ETV Bharat / bharat

ಗಲ್ಫ್​​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾರಂಭ; ಇಂಡಿಗೋ, ಸ್ಪೈಸ್​ಜೆಟ್​ ವಿಶೇಷ ವಿಮಾನ ಹಾರಾಟ

ಇಂದು ಸೌದಿ ಅರೇಬಿಯಾದ ಜೆಡ್ಡಾ ಹಾಗೂ ಯುಎಇಯ ಫುಜೈರಾದಿಂದ ಇಂಡಿಗೋ ಮತ್ತು ಸ್ಪೈಸ್​ಜೆಟ್​ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.

stranded Indian nationals Evacuation From Gulf Underway
ಗಲ್ಫ್​​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾರಂಭ (PTI)
author img

By ETV Bharat Karnataka Team

Published : March 3, 2026 at 11:01 AM IST

2 Min Read
Choose ETV Bharat

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ವಾತಾವರಣದಿಂದಾಗಿ ಗಲ್ಫ್​​ ಪ್ರದೇಶದಲ್ಲಿ ಸಾವಿರಾರು ಭಾರತೀಯರು ಸಿಲುಕಿದ್ದಾರೆ. ಇದೀಗ ಅವರ ರಕ್ಷಣೆಗೆ ಮುಂದಾಗಿರುವ ಭಾರತ ಸರ್ಕಾರ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವ ಕಾರ್ಯಾಚರಣೆ ಆರಂಭಿಸಿದೆ.

ಇರಾನ್​ ಮೇಲೆ ಇಸ್ರೇಲ್​ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳು ತಮ್ಮ ವಾಯು ಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಗೊಂಡಿತ್ತು.

"ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನದ ಭಾಗವಾಗಿ ಮಾರ್ಚ್​ 3ರಂದು ಸೌದಿ ಅರೇಬಿಯಾದ ಜೆಡ್ಡಾದಿಂದ ಇಂಡಿಗೋ ವಿಮಾನ ಕಾರ್ಯ ನಿರ್ವಹಿಸಲಿದೆ. 10 ವಿಶೇಷ ಪರಿಹಾರ ವಿಮಾನಗಳ ನಿರ್ವಹಣೆಗೆ ಯೋಜಿಸಲಾಗಿದೆ" ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿರುವ ಇಂಡಿಗೋ ಸಂಸ್ಥೆ, ಜೆಡ್ಡಾದಿಂದ ಹೈದರಾಬಾದ್​, ಮುಂಬೈ ಮತ್ತು ಅಹಮದಾಬಾದ್​ಗೆ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ನಮ್ಮ ಕಾರ್ಯಾಚರಣೆಯನ್ನು ಹಂತಹಂತವಾಗಿ ಸಾಮಾನ್ಯಗೊಳಿಸುವ ನಮ್ಮ ಪ್ರಯತ್ನಗಳ ಭಾಗವಾಗಿ ಮಾರ್ಚ್​ 3ರಂದು ಜೆಡ್ಡಾದಿಂದ ಮುಂಬೈ, ಹೈದರಾಬಾದ್ ಮತ್ತು ಅಹಮದಾಬಾದ್‌ಗೆ ನಾಲ್ಕು ಮೀಸಲಾದ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದೆ.

ಇಂಡಿಗೋ ಹೊರತಾಗಿ ಸ್ಪೈಸ್​ಜೆಟ್​ ವಿಮಾನ ಕೂಡ ಮಂಗಳವಾರ ನಾಲ್ಕು ವಿಶೇಷ ಪರಿಹಾರ ವಿಮಾನವನ್ನು ಯುಎಇಯ ಫುಜೈರಾದಿಂದ ಕಾರ್ಯಾಚರಣೆ ನಡೆಸಲಿದ್ದು, ಅಲ್ಲಿ ಸಿಲುಕಿರುವ ಭಾರತೀಯರನ್ನು ಹಂತಹಂತವಾಗಿ ಕರೆ ತರಲಿದೆ. ಫುಜೈರಾದಿಂದ ದೆಹಲಿ, ಮುಂಬೈ ಮತ್ತು ಕೊಚ್ಚಿಗೆ ಮುಂದಿನ ಕೆಲವು ದಿನಗಳ ಕಾಲ ವಿಶೇಷ ವಿಮಾನ ಕಾರ್ಯಾಚರಣೆ ನಡೆಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲಿ ಗಲ್ಫ್​​ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯ ಕುರಿತು ಕಳವಳ ವ್ಯಕ್ತವಾಗಿತ್ತು. ತೊಂದರೆಗೊಳಗಾದ ಭಾರತೀಯರಿಗೆ ಸಹಾಯ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸೋಮವಾರ ಮಾತನಾಡಿದ್ದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಗಲ್ಫ್‌​ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಎಲ್ಲಾ ಸಿದ್ಧತೆ ನಡೆಸುತ್ತಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶದಲ್ಲಿರುವ ಸಂಬಂಧಪಟ್ಟ ರಾಯಭಾರ ಕಚೇರಿಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದರು.

ಇವುಗಳನ್ನೂ ಓದಿ: