ETV Bharat / bharat

ಶ್ರೀಸಾಮಾನ್ಯರಿಗೆ ಮತದಾರರ ಜೈಕಾರ: 5 ಬಾರಿ ಶಾಸಕನ ಮಣಿಸಿದ ಆಟೋ ಚಾಲಕ; ವಿಜಯ್ ಕಾರು ಚಾಲಕನ ಪುತ್ರನಿಗೂ ದಿಗ್ವಿಜಯ

ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಹಲವು ಅಚ್ಚರಿಗಳಾಗಿವೆ. ಸಾಮಾನ್ಯ ಆಟೋ ಚಾಲಕ ಮತ್ತು ಟಿವಿಕೆ ಸ್ಥಾಪಕ ವಿಜಯ್ ಕಾರು ಚಾಲಕನ ಮಗ ಕೂಡ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.

TVK  ASSEMBLY ELECTION RESULT 2026  VIJAY CAR DRIVER SON WON  AUTO DRIVE WINS IN ELECTION TAMILNADU ELECTION RESULT
ವಿಜಯ್ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : May 5, 2026 at 9:50 AM IST

2 Min Read
Choose ETV Bharat

ದೇಶದ ರಾಜಕೀಯದಲ್ಲಿ ತಮಿಳುನಾಡು ವಿಭಿನ್ನ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದೇ ಮೊದಲ ಬಾರಿಗೆ ಚುನಾವಣಾ ಪರೀಕ್ಷೆಗೆ ಇಳಿದಿದ್ದ ನಟ ವಿಜಯ್ ನೇತೃತ್ವದ ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಬಿಟ್ಟು ಮತದಾರರು ವಿಜಯ್‌ಗೆ ಜೈ ಎಂದಿದ್ದಾರೆ.

ಎರಡು ವರ್ಷಗಳ ಹಿಂದಷ್ಟೇ ಸ್ಥಾಪನೆಯಾದ ಟಿವಿಕೆಗೆ ತಮಿಳು ಮಕ್ಕಳ ಬೆಂಬಲ ಸಿಕ್ಕಿದೆ. ಪಕ್ಷದಲ್ಲಿ ವಿಜಯ್ ಹೊರತುಪಡಿಸಿ ಸ್ಟಾರ್ ಮತ್ತು ಚಿರಪರಿಚಿತ ನಾಯಕರಾರೂ ಇರಲಿಲ್ಲ. ಅಂತೆಯೇ ಬಹುತೇಕ ಸಾಮಾನ್ಯರನ್ನೇ ಪಕ್ಷ ಕಣಕ್ಕಿಳಿಸಿತ್ತು. ಫಲಿತಾಂಶದಲ್ಲಿ ಅಚ್ಚರಿಯೆಂಬಂತೆ ಆಟೋ ಚಾಲಕ ಮತ್ತು ವಿಜಯ್ ಕಾರು ಚಾಲಕನ ಮಗನೂ ವಿಜಯ ಸಾಧಿಸಿದ್ದಾರೆ.

ವಿಜಯ್ ಕಾರು ಚಾಲಕನ ಮಗನಿಗೆ ಭರ್ಜರಿ ಜಯ: ವಿಜಯ್ ಅವರ ದೀರ್ಘಕಾಲದ ಕಾರು ಚಾಲಕ ರಾಜೇಂದ್ರನ್ ಅವರ 30 ವರ್ಷದ ಮಗ ಆರ್.ಶಬರಿನಾಥನ್ ಜಯಭೇರಿ ಬಾರಿಸಿದ್ದಾರೆ. ಇವರು ವಿರುಗಂಬಾಕಂ ವಿಧಾನಸಭಾ ಕ್ಷೇತ್ರದಿಂದ 27,086 ಮತಗಳ ಅಂತರದಿಂದ ಡಿಎಂಕೆಯ ಪ್ರಭಾಕರ್ ರಾಜಾ ಅವರನ್ನು ಸೋಲಿಸಿದ್ದಾರೆ.

ಭಾವುಕರಾಗಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದರು: ಟಿವಿಕೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಶಬರಿನಾಥನ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆ ವೇಳೆ ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಶಬರಿನಾಥನ್ ವಿಜಯ್ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಕಾರು ಚಾಲಕನ ಮಗ ಹೆಚ್ಚು ಚರ್ಚಿತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು. ಇದೀಗ ಚುನಾವಣೆ ಗೆದ್ದು ಅಸೆಂಬ್ಲಿ ಮೆಟ್ಟಿಲೇರಲು ಸಜ್ಜಾಗಿದ್ದಾರೆ.

ಆಟೋ ಸ್ಟ್ಯಾಂಡ್​ ಟು ಅಸೆಂಬ್ಲಿ: ತಮಿಳುನಾಡಿನಲ್ಲಿ ಮತ್ತೊಂದು ಅಚ್ಚರಿ ಎಂಬಂತೆ ಆಟೋ ಚಾಲಕರೊಬ್ಬರು ಗೆದ್ದಿದ್ದಾರೆ. ಟಿವಿಕೆ ಪಕ್ಷದಿಂದ ಕಣಕ್ಕಿಳಿದಿದ್ದ ಆಟೋ ಚಾಲಕ ಕೆ.ವಿಜಯ್ ಧಾಮು ಅವರು ರಾಯಪುರಂ ಕ್ಷೇತ್ರದಲ್ಲಿ 14,249 ಮತಗಳ ಅದ್ಭುತ ಗೆಲುವು ಸಾಧಿಸಿದ್ದಾರೆ. ಎಐಡಿಎಂಕೆ ಪ್ರಾಬಲ್ಯದ ರಾಯಪುರಂನಲ್ಲಿ ಆಟೋ ಚಾಲಕ ವಿಜಯ್ ಧಾಮು ಅವರು ಐದು ಬಾರಿ ಶಾಸಕರಾಗಿದ್ದ ಎಐಡಿಎಂಕೆ ನಾಯಕ ಜಯಕುಮಾರ್ ಮತ್ತು ಡಿಎಂಕೆ ಅಭ್ಯರ್ಥಿ ಸುಭೇರ್ ಖಾನ್ ಅವರನ್ನು ಸೋಲಿಸಿದ್ದಾರೆ. ಆಟೋ ಸ್ಟ್ಯಾಂಡ್‌ನಿಂದ ಅಸೆಂಬ್ಲಿವರೆಗೆ ತಲುಪಿರುವ ವಿಜಯ್ ಧಾಮ್ ಅವರ ಪ್ರಯಾಣವು ಸಾಮಾನ್ಯರ ಗೆಲುವಿನ ಸಂಕೇತವಾಗಿದೆ.

ಇವರು ಅಭ್ಯರ್ಥಿ ಘೋಷಣೆ ವೇದಿಕೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದರು.

ಸಿಎಂ ಸ್ಟಾಲಿನ್​​ ಸೋಲಿಸಿದ ಟಿವಿಕೆ ಬಾಬು: ಕೊಲತ್ತೂರು ಕ್ಷೇತ್ರದಲ್ಲಿ ಸಿಎಂ ಸ್ಟಾಲಿನ್ ಅವರನ್ನು ಟಿವಿಕೆ ಅಭ್ಯರ್ಥಿ ವಿ.ಎಸ್.ಬಾಬು ಅವರು 8,795 ಮತಗಳಿಂದ ಸೋಲಿಸಿದ್ದಾರೆ.

ಈ ಮೊದಲು ಡಿಎಂಕೆಯಲ್ಲಿದ್ದ ಬಾಬು ಅವರು ಸ್ಟಾಲಿನ್ ಬೆಂಬಲಿಗರಾಗಿದ್ದರು. ಜೊತೆಗೆ ಒಮ್ಮೆ ಡಿಎಂಕೆ ಶಾಸಕರಾಗಿಯೂ ಆಯ್ಕೆ ಆಗಿದ್ದರು. ಈ ಬಾರಿ ಟಿವಿಕೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ತಮಿಳುನಾಡಿನಲ್ಲಿ ವಿಜಯ್ ಸರ್ಕಾರ್: ತಮಿಳುನಾಡು ವಿಧಾನಸಭೆ ಫಲಿತಾಂಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, 108 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಆದರೆ ಸರ್ಕಾರ ರಚನೆಗೆ 118 ಮ್ಯಾಜಿಕ್ ನಂಬರ್ ಅಗತ್ಯವಿದೆ. ಬಹುಮತದ ಹತ್ತಿರ ಇರುವ ಟಿವಿಕೆ ಸರ್ಕಾರ ರಚಿಸುವುದು ಖಚಿತವಾಗಿದೆ. ಆಡಳಿತಾರೂಢ ಡಿಎಂಕೆ ಹೀನಾಯ ಸೋಲನುಭವಿಸಿದ್ದು, 73 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಎಐಡಿಎಂಕೆ 53ರಲ್ಲಿ ಜಯ ಸಾಧಿಸಿದೆ.

ಇದನ್ನೂ ಓದಿ: ಭಬಾನಿಪುರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿಗೆ 15,105 ಮತಗಳಿಂದ ಆಘಾತಕಾರಿ ಸೋಲು