ರಾಮೋಜಿ ರಾವ್ ಶ್ರೇಷ್ಠತಾ ಪ್ರಶಸ್ತಿಗೆ ಭಾಜನರಾದ ಸಾಧಕರು: ಈ ಏಳು ಪುರಸ್ಕೃತರ ಸಾಧನೆಯ ಹಾದಿ ಇಲ್ಲಿದೆ
ತಮ್ಮ ಕ್ಷೇತ್ರದಲ್ಲಿ ಅಗಾಧ ಸೇವೆಯೊಂದಿಗೆ ಸಮಾಜಕ್ಕೆ ಒಳಿತು ಮಾಡುವ ಮೂಲಕ ಛಾಪು ಮೂಡಿಸಿದ ಗಣ್ಯರನ್ನು ಗುರುತಿಸಿ ರಾಮೋಜಿ ರಾವ್ ಸ್ಮರಣಾರ್ಥವಾಗಿ ಈ ಪ್ರಶಸ್ತಿ ನೀಡಲಾಗಿದೆ.


Published : November 17, 2025 at 1:40 PM IST
|Updated : November 17, 2025 at 2:31 PM IST
ಹೈದರಾಬಾದ್: ತಮ್ಮ ಕ್ಷೇತ್ರಗಳಲ್ಲಿ ಅದ್ಬುತ ಕಾರ್ಯದ ಮೂಲಕ ಛಾಪು ಮೂಡಿಸಿ, ಇತರರಿಗೆ ಸ್ಪೂರ್ತಿಯಾದ ಏಳು ಸಾಧಕರಿಗೆ 2025ರ ರಾಮೋಜಿ ಶ್ರೇಷ್ಠತಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಗಿದೆ. ರಾಮೋಜಿ ರಾವ್ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ರಾಮೋಜಿ ಗ್ರೂಪ್ ಸಂಸ್ಥಾಪಕರ 89ನೇ ಜನ್ಮ ದಿನಾಚರಣೆಯಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ, ಮಾನವೀಯ ಸೇವೆ, ಕಲೆ ಮತ್ತು ಸಂಸ್ಕೃತಿ, ಯುವ ಐಕಾನ್, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಮಹಿಳಾ ಸಾಧಕಿ ಎಂಬ ಏಳು ಪ್ರತಿಷ್ಠಿತ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪಾರದರ್ಶಕ ಮತ್ತು ಕಠಿಣ ವಿನ್ಯಾಸದ ಮೂಲಕ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ತಜ್ಞರ ಸಮಿತಿಗಳು ಪ್ರತಿ ವಿಭಾಗದಲ್ಲಿ ಹಲವಾರು ಪ್ರೊಫೈಲ್‌ಗಳನ್ನು ಮೌಲ್ಯಮಾಪನ ಮಾಡಿ, ಪ್ರತಿ ವಿಭಾಗಕ್ಕೆ ಮೂರು ಹೆಸರುಗಳನ್ನು ಆಯ್ಕೆ ಮಾಡಿದ್ದವು. ನಂತರ ಅಂತಿಮ ಸಮಿತಿಯು ಪ್ರತಿ ವಿಭಾಗಕ್ಕೆ ಒಬ್ಬರನ್ನು ಪ್ರಶಸ್ತಿ ಪುರಸ್ಕೃತರನ್ನಾಗಿ ಆಯ್ಕೆ ಮಾಡಿದೆ. ಪುರಸ್ಕೃತರ ದೃಢೀಕರಣ ಎಲ್ಲಾ ರುಜುವಾತುಗಳು ಮತ್ತು ಕ್ಷೇತ್ರಕಾರ್ಯವನ್ನು ಈನಾಡು ಮತ್ತು ಈಟಿವಿ ಭಾರತ್ ನೆಟ್‌ವರ್ಕ್‌ಗಳ ಮೂಲಕ ಸ್ವತಂತ್ರವಾಗಿ ಪರಿಶೀಲಿಸಲಾಯಿತು.
Hon’ble Vice-President Shri C. P. Radhakrishnan graced the inaugural Ramoji Excellence Awards 2025 at Ramoji Film City, Hyderabad, Telangana, as the Chief Guest today.
— Vice-President of India (@VPIndia) November 16, 2025
He paid heartfelt tributes to Shri Ramoji Rao, describing him as a visionary nation-builder who transformed… pic.twitter.com/TB8l9RiDqm
ಪತ್ರಿಕೋದ್ಯಮ: ಪ್ರಖ್ಯಾತ ಪತ್ರಕರ್ತ ಮತ್ತು ಲೇಖಕ ಜೈದೀಪ್ ಹರ್ಡಿಕರ್ ಅವರಿಗೆ ಪತ್ರಿಕೋದ್ಯಮದಲ್ಲಿನ ಶ್ರೇಷ್ಠತೆಗಾಗಿ ರಾಮೋಜಿ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹರ್ಡಿಕರ್ ಅವರು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತದ ಗ್ರಾಮೀಣ ವಾಸ್ತವಗಳನ್ನು ಆಳವಾದ ಒಳನೋಟಗಳೊಂದಿಗೆ ವರದಿ ಮಾಡಿದ್ದಾರೆ. ಅವರ ಕೆಲಸವು ಅಂಚಿನಲ್ಲಿರುವ ಧ್ವನಿಗಳನ್ನು ವರ್ಧಿಸುತ್ತದೆ ಮತ್ತು ಅಭಿವೃದ್ಧಿಯ ಮಾನವ ಆಯಾಮಗಳನ್ನು ದೇಶದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಯೂತ್ ಐಕಾನ್; ಶ್ರೀಕಾಂತ್ ಬೊಲ್ಲಾ ಅವರು ಯೂತ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೊಲ್ಲಾಂಟ್ ಇಂಡಸ್ಟ್ರೀಸ್‌ನ ಸ್ಥಾಪಕ ಮತ್ತು ಅಧ್ಯಕ್ಷರು ಹಾಗೂ ಎಂಐಟಿ ಹಳೆಯ ವಿದ್ಯಾರ್ಥಿಯಾಗಿರುವ ಬೊಲ್ಲಾ ಅವರು, ಸ್ಥಿತಿಸ್ಥಾಪಕತ್ವ ಮತ್ತು ಅಂತರ್ಗತ ನಾಯಕತ್ವದ ರಾಷ್ಟ್ರೀಯ ಸಂಕೇತವಾಗಿದ್ದಾರೆ. ಉದ್ಯಮವು ಸುಸ್ಥಿರ ಉತ್ಪಾದನೆಯನ್ನು ಮುನ್ನಡೆಸುವುದರ ಜೊತೆಗೆ ವಿಕಲಚೇತನರಿಗೆ ಸಬಲೀಕರಣ ನೀಡುತ್ತದೆ

ಕಲೆ ಮತ್ತು ಸಂಸ್ಕೃತಿ: ಪ್ರೊ. ಸತುಪತಿ ಪ್ರಸನ್ನ ಶ್ರೀ ಅವರಿಗೆ ಕಲೆ ಮತ್ತು ಸಂಸ್ಕೃತಿ ವಿಭಾಗದ ಅಡಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 19 ಬುಡಕಟ್ಟು ಭಾಷೆಗಳಿಗೆ ಇವರು ಲಿಪಿಗಳನ್ನು ರಚಿಸಿದ್ದಾರೆ. ಪ್ರೊ. ಶ್ರೀ ಅವರು ಭಾರತದ ಸ್ಥಳೀಯ ಸಾಹಿತ್ಯ ಪರಂಪರೆಯ ಸಂರಕ್ಷಣೆ ಮಾಡುವಲ್ಲಿ ತಮ್ಮ ಶ್ರಮವನ್ನು ಹಾಕಿದ್ದಾರೆ. ಆದಿಕವಿ ನನ್ನಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ, ಅವರು ಸಾಂಸ್ಕೃತಿಕ ಗುರುತು ಮತ್ತು ಭಾಷಾ ಸಬಲೀಕರಣಕ್ಕಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ: ಗ್ರಾಮೀಣಾಭಿವೃದ್ಧಿಯಲ್ಲಿ ರಾಮೋಜಿ ಶ್ರೇಷ್ಠತಾ ಪ್ರಶಸ್ತಿಯನ್ನು ಆಮ್ಲಾ ಅಶೋಕ್ ರುಯಾ ಅವರಿಗೆ ನೀಡಲಾಯಿತು. ‘ವಾಟರ್ ಮದರ್‘ ಅಂತಾನೇ ಜನಪ್ರಿಯರಾಗಿರುವ ರುಯಾ, ಹೊಸ ನೀರು ಕೊಯ್ಲು ಉಪಕ್ರಮಗಳ ಮೂಲಕ ಬರ ಪೀಡಿತ ಹಳ್ಳಿಗಳಿಗೆ ಇವರು ನೀರು ಒದಗಿಸಿದ ಖ್ಯಾತಿ ಹೊಂದಿದ್ದಾರೆ. ಆಕಾರ್ ಚಾರಿಟಬಲ್ ಟ್ರಸ್ಟ್ ಮೂಲಕ ಗ್ರಾಮೀಣ ಭಾರತದಾದ್ಯಂತ ಜೀವನೋಪಾಯ, ನೀರಿನ ಭದ್ರತೆ ಮತ್ತು ಭರವಸೆಯನ್ನು ಪುನರ್ಸ್ಥಾಪನೆ ಕಾರ್ಯ ನಡೆಸಿದ್ದಾರೆ.

ಮಾನವೀಯ ಕಾರ್ಯ : ಈ ವಿಭಾಗದ ಪ್ರಶಸ್ತಿಗಾಗಿ ಪೆಹಚಾನ್ - ದಿ ಸ್ಟ್ರೀಟ್ ಸ್ಕೂಲ್‌ನ ಸಂಸ್ಥಾಪಕ ಆಕಾಶ್ ಟಂಡನ್ ಅವರಿಗೆ ನೀಡಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಸಾವಿರಾರು ಹಿಂದುಳಿದ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಆಂದೋಲನವನ್ನು ಟಂಡನ್ ಕೈಗೊಂಡಿದ್ದಾರೆ. ತಳ ಅಂಚಿನಲ್ಲಿರುವ ಸಮುದಾಯಗಳಿಗೆ ಘನತೆ, ಅವಕಾಶ ಮತ್ತು ಸಬಲೀಕರಣ ನೀಡುವ ಗುರಿ ಇವರದ್ದಾಗಿದೆ.

ಮಹಿಳಾ ಸಾಧಕಿ: ಪಲ್ಲಬಿ ಘೋಷ್ ಅವರನ್ನು ಮಹಿಳಾ ಸಾಧಕಿ ಪ್ರಶಸ್ತಿ ಆಯ್ಕೆ ಮಾಡಲಾಗಿದ್ದು, ರಾಮೋಜಿ ಶ್ರೇಷ್ಠತಾ ಪ್ರಶಸ್ತಿಯನ್ನ ಪ್ರದಾನ ಮಾಡಿ ಸನ್ಮಾನಿಸಲಾಗಿದೆ. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುವ ಘೋಷ್, 10,000 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. 75,000ಕ್ಕೂ ಹೆಚ್ಚು ಜನರ ಮೇಲೆ ಇವರ ಪ್ರಭಾವ ಇದೆ. ಇಂಪ್ಯಾಕ್ಟ್ ಮತ್ತು ಡೈಲಾಗ್ ಫೌಂಡೇಶನ್ ಮೂಲಕ, ಅವರು ರಕ್ಷಣೆ ಮತ್ತು ಪುನರ್ವಸತಿಯಲ್ಲಿ ರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸುತ್ತಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ : ಈ ವಿಭಾಗದ ಶ್ರೇಷ್ಠತೆಗೆ ಪ್ರೊ. ಮಾಧವಿ ಲತಾ ಅವರಿಗೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ಐಐಎಸ್ಸಿಯಲ್ಲಿ ಪ್ರವರ್ತಕ ಭೂತಾಂತ್ರಿಕ ಎಂಜಿನಿಯರ್ ಆಗಿದ್ದ ಪ್ರೊ. ಲತಾ, ಚೆನಾಬ್ ರೈಲ್ವೆ ಸೇತುವೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳಿಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಅಧ್ಯಕ್ಷರಾಗಿ, ಅವರು ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ಪೀಳಿಗೆಯ ಎಂಜಿನಿಯರಿಂಗ್ ನಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರನ್ನು ರಾಮೋಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಸಿ ಹೆಚ್ ಕಿರಣ್ ಅವರು ಸನ್ಮಾನಿಸಿದರು. ರಾಮೋಜಿ ರಾವ್ ಅವರ ಮೊಮ್ಮಗಳು ದಿವಿಜಾ ಚೆರುಕುರಿ ಅವರ ವಂದನಾರ್ಪಣೆ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ರಾಷ್ಟ್ರಗೀತೆ ನುಡಿಸಲಾಯಿತು. ಕಾರ್ಯಕ್ರಮ ಮುಕ್ತಾಯದ ಬಳಿಕ ಭೋಜನ ಕೂಟ ನಡೆಯಿತು.
ರಾಮೋಜಿ ಶ್ರೇಷ್ಠತಾ ಪ್ರಶಸ್ತಿ 2025 ದೇಶದ ನೈತಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ರಚನೆಯನ್ನು ಬಲಪಡಿಸುವ ಕೆಲಸ ಮಾಡುವ ಅಸಾಧಾರಣ ವ್ಯಕ್ತಿಗಳನ್ನು ಗುರುತಿಸುವ ಪರಂಪರೆಗೆ ಈ ಮೂಲಕ ಮುನ್ನುಡಿ ಬರೆದಿದೆ.
ಇದನ್ನೂ ಒದಿ: ರಾಮೋಜಿ ರಾವ್ 89ನೇ ಜನ್ಮ ವಾರ್ಷಿಕೋತ್ಸವ: ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಪ್ರದಾನ - 7 ಸಾಧಕರಿಗೆ ಗೌರವ

