ಇವಿಎಂಗಳಲ್ಲಿ ಟೋಟಲೈಸರ್ ಸಾಧನ ಅಳವಡಿಸಿದರೆ ಏನಾಗುತ್ತೆ?: ಮಾಹಿತಿ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಇವಿಎಂಗಳಲ್ಲಿ ಟೋಟಲೈಸರ್ ಸಾಧನ ಅಳವಡಿಸಿದರೆ ಏನು ಸಮಸ್ಯೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Published : September 1, 2026 at 7:59 PM IST
ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದಾಖಲಾಗುವ ಮತಗಳ ಎಣಿಕೆಗೆ 'ಟೋಟಲೈಸರ್' ಸಾಧನಗಳನ್ನು ಬಳಸಲು ಕೋರಿ ಸಲ್ಲಿಕೆಯಾದ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ.ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು.
ಚುನಾವಣಾ ನೀತಿ ನಿಯಮ 1961 ರ ಸೆಕ್ಷನ್ 59ಎ ಅನ್ನು ನ್ಯಾಯಮೂರ್ತಿ ಬಾಗ್ಚಿ ಅವರು ಉಲ್ಲೇಖಿಸಿದರು. ಇದರ ಪ್ರಕಾರ ಮತಗಟ್ಟೆವಾರು ಮತಗಳನ್ನು ಎಣಿಸುವ ಪದ್ಧತಿಗೆ ವಿನಾಯಿತಿ ನೀಡುತ್ತದೆ. ಮತದಾರರ ಗುರುತು ಬಹಿರಂಗಗೊಂಡು ಅವರಿಗೆ ಬೆದರಿಕೆ ಅಥವಾ ಕಿರುಕುಳ ಉಂಟಾಗುವ ಆತಂಕದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ, ಮತಗಳನ್ನು ಒಟ್ಟುಗೂಡಿಸಿ ಎಣಿಕೆ ಮಾಡಲು ಚುನಾವಣಾ ಆಯೋಗಕ್ಕೆ ಈ ನಿಯಮವು ಅನುಮತಿ ನೀಡುತ್ತದೆ. ಈ ರಕ್ಷಣಾತ್ಮಕ ನಿಯಮವನ್ನು ಇವಿಎಂ ಮತ ಎಣಿಕೆಗೂ ವಿಸ್ತರಿಸಬಹುದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಿವಿಪ್ಯಾಟ್ ಎಣಿಕೆಗೆ ಅಡ್ಡಿ: ಬೂತ್‌ವಾರು ಎಣಿಕೆಗೆ ಇರುವ ವಿನಾಯಿತಿ ತತ್ವ ಇವಿಎಂಗಳಿಗೂ ಏಕೆ ಅನ್ವಯಿಸಬಾರದು ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಡಿ.ಎಸ್. ನಾಯ್ಡು ವಿವಿಪ್ಯಾಟ್ಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ನ್ಯಾಯಪೀಠದ ಗಮನಕ್ಕೆ ತಂದರು.
ವಿವಿಪ್ಯಾಟ್ಗಳು ಇವಿಎಂಗಳ ಮೂಲಕ ಸೃಷ್ಟಿಯಾಗುವ ಕಾಗದದ ಚೀಟಿಗಳಾಗಿದ್ದು, ಇವು ಎಲೆಕ್ಟ್ರಾನಿಕ್ ಮತಗಳನ್ನು ಭೌತಿಕ ದಾಖಲೆಯೊಂದಿಗೆ ಮರು ಪರಿಶೀಲಿಸಲು ಸಹಾಯ ಮಾಡುತ್ತದೆ. ಎನ್. ಚಂದ್ರಬಾಬು ನಾಯ್ಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹಿಂದೆ ನೀಡಿದ ತೀರ್ಪನ್ನು ಉಲ್ಲೇಖಿಸಿದ ಅವರು, ಟೋಟಲೈಸರ್ ಪರಿಚಯಿಸುವುದರಿಂದ ಇಂತಹ ಭೌತಿಕ ಮರು ಪರಿಶೀಲನೆ ಕಷ್ಟಕರವಾಗಬಹುದು ಎಂದು ತಿಳಿಸಿದರು.
ಈಗಿರುವ ಬೂತ್‌ವಾರು ಎಣಿಕೆ ವ್ಯವಸ್ಥೆಗೆ ಬದಲಿಯಾಗಿ ಟೋಟಲೈಸರ್ ವ್ಯವಸ್ಥೆಯನ್ನು ತರಲು ಪೀಠ ಬಯಸುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಿಕೊಳ್ಳಬಹುದು ಎಂದು ಪೀಠವು ಹೇಳಿತು.
ಈ ವ್ಯವಸ್ಥೆ ಜಾರಿಗೆ ಇರುವ ಸಮಸ್ಯೆಗಳೇನು?: ವಾದ - ಪ್ರತಿವಾದ ಆಲಿಸಿ ಬಳಿಕ, ಟೋಟಲೈಸರ್ ಸಾಧನಗಳ ಅಳವಡಿಕೆಗೆ ಇರುವ ಅಡೆತಡೆಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. "ಇವಿಎಂಗಳಲ್ಲಿ ದಾಖಲಾದ ಮತಗಳ ಎಣಿಕೆಗೆ ಟೋಟಲೈಸರ್‌ಗಳನ್ನು ಬಳಸಲು ಚುನಾವಣಾ ನೀತಿ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರುವ ವಿಷಯವನ್ನು ಭಾರತ ಸರ್ಕಾರ ಪರಿಶೀಲಿಸಬಹುದು. ಈ ವ್ಯವಸ್ಥೆ ಜಾರಿಗೆ ತರಲು ಇರುವ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ" ಎಂದು ಪೀಠವು ಹೇಳಿದೆ.
ಚುನಾವಣಾ ನಿಯಮಗಳು ಮತ್ತು ಕಾನೂನು ಆಯೋಗ ಮಾಡಿದ ಶಿಫಾರಸು ಪರಿಶೀಲಿಸುವಂತೆ ಪೀಠವು ಕೇಂದ್ರಕ್ಕೆ ಸೂಚಿಸಿತು. ಇದರಲ್ಲಿ ಪ್ರಸ್ತಾವಿತ ಟೋಟಲೈಸೇಶನ್ ನಿಬಂಧನೆಯೂ ಕೂಡ ಇದೆ.
ಏನಿದು ಟೋಟಲೈಸರ್ ಸಾಧನ?: ಟೋಟಲೈಸರ್ ಸಾಧನ ಎಂದರೆ ಸುಮಾರು 14 ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳನ್ನು ಒಟ್ಟಿಗೆ ಸೇರಿಸಿ ಎಣಿಕೆ ಮಾಡಲು ಸಹಾಯ ಮಾಡುವ ಒಂದು ವಿಶೇಷ ಸಾಧನವಾಗಿದೆ.
ಇವುಗಳನ್ನೂ ಓದಿ:

