ಕದಿಯಲು ಬಂದು ಅಡುಗೆ ಮನೆಯ ಬಿಸಿಗಾಳಿ ಹೋಗಲು ಇರುವ ಚಿಕ್ಕ ಕಿಂಡಿಯಲ್ಲಿ ಸಿಕ್ಕಿಬಿದ್ದ ಕಳ್ಳ!
ಕದಿಯಲು ಬಂದ ಕಳ್ಳನೊಬ್ಬ ಅಡುಗೆ ಮನೆಯ ಬಿಸಿಗಾಳಿ ಹೋಗಲು ಇರುವ ಚಿಕ್ಕ ಕಿಂಡಿಯಲ್ಲಿ ಸಿಕ್ಕಿಬಿದ್ದ ವಿಚಿತ್ರ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

Published : January 7, 2026 at 4:29 PM IST
|Updated : January 7, 2026 at 5:37 PM IST
ಕೋಟಾ (ರಾಜಸ್ಥಾನ): ಕಳ್ಳರಲ್ಲಿ ಚಾಣಾಕ್ಷರೂ ಇರುತ್ತಾರೆ. ದರೋಡೆ ಮಾಡುವುದು ಅಷ್ಟು ಸುಲಭವಲ್ಲ. ಪ್ಲಾನ್ ಮಾಡಿ, ಕಾದು ಕನ್ನ ಹಾಕಬೇಕು. ಆದರೆ, ಇಲ್ಲೊಬ್ಬ ಕಳ್ಳ ತನ್ನ ದಡ್ಡತನದಿಂದಲೋ ಅಥವಾ ಗ್ರಚಹಚಾರ ಕೆಟ್ಟಿತ್ತೋ? ಗೊತ್ತಿಲ್ಲ. ಕಳ್ಳತನಕ್ಕೆ ಬಂದು ತಾನೇ ಸಿಕ್ಕಿಬಿದ್ದಿದ್ದಾನೆ. ಅದೂ, ಅಡುಗೆ ಮನೆಯ ಬಿಸಿಗಾಳಿ ಹೊರಹೋಗಲು ಇರುವ ಚಿಕ್ಕ ಕಿಂಡಿಯಲ್ಲಿ.
ಹೌದು. ರಾಜಸ್ಥಾನದ ಕೋಟಾದ ಪ್ರತಾಪ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳ್ಳತನಕ್ಕೆ ಬಂದು ಚಿಕ್ಕ ಕಿಂಡಿಯಲ್ಲಿ ಸಿಕ್ಕಿಬಿದ್ದ ಕಳ್ಳನನ್ನು ಕಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಅಲ್ಲಿಂದ ಬಿಡಿಸಿ, ಬಂಧನಕ್ಕೆ ಒಳಪಡಿಸಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕದಿಯಲು ಬಂದು ಕಿಂಡಿಯಲ್ಲಿ ಸಿಕ್ಕಿಬಿದ್ದ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸುಭಾಷ್ ಕುಮಾರ್ ಅಹಿರ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಲು ಆರೋಪಿ ಪವನ್ ವೈಷ್ಣವ್ (25) ಸಹಚರನ ಜೊತೆ ಜನವರಿ 4ರ ರಾತ್ರಿ ಬಂದಿದ್ದಾನೆ. ಈ ವೇಳೆ, ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಅಡುಗೆ ಮನೆಯಲ್ಲಿ ಬಿಸಿಗಾಳಿ ಹೋಗಲು ಇದ್ದ ಚಿಕ್ಕ ಕಿಂಡಿ (ಎಕ್ಸಾಸ್ಟ್ ಫ್ಯಾನ್) ಮೂಲಕ ತೂರಿಕೊಂಡು ಒಳಹೋಗಲು ಯತ್ನಿಸಿದ್ದಾನೆ.
ಈ ವೇಳೆ, ಆತನ ಅರ್ಧ ದೇಹ ಕಿಂಡಿಯ ಒಳಹೋದ ಬಳಿಕ ಸಿಕ್ಕಿಹಾಕಿಕೊಂಡಿದೆ. ಇದರಿಂದ ಆತ ಅಲ್ಲಿಂದ ಹೊರಬರಲೂ ಸಾಧ್ಯವಾಗಿಲ್ಲ. ತಾನೂ ಜನರ ಕೈಗೆ ಸಿಗುವ ಭಯದಲ್ಲಿ ಬೆದರಿದ ಇನ್ನೊಬ್ಬ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.
ಕಳ್ಳನ ಕಂಡ ಕುಟುಂಬಸ್ಥರು: ರಾತ್ರಿ 1 ಗಂಟೆ ಸುಮಾರಿಗೆ ಕುಟುಂಬಸ್ಥರು ಮನೆಗೆ ಆಗಮಿಸಿದ್ದಾರೆ. ಈ ವೇಳೆ, ಮನೆಯ ಗೋಡೆಯ ಮೇಲೆ ವ್ಯಕ್ತಿಯ ಅರ್ಧದೇಹ ಕಂಡಿದೆ. ಕಳ್ಳನ ಕಾಲುಗಳು ಮನೆಯೊಳಗೆ ಇಳಿಬಿದ್ದಿದ್ದರೆ ತಲೆ ಹೊರಭಾಗದಲ್ಲಿತ್ತು. ತಕ್ಷಣವೇ ಕುಟುಂಬಸ್ಥರು ಜನರ ಸಹಾಯದೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಆತ ಅಲ್ಲಿಯೇ ನೇತಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕಿಂಡಿಯಲ್ಲಿ ಕಳ್ಳನನ್ನು ಹೊರತೆಗೆದಿದ್ದಾರೆ. ಬಳಿಕ ಆತನನ್ನು ಕಳ್ಳತನಕ್ಕೆ ಯತ್ನ ಆರೋಪದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಟಾ ಜಿಲ್ಲೆಯ ದಿಗೋಡ್ ಗ್ರಾಮದ ನಿವಾಸಿ ಪವನ್ ವೈಷ್ಣವ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಕಳ್ಳತನ ಯತ್ನದ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಅನಿಲ್ ಟೈಲರ್ ಹೇಳಿದರು.
ನಕಲಿ ಪೊಲೀಸ್ ಕಾರಿನಲ್ಲಿ ಬಂದು ಕಳ್ಳತನ: ತನಿಖೆಯ ಸಮಯದಲ್ಲಿ, ಆರೋಪಿಗೆ ಸೇರಿದ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ವಾಹನಗಳಿಗೆ ಅಂಟಿಸುವ ಸ್ಟಿಕ್ಕರ್ ಮತ್ತು ಬಿಳಿ ನಂಬರ್ ಪ್ಲೇಟ್ ಅನ್ನು ಅದಕ್ಕೆ ಅಂಟಿಸಲಾಗಿದೆ. ಕಳ್ಳತನ ನಡೆಸುವಾಗ ಅನುಮಾನ ಬರದಂತೆ ಈ ನಕಲಿ ಪೊಲೀಸ್ ವಾಹನವನ್ನು ಬಳಸಲಾಗುತ್ತಿತ್ತು. ತಪ್ಪಿಸಿಕೊಂಡಿರುವ ಇನ್ನೊಬ್ಬ ಕಳ್ಳನನ್ನು ಪತ್ತೆಹಚ್ಚಲಾಗುತ್ತಿದೆ. ಆರೋಪಿಗಳು ಈ ಪ್ರದೇಶದಲ್ಲಿ ನಡೆದ ಇತರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳನ್ನೂ ಓದಿ:

