ETV Bharat / bharat

ಈ ಚಂಬಾ ಕರವಸ್ತ್ರದ ಬೆಲೆ ಜಸ್ಟ್​ 7 ಲಕ್ಷ ರೂಪಾಯಿ: ಈ ಕರ್ಚಿಫ್ ವಿಶೇಷತೆ ಏನು ಅಂತೀರಾ?​

ಶಿಮ್ಲಾದಲ್ಲಿ ನಡೆದ ಹಿಮ್ ಎಂಎಸ್​ಎಂಇ ಉತ್ಸವದಲ್ಲಿ ಪ್ರದರ್ಶನಗೊಂಡ ಚಂಬಾ ಕರವಸ್ತ್ರದ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

CHAMBA HANDKERCHIEF
ಚಂಬಾ ಕರವಸ್ತ್ರದ ಬೆಲೆ 7 ಲಕ್ಷ ರೂಪಾಯಿ (ETV Bharat)
author img

By ETV Bharat Karnataka Team

Published : January 7, 2026 at 6:01 PM IST

3 Min Read
Choose ETV Bharat

ಶಿಮ್ಲಾ(ಹಿಮಾಚಲ ಪ್ರದೇಶ): ಇಲ್ಲಿ ನಡೆದ ಹಿಮ್ ಎಂಎಸ್​ಎಂಇ ಉತ್ಸವದಲ್ಲಿ ಪ್ರದರ್ಶನಗೊಂಡ ಚಂಬಾ ಕರವಸ್ತ್ರದ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು, ಕೇವಲ ಒಂದು ಚಂಬಾ ಕರವಸ್ತ್ರದ ಬೆಲೆ ಏಳು ಲಕ್ಷ ರೂಪಾಯಿ. ಈ ಕರವಸ್ತ್ರದ ವಿಶೇಷತೆ ಏನು, ಇದು ಇಷ್ಟೊಂದು ದುಬಾರಿ ಏಕೆ ಎಂಬ ಮಾಹಿತಿ ಇಲ್ಲಿದೆ.

ಜನವರಿ 3 ರಿಂದ 5 ರವರೆಗೆ ನಡೆದ ಮೂರು ದಿನಗಳ ಹಿಮ್ ಎಂಎಸ್​ಎಂಇ ಉತ್ಸವದಲ್ಲಿ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ (ODOP) ಉಪಕ್ರಮದ ಅಡಿ ಪ್ರದರ್ಶಿಸಲಾದ ಕರವಸ್ತ್ರವನ್ನು ಚಂಬಾದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕುಶಲಕರ್ಮಿ ಅಂಜಲಿ ವಕೀಲ್ ಹೊಲಿಯುತ್ತಾರೆ ಮತ್ತು ನೇಯುತ್ತಾರೆ. ಅಂಜಲಿ ವಕೀಲ್ ಪೋರ್ಟರ್ ಹಾಲ್​ ಹಾಕಿದ್ದ ಸ್ಟಾಲ್​ನಲ್ಲಿ ದುಬಾರಿ ಬೆಲೆಯ ಕರವಸ್ತ್ರ ನೋಡಲು ಸಾರ್ವಜನಿಕರು ಕಿಕ್ಕಿರಿದಿದ್ದರು.

HIMACHAL HANDICRAFTS
ಕಸೂತಿ ಮಾಡುತ್ತಿರುವ ಅಂಜಲಿ ವಕೀಲ್ (ETV Bharat)

ಇಲ್ಲಿ ಕರವಸ್ತ್ರದ ಬೆಲೆಗಳು ಆರಂಭವಾಗುವುದೇ 1500ರೂ ದಿಂದ: ಕರವಸ್ತ್ರದ ಬೆಲೆಗಳು ಸಾಮಾನ್ಯವಾಗಿ 1,500 ರೂ.ಗಳಿಂದ ಪ್ರಾರಂಭವಾಗುತ್ತವೆ. ಆದರೆ ಪ್ರದರ್ಶನದಲ್ಲಿರುವಂತೆಯೇ ಸಂಕೀರ್ಣವಾದ ಕಲಾಕೃತಿಯಿಂದ ಕೂಡಿದ ಕರವಸ್ತ್ರ ಬೆಲೆ ಲಕ್ಷಗಳನ್ನು ತಲುಪುತ್ತವೆ. ಅಂಜಲಿ ವಕೀಲ್ ಪ್ರಕಾರ, ಕೆಲವು ಸಂಕೀರ್ಣ ಕರಕುಶಲತೆಯಿಂದ ಕರವಸ್ತ್ರದ ಬೆಲೆ 30-40 ಲಕ್ಷ ರೂ.ಗಳನ್ನು ದಾಟಿದ್ದಿದೆ.

ಚಂಬಾ ಕರವಸ್ತ್ರವು ಸಾಮಾನ್ಯ ಜವಳಿಯಲ್ಲ. ಇದು ಎರಡು ಬದಿಯ ಕಸೂತಿಗೆ ಹೆಸರುವಾಸಿಯಾಗಿದೆ. ಇದರಿಂದಾಗಿ ವಿನ್ಯಾಸವು ಎರಡೂ ಬದಿಗಳಲ್ಲಿ ಒಂದೇ ರೀತಿ ಕಾಣುತ್ತದೆ, ಈ ತುಂಬಾ ನಿಖರವಾಗಿರುತ್ತದೆ ಮತ್ತು ತಜ್ಞರು ಸಹ ಕರವಸ್ತ್ರದ ಹಿಂದೆ ಯಾವುದು, ಮುಂದೆ ಯಾವುದು ಎಂಬುದನ್ನು ಗುರುತಿಸಲು ಹೆಣಗಾಡುತ್ತಾರೆ. ಅಂಜಲಿ ಮನೆಯಲ್ಲಿ ಈ ಅಪರೂಪದ ಕಲಾ ಪ್ರಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಮತ್ತು ತಮ್ಮ ಅತ್ತೆಯಿಂದ ಸೂಕ್ಷ್ಮ ಕರಕುಶಲತೆಯನ್ನು ಕಲಿತರು.

HIMACHAL HANDICRAFTS
ಅಂಜಲಿ ವಕೀಲ್ (ETV Bharat)

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ತು ಚಂಬಾ ಕಸೂತಿಯಲ್ಲಿ ಹೆಸರು ಮಾಡಿರುವ ಲಲಿತಾ ವಕೀಲ್ ಅವರಿಗೆ 2018 ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು ಮತ್ತು ಅವರ ಕರಕುಶಲತೆಗೆ ಭಾರತ ಮಾತ್ರವಲ್ಲದೇ ಜಪಾನ್ ಮತ್ತು ಜರ್ಮನಿಯಂತಹ ದೇಶಗಳ ಜನ ಕೂಡ ಮಾರುಹೋಗಿದ್ದಾರೆ.

ಪ್ರದರ್ಶನಗಳು ಮತ್ತು ಪ್ರಶಸ್ತಿಗಳ ಹೊರತಾಗಿ ಅಂಜಲಿ ವಕೀಲ್ ಅವರು, ಐಐಟಿ ಮಂಡಿ, ಐಐಟಿ ರೂರ್ಕಿ ಮತ್ತು ದೇಶಾದ್ಯಂತ ಅನೇಕ ಇತರ ಸಂಸ್ಥೆಗಳಲ್ಲಿ ಈ ವಿಶೇಷ ಕರಕುಶಲತೆ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

HIMACHAL HANDICRAFTS
ಸನ್ಮಾನ ಸ್ವೀಕರಿಸುತ್ತಿರುವ ಅಂಜಲಿ ವಕೀಲ್ (ETV Bharat)

ಇಶಾ ಅಂಬಾನಿ ಮದುವೆಗೆ ಬಂದಿತ್ತು ಕರೆ: ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರ ವಿವಾಹಕ್ಕೆ ಲಲಿತಾ ವಕೀಲ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಅಂಬಾನಿ ಕುಟುಂಬವು ಅವರಿಂದ ಎರಡು ಲಕ್ಷ ರೂ. ಮೌಲ್ಯದ ಎರಡು ಚಂಬಾ ಕರವಸ್ತ್ರಗಳನ್ನು ಖರೀದಿಸಿತ್ತು. ಹಿಮಾಚಲದ ಕುಶಲಕರ್ಮಿ ಸಮುದಾಯಕ್ಕೆ ಅವಿಸ್ಮರಣೀಯ ಕ್ಷಣವಾಗಿತ್ತು.

ಕರವಸ್ತ್ರ ಇತಿಹಾಸ: ಮಹಾಭಾರತದ ಕುರುಕ್ಷೇತ್ರ ಯುದ್ಧವನ್ನು ಚಿತ್ರಿಸಿರುವ ಚಂಬಾ ಕರವಸ್ತ್ರ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿ ಹೆಮ್ಮೆಯ ಸ್ಥಾನ ಪಡೆದುಕೊಂಡಿದೆ. ಇದನ್ನು 1883 ರಲ್ಲಿ ರಾಜ ಗೋಪಾಲ್ ಸಿಂಗ್ ಉಡುಗೊರೆಯಾಗಿ ನೀಡಿದ್ದರು.

HIMACHAL HANDICRAFTS
ಚಂಬಾ ಕರವಸ್ತ್ರ (ETV Bharat)

16ನೇ ಶತಮಾನದಲ್ಲಿ ಗುರುನಾನಕರ ಸಹೋದರಿ ಬೆಬೆ ನಾನಾಕಿ ಅವರು ಕಸೂತಿ ಮಾಡಿದ್ದಾರೆಂದು ನಂಬಲಾಗಿದೆ. ಇದನ್ನು ಹೋಶಿಯಾರ್‌ಪುರದ ಗುರುದ್ವಾರದಲ್ಲಿ ಸಂರಕ್ಷಿಸಲಾಗಿದೆ. ಈ ಕಲೆ ಶತಮಾನಗಳಷ್ಟು ಹಿಂದಿನದಾದರೂ, 18 ಮತ್ತು 19ನೇ ಶತಮಾನಗಳಲ್ಲಿ ರಾಜಮನೆತನದ ಮಹಿಳೆಯರು ವರದಕ್ಷಿಣೆ ಉಡುಗೊರೆಯಾಗಿ ಈ ಕರವಸ್ತ್ರಗಳನ್ನು ಕಸೂತಿ ಮಾಡಲು ತಮ್ಮ ಬಿಡುವಿನ ವೇಳೆ ಕಳೆಯುತ್ತಿದ್ದಾಗ ಇದು ಪ್ರವರ್ಧಮಾನಕ್ಕೆ ಬಂದಿತು.

ಒಂದು ಕರವಸ್ತ್ರ ತಯಾರಿಸಲು ಹಲವಾರು ತಿಂಗಳ ಸಮಯ ಹಿಡಿಯುತ್ತದೆ: ಈ ವಿಶೇಷ ಕರವಸ್ತ್ರ ತಯಾರಕರಾದ ಅಂಜಲಿ ವಕೀಲ್ ಮಾತನಾಡಿ, ಒಂದು ಕರವಸ್ತ್ರವನ್ನು ಪೂರ್ಣಗೊಳಿಸಲು ನಮಗೆ ಹಲವಾರು ತಿಂಗಳುಗಳು ಬೇಕಾಗುತ್ತದೆ. ಏಕೆಂದರೆ ಎಲ್ಲವೂ ವಿನ್ಯಾಸದ ಸಂಕೀರ್ಣತೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ತಯಾರಿಕೆಯ ಮೂಲಭೂತ ಅಂಶಗಳನ್ನು ಕಲಿಯಲು ವರ್ಷಗಳೇ ಬೇಕಾಗುತ್ತದೆ. ಆದರೆ, ನಾನು ವೇಗವಾಗಿ ಕಲಿತಿದ್ದೇನೆ, ಕೇವಲ 15 ದಿನಗಳಲ್ಲಿ ನಿರಂತರ ಅಭ್ಯಾಸದಿಂದ ಪಾಂಡಿತ್ಯ ಬಂದಿತು ಎಂದರು.

ಯುವಜನರು ಸರಿಯಾದ ತರಬೇತಿ ಪಡೆದರೆ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಸುಸ್ಥಿರ ಜೀವನೋಪಾಯವಾಗಬಹುದು. ಪರಂಪರೆಯ ಉಳಿವು ಪರಂಪರೆಯನ್ನು ಮುಂದುವರಿಸಬೇಕಾದ ಯುವ ಪೀಳಿಗೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.

ಇವುಗಳನ್ನೂ ಓದಿ: