ಹಣ ಕುರಿತ ವಿವಾದ: ಕುಟುಂಬದ ನಾಲ್ವರನ್ನು ಕೊಡಲಿಯಿಂದ ಹಲ್ಲೆ ನಡೆಸಿ ಕೊಂದ ವ್ಯಕ್ತಿ
ಘಟನಾ ಸ್ಥಳದಿಂದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ಬಹ್ರೈಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

By PTI
Published : March 2, 2026 at 12:51 PM IST
ಬಹ್ರೈಚ್ (ಉತ್ತರಪ್ರದೇಶ): ಹಣದ ವಿಚಾರಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತವರು, ಅಜ್ಜಿ ಮತ್ತು ಸಹೋದರಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬಸಂತಪುರ ರುಡಾಲ್ ಗ್ರಾಮದ ರಾಮಗಾಂವ್ ಹಳ್ಳಿಯಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಲಿಖಿತ ದೂರಿನಲ್ಲಿ ಏನಿದೆ?: ಆರೋಪಿ ತನ್ನ ಅಣ್ಣನ ಮೇಲೂ ಹಲ್ಲೆ ನಡೆಸಿ, ಇಟ್ಟಿಗೆಯಿಂದ ತನ್ನನ್ನೂ ಹೊಡೆದುಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದುರ್ಗಾ ಪ್ರಸಾದ್ ತಿವಾರಿ, ಗುರುದೇವ್ ಅವರು ತಮ್ಮ ಕಿರಿಯ ಸಹೋದರ ನಿರಂಕರ್ (30) ಭೂಮಿ ಮತ್ತು ಆಭರಣಗಳ ಮಾರಾಟದಿಂದ ಬಂದ ಹಣದ ಬಗ್ಗೆ ತಂದೆಯೊಂದಿಗೆ ಜಗಳವಾಡುತ್ತಿರುವುದನ್ನು ನೋಡಿದ ಬಗ್ಗೆ ಲಿಖಿತ ದೂರು ನೀಡಿದ್ದಾರೆ.
ನಾಲ್ವರ ಹತ್ಯೆ ಮಾಡಿದ ಆರೋಪಿ: ಕೋಪಗೊಂಡ ಆರೋಪಿ ಕುಟುಂಬ ಸದಸ್ಯರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಅವರ ಪೋಷಕರು, ಅಜ್ಜಿ ಮತ್ತು ಸಹೋದರಿಗೆ ಮಾರಣಾಂತಿಕ ಗಾಯಗಳಾಗಿದ್ದವು ಎಂದು ಹೇಳಿದರು. ಮೃತರನ್ನು ಬದ್ಲು ರಾಮ್ (60), ಅವರ ಪತ್ನಿ ಸಂಜು ದೇವಿ (56), ಮಗಳು ಪಾರ್ವತಿ (42), ಮತ್ತು ಸಿತಾಲ (80) ಎಂದು ಗುರುತಿಸಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಆರೋಪಿ ತನಗೆ ಕೊಡಲಿಯಿಂದ ಹೊಡೆದಿದ್ದಾನೆ ಎಂದು ಗುರುದೇವ್ ದೂರಿನಲ್ಲಿ ಹೇಳಿದ್ದಾರೆ.
ನಿರಂಕರ್ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು: ಘಟನೆ ಸಮಯದಲ್ಲಿ, ಆರೋಪಿ ಇಟ್ಟಿಗೆಯಿಂದ ಹಲವು ಬಾರಿ ಹೊಡೆದುಕೊಂಡು ತನ್ನನ್ನು ತಾನೇ ಗಾಯಗೊಳಿಸಿಕೊಂಡಿದ್ದಾನೆ. ದೂರಿನ ಮೇರೆಗೆ ಪೊಲೀಸರು ನಿರಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ಬಹ್ರೈಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ಅವನನ್ನು ಲಖನೌಗೆ ಕಳುಹಿಸಲಾಯಿತು.
ವಿಚಾರಣೆಯ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಭೂಮಿ ಮಾರಾಟದಿಂದ ಬಂದ ಹಣ ಸಿಗದ ಕಾರಣ ಆರೋಪಿ ಕೋಪಗೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧಕ್ಕೆ ಬಳಸಲಾದ ರಕ್ತಸಿಕ್ತ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಾನ್‌ಪಾರಾದ ವೃತ್ತ ಅಧಿಕಾರಿ ಪಹುಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮರ್ಯಾದಾ ಹತ್ಯೆ: ಮದುವೆಯಾದ ಕೆಲವೇ ಗಂಟೆಯಲ್ಲಿ ವಧುವಿನ ಸಹೋದರರಿಂದ ವರನ ಕೊಲೆ!

