ಇದು 300 ವರ್ಷಗಳಷ್ಟು ಹಳೆಯ ಮಾರುಕಟ್ಟೆ ಯೋಜನೆ: ಇಂದಿಗೂ ಗಮನ ಸೆಳೆಯಲು ಕಾರಣವೇನು ಗೊತ್ತಾ?
ಜೈಪುರದ ಐತಿಹಾಸಿಕ ಬಜಾರ್ ವಿನ್ಯಾಸದ ಅಡಿ ಪ್ರತಿ ಬೀದಿಯನ್ನು ಒಂದೊಂದು ನಿರ್ದಿಷ್ಟ ವ್ಯಾಪಾರಕ್ಕೆ ಮೀಸಲಿಡಲಾಗಿತ್ತು. ಇಂದು ಸುಸ್ಥಿರ ನಗರ ಯೋಜನೆಗಾಗಿ ಸಾಂಪ್ರದಾಯಿಕ ಮಾದರಿಗಳನ್ನು ಮರುಪರಿಶೀಲಿಸುತ್ತಿರುವ ತಜ್ಞರಿಗೆ ಮತ್ತೆ ಇದೇ ಯೋಜನೆ ಪ್ರಸ್ತುತ ಎನಿಸುತ್ತಿದೆ.

Published : November 19, 2025 at 8:09 AM IST
ಜೈಪುರ, ರಾಜಸ್ಥಾನ: ಭಾರತೀಯ ನಗರಗಳು ಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸುತ್ತಿವೆ. ದಟ್ಟಣೆಯಿಂದ ಕೂಡಿರುವ ವಾಣಿಜ್ಯ ಪ್ರದೇಶಗಳನ್ನು ಮರುಸಂಘಟಿಸುವ ಬಗ್ಗೆ ಚರ್ಚೆ ನಡೆಸುತ್ತಿರುವ ಈ ಸಮಯದಲ್ಲಿ, ರಾಜಸ್ಥಾನದ ಇತಿಹಾಸಕಾರರು ಬರೋಬ್ಬರಿ 300 ವರ್ಷಗಳ ಹಿಂದೆಯೇ ಸರಿಯಾಗಿ ಹಾಗೂ ಯೋಜನಾ ಬದ್ಧವಾಗಿ ಮಾಡಿದ ಮಾರುಕಟ್ಟೆ ಮಾದರಿಯತ್ತ ಗಮನ ಸೆಳೆಯುತ್ತಿದ್ದಾರೆ.
ಮಹಾರಾಜ ಸವಾಯಿ ಜೈ ಸಿಂಗ್ II ಅವರು ಪರಿಚಯಿಸಿದ ಜೈಪುರದ ಮೂಲ ವ್ಯಾಪಾರ - ಆಧಾರಿತ ಮಾರುಕಟ್ಟೆ ಯೋಜನೆಯನ್ನು ಆಧುನಿಕ ನಗರ ವಿನ್ಯಾಸದೊಂದಿಗೆ ಹೊಂದಿಕೊಳ್ಳುವ ಉದಾಹರಣೆಯಾಗಿ ಪದೇ ಪದೆ ಉಲ್ಲೇಖಿಸಲಾಗುತ್ತಿದೆ. ಅಂದು ಹೀಗೆ ಯೋಜನಾಬದ್ದವಾಗಿ ರೂಪಿತವಾದ ಮಾರುಕಟ್ಟೆಯಾಗಿ ಗಮನ ಸೆಳೆಯುತ್ತಿದೆ.

ಮಾರುಕಟ್ಟೆ ಬಗ್ಗೆ ಇತಿಹಾಸಕಾರರ ಮಾತು: ಇತಿಹಾಸಕಾರ ಜಿತೇಂದ್ರ ಸಿಂಗ್ ಶೇಖಾವತ್ ಹೇಳುವಂತೆ ಜೈಪುರದ ಮಾರುಕಟ್ಟೆ ವ್ಯವಸ್ಥೆ ಕೇವಲ ಸೌಂದರ್ಯಾತ್ಮಕವಾಗಿ ಆಕರ್ಷಣೀಯವಾಗಿತ್ತು ಎಂದಲ್ಲ, ಆರ್ಥಿಕವಾಗಿಯೂ ಸಬಲವಾಗಿತ್ತು. ಒಂದೊಂದು ನಿರ್ದಿಷ್ಟ ವ್ಯಾಪಾರಕ್ಕೆ ಮೀಸಲಾದ ಹಾಗೂ ಸೊಗಸಾಗಿ ವಿಭಜಿತವಾದ ಮಾರುಕಟ್ಟೆಗಳು ವಾಣಿಜ್ಯ, ಸಂಸ್ಕೃತಿ ಮತ್ತು ಸಮುದಾಯವನ್ನು ಒಗ್ಗೂಡಿಸುವ ಪರಿಪೂರ್ಣ ನಗರ ಯೋಜನೆಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ.

ಇದಕ್ಕೆ ಉದಾಹರಣೆ ನೀಡುವ ಶೇಖಾವತ್ ಅವರು, ಜೈಪುರ ಸ್ಥಾಪನೆಯ ಆರಂಭಿಕ ದಿನಗಳ ಒಂದು ರೋಚಕ ಕಥೆಯನ್ನೂ ಕೂಡಾ ಹೇಳಿದ್ದಾರೆ. ರಾಮಗಂಜ್ ಬಳಿ ಸವಾರಿ ಮಾಡುತ್ತಿದ್ದ ಜೈ ಸಿಂಗ್ ಅಲ್ಲಿ ಒಂದು ಜಾಗೆಯಲ್ಲಿ ಒಂಟೆ ಚರ್ಮದ ಡ್ರಮ್‌ಗಳಲ್ಲಿ ಎಣ್ಣೆ, ಅದರ ಪಕ್ಕದಲ್ಲೇ ಮಣ್ಣಿನ ಪಾತ್ರೆಯಲ್ಲಿ ತುಪ್ಪ, ಆಭರಣಕಾರರೂ, ಹಲವೈ ಮಾಡುವವರೂ ಯೋಜನೆಯಿಲ್ಲದೇ ಚದುರಿಹೋಗಿದ್ದನ್ನು ನೋಡಿದರು. ಅದು ಅತ್ಯಂತ ಅವ್ಯವಸ್ಥಿತ ಎಂದು ರಾಜನಿಗೆ ಭಾಸವಾಯಿತು. ತಕ್ಷಣವೇ ಕುದುರೆಯಿಂದ ಇಳಿದ ಜೈ ಸಿಂಗ್ ನಿರ್ದಿಷ್ಟ ಮಾರುಕಟ್ಟೆಗಳಾಗಿ ವಿಭಜಿಸುವ ಸಂಕಲ್ಪ ಮಾಡಿದರು ಎಂದು ಕವಿ ಆತ್ಮಾರಾಮ್ ಬರೆದಿರುವುದನ್ನು ಶೇಖಾವತ್ ಉಲ್ಲೇಖಿಸಿ ಹೇಳಿದ್ದಾರೆ.

ವಿದೇಶಿ ಮಾರುಕಟ್ಟೆಗಳ ಬಗ್ಗೆ ಅಧ್ಯಯನ ಮಾಡಿ ಯೋಜನೆ ರೂಪಿಸಿದ್ದ ದೊರೆ: ಈ ವಿಧಾನವೇ ಜೈಪುರವನ್ನು ದೇಶದ ಅತ್ಯಂತ ಸುಸಂಘಟಿತ ಮತ್ತು ಯೋಜಿತ ಮಾರುಕಟ್ಟೆಗಳಲ್ಲಿ ಒಂದನ್ನಾಗಿ ಮಾಡಿತು, ಎಂದು ಶೇಖಾವತ್ ನೆನಪಿಸಿಕೊಂಡಿದ್ದಾರೆ. ಅಂದು ಜೈ ಸಿಂಗ್ ಆಲೋಚನಾ ಕ್ರಮಗಳು ಇಂದು ಅತ್ಯಂತ ಪ್ರಸ್ತುತತೆ ಪಡೆದುಕೊಂಡಿವೆ. ನಗರದ ಗ್ರಿಡ್ - ಆಧಾರಿತ ಬಜಾರ್ ವ್ಯವಸ್ಥೆಯನ್ನು ಜಾಗತಿಕ ಐತಿಹಾಸಿಕ ನಗರಗಳೊಂದಿಗೆ ಹೋಲಿಸುವ ಅಧ್ಯಯನಗಳು ನಡೆಯುತ್ತಿವೆ. ಜೈ ಸಿಂಗ್ ವ್ಯಾಪಕವಾಗಿ ಪ್ರಯಾಣ ಮಾಡಿ, ವಿದೇಶಿ ನಗರ ವಿನ್ಯಾಸಗಳನ್ನು ಅಧ್ಯಯನ ಮಾಡಿ, ಚೀನಾದ ಚಾಂಗ್‌ಹಾಂಗ್ (ಈಗಿನ ಶಿಯಾನ್) ನಗರದ ನಕ್ಷೆಯನ್ನೂ ತಯಾರಿಸಿಕೊಟ್ಟಿದ್ದರು ಎಂದು ಇತಿಹಾಸಕಾರರು ತಿಳಿಸುತ್ತಾರೆ.

ರಾಜರು ಭಾರತದಾದ್ಯಂತ ನುರಿತ ಕುಶಲಕರ್ಮಿಗಳನ್ನು ಆಹ್ವಾನಿಸಿ ಅವರ ವ್ಯಾಪಾರಕ್ಕನುಗುಣವಾಗಿ ಅವರಿಗೆ ನಿರ್ದಿಷ್ಟವಾದ ಬೀದಿಗಳಲ್ಲಿ ಜಾಗ ಮಾಡಿಕೊಟ್ಟಿದ್ದರು. ಹೀಗೆ ಕ್ಲಸ್ಟರ್ - ಆಧಾರಿತ ವಾಣಿಜ್ಯ ಯೋಜನೆಯ ಆದ್ಯತಯ ಮೇಲೆ ಈ ಮಾದರಿ ರೂಪುಗೊಂಡಿತು. ಕೇವಲ 162 ಅಂಗಡಿಗಳ ಒಂದು ವ್ಯಾಪಾರ ಕೇಂದ್ರದಿಂದ ಆರಂಭವಾದ ಈ ವ್ಯವಸ್ಥೆಯು ಈಗ ಪ್ರಸಿದ್ಧ ಮಾರುಕಟ್ಟೆಗಳಾಗಿ ಬೆಳೆದಿವೆ.
ಜೈಪುರದ ಅತ್ಯಂತ ಪ್ರಸಿದ್ಧ ಬೀದಿಗಳೂ ಈ ವ್ಯವಸ್ಥೆಯಿಂದಲೇ ರೂಪುಗೊಂಡವು. ಉದಾಹರಣೆಗೆ ಜಾದಿಯಾ ರಸ್ತೆ ಕಾಬೂಲ್ ಮತ್ತು ಕಂದಹಾರದಿಂದ ಬಂದ ಸಿಖ್ ಜಾದಿಯಾ ಕುಟುಂಬಗಳು ಚಿನ್ನ-ಬೆಳ್ಳಿ ವ್ಯಾಪಾರ ಆರಂಭಿಸಿದಾಗ ರೂಪುಗೊಂಡಿತ್ತು. ಹಳೆಯ ಧುಂಧಾರ್ ಗಾದೆಗಳೂ ನಗರದ ವಾಣಿಜ್ಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಜೈಪುರದಲ್ಲಿ ಆರು ಬಗೆಯ ಮಾರುಕಟ್ಟೆಗಳಿವೆ ಮತ್ತು ಪರತನಿಯನ್ ರಸ್ತೆಯಲ್ಲಿ ಆರು ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ.
ಸಿಹಿ ತಿಂಡಿಗಳಿಗಾಗಿಯೇ ಪ್ರತ್ಯೇಕ್ ವ್ಯಾಪಾರ ಬೀದಿ: ಜೈಪುರದ ಪ್ರಸಿದ್ಧ ಸಿಹಿತಿಂಡಿಗಳಾದ ಚೌಘಾನಿಯ ಲಡ್ಡು, ದಾನಾ ಮೇಥಿ, ಝರ್ ಪಕೋಡಿ, ಗೋಲ್ ಕಚೋರಿ, ಮಿಶ್ರಿ ಮಾವಾ, ಥಾಲ್ ಬರ್ಫಿ, ಘೇವರ್ ಮತ್ತು ಫಿರ್ನಿ ಸಹ ಇದೇ ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಕಾವಲುಗಾರರ ಮೇಲಿನ ನಂಬಿಕೆ ಅಷ್ಟೊಂದಿತ್ತು: ಮಾರುಕಟ್ಟೆಗಳ ಸುರಕ್ಷತೆಯಲ್ಲಿಯೂ ಈ ವ್ಯವಸ್ಥೆ ಮಾದರಿಯಾಗಿದೆ. ಮೀನಾ ಸಮುದಾಯದ ಕಾವಲುಗಾರರ ಮೇಲಿನ ನಂಬಿಕೆಯಿಂದ ಆಭರಣ ವ್ಯಾಪಾರಿಗಳು ರಸ್ತೆ ಬದಿಯ ಪೆಟ್ಟಿಗೆಗಳಲ್ಲಿಯೇ ಬೆಲೆಬಾಳುವ ಆಭರಣಗಳನ್ನು ಬಿಟ್ಟು ಹೋಗುತ್ತಿದ್ದರು ಎಂದು ಶೇಖಾವತ್ ಹೇಳುತ್ತಾರೆ. ಬಡಿ ಚೌಪರ್‌ನಲ್ಲಿರುವ ಕಟ್ಲಾ ಆದರ್ಶ ವಾಣಿಜ್ಯ ಸಂಕೀರ್ಣ ಎಂದೇ ಪರಿಗಣಿತ. ಸಿಕಾರ್‌ನ ಒಬ್ಬ ಪಾದ್ರಿಯವರು ಭೂಮಿ ದಾನ ಮಾಡಿ, ಮೇಲ್ವಿಚಾರಣೆ ಮಾಡಿ ಈ ಪೇಟೆಯನ್ನು ನಿರ್ಮಿಸಿದ್ದರು.

ಇದೊಂದು ಮಾದರಿ ಕೇಸ್ ಸ್ಟಡಿ: ನಗರ ಜಾಗಗಳ ಮರು ರೂಪಿಸುವಿಕೆ ಮತ್ತು ಪರಂಪರೆಯ ಬಜಾರ್‌ಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ, ಯೋಜನೆ ಮತ್ತು ಸಮುದಾಯದ ಅಗತ್ಯಗಳನ್ನು ಒಗ್ಗೂಡಿಸಿದಾಗ ನಗರ ವ್ಯಾಪಾರ ಹೇಗೆ ಸಮೃದ್ಧ ಮತ್ತು ರೋಮಾಂಚಕಾರಿಯಾಗಿ ಉಳಿಯಬಹುದು ಎಂಬುದಕ್ಕೆ ಜೈಪುರದ ಮಾದರಿ ಉತ್ತಮ ಕೇಸ್ ಸ್ಟಡಿಯಾಗಿ ಉಲ್ಲೇಖಿಸಲ್ಪಡುತ್ತಿದೆ.
ಜೈಪುರ ಕೇವಲ ಯೋಜಿತ ನಗರ ಎಂದಲ್ಲ, ಒಂದು ಕನಸು, ಒಂದು ವ್ಯವಸ್ಥೆ, ವ್ಯಾಪಾರ - ಕೇಂದ್ರಿತ ದೂರದೃಷ್ಟಿಯ ಪ್ರತಿಬಿಂಬ. ಇದೇ ಅದನ್ನು ಜಾಗತಿಕವಾಗಿ ಅತ್ಯಂತ ಚೆನ್ನಾಗಿ ಯೋಜಿತ ನಗರಗಳಲ್ಲಿ ಒಂದನ್ನಾಗಿ ಮಾಡಿತು ಅಂತಾರೆ ಇತಿಹಾಸಕಾರರು.
ಇದನ್ನು ಓದಿ: ಬಿಹಾರ ಸೋಲಿನ ಹೊಣೆ ನಾನೇ ಹೊರುವೆ, ಒಂದು ದಿನ ಮೌನ ವ್ರತ ಆಚರಣೆ: ಪ್ರಶಾಂತ್ ಕಿಶೋರ್

