ETV Bharat / bharat

ನೇಪಾಳದಲ್ಲಿ ಐವರು ಸ್ನೇಹಿತರ ಪ್ರಾಣ ಉಳಿಸಿದ ಒಂದು ಕಪ್ ಚಹಾ!: ದುರಂತದ ಭಯಾನಕತೆ ಬಿಚ್ಚಿಟ್ಟ ಗೆಳೆಯರು

ನೇಪಾಳ ಪ್ರವಾಹದ ಸಂದರ್ಭದಲ್ಲಿ ಒಂದು ಕಪ್ ಚಹಾ ಐವರು ಸ್ನೇಹಿತರ ಜೀವವನ್ನು ಉಳಿಸಿದೆ. ದುರಂತ ನಾಡಿನಿಂದ ಹಿಂತಿರುಗಿದವರು ಅಲ್ಲಿನ ಭಯಾನಕ ಕಥೆಯನ್ನು ಮೆಲುಕು ಹಾಕಿದ್ದಾರೆ.

Nepal flood tragedy: Tea break saves lives of five friends from Raipur
ನೇಪಾಳ ಪ್ರವಾಹ (IANS, Getty Images)
author img

By PTI

Published : August 30, 2026 at 8:31 AM IST

3 Min Read
Choose ETV Bharat

ರಾಯ್‌ಪುರ(ಛತ್ತೀಸ್​ಘಡ): ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದ ವೇಳೆ ಚಹಾ ವಿರಾಮ ತೆಗೆದುಕೊಳ್ಳುವ ನಿರ್ಧಾರದಿಂದಾಗಿ ರಾಯ್‌ಪುರದ ಐವರು ಸ್ನೇಹಿತರ ಜೀವ ಉಳಿದಿದೆ. ನೇಪಾಳಕ್ಕೆ ಪ್ರಯಾಣಿಸಿದ್ದ ಗೆಳೆಯರ ತಂಡ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಿಗೆ ಅಪ್ಪಳಿಸಿದ ಪ್ರವಾಹದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದೆ.

ಬಚಾವಾಗಿ ಬಂದ ಸ್ನೇಹಿತರು ಶನಿವಾರ ರಾಯ್‌ಪುರದ ಮಾನಾ ಕ್ಯಾಂಪ್‌ನಲ್ಲಿರುವ ತಮ್ಮ ಮನೆಗಳಿಗೆ ಮರಳಿದರು. ನಾರಾಯಣ್ ಸೇನ್, ದಿನೇಶ್ ಓಜಾ, ಪ್ರೇಮ್ ಸಿಂಗ್ ಜಗತ್, ಯತೇಂದ್ರ ಪ್ರಕಾಶ್ ಮತ್ತು ದಿನೇಶ್ ಸಿಂಗ್ ಠಾಕೂರ್ ಸ್ವಗ್ರಾಮಕ್ಕೆ ಬಂದವರು. ಇವರೆಲ್ಲರೂ 50ರಿಂದ 60 ವರ್ಷ ವಯಸ್ಸಿನವರಾಗಿದ್ದು, ರಾಯ್‌ಪುರದ ಮಾನಾ ಕ್ಯಾಂಪ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಆಗಸ್ಟ್ 21ರಂದು ರಾಯ್‌ಪುರದಿಂದ ಹೊರಟ ಗೆಳೆಯರ ಬಳಗ ಮರುದಿನ ಆಗಸ್ಟ್ 22ರಂದು ನೇಪಾಳಕ್ಕೆ ತಲುಪಿತ್ತು. ಐವರು ಸ್ನೇಹಿತರು ಕಾರನ್ನು ಬಾಡಿಗೆಗೆ ಪಡೆದು ಪಶುಪತಿನಾಥ ದೇವಸ್ಥಾನ, ಮನಕಮನಾ ದೇವಸ್ಥಾನ ಮತ್ತು ಇತರೆ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಲು ಯೋಜಿಸಿದ್ದರು. ಆಗಸ್ಟ್ 26ರ ಬೆಳಗ್ಗೆ, 9:30ರಿಂದ 10ರ ನಡುವೆ ಇವರು ಧಾಡಿಂಗ್ ಜಿಲ್ಲೆಯ ಮಲೇಖು ಪಟ್ಟಣದ ಹೋಟೆಲ್‌ನಲ್ಲಿ ಚಹಾ ಕುಡಿಯಲು ತೆರಳಿದ್ದರು.

ಒಂದು ಕಪ್ ಚಹಾ ಐವರು ಸ್ನೇಹಿತರ ಜೀವವನ್ನು ಉಳಿಸಿತು: ಸಲೂನ್ ಮಾಲೀಕರಾಗಿರುವ ನಾರಾಯಣ್ ಸೇನ್ ಹೇಳುವಂತೆ, ''ಆಗಸ್ಟ್ 26ರಂದು ಹಠಾತ್ ಪ್ರವಾಹ ಬಂದಾಗ, ನಾವು ಚಹಾ ಕುಡಿಯಲು ತೆರಳಿದ್ದು, ಹೀಗಾಗಿ ಮುಂದೆ ಸಾಗದೇ ನಿಂತಿದ್ದು ನಮ್ಮ ಅದೃಷ್ಟ. ನಾವು 10-15 ನಿಮಿಷಗಳ ಮೊದಲು ಹೊರಟಿದ್ದರೆ, ಪ್ರವಾಹದಲ್ಲಿ ಸಿಲುಕಿಕೊಳ್ಳಬಹುದಿತ್ತು. ಆಗ ನಮಗೆ ಏನಾಗುತ್ತಿತ್ತು ಎಂದು ಹೇಳಲು ಅಸಾಧ್ಯ" ಎಂದರು.

ರಕ್ಷಣೆಗೆ ಬಂದ ಭಾರತೀಯ ಹೋಟೆಲ್ ಮಾಲೀಕರು: "ಅಲ್ಲಿಯೇ ಮುಂದೆ ಇರುವ ಸೇತುವೆ ಪ್ರವಾಹದಿಂದ ಕೊಚ್ಚಿಹೋಗಿದೆ ಎಂದು ನಮಗೆ ತಿಳಿಯಿತು. ಹೋಟೆಲ್ ಮಾಲೀಕ ಭಾರತೀಯ ಪ್ರಜೆಯಾಗಿದ್ದ. ಅವರು ನಮಗೆ ಬಹಳಷ್ಟು ಸಹಾಯ ಮಾಡಿದರು. ನಮಗೆ ಆಹಾರವನ್ನೂ ಒದಗಿಸಿದರು. ತ್ರಿಶೂಲಿ ನದಿಯಲ್ಲಿ ಕಾರುಗಳು ಕೊಚ್ಚಿ ಹೋಗುವುದನ್ನು ನಾವು ನೋಡಿದೆವು. ಭೀಕರ ಪ್ರವಾಹದಿಂದ ಜನರು ಮತ್ತು ಇತರ ವಸ್ತುಗಳು ತೇಲಿ ಹೋದವು. ನಾವು ಅದನ್ನು ಕಂಡು ಭಯಭೀತರಾಗಿದ್ದೆವು. ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂಬ ಭಯವೂ ಕಾಡಿತ್ತು. ಮಲೇಖುವಿನಲ್ಲಿ ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದು ಕಾರಿನಲ್ಲಿಯೇ ರಾತ್ರಿಯನ್ನು ಕಳೆದೆವು. ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳು ಸಂಕಷ್ಟದಲ್ಲಿದ್ದ ನಮಗೆ ನೆರವಾದರು'' ಎಂದು ಸೇನ್ ಹೇಳಿದರು.

ಪ್ರವಾಹ ಬಂದಾಗ, ನಾವು ಪಶುಪತಿನಾಥ ದೇವಾಲಯದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದ್ದರು ಎಂದು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ದಿನೇಶ್ ಸಿಂಗ್ ಠಾಕೂರ್ ಘಟನೆಯನ್ನು ಬಿಚ್ಚಿಟ್ಟರು. "ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದಾಗ, ಜನರು ಇದ್ದಕ್ಕಿದ್ದಂತೆ ಪ್ರಕ್ಷುಬ್ಧರಾಗುವುದನ್ನು ನಾವು ಗಮನಿಸಿದೆವು. ನಂತರ, ಪ್ರವಾಹದಿಂದ ಉಂಟಾದ ವಿನಾಶದ ಬಗ್ಗೆ ನಮಗೆ ತಿಳಿದುಬಂತು. ಇಡೀ ಹಳ್ಳಿಗಳು, ಕಟ್ಟಡಗಳು, ಕಚೇರಿಗಳು ಮತ್ತು ಜಲವಿದ್ಯುತ್ ಯೋಜನೆಗಳು ನಾಶವಾಗಿವೆ" ಎಂದರು.

ಶಿವನಿಗೆ ಕೃತಜ್ಞತೆಗಳು: "ನಾವು ಕಂಡದ್ದನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ. ಶಿವನ ಹೆಸರನ್ನು ಜಪಿಸುತ್ತಲೇ ಇದ್ದೆವು. ಆತನ ಆಶೀರ್ವಾದವೇ ನಮ್ಮನ್ನು ರಕ್ಷಿಸಿದೆ ಎಂದು ನಮಗೆ ಅನಿಸಿತು. ವಿದ್ಯುತ್ ಹಾಗೂ ನೀರು ಕೂಡ ಇರಲಿಲ್ಲ. ಆದರೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ನಮಗೆ ಸಹಾಯ ಮಾಡಿದರು. ನಾವು ಎತ್ತರದ ಜಾಗದಲ್ಲಿದ್ದೇವೆ ಮತ್ತು ಚಿಂತಿಸುವ ಅಗತ್ಯವಿಲ್ಲ ಎಂದು ಅವರು ನಮಗೆ ಭರವಸೆ ನೀಡಿದರು'' ಎಂದು ಠಾಕೂರ್ ಹೇಳಿದರು.

ಇಂಟರ್​ನೆಟ್ ಮತ್ತು ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕ: ''ನಮಗೆ ಇಂಟರ್​ನೆಟ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿ, ನಾವಿರುವ ಸ್ಥಳದ ಮಾಹಿತಿ ಹಂಚಿಕೊಳ್ಳಲು ಭಾರತ ಸರ್ಕಾರದ ಸಹಾಯವಾಣಿ ನೆರವಾಯಿತು. ಅಲ್ಲಿ ಇಂಟರ್​ನೆಟ್ ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಅದರಿಂದ ನಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸುಲಭವಾಯಿತು. ನಾವು ಸುರಕ್ಷಿತರಾಗಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿ, ಭಯಪಡಬೇಡಿ ಎಂದು ಕೇಳಿಕೊಂಡೆವು" ಎನ್ನುತ್ತಾರೆ ದಿನೇಶ್ ಸಿಂಗ್ ಠಾಕೂರ್.

ನೇಪಾಳದ ಮಹಿಳಾ ಭದ್ರತಾ ಸಿಬ್ಬಂದಿ ತಮಗೆ ರಾಖಿ ಕಟ್ಟಿದರು. ಇದೊಂದು ಭಾವನಾತ್ಮಕ ಕ್ಷಣ ಎಂದು ನೇಪಾಳ ದುರಂತದಿಂದ ಬದುಕುಳಿದ ಸ್ನೇಹಿತರು ಹೇಳಿದರು. ಟೈಲರಿಂಗ್ ಅಂಗಡಿ ನಡೆಸುತ್ತಿರುವ ದಿನೇಶ್ ಓಜಾ ಮಾತನಾಡಿ, ''ಪ್ರವಾಹದಲ್ಲಿ ನಾವು ಕಂಡ ದೃಶ್ಯಗಳು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅನೇಕ ಜನರು ಕಾಣೆಯಾದ ತಮ್ಮ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದರು. ನಾವು ಕಾರಿನಲ್ಲಿಯೇ ಮಲಗಿದ್ದೆವು, ಆದರೆ ನಿದ್ರೆ ಬರಲಿಲ್ಲ. ಮತ್ತೆ ಪ್ರವಾಹ ಬರಬಹುದೆಂಬ ಭಯವಿತ್ತು. ದೇವರ ದಯೆಯಿಂದಲೇ ಸುರಕ್ಷಿತವಾಗಿ ಹಿಂದಿರುಗಿದ್ದೇವೆ'' ಎಂದು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ನೇಪಾಳ ಪ್ರವಾಹ: ಸಾವಿನ ಸಂಖ್ಯೆ 675ಕ್ಕೇರಿಕೆ, 2500ಕ್ಕೂ ಹೆಚ್ಚು ಮಂದಿ ನಾಪತ್ತೆ