ETV Bharat / bharat

ಇಬ್ಬರು ಆದಿಲ್‌ಗಳು, ತದ್ವಿರುದ್ಧ ಮಾರ್ಗಗಳು: ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದನೆ ಮತ್ತು ತ್ಯಾಗ

25 ಪ್ರವಾಸಿಗರು ಹಾಗೂ ಓರ್ವ ಸ್ಥಳೀಯ ಕಾಶ್ಮೀರಿ ಕುದುರೆ ಸವಾರಿ ನಿರ್ವಾಹಕನ್ನು ಬಲಿ ಪಡೆದುಕೊಂಡ ಪಹಲ್ಗಾಮ್​ ದಾಳಿಗೆ ಇಂದಿಗೆ ಒಂದು ವರ್ಷ.

Syed Adil Hussain Shah's new house
ಸೈಯದ್ ಆದಿಲ್ ಹುಸೇನ್ ಷಾ ನೂತನ ಮನೆ (PTI)
author img

By ETV Bharat Karnataka Team

Published : April 22, 2026 at 12:11 PM IST

3 Min Read
Choose ETV Bharat

ಪಹಲ್ಗಾಮ್ (ಜಮ್ಮು ಕಾಶ್ಮೀರ್)​: ಎಪ್ರಿಲ್ 22, 2025. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್​ನ ಶಾಂತ, ಹಚ್ಚ ಹಸಿರಿನ ಕಣಿವೆಗಳ ನಡುವೆ, ಇಬ್ಬರು 'ಆದಿಲ್'ಗಳು ಸಂಪೂರ್ಣವಾಗಿ ವಿರುದ್ಧ ದಿಕ್ಕುಗಳಲ್ಲಿ ನಿಂತಿದ್ದರು. ಇಬ್ಬರ ಹೆಸರು ಒಂದೇ ಆಗಿತ್ತು. ಆದರೆ ಅವರ ಮಾರ್ಗಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು.

ಒಬ್ಬರು ಕೈಯಲ್ಲಿ ಬಂದೂಕಿನಿಂದ ಭಯೋತ್ಪಾದನೆಯ ಮಾರ್ಗವನ್ನು ಆರಿಸಿಕೊಂಡಿದ್ದರೆ, ಇನ್ನೊಬ್ಬರು ನಿರಾಯುಧರಾಗಿ, ತಮ್ಮ ಧೈರ್ಯ ಮತ್ತು ಮಾನವೀಯತೆಯ ಬಲದಿಂದ ಜೀವಗಳನ್ನು ಉಳಿಸಲು ಹೋರಾಡುತ್ತಿದ್ದರು. ಮತ್ತು ಆ ಪ್ರಯತ್ನದಲ್ಲಿಯೇ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.

ಆ ಕರಾಳ ಘಟನೆ ನಡೆದು ಈಗ ಒಂದು ವರ್ಷವಾಗಿದೆ. ಸಮಯ ಕಳೆದಿದೆ. ಒಂದು ವರ್ಷದ ನಂತರವೂ ಆ ಕಹಿ ಘಟನೆ ಮನ ಕಲಕುತ್ತಿದೆ. ದಾಳಿಯನ್ನು ನಾವು ಮತ್ತೆ ನೆನಪಿಸಿಕೊಂಡರೆ, ಅದೇ ಹೆಸರನ್ನು ಹೊಂದಿರುವ ಎರಡು ಮುಖಗಳು ನಮ್ಮ ಮುಂದೆ ಸ್ಪಷ್ಟವಾಗಿ ಕಾಣುತ್ತವೆ, ಅದೇ 'ಆದಿಲ್'.

Terrorists Adil Hussain Thokar and Syed Adil Hussain Shah
ಎಡಬದಿ ಚಿತ್ರದಲ್ಲಿ ಭಯೋತ್ಪಾದಕ ಆದಿಲ್ ಹುಸೇನ್ ಥೋಕರ್. ಬಲಬದಿ ಚಿತ್ರದಲ್ಲಿ​ ಹುತಾತ್ಮ ಸೈಯದ್ ಆದಿಲ್ ಹುಸೇನ್ ಷಾ (File photo)

ಈ ಒಂದೇ ಹೆಸರಿನ ಹಿಂದೆ ಎರಡು ವ್ಯತಿರಿಕ್ತ ವ್ಯಕ್ತಿತ್ವಗಳು: ಒಂದು ಕೆಟ್ಟದು, ಇನ್ನೊಂದು ಮಾನವೀಯತೆ. ಒಬ್ಬರು ಶಸ್ತ್ರಾಸ್ತ್ರಗಳನ್ನು ಹಿಡಿದು ವಿನಾಶದ ಹಾದಿಯನ್ನು ಆರಿಸಿಕೊಂಡ ಭಯೋತ್ಪಾದಕ ಆದಿಲ್ ಹುಸೇನ್ ಥೋಕರ್​. ಇನ್ನೊಬ್ಬರು ಪಹಲ್ಗಾಮ್‌ನ ಕುದುರೆ ಸವಾರಿ ನಿರ್ವಾಹಕ ಸೈಯದ್ ಆದಿಲ್ ಹುಸೇನ್ ಷಾ. ಧೈರ್ಯದಿಂದ ಇತರರ ಜೀವಗಳನ್ನು ಉಳಿಸುವ ಪ್ರಯತ್ನದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದವರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಮುಖ ಶಂಕಿತ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಜೊತೆ ಸಂಪರ್ಕ ಹೊಂದಿದ್ದ ಮತ್ತು ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆದಿಲ್‌ ಎಂದು ಪೊಲೀಸರು ಗುರುತಿಸಿದ್ದರು. ಇದರ ಮಧ್ಯೆ, 28 ವರ್ಷದ ಸೈಯದ್ ಆದಿಲ್ ಹುಸೇನ್ ಷಾ ಈ ಭಯಾನಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಪರ್ವತಗಳು ಮತ್ತು ಕಣಿವೆಗಳ ಮೂಲಕ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದ ಈ ಯುವಕ ತಮ್ಮ ಕುಟುಂಬದ ಏಕೈಕ ಜೀವನಾಧಾರವಾಗಿದ್ದರು. ಗುಂಡು ಹಾರಿಸಿದಾಗ, ತನ್ನ ಜೀವವನ್ನು ಉಳಿಸಿಕೊಳ್ಳಲು ಅವನಿಗೆ ಓಡಿಹೋಗುವ ಆಯ್ಕೆ ಇತ್ತು; ಆದರೂ, ಅವನು ಹಾಗೆ ಮಾಡದೆ, ಅಲ್ಲಿ ಸಹಾಯಕ್ಕಾಗಿ ಕೂಗುತ್ತಿದ್ದವರ ರಕ್ಷಣೆಗಾಗಿ ಓಡಿದ್ದರು.

People pay homage at the Baisaran memorial in remembrance of the martyrs of Pahalgam terror attack.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಬೈಸರನ್ ಸ್ಮಾರಕದಲ್ಲಿ ಗೌರವ ಸಲ್ಲಿಸುತ್ತಿರುವ ಜನ (PTI)

ಆ ದಿನ, ಆದಿಲ್​ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಗುಂಪನ್ನು ಕುದುರೆ ಸವಾರಿಗೆ ಕರೆದೊಯ್ದಿದ್ದರು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ, ಭಯೋತ್ಪಾದಕರು ದಾಳಿ ನಡೆಸಿ ಗುಂಡು ಹಾರಿಸಿದ್ದರು. ನಿರಾಯುಧ ಪ್ರವಾಸಿಗರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ಆ ಕ್ಷಣದಲ್ಲಿ, ಆದಿಲ್ ಆ ಮುಗ್ಧ ಪ್ರವಾಸಿಗರ ಜೀವ ಉಳಿಸುವ ಪ್ರಯತ್ನದಲ್ಲಿ ಭಯೋತ್ಪಾದಕರಲ್ಲಿ ಒಬ್ಬರಿಂದ ಆಯುಧವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದ್ದರು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರಲ್ಲಿ ಆದಿಲ್ ಮಾತ್ರ ಸ್ಥಳೀಯ ಕಾಶ್ಮೀರಿ; ಉಳಿದವರು ಪ್ರವಾಸಿಗರು. ಈ ಹುತಾತ್ಮ ಆದಿಲ್ ಷಾ ತಮ್ಮದೇ ಆದ ಹೊಸ ಮನೆಯನ್ನು ನಿರ್ಮಿಸುವ ಕನಸು ಹೊಂದಿದ್ದರು.

ದಾಳಿಯ ನಂತರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಹಲ್ಗಾಮ್ ಬಳಿಯ ಹಪ್ತನಾರ್ ಗ್ರಾಮದಲ್ಲಿ ಆದಿಲ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಇದೀಗ ಒಂದು ವರ್ಷದ ನಂತರ, ಆದಿಲ್ ಅವರ ಕುಟುಂಬಕ್ಕೆ ಮನೆಯನ್ನು ಹಸ್ತಾಂತರಿಸಲಾಗಿದೆ. ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಸಂಜಯ್ ಶಿರ್ಷತ್ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ಯೋಗೇಶ್ ಕದಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹೆಚ್ಚುವರಿಯಾಗಿ, ಶಿಂಧೆ ಅವರು ವಿಡಿಯೋ ಕರೆಯ ಮೂಲಕ ಆದಿಲ್ ಷಾ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದರು. ಶಿಂಧೆ ಅವರ ಮಧ್ಯಸ್ಥಿಕೆಯನ್ನು ಅವರ ಕುಟುಂಬದವರು ಶ್ಲಾಘಿಸಿದರು.

"ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು ಹಿಂದೂಗಳನ್ನಷ್ಟೇ ಪ್ರತ್ಯೇಕಿಸಿ ಹತ್ಯೆ ಮಾಡಿದ್ದರು. ಆದರೂ, ಈ ಧೈರ್ಯಶಾಲಿ ಆದಿಲ್ ಪ್ರವಾಸಿಗರನ್ನು ಉಳಿಸುವ ಪ್ರಯತ್ನದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದನು. ಮಗನನ್ನು ಕಳೆದುಕೊಳ್ಳುವುದು ತಂದೆ-ತಾಯಿಗೆ ತುಂಬಾ ಕಷ್ಟದ ಸಂಗತಿ. ಅವನು ತಾಯಿಯ ಪ್ರೀತಿಯ ಮತ್ತು ತಂದೆಗೆ ಬೆಂಬಲವಾಗಿ ನಿಂತಿದ್ದ. ಶಿವಸೇನೆ ಯಾವಾಗಲೂ ಆದಿಲ್‌ನ ಬೆಂಬಲಕ್ಕೆ ನಿಲ್ಲುತ್ತದೆ. ಅವನ ತ್ಯಾಗ ನಿಜವಾಗಿಯೂ ಸ್ಪೂರ್ತಿದಾಯಕ. ಆದಿಲ್‌ನಂತಹ ಮಾನವೀಯತೆ ಪ್ರದರ್ಶಿಸುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ" ಎಂದು ಶಿಂಧೆ ಹೇಳಿದರು.

ಆದಿಲ್ ಅವರ ನೆನಪುಗಳು ಅವರ ಹೆತ್ತವರು ಕಣ್ಣಲ್ಲಿ ನೀರು ತರಿಸಿದೆ. ಈಟಿವಿ ಭಾರತ್ ಜೊತೆ ಮಾತನಾಡಿದ ಆದಿಲ್ ಅವರ ತಂದೆ ಸಯೀದ್ ಹೈದರ್ ಷಾ, "ಕಳೆದ ವರ್ಷದಿಂದ ಬಹಳಷ್ಟು ಬದಲಾಗಿದೆ. ಆದರೆ ಆದಿಲ್ ತಾಯಿ ಅಳುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದಿಲ್ ನಮ್ಮ ಶಕ್ತಿಯ ಆಧಾರಸ್ತಂಭವಾಗಿದ್ದ. ಅವನನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಹೇಳಿದರು.

ಆದಿಲ್ ತನ್ನ ಕುಟುಂಬಕ್ಕಾಗಿ ಮನೆ ನಿರ್ಮಿಸುವ ಕನಸನ್ನು ನನಸಾಗಿಸಲು ತುಂಬಾ ಶ್ರಮಿಸುತ್ತಿದ್ದ. ಆದರೆ ಆದಿಲ್​ ಕನಸು ಅವನ ಮರಣದ ನಂತರ ನನಸಾಗುತ್ತದೆ ಎಂದುಎಂದಿಗೂ ಭಾವಿಸಿರಲಿಲ್ಲ. ಏಕನಾಥ್ ಶಿಂಧೆ ಆದಿಲ್ ಮರಣದ ನಂತರ ನಮಗೆ ಅಪಾರ ನೈತಿಕ ಬೆಂಬಲವನ್ನು ನೀಡಿದ್ದಾರೆ. ಅವರು ನಮ್ಮ ಪಕ್ಕದಲ್ಲಿ ದೃಢವಾಗಿ ನಿಂತರು. ನಮಗಾಗಿ ಈ ಮನೆಯನ್ನು ನಿರ್ಮಿಸಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ" ಎಂದು ಷಾ ಹೇಳಿದರು.

ಆದಿಲ್ ಅವರ ಮನೆಗೆ ಮಾಜಿ ಶಿವಸೇನಾ ನಾಯಕ ಮತ್ತು ಏಕನಾಥ್ ಶಿಂಧೆ ಅವರ ಮಾರ್ಗದರ್ಶಕ ದಿವಂಗತ ಆನಂದ್ ದಿಘೆ ಅವರ ಹೆಸರನ್ನು ಇಡಲಾಗಿದೆ. ನಿವಾಸಕ್ಕೆ 'ಆನಂದ್ ನಾಥ್ ಸದನ್' ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: 'ನೋವಿನಿಂದ ಹೊರಬರಲು ದಾರಿ ಸಿಗುತ್ತಿಲ್ಲ': ಪಹಲ್ಗಾಮ್​ ದಾಳಿಯಲ್ಲಿ ಮಗನ ಕಳೆದುಕೊಂಡ ತಂದೆ ಭಾವುಕ