ಗಲ್ಫ್‌ನಲ್ಲಿ ಯುದ್ಧದ ಕಾರ್ಮೋಡ: ಕೇರಳದ ವಿವಿಧ ಏರ್ಪೋರ್ಟ್ಗಳಲ್ಲಿ ಹಲವು ವಿಮಾನಗಳು ರದ್ದು
ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತಗೊಂಡಿದೆ.

Published : February 28, 2026 at 8:38 PM IST
ತಿರುವನಂತಪುರಂ(ಕೇರಳ): ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯಿಂದ ಇಡೀ ಗಲ್ಫ್‌ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸುತ್ತಿದ್ದಂತೆ, ಲಕ್ಷಾಂತರ ಮಲಯಾಳಿ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಬುಧಾಬಿಯಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಗಲ್ಫ್‌ನಾದ್ಯಂತ ವಲಸಿಗರಲ್ಲಿ ಆತಂಕ ಸೃಷ್ಟಿಸಿದೆ.
ಯುದ್ಧದ ಕಾರ್ಮೋಡ ಹಿನ್ನೆಲೆ ಇರಾನ್, ಇರಾಕ್, ಕುವೈತ್, ಬಹ್ರೇನ್ ಮತ್ತು ಕತಾರ್ ತಮ್ಮ ವಾಯುಪ್ರದೇಶ ಪ್ರವೇಶಗಳನ್ನು ನಿರ್ಬಂದಿಸಿವೆ. ಪರಿಣಾಮವಾಗಿ, ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸೇವೆಯು ಸ್ಥಗಿತಗೊಂಡಿದೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CIAL) ವಿಮಾನ ಕಾರ್ಯಾಚರಣೆಗಳ ಮೇಲೆ ಈಗಾಗಲೇ ತೀವ್ರವಾಗಿ ಪರಿಣಾಮ ಬೀರಿದೆ. ಕಣ್ಣೂರಿನಿಂದ ದೋಹಾಗೆ ಹೋಗುವ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು, ಹಾಗೆಯೇ ತಿರುವನಂತಪುರಂನಿಂದ ದುಬೈ ಮತ್ತು ದೋಹಾಗೆ ಹೋಗುವ ಏರ್ ಇಂಡಿಯಾದ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಏರ್ ಅರೇಬಿಯಾದ ಅಬುಧಾಬಿ ಸೇವೆಯನ್ನು ರದ್ದುಗೊಳಿಸಲಾಗಿದೆ.
ಕರಿಪುರ (ಕೊಝಿಕೋಡ್) ವಿಮಾನ ನಿಲ್ದಾಣದಲ್ಲಿ ನಾಲ್ಕು ಏರ್ ಇಂಡಿಯಾ ಸೇವೆಗಳು ಮತ್ತು ಮೂರು ಇಂಡಿಗೋ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇವುಗಳಲ್ಲಿ ರಿಯಾದ್, ದುಬೈ ಮತ್ತು ದಮ್ಮಾಮ್‌ಗೆ ಹೋಗುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಹಾಗೂ ಜೆಡ್ಡಾ, ರಿಯಾದ್ ಮತ್ತು ದುಬೈಗೆ ಹೋಗುವ ಇಂಡಿಗೋ ವಿಮಾನಗಳು ಸೇರಿವೆ. ವಾಯು ಕಾರಿಡಾರ್‌ಗಳನ್ನು ಸುರಕ್ಷಿತವಾಗಿ ಪುನಃ ತೆರೆಯುವವರೆಗೆ ಪರಿಸ್ಥಿತಿ ಹೀಗೆ ಇರುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟಿಷ್ ಏರ್ವೇಸ್, ಲುಫ್ಥಾನ್ಸ್ ಮತ್ತು ಕತಾರ್ ಏರ್ವೇಸ್ ನಂತಹ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಾದೇಶಿಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ. ಈ ಸಾಮೂಹಿಕ ರದ್ದತಿಯಿಂದಾಗಿ ನೂರಾರು ಮಲಯಾಳಿಗಳು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅನೇಕರು ರಜೆಗಾಗಿ ಮನೆಗೆ ಹೋಗುತ್ತಿದ್ದರೆ, ಇನ್ನು ಕೆಲವರು ರಜೆಯ ಮುಗಿಸಿಕೊಂಡು ಕೆಲಸಕ್ಕೆ ಮರಳುತ್ತಿದ್ದರು.
ಗಲ್ಫ್‌ನಲ್ಲಿ ವಾತಾವರಣವು ಉದ್ವಿಗ್ನವಾಗಿದೆ. ದೇಶದ ಹಲವಾರು ಭಾಗಗಳಲ್ಲಿ ಸೈರನ್‌ಗಳು ನಿರಂತರವಾಗಿ ಮೊಳಗುತ್ತಿವೆ ಮತ್ತು ಕ್ಷಿಪಣಿಗಳನ್ನು ತಡೆದು ಗಾಳಿಯಲ್ಲಿ ತಟಸ್ಥಗೊಳಿಸಲಾಗುತ್ತಿದೆ. ಅಬುಧಾಬಿಯಲ್ಲಿರುವ ಅಮೆರಿಕನ್ ಮಿಲಿಟರಿ ನೆಲೆಗಳ ಬಳಿ ವಾಸಿಸುವವರು ಬೃಹತ್ ಸ್ಫೋಟಗಳು ಮತ್ತು ದಟ್ಟವಾದ ಹೊಗೆಯನ್ನು ನೋಡುತ್ತಿರುವುದಾಗಿ ಎಂದು ಕುವೈತ್ನಲ್ಲಿರುವ ಕೇರಳದ ವಲಸಿಗರು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.
ವಲಸಿಗರು ಅಥವಾ ಅವರ ಸಂಬಂಧಿಕರು +91-8802012345 (ಅಂತಾರಾಷ್ಟ್ರೀಯ ಮಿಸ್ಡ್ ಕಾಲ್)ನಲ್ಲಿ NORKA ಜಾಗತಿಕ ಸಂಪರ್ಕ ಕೇಂದ್ರದ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆ 18004253939 (ಭಾರತದೊಳಗೆ) ಮೂಲಕ ನೋಂದಾಯಿಸಿಕೊಳ್ಳಬಹುದು ಮತ್ತು ಸಹಾಯ ಪಡೆಯಬಹುದು.
ಇವುಗಳನ್ನೂ ಓದಿ:

