ಜಮ್ಮುವಿನಲ್ಲಿ ನೀರಿನ ಬಿಕ್ಕಟ್ಟು; ಶೇ 65ರಷ್ಟು ಮಾದರಿಯಲ್ಲಿನ ನೀರು ಕುಡಿಯಲು ಯೋಗ್ಯವಲ್ಲ, ಹೆಚ್ಚಿದ ಆರೋಗ್ಯ ಕಳವಳ
ಜಮ್ಮುವಿನದಲ್ಲಿ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ಶೇ 65ರಷ್ಟರಲ್ಲಿ ಇ ಕೋಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಇದು ನೀರಿನ ಬಿಕ್ಕಟ್ಟಿನ ಸ್ಥಿತಿ ಬಹಿರಂಗಪಡಿಸಿದೆ.


Published : March 4, 2026 at 5:44 PM IST
ಅಮೀರ್ ತಂತ್ರೆ
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ್): ಕಣಿವೆ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಚಳಿಗಾಲದಲ್ಲಿನ ಶುಷ್ಕ ವಾತಾವರಣದಿಂದ ನೀರಿನ ಕೊರತೆ ಉಂಟಾಗುತ್ತಿದ್ದು, ಕುಡಿಯುವ ನೀರಿನ ಮಾಲಿನ್ಯದಿಂದಾಗಿ ನೀರಿನಿಂದ ಹರಡುವ ರೋಗಗಳು ಹೆಚ್ಚಾಗಿವೆ.
ಜಮ್ಮು ಸರ್ಕಾರಿ ವೈದ್ಯಕೀಯ ಕಾಲೇಜ್ (ಜಿಎಂಸಿ)ಯ ಸೂಕ್ಷ್ಮ ಜೀವವಿಜ್ಞಾನ ವಿಭಾಗ ನೀಡಿರುವ ದತ್ತಾಂಶದಂತೆ, ಜಮ್ಮು ಪ್ರಾಂತ್ಯದ ವಿವಿಧೆಡೆ ಸಂಗ್ರಹಿಸಿದ್ದ ಶೇ. 65ರಷ್ಟು ನೀರಿನ ಮಾದರಿಗಳು ಮಾಲಿನ್ಯ ಮತ್ತು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದು ವರದಿಯಾಗಿದೆ.
2025ರ ಜನವರಿ ಮತ್ತು 2026ರ ಫೆಬ್ರವರಿ ಮೊದಲ ವಾರದಲ್ಲಿ ಜಮ್ಮು ಪ್ರದೇಶದ ವಿವಿಧ ಸ್ಥಳಗಳಲ್ಲಿ 606 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 399 ಬಳಕೆಗೆ ಯೋಗ್ಯವಲ್ಲ ಎಂದು ದತ್ತಾಂಶ ತೋರಿಸಿದೆ. ಈ ಮಾದರಿಗಳನ್ನು ಶಾಲೆ, ಹೋಟೆಲ್, ಗಡಿ ಪ್ರದೇಶ, ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಕೆಯಿಂದ ಸಂಗ್ರಹಿಸಲಾಗಿದೆ.
ಪರೀಕ್ಷೆಯ ವೇಳೆ ಬಹುತೇಕ ನೀರಿನ ಮಾದರಿಗಳಲ್ಲಿ ಹಾನಿಕಾರಕ ಇ. ಕೋಲಿ ಬ್ಯಾಕ್ಟಿರೀಯಾಗಳು ಕಂಡು ಬಂದಿದೆ. ಇದರಿಂದಾಗಿ ಇವು ಕುಡಿಯಲು ಯೋಗ್ಯವಲ್ಲ. ಈ ಬ್ಯಾಕ್ಟೀರಿಯಾ ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗಿದೆ. ಈ ರೀತಿಯ ಸಾಂಕ್ರಾಮಿಕ ಹರಡುವ ಭೀತಿಯನ್ನು ಇದು ಹುಟ್ಟುಹಾಕಿದೆ ಎಂದು ಇಲಾಖೆಯ ಅಧಿಕಾರಿಗಳು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
2025ರ ಜನವರಿಯಿಂದ ವರ್ಷಾಂತ್ಯದವರೆಗೆ 502 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 342 ಮಾದರಿಗಳು ಅತೃಪ್ತಿದಾಯಕವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹದ ಬಳಿಕ ಸೆಪ್ಟಂಬರ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಮಾಲಿನ್ಯ ಪತ್ತೆಯಾಗಿದ್ದು, ಜಮ್ಮು ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಸಂಗ್ರಹಿಸಿದ್ದ 126 ಮಾದರಿಗಳನ್ನು 89ರಲ್ಲಿ ಮಾಲಿನ್ಯ ಕಂಡುಬಂದಿದೆ ಎಂದು ದತ್ತಾಂಶ ತಿಳಿಸಿದೆ.
ಈ ವರ್ಷ ಫೆ. 8ರಂದು ಸರಿಸುಮಾರು 104 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 57ರಲ್ಲಿ ಇ. ಕೋಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.
ಈ ಇ. ಕೋಲಿ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಮನುಷ್ಯರ ಮಲದಲ್ಲಿ ಇರುತ್ತದೆ. ಚರಂಡಿ ನೀರು ಮತ್ತು ಪ್ರಾಣಿಗಳ ತ್ಯಾಜ್ಯಗಳು ನೈಸರ್ಗಿಕ ನೀರಿನ ಮೂಲಗಳಿಗೆ ಸೇರುತ್ತಿರುವ ಕಾರಣ ನೀರಿನಲ್ಲಿ ಈ ಬ್ಯಾಕ್ಟೀರಿಯಾಗಳ ಉಪಸ್ಥಿತಿ ಕಂಡುಬಂದಿದೆ ಎಂದು ಅಧಿಕಾರಿಗಳು ನಂಬಿದ್ದಾರೆ. ಈ ಮಾಲಿನ್ಯದ ನೀರುಗಳ ಸೇವನೆಯು ಅತಿಸಾರ, ಟೈಫಾಯ್ಡ್, ಜಾಂಡೀಸ್ ಮತ್ತು ಇತರೆ ನೀರಿನ ಸಂಬಂಧಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬ್ಯಾಕ್ಟೀರಿಯಾಗಳ ಜೀವಿತಾವಧಿಗಳು ದೀರ್ಘವಲ್ಲದಿದ್ದರೂ, ಎಲ್ಲಾಕಡೆಯ ನೀರಿನಲ್ಲಿ ಇದರ ಉಪಸ್ಥಿತಿ ಕಂಡು ಬರುತ್ತಿರುವುದು ಆತಂಕ ಮೂಡಿಸಿದೆ. ನೀರಿನ ಪೂರೈಕೆ ಪೈಪ್ಲೈನ್ಗಳ ಹಾನಿ, ಒಳ ಚರಂಡಿ ಮಾರ್ಗದಲ್ಲಿ ಈ ಪೈಪ್ಲೈನ್ಗಳು ಹಾದು ಹೋಗುವಿಕೆ, ಕೈಗಾರಿಕಾ ತ್ಯಾಜ್ಯಗಳು ನೀರಿನಲ್ಲಿ ಸೇರುವಿಕೆ, ಕಸದ ವಿಲೇವಾರಿ ಮತ್ತು ಬಯಲು ವಿಸರ್ಜನೆಯಂತಹ ಹಲವು ಅಂಶಗಳು ಕೂಡ ನೀರಿನ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪರೀಕ್ಷೆಯಲ್ಲಿ ಕಂಡು ಬಂದಿರುವ ನೀರಿನ ಮಾಲಿನ್ಯವೂ ನೀರಿನ ಸಂಬಂಧಿತ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಭೀತಿ ಮೂಡಿಸಿದೆ. ಈ ಸಂಬಂದ 2023ರಲ್ಲಿ 1.02 ಲಕ್ಷ ಪ್ರಕರಣಗಳು ದಾಖಲಾಗಿದ್ದು, 2024ರ ಹೊತ್ತಿಗೆ ಈ ಸಂಖ್ಯೆ 1.30 ಲಕ್ಷ ಆಗಿತ್ತು. 2025ರಲ್ಲೂ 1.30ಲಕ್ಷ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿ ಅತಿಸಾರ ಪ್ರಕರಣಗಳಿಂದಾಗಿ 25 ಜನರ ಸಾವು ಸಂಭವಿಸಿದೆ.
ಈ ಕುರಿತು ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ಜಮ್ಮು ಜಿಎಂಸಿಯ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯದ ಡಾ. ಸಂದೀಪ್ ಡೊಗ್ರಾ, ಎಲ್ಲಾ ನೀರಿನ ಮೂಲಗಳು ಕಲುಷಿತವಾಗಿವೆ ಮತ್ತು ಜನರು ಕಲುಷಿತ ನೀರನ್ನು ಮಾತ್ರ ಸೇವಿಸುತ್ತಿದ್ದಾರೆ ಎಂದು ನಾವು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ನೀರಿನ ಮಾದರಿಗಳಲ್ಲಿ ಅನುಮಾನ ಕಂಡುಬಂದ ನಂತರವೇ ಅವುಗಳ ಮಾದರಿ ಪರೀಕ್ಷೆಗೆ ತರುತ್ತಾರೆ. ಪರೀಕ್ಷೆಗಳ ನಂತರ ಸಮಸ್ಯೆ ಪರಿಹರಿಸುತ್ತಾರೆ. ಮತ್ತೊಂದು ಮಾದರಿಯೊಂದಿಗೆ ಬರುತ್ತಾರೆ. ಅದು ಹೆಚ್ಚಿನ ಬಾರಿ ತೃಪ್ತಿಕರವಾಗಿರುವುದಿಲ್ಲ. ಮಳೆಗಾಲದ ಬಳಿಕ ಬಹುತೇಕ ನೀರಿನ ಮಾಲಿನ್ಯದ ಸಮಸ್ಯೆಗಳು ಕಂಡು ಬರುತ್ತವೆ. ಇಲ್ಲವೇ, ಪೈಪ್ಲೈನ್ ಪೂರೈಕೆ ಮತ್ತು ಇತರೆ ನೀರಿನ ಮೂಲಗಳಿಗೆ ಹಾನಿಯಾದಾಗ ಈ ಸಮಸ್ಯೆ ಕಂಡು ಬರುತ್ತದೆ ಎನ್ನುತ್ತಾರೆ.
ಇವುಗಳನ್ನೂ ಓದಿ:
10 ವರ್ಷ ಕಾದು ಮಗು ಪಡೆದವರಿಗೆ ದಿಢೀರ್ ಆಘಾತ; ಕಲುಷಿತ ನೀರು ಪ್ರಕರಣದಲ್ಲಿ ಕರುಳು ಹಿಂಡುವ ಕಥೆಗಳು
ಇಂದೋರ್ ಕಲುಷಿತ ನೀರು ಪ್ರಕರಣ; ತನಿಖಾ ಸಮಿತಿ ರಚಿಸಿದ ಮಧ್ಯಪ್ರದೇಶ ಹೈಕೋರ್ಟ್

