ETV Bharat / bharat

ಮೇಕೆ ಕಳ್ಳತನದ ಆರೋಪ ಹೊರಿಸಿ ಇಬ್ಬರು ಬಾಲಕರಿಗೆ ಮನಸೋಇಚ್ಛೆ ಥಳಿತ; ಒಬ್ಬ ಸಾವು, ಮತ್ತೊಬ್ಬ ಗಂಭೀರ

ಪೋಷಕರು ನೀಡಿದ ದೂರಿನ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : March 4, 2026 at 12:33 PM IST

1 Min Read
Choose ETV Bharat

ರೈರಂಗಪುರ(ಒಡಿಶಾ): ರಾಜ್ಯದ ಮಯೂರ್‌ಭಂಜ್ ಜಿಲ್ಲೆಯ ಹೆರೋಗೋಡಾ ಎಂಬಲ್ಲಿ 9ನೇ ತರಗತಿ ವಿದ್ಯಾರ್ಥಿಯನ್ನು ಗ್ರಾಮಸ್ಥರು ಮನಸೋಇಚ್ಛೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ.

ಸಂಬಿತ್ ಬಿಂಧಾನಿ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ರೈರಂಗಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭೂತಕಬಾದಿ ಗ್ರಾಮದ ರಾಜ್‌ಕುಮಾರ್ ಬಿಂಧಾನಿ ಎಂಬವರ ಒಬ್ಬನೇ ಮಗ. ಬಸಿಂಗಿ ಗ್ರಾಮದಲ್ಲಿರುವ ತಮ್ಮ ಮಾವನ ಮನೆಯಲ್ಲಿದ್ದ ಬಾಲಕ, ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ.

ಮಗನ ಸಾವಿನ ಸಂಬಂಧ ಟಿರಿಂಗ್ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದು, ಕೊಲೆ ಪ್ರಕರಣ ದಾಖಲಾಗಿದೆ. ಘಟನೆಯ ತನಿಖೆ ನಡೆಸಿದ ಪೊಲೀಸರು ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಲಕನ ತಂದೆ ರಾಜ್‌ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಸೋಮವಾರ ಸಂಜೆ ಇಂದಖೋಲಿ ಹೆರೋಗೋಡಾ ಗ್ರಾಮದ ಕೆಲವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಸಂಬಿತ್ ಸೇರಿದಂತೆ ಇಬ್ಬರು ಬಾಲಕರನ್ನು ಥಳಿಸಿದ್ದರು. ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಯಾರೋ ನನಗೆ ಫೋನ್ ಮಾಡಿ ಘಟನೆ ಬಗ್ಗೆ ತಿಳಿಸಿದರು. ನಾನು ಸ್ಥಳ ತಲುಪುವ ಮೊದಲೇ ಪೊಲೀಸರು ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ರಕ್ಷಿಸಿ ಜರಾಧಿಹಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರು ಎಂಬುದು ತಿಳಿಯಿತು. ನಾನು ತಕ್ಷಣ ಅಲ್ಲಿಗೆ ಹೋದೆ. ರಾಯ್‌ರಂಗಪುರ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ನನ್ನ ಮಗ ಮೃತಪಟ್ಟಿರುವುದಾಗಿ ಘೋಷಿಸಿದರು" ಎಂದು ಕಣ್ಣೀರು ಸುರಿಸಿದರು.

Students' bicycles burned
ವಿದ್ಯಾರ್ಥಿಗಳ ಸೈಕಲ್​ ಸುಟ್ಟು ಹಾಕಿರುವುದು (ETV Bharat)

ರಾಯ್‌ರಂಗಪುರ ಎಸ್‌ಡಿಪಿಒ ಬೀರೇಂದ್ರ ಕುಮಾರ್ ಸಹಾಬಿ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿ, "ಸೋಮವಾರ ಮಧ್ಯಾಹ್ನ ಗ್ರಾಮಸ್ಥರು ಮೇಕೆ ಕಳ್ಳತನದ ಆರೋಪದ ಮೇಲೆ ನಾಲ್ವರು ಮಕ್ಕಳನ್ನು ಹಿಡಿದಿದ್ದಾರೆ. ಇಬ್ಬರು ತಪ್ಪಿಸಿಕೊಂಡರೆ, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಮೋಟಾರ್‌ ಸೈಕಲ್‌ಗಳನ್ನೂ ಸಹ ಸುಟ್ಟುಹಾಕಲಾಗಿದೆ. ಮಾಹಿತಿ ಪಡೆದ ಪೊಲೀಸರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದು ಸೂಕ್ಷ್ಮ ಘಟನೆ, ಪೊಲೀಸರು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ ಪೊಲೀಸರು ಆ ಗ್ರಾಮದ 12 ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಸ್ಥಳದಿಂದ ಸುಟ್ಟುಹೋದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಗಂಭೀರ ಸ್ಥಿತಿಯಲ್ಲಿ ಬರಿಪಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಕುಟುಂಬ ಒತ್ತಾಯಿಸಿದೆ" ಎಂದು ಹೇಳಿದರು.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ 13 ಆರೋಪಿಗಳ ಖುಲಾಸೆ: 14ನೇ ಆರೋಪಿಯ ವಿರುದ್ಧದ ವಿಚಾರಣೆ ರದ್ದುಪಡಿಸಿದ ಹೈಕೋರ್ಟ್