ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಎಳೆದಾಡಿದ ಬೀದಿ ನಾಯಿಗಳು
ಗಾರದ ಆವರಣದೊಳಗೆ ನುಗ್ಗಿದ ನಾಯಿಗಳು ಮೃತದೇಹದ ಕೈಯನ್ನು ಎಳೆದಾಡಿವೆ. ಈ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.


Published : March 3, 2026 at 5:00 PM IST
ಜಡ್ಚೆರ್ಲಾ (ತೆಲಂಗಾಣ): ಜಡ್ಚೆರ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಶವಾಗಾರದಲ್ಲಿಟ್ಟಿರುವ ಮೃತದೇಹಗಳು ಬೀದಿ ನಾಯಿಗಳಿಗೆ ಆಹಾರವಾಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಇದು ಆಸ್ಪತ್ರೆಯ ಭದ್ರತೆ ಮತ್ತು ಸೌಲಭ್ಯದ ಕೊರತೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ.
ಸೋಮವಾರ ಜಡ್ಚೆರ್ಲಾ ತಾಲೂಕಿನ ನಗಸಲ ಗ್ರಾಮದ ಲಾರಿ ಚಾಲಕ ಪೊಲೆ ಭೀಮೇಶ್ವರ್ (32) ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಸೂಕ್ತ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮೃತದೇಹವನ್ನು ನೆಲದ ಮೇಲೆ ಇರಿಸಲಾಗಿತ್ತು. ಈ ವೇಳೆ ಶವಾಗಾರದ ಆವರಣದೊಳಗೆ ನುಗ್ಗಿದ ನಾಯಿಗಳು ಮೃತದೇಹದ ಕೈಯನ್ನು ಎಳೆದಾಡಿವೆ. ಈ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಆಸ್ಪತ್ರೆಯ ದುರಾವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಆಸ್ಪತ್ರೆಯ ಸೂಪರಿಂಡೆಂಟ್ ಚಂದ್ರಕಲಾ, ಮರಣೋತ್ತರ ಪರೀಕ್ಷೆ ಸಿಬ್ಬಂದಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ನಾಯಿಯನ್ನು ಓಡಿಸಿದ್ದಾರೆ ಎಂದು ತಿಳಿಸಿದರು.
ಉನ್ನತ ದರ್ಜೆಗೇರಿದ್ದರೂ ಸೌಲಭ್ಯ ಕೊರತೆ ಅನುಭವಿಸುತ್ತಿರುವ ಆಸ್ಪತ್ರೆ: 30 ಹಾಸಿಗೆಯ ಜಡ್ಚರ್ಲಾ ಆಸ್ಪತ್ರೆಯನ್ನು 2023ರಲ್ಲಿ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದಾಗ್ಯೂ, ಹೊಸ ಶವಾಗಾರಕ್ಕೆ ಹೊಸ ಕಟ್ಟಡ ಮತ್ತು ಸಾಧನಗಳು ಹಾಗೂ ಸಂಬಂಧಿಸಿದ ಸೌಲಭ್ಯಗಳನ್ನು ನೀಡಿಲ್ಲ. ಇದರಿಂದಾಗಿ ಹಳೆ ಆಸ್ಪತ್ರೆಯ ಶವಾಗಾರದಲ್ಲೇ ಇಂದಿಗೂ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಇನ್ನು ಘಟನೆ ಕುರಿತು ಮಾತನಾಡಿರುವ ಆಸ್ಪತ್ರೆಯ ಮೂಲಗಳು, ಮೃತದೇಹದ ಕಳಪೆ ಸ್ಥಿತಿ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇಟ್ಟಿರಲಿಲ್ಲ. ಬದಲಾಗಿ ರಾತ್ರಿಯಿಡಿ ಅಂಬ್ಯುಲೆನ್ಸ್ನ ಒಳಗೆ ಇರಿಸಲಾಗಿದ್ದು, ಮರುದಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದಿದ್ದಾರೆ.
ಆಸ್ಪತ್ರೆಯಲ್ಲಿ ಭದ್ರತೆ ಸೇರಿದಂತೆ ಸೌಲಭ್ಯದ ಕೊರತೆ ಇರುವ ಕುರಿತಾಗಿ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ ಬಳಿಕವೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.
ಶನಿವಾರ ಕೆಲಸಕ್ಕೆ ಎಂದು ಹೋಗಿದ್ದ ಲಾರಿ ಚಾಲಕ ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆ ಕುಟುಂಬವು ರಾತ್ರಿ ಇಡೀ ಆತನಿಗಾಗಿ ಹುಡುಕಾಟ ನಡೆಸಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಸೋಮವಾರ ಆತನ ದೇಹ ಸ್ಥಳೀಯ ಕೆರೆಯಲ್ಲಿ ತೇಲುತ್ತಿತ್ತು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತಂದಿದ್ದರು. ಈ ವೇಳೆ ಮೃತದೇಹವನ್ನು ನಾಯಿಗಳು ಎಳೆದಾಡಿರುವ ಘಟನೆ ವರದಿಯಾಗಿದೆ.
ಇವುಗಳನ್ನೂ ಓದಿ:
ಬೀದಿ ನಾಯಿ ದಾಳಿಗೆ 18 ತಿಂಗಳ ಕಂದಮ್ಮ ಬಲಿ
12 ನಾಟಿ ಕೋಳಿ ತಿಂದು ಹಾಕಿದ ಬೀದಿ ನಾಯಿಗಳು: ಗ್ರಾಮ ಪಂಚಾಯತ್ಗೆ ದೂರು

