ಪ್ರಕರಣದ ಸಂಗತಿಗಳನ್ನು ಅವಲಂಬಿಸಿ ಇದು ಅನ್ವಯಿಸುತ್ತದೆ ಎಂದು ಹೈಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಪತ್ನಿ ಪ್ರತ್ಯೇಕ ವಾಸಕ್ಕೆ ಪ್ರಸ್ತಾಪ ಮಾಡಿಲ್ಲ. ಆದರೆ, ಅವರ ವಕೀಲರು ಈ ರೀತಿ ಮಾಡುವಂತೆ ಅವರಿಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಕ್ರೂರತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಈ ಬಗೆಗಿನ ಅರ್ಜಿಯನ್ನು ವಜಾ ಮಾಡಿದೆ.
ಇವುಗಳನ್ನೂ ಓದಿ:
ಕೌಟುಂಬಿಕ ಕಲಹ, ವಿಚ್ಛೇದನ ಕೇಸುಗಳಲ್ಲಿ ಈ ವರ್ಷ ಹೈಕೋರ್ಟ್ ನೀಡಿದ ಪ್ರಮುಖ ಆದೇಶಗಳಿವು

