ETV Bharat / bharat

ಈ ಶಾಲೆಯಲ್ಲಿದ್ದಾರೆ ಅವಳಿ-ತ್ರಿವಳಿಗಳ ಜೋಡಿ: ಅವರನ್ನು ಗುರುತಿಸುವುದೇ ಶಿಕ್ಷಕರು-ಮಕ್ಕಳಿಗೆ ಸವಾಲು!

ಈ ಶಾಲೆಯಲ್ಲಿ ಅವಳಿ-ತ್ರಿವಳಿ ಮಕ್ಕಳ ದಂಡೇ ಇದೆ. ಈ ಶೈಕ್ಷಣಿಕ ವರ್ಷವೂ 5 ಅವಳಿ-ತ್ರಿವಳಿ ಮಕ್ಕಳು ದಾಖಲಾತಿ ಪಡೆದಿದ್ದಾರೆ.

SCHOOL OPENING
ಈ ಶಾಲೆಯಲ್ಲಿದ್ದಾರೆ ಅವಳಿ- ತ್ರಿವಳಿಗಳ ಜೋಡಿ (ETV Bharat)
author img

By ETV Bharat Karnataka Team

Published : June 1, 2026 at 8:11 PM IST

3 Min Read
Choose ETV Bharat

ಕೋಝಿಕೋಡ್ (ಕೇರಳ): ಬೇಸಿಗೆ ರಜೆ ಮುಗಿದಿದ್ದು, ಈಗ ಶಾಲೆಗಳು ಪುನಾರಂಭವಾಗಿವೆ. ಇಷ್ಟು ದಿನ ಮಕ್ಕಳಿಲ್ಲದೇ ಖಾಲಿ ಖಾಲಿಯಾಗಿದ್ದ ಶಾಲೆಗಳಲ್ಲಿ ಈಗ ಮಕ್ಕಳ ಚಿಲಿಪಿಲಿ ಕಲರವ ಕೇಳುತ್ತಿದೆ. ಕೇರಳದ ಕುಟ್ಟಿಯಾಡಿ ಸಮೀಪದ ದೇವರ್ಕೋವಿಲ್‌ನಲ್ಲಿರುವ ಕೆವಿಕೆಎಂಎಂ ಯುಪಿ ಶಾಲೆಯು ವರ್ಷಾರಂಭದಲ್ಲಿಯೇ ವಿಶೇಷ ಮಕ್ಕಳ ಆಗಮನದಿಂದ ಗಮನ ಸೆಳೆದಿದೆ.

ಹೌದು. ಈ ಶಾಲೆಯಲ್ಲಿ ತ್ರಿವಳಿ ಮತ್ತು ಅವಳಿ ಮಕ್ಕಳ ಗುಂಪೇ ಇದೆ. ಈ ಬಾರಿ ಮತ್ತೆ ಮೂರು ಜೋಡಿ ಅವಳಿ-ತ್ರಿವಳಿ ಮಕ್ಕಳು ಇಲ್ಲಿಗೆ ದಾಖಲಾಗಿದ್ದಾರೆ. ಶಾಲಾ ಪ್ರವೇಶೋತ್ಸವದ ವೇಳೆ ಈ ಮಕ್ಕಳೇ ಕೇಂದ್ರ ಬಿಂದುವಾಗಿದ್ದಾರೆ.

ಇತ್ತೀಚೆಗಷ್ಟೇ ಈ ಶಾಲೆಗೆ ಎರಡು ಜೋಡಿ ತ್ರಿವಳಿ ಮತ್ತು ಮೂರು ಜೋಡಿ ಅವಳಿ ಮಕ್ಕಳು ದಾಖಲಾಗಿದ್ದಾರೆ. ಈ 12 ಮಕ್ಕಳ ಜೊತೆಗೆ, ಶಾಲೆಯಲ್ಲಿ ಈಗಾಗಲೇ ಇತರೆ 11 ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ವಿಶೇಷ. ಅಂದರೆ ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು 34 ತ್ರಿವಳಿ ಮತ್ತು ಅವಳಿ ಮಕ್ಕಳು ಇದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿಕ್ರಿಯೆ: ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಾದ ವಿ. ನಾಸರ್ ಅವರು ಈಟಿವಿ ಭಾರತ್ ಜೊತೆಗೆ ಮಾತನಾಡಿ, "ತ್ರಿವಳಿ ಮಕ್ಕಳ ಪೈಕಿ ಒಂದು ಕುಟುಂಬವು ಸದ್ಯ ದೂರದ ಊರಿನಲ್ಲಿ ಇರುವುದರಿಂದ ಇಂದಿನ ಪ್ರವೇಶೋತ್ಸವಕ್ಕೆ ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯವಾಗಿಲ್ಲ. ನಾಳೆ ಅವರು ಶಾಲೆಗೆ ಬರಲಿದ್ದಾರೆ. ಎರಡು ಜೋಡಿ ತ್ರಿವಳಿಗಳ ಪೈಕಿ ಮೂವರು ಮಕ್ಕಳು ಒಂದನೇ ತರಗತಿಗೆ ಸೇರಿದ್ದರೆ, ಉಳಿದ ಮೂವರು ಎರಡನೇ ತರಗತಿಯಲ್ಲಿದ್ದಾರೆ" ಎಂದು ಮಾಹಿತಿ ನೀಡಿದರು.

ಕಳೆದ ಹತ್ತು ವರ್ಷಗಳಲ್ಲಿ ಒಂದನೇ ತರಗತಿಗೆ ಅತಿ ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ. ಸುಮಾರು 2,000 ವಿದ್ಯಾರ್ಥಿಗಳನ್ನು ಹೊಂದಿರುವ ಇದು, ಈ ಪ್ರದೇಶದ ಪ್ರಮುಖ ಪ್ರಾಥಮಿಕ ಶಾಲೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ರಾಜ್ಯದಲ್ಲೇ 10ನೇ ಸ್ಥಾನದಲ್ಲಿರುವ ಈ ಶಾಲೆಯು, ಸಿಎಂ ಕಿಡ್ ಸ್ಕಾಲರ್‌ಶಿಪ್ ಪರೀಕ್ಷೆಗಳಲ್ಲಿ ಹಾಗೂ ಜಿಲ್ಲಾ ಮತ್ತು ಉಪಜಿಲ್ಲಾ ಮಟ್ಟದ ಮೇಳಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಶಿಕ್ಷಕರು ತಿಳಿಸಿದರು.

ಅವಳಿ-ತ್ರಿವಳಿ ಮಕ್ಕಳಿಗೆ ಅದ್ಧೂರಿ ಸ್ವಾಗತ: ಶಾಲೆಯ ಆರಂಭ ದಿನವಾದ ಸೋಮವಾರ (ಜೂನ್​ 1ರಂದು) 350ಕ್ಕೂ ಹೆಚ್ಚು ಹೊಸ ವಿದ್ಯಾರ್ಥಿಗಳು ಬಂದಿದ್ದು, ಅವರಲ್ಲಿ 150 ಮಕ್ಕಳು ಒಂದನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಈ ಹೊಸ ವಿದ್ಯಾರ್ಥಿಗಳಲ್ಲಿ ಮೂರು ಜೋಡಿ ಅವಳಿ ಮತ್ತು ಇಬ್ಬರು ತ್ರಿವಳಿ ಮಕ್ಕಳು ಸೇರಿದ್ದಾರೆ. ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಕಾರ್ಟೂನ್ ಪಾತ್ರಗಳ ಸಮ್ಮುಖದಲ್ಲಿ ಬ್ಯಾಂಡ್ ಮೇಳದೊಂದಿಗೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು ಎಂದು ಮುಖ್ಯೋಪಾಧ್ಯಾಯರು ಹೇಳಿದರು.

ಶಾಲೆಯ ಗುಣಮಟ್ಟವನ್ನು ಶ್ಲಾಘಿಸಿದ ಮಾಜಿ ಸಚಿವ ಅಹಮ್ಮದ್ ದೇವರ್ಕೋವಿಲ್ ಅವರು, "ನಾನು ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆ. ಅಂದಿನಿಂದ ಇದು ದೇವರ್ಕೋವಿಲ್ ಜನರ ನೆಚ್ಚಿನ ಶಾಲೆಯಾಗಿ ಬೆಳೆದಿದೆ. ಪ್ರತಿ ವರ್ಷವೂ ಇದು ಕಾಯ್ದುಕೊಂಡು ಬಂದಿರುವ ಶ್ರೇಷ್ಠತೆಯು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಈ ಶಾಲೆಯು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮನ್ನಣೆ ಗಳಿಸಲಿ ಎಂದು ನಾನು ಆಶಿಸುತ್ತೇನೆ ಎಂದರು.

ಶಾಲೆಯಲ್ಲಿ ತಮಾಷೆಯ ಸವಾಲು ಖಂಡಿತ: ತ್ರಿವಳಿ-ಅವಳಿ ಮಕ್ಕಳು ಒಂದೇ ಶಾಲೆ ಸೇರಿದ್ದರಿಂದ ಮುಂಬರುವ ದಿನಗಳಲ್ಲಿ ಒಂದೇ ಬೆಂಚ್‌ನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುವ ಈ ಮಕ್ಕಳನ್ನು ಗುರುತಿಸುವುದು ಶಿಕ್ಷಕರು ಮತ್ತು ಸಹಪಾಠಿಗಳಿಗೆ ಒಂದು ತಮಾಷೆಯ ಸವಾಲಾಗಿ ಪರಿಣಮಿಸಲಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಹೆಸರುಗಳನ್ನು ಕೂಗಿದಾಗ, ಅವರು ಒಂದೇ ರೀತಿಯ ಭಾವನೆಯೊಂದಿಗೆ ಮುಗುಳ್ನಗುವುದನ್ನು ನೋಡುವುದು, ತರಗತಿಗಳಲ್ಲಿ ಭಾರಿ ನಗುವಿನ ಅಲೆ ಎಬ್ಬಿಸುವುದು ಖಂಡಿತ. ಇಷ್ಟು ದೊಡ್ಡ ಸಂಖ್ಯೆಯ ಅವಳಿ ಮತ್ತು ತ್ರಿವಳಿ ಮಕ್ಕಳು ಒಂದೇ ಶಾಲೆಯಲ್ಲಿ ಒಟ್ಟಿಗೆ ಇರುವುದು ಅತ್ಯಂತ ಅಪರೂಪ ಎಂಬುದು ಶಿಕ್ಷಕರ ಅಭಿಮತ.

ಇವುಗಳನ್ನೂ ಓದಿ: