ವಿಧಿಯಿಂದಲೂ ಬಿಡಿಸಲಾಗದ ಬಂಧ: ಭೀಕರ ಅಪಘಾತ, ಸಾವಿನಲ್ಲೂ ಒಂದಾದ ಸ್ನೇಹಿತೆಯರು
ಒಟ್ಟಿಗೆ ಶಿಕ್ಷಣ ಪಡೆದ ಬಾಲ್ಯದ ಗೆಳತಿಯರಿಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಜೊತೆಯಾಗಿದ್ದಾರೆ.

Published : December 30, 2025 at 8:24 PM IST
ಹೈದರಾಬಾದ್(ತೆಲಂಗಾಣ): ಒಂದನೇ ತರಗತಿಯಿಂದ ಎಂಎಸ್ ವರೆಗೆ ಒಟ್ಟಿಗೆ ಕಲಿತ ಬಾಲ್ಯದ ಇಬ್ಬರು ಸ್ನೇಹಿತೆಯರು ಸಾವಿನಲ್ಲೂ ಒಂದಾಗಿದ್ದಾರೆ. ಭಾನುವಾರ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ.
ಮಹಬೂಬಾಬಾದ್ ಜಿಲ್ಲೆಯ ಪುಲ್ಲಖಂಡಂ ಗ್ರಾಮದ ಮೇಘನರಾಣಿ (25), ಮುಲ್ಕನೂರ್ ಗ್ರಾಮದ ಕಡಿಯಾಲ ಭಾವನಾ (24) ಮೃತ ಗೆಳತಿಯರು.
ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಪ್ರವಾಸದಲ್ಲಿದ್ದಾಗ ಕಾರು ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಕುರಿತು ಅವರ ಕುಟುಂಬಸ್ಥರಿಗೆ ಸೋಮವಾರ ಮಾಹಿತಿ ಸಿಕ್ಕಿದೆ.
ಒಂದನೇ ತರಗತಿಯಿಂದ ಗೆಳೆತನ: ಒಂದನೇ ತರಗತಿಯಿಂದ ಇಬ್ಬರೂ ಶಾಲೆಯಲ್ಲಿ ಜೊತೆಯಾಗಿ ಕಲಿತಿದ್ದರು. ಬಳಿಕ ಒಟ್ಟಿಗೆ ಬಿಟೆಕ್ ಪದವಿ ಪಡೆದಿದ್ದರು. ನಂತರ ಯುಎಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಜೊತೆಯಾಗೇ ತೆರಳಿದ್ದು, ಜೊತೆಯಾಗಿಯೇ ಕಲಿಯುತ್ತಿದ್ದರು. ಈ ಇಬ್ಬರು ಮೂರು ವರ್ಷಗಳ ಹಿಂದೆ ತಮ್ಮ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು ಮತ್ತು ಓಹಿಯೋದ ಡೇಟನ್‌ನಲ್ಲಿ ವಾಸಿಸುತ್ತಿದ್ದರು. ಡೇಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನ ಪೂರ್ಣಗೊಳಿಸಿ ಸದ್ಯ ಅಲ್ಲೇ ಉದ್ಯೋಗ ಹುಡುಕುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ತಮ್ಮ ಇತರೆ ಸ್ನೇಹಿತರ ಜೊತೆ ಈ ಇಬ್ಬರು ಅಲಾಬಾಮಾ ಹಿಲ್ಸ್‌ಗೆ ಪ್ರವಾಸಕ್ಕೆ ಭಾನುವಾರ ಕಾರಲ್ಲಿ ತೆರಳಿದ್ದರು. ಈ ವೇಳೆ ಅವರ ಕಾರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ಪ್ರಾಣ ಸ್ನೇಹಿತೆಯರಿಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಭಾವನಾ ಅವರ ತಂದೆ ಕಡಿಯಾಲ ಕೋಟೇಶ್ವರ ರಾವ್ ಅವರು ಮುಲ್ಕನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದಾರೆ. ಘನಾರಾಣಿ ಅವರ ತಂದೆ ಪ್ರಲ್ಲಖಂಡಂ ವೆಂಕಟ ನಾಗೇಶ್ವರ ರಾವ್ ಅವರು ಫ್ರಾಂಚೈಸಿಯಾಗಿ 'ಮೀ ಸೇವಾ' ನಾಗರಿಕ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ.
ಮಾಜಿ ಸಂಸದೆ ಮಲೋತ್ ಕವಿತಾ, ಬಿಆರ್‌ಎಸ್ ಮಂಡಲ ಅಧ್ಯಕ್ಷ ಲಕ್ಷ್ಮಣ್ ನಾಯಕ್, ಉಪಾಧ್ಯಕ್ಷ ಬುಡಿಗ ಮುರಳಿ ಮತ್ತು ಇತರ ನಾಯಕರು ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಬಿಆರ್‌ಎಸ್ ರಾಜ್ಯಸಭಾ ಸದಸ್ಯ ವಡ್ಡಿರಾಜು ರವಿಚಂದ್ರ ಅವರು ಮೃತರ ಪೋಷಕರೊಂದಿಗೆ ಮಾತನಾಡಿ, ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ರವಾನಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪಾರ್ಥಿವ ಶರೀರ ಅವರ ಊರುಗಳಿಗೆ ತಲುಪಲು ಸುಮಾರು ಒಂದು ವಾರ ಬೇಕಾಗುತ್ತದೆ.
ನಮ್ಮ ಮಕ್ಕಳು ಬೆಳೆಯುವುದನ್ನು ನೋಡಲು ನಾವು ಕಾತರದಿಂದ ಕಾಯುತ್ತಿದ್ದೆವು. ಬಾಲ್ಯದಿಂದಲೂ ಒಟ್ಟಿಗೆ ಓದಿದ್ದರಿಂದ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಲು ನಾವು ಸಂತೋಷದಿಂದ ಒಪ್ಪಿಕೊಂಡೆವು. ಸಾವಿನಲ್ಲೂ ಅವರಿಬ್ಬರನ್ನು ದೇವರು ಜೊತೆ ಮಾಡುತ್ತಾನೆಂದು ಎಂದಿಗೂ ಊಹಿಸಿರಲಿಲ್ಲ. ಈಗ, ವಿಧಿ ನಮ್ಮ ಮಕ್ಕಳ ನೆನಪುಗಳನ್ನು ಮಾತ್ರ ನಮಗೆ ಬಿಟ್ಟು ಹೋಗಿದೆ ಎಂದು ಮೇಘನಾರಾಣಿ ಮತ್ತು ಭಾವನಾ ಅವರ ಪೋಷಕರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ: 1ನೇ ತರಗತಿಯಿಂದ MTech ವರೆಗಿನ ಗೆಳೆತನ: ಜೀವದ ಗೆಳತಿಯರ ದುರಂತ ಅಂತ್ಯ

