ETV Bharat / bharat

ವಯನಾಡು ಭೂಕುಸಿತ ದುರಂತ: ಮೃತರ ಸಂಖ್ಯೆ 5ಕ್ಕೆ ಏರಿಕೆ, ಇನ್ನೂ ಮೂವರಿಗಾಗಿ ಶೋಧ

ಇಂದು ಬೆಳಗ್ಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ವಲಯ ಒಂದರಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ನದಿಯ ಬಳಿ ಪತ್ತೆಯಾಗಿದೆ.

wayanad-landslide-death-toll-rises-to-5
ಭೂಕುಸಿತವಾದ ಸ್ಥಳ (ETV Bharat)
author img

By ETV Bharat Karnataka Team

Published : July 9, 2026 at 12:08 PM IST

2 Min Read
Choose ETV Bharat

ವಯನಾಡು (ಕೇರಳ): ವಯನಾಡಿ​ನ ಮೆಪ್ಪಾಡಿ ಸಮೀಪ ಕಲ್ಲಾಡಿಯ ಬಳಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದ್ದು, ಮತ್ತಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಸಚಿವರಾದ ಎ.ಪಿ.ಅನಿಲ್​ ಕುಮಾರ್​ ಮತ್ತು ಟಿ.ಸಿದ್ಧಿಕಿ ಅವರು, ಇಂದು ಬೆಳಗ್ಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ವಲಯ ಒಂದರಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ನದಿಯಲ್ಲಿ ಮತ್ತೊಂದು ಶವ ಪತ್ತೆಯಾಗಿದೆ ಎಂದು ತಿಳಿಸಿದರು.

ಭೂಕುಸಿತಕ್ಕೆ ಒಳಗಾಗಿರುವ ಪ್ರದೇಶದ ವಲಯ 1 ಮತ್ತು 2ರಲ್ಲಿ ಶೋಧ ಕಾರ್ಯ ಸಾಗಿದ್ದು, ನದಿ ಬಳಿಯೂ ಕೂಡ ಕಾರ್ಯಾಚರಣೆ ನಡೆಯುತ್ತಿದೆ. ಈ ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೂ ಪತ್ತೆಯಾಗದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ 10 ಮಂದಿಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನಾಲ್ವರ ಆರೋಗ್ಯ ಸ್ಥಿರವಾಗಿದೆ. ಮೂವರು ಐಸಿಯುನಲ್ಲಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಚಿವ ಸಿದ್ದಿಕಿ ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಮಾಜಿ ಸಿಎಂ ಭೇಟಿ: ದುರಂತದ ಸ್ಥಳಕ್ಕೆ ಇಂದು ಮಾಜಿ ಸಿಎಂ ಹಾಗೂ ಹಿರಿಯ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಅವರು​ ಭೇಟಿ ನೀಡಿದರು. ಪಕ್ಷದ ಹಿರಿಯ ನಾಯಕ ಎಂ.ವಿ.ಗೋವಿಂದನ್​ ಮತ್ತು ಎಂ.ವಿ.ಜಯರಾಜನ್ ಈ ಸಂದರ್ಭದಲ್ಲಿ​ ಉಪಸ್ಥಿತರಿದ್ದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದ ವಿಜಯನ್​ ಬಳಿಕ ಪರಿಹಾರ ಕೇಂದ್ರಕ್ಕೆ ತೆರಳಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಜುಲೈ 7ರಂದು ವಯನಾಡು ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ನಿರ್ಮಿಸಲಾಗುತ್ತಿರುವ ಅನಕ್ಕೊಂಪೊಯಿಲ್-ಮೇಪ್ಪಾಡಿ ಸುರಂಗ ಮಾರ್ಗ ಯೋಜನೆ ಬಳಿ ಭೀಕರ ಭೂ ಕುಸಿತ ಸಂಭವಿಸಿತ್ತು. ಸುರಂಗ ಯೋಜನೆಯಿಂದ ರಾಶಿ ಹಾಕಿದ್ದ ಮಣ್ಣು ಭಾರೀ ಮಳೆಗೆ ಕುಸಿದ ಪರಿಣಾಮ ಈ ಅವಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಕಲ್ಲಪೆಟ್ಟದಿಂದ ಅಗ್ನಿಶಾಮಕ ದಳ ಮತ್ತು ರಕ್ಷಣಾ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಭೂಕುಸಿತ ಸ್ಥಳಕ್ಕೆ ಬುಧವಾರ ಮುಖ್ಯಮಂತ್ರಿ ವಿ.ಡಿ.ಸತೀಶನ್​​ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ದುರಂತದ ಕುರಿತು ಸಮಗ್ರ ತನಿಖೆ ನಡೆಸುವಂತೆ ಅವರು ಸೂಚನೆ ನೀಡಿದ್ದಾರೆ. ಇದು ಮಾನವ ನಿರ್ಮಿತ ದುರಂತವಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಇವುಗಳನ್ನೂ ಓದಿ:

ವಯನಾಡ್​ ಸುರಂಗ ಯೋಜನಾ ಸ್ಥಳದಲ್ಲಿ ಭೀಕರ ಭೂಕುಸಿತ; ಮೂವರು ಸಾವು - ಭಯಾನಕ ವಿಡಿಯೋ

ವಯನಾಡು ಭೂ ಕುಸಿತ ದುರಂತ: ಕಣ್ಮರೆಯಾದ ಐವರಿಗಾಗಿ ಮುಂದುವರೆದ ಶೋಧ