ETV Bharat / bharat

ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಬಂಧನ; ಭದ್ರತೆ ಹೆಚ್ಚಳ

ಕೊಲೆ ಬೆದರಿಕೆಯ ನಡುವೆ ರಾಜ್ಯಪಾಲ ಸಿ.ವಿ.ಆನಂದ್​ ಬೋಸ್ ಅವರಿಂದು ಕೋಲ್ಕತ್ತಾದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ರಸ್ತೆಯಲ್ಲಿ ಸಂಚರಿಸಲು ನಿರ್ಧರಿಸಿದ್ದು, ಜನರೇ ತಮ್ಮನ್ನು ರಕ್ಷಿಸಲಿದ್ದಾರೆ ಎಂದು ಹೇಳಿದರು.

Threat To Blow Up West Bengal Governor, But Bose To Hit Streets Sans Guards, Accused Arrested
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್​ ಬೋಸ್​ (ETV Bharat)
author img

By ETV Bharat Karnataka Team

Published : January 9, 2026 at 3:05 PM IST

2 Min Read
Choose ETV Bharat

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್​ ಬೋಸ್​ ಅವರಿಗೆ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಆರೋಪಿಯನ್ನು 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ಗುರುವಾರ ರಾತ್ರಿ ರಾಜ್ಯಪಾಲರ ಕಚೇರಿಗೆ ನಿಮ್ಮನ್ನು ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ವಿಷಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಭದ್ರತೆ ಬಿಗಿಗೊಳಿಸಲಾಗಿತ್ತು.

ಇದರ ಮಧ್ಯೆ ಬೋಸ್ ಅವರು​ ಇಂದು ಕೋಲ್ಕತ್ತಾ ನಗರದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ವಾಕ್​ ಮಾಡುವ ನಿರ್ಧಾರ ಮಾಡಿದ್ದರು. ನಗರದ ಹೃದಯ ಭಾಗದ ಧರ್ಮತಾಲಾದ ಡೆಕ್ಕರ್ಸ್ ಲೇನ್‌ನಲ್ಲಿ ಊಟಕ್ಕೆ ಹೋಗಲು ಅವರು ಯೋಜಿಸಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಲೋಕಭವನದಲ್ಲಿ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿಯೊಬ್ಬರು, ಇಂಥ ಕೊಲೆ ಬೆದರಿಕೆ ಬರುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಕೂಡ ಬೆದರಿಕೆ ಕರೆಗಳು ಬಂದಿದ್ದವು. ಇಂದು ರಾಜ್ಯಪಾಲರು ಭದ್ರತಾ ಸಿಬ್ಬಂದಿ ಇಲ್ಲದೆಯೇ ಕೋಲ್ಕತ್ತಾದ ಬೀದಿಗಳಲ್ಲಿ ಸಂಚರಿಸಲಿದ್ದು, ಜನರೇ ತಮ್ಮನ್ನು ರಕ್ಷಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಬಾಂಬ್​ ಸ್ಫೋಟಿಸುವ ಮೂಲಕ ಕೊಲ್ಲುವ ಬೆದರಿಕೆ ಹಾಕಲಾಗಿದ್ದು, ಆರೋಪಿ ತನ್ನ ಮೊಬೈಲ್​ ಸಂಖ್ಯೆಯನ್ನು ಕೂಡಾ ನಮೂದಿಸಿದ್ದಾನೆ. ಈ ಕುರಿತು ನಾವು ಡಿಜಿಪಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಆತನನ್ನು ಬಂಧಿಸಲು ಕೋರಿದೆವು. ಬೆದರಿಕೆಯ ಗಂಭೀರತೆ ಅರಿತ ಡಿಜಿಪಿ ಕೇಂದ್ರ ಗೃಹ ಸಚಿವರು ಹಾಗೆಯೇ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮಾಹಿತಿ ನೀಡಿದರು. ರಾಜ್ಯ ಪೊಲೀಸ್​ ಮತ್ತು ಸಿಆರ್​ಪಿಎಫ್​ ರಾಜ್ಯಪಾಲರ ಸುರಕ್ಷತೆಗಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಜ್ಯಪಾಲರಿಗೆ ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೇ ಜೆಡ್​​ ಪ್ಲಸ್ ಭದ್ರತೆ ನೀಡಲಾಗಿದ್ದು, ಲೋಕ ಭವನದ ಪ್ರತಿ ದ್ವಾರದಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ಘಟನೆಯನ್ನು ಖಂಡಿಸಿರುವ ನಾಯಕ ಅಮಿತ್ ಮಾಳವೀಯ, ಚುನಾವಣೆಗೆ ಸಜ್ಜಾಗಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ರಾಜ್ಯಪಾಲರು ಸುರಕ್ಷಿತವಾಗಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಆರೋಪ ಹೊತ್ತಿರುವ ಖಾಸಗಿ ಸಂಸ್ಥೆಯನ್ನು ರಕ್ಷಿಸುವ ಸಲುವಾಗಿ ಗೃಹ ಸಚಿವೆಯೂ ಆಗಿರುವ ಮಮತಾ ಬ್ಯಾನರ್ಜಿ ಅವರು ಇ.ಡಿ.ಯಿಂದ ಅಪರಾಧ ದಾಖಲೆಗಳನ್ನು ಕಸಿದುಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಐ ಪ್ಯಾಕ್​ ಮೇಲೆ ಇಡಿ ದಾಳಿ; ದಾಖಲೆಗಳ ದುರ್ಬಳಕೆಗೆ ನಿರ್ಬಂಧ ಹೇರುವಂತೆ ಕೋರಿ ಹೈಕೋರ್ಟ್​​ ಮೆಟ್ಟಿಲೇರಿದ ಟಿಎಂಸಿ