ETV Bharat / bharat

ಭಾರತಕ್ಕೆ ಮುಂಗಾರು ಮತ್ತಷ್ಟು ತಡ, ಜೂನ್ 4ಕ್ಕೆ ಕೇರಳಕ್ಕೆ ನೈಋತ್ಯ ಮಾರುತ ಪ್ರವೇಶ ಸಾಧ್ಯತೆ: IMD

ಭಾರತಕ್ಕೆ ಮುಂಗಾರು ಮಾರುತಗಳ ಪ್ರವೇಶ ಮತ್ತಷ್ಟು ತಡವಾಗಿದೆ. ಜೂನ್ 4ಕ್ಕೆ ಕೇರಳಕ್ಕೆ ನೈಋತ್ಯ ಮಾರುತಗಳು ಬರಲಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

IMD RAIN PREDICTION
ಸಾಂದರ್ಭಿಕ ಚಿತ್ರ (IANS)
author img

By PTI

Published : June 2, 2026 at 3:54 PM IST

2 Min Read
Choose ETV Bharat

ನವದೆಹಲಿ: ಎಲ್​ ನಿನೋ ಪ್ರಭಾವದಿಂದಾಗಿ ಭಾರತಕ್ಕೆ ಮುಂಗಾರು ಪ್ರವೇಶಿಸುವುದು ಮತ್ತಷ್ಟು ತಡವಾಗುತ್ತಿದೆ. ಈ ಹಿಂದೆ ಮೇ 24 ರಂದು ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು.

ಆದರೆ, ಮೇ ತಿಂಗಳು ಪೂರ್ತಿ ಕಳೆದು ಜೂನ್​ ಆರಂಭವಾಗಿದ್ದರೂ ಮುಂಗಾರು ಮಾರುತಗಳು ಭಾರತದ ಗಡಿ ಮುಟ್ಟಿಲ್ಲ. ಇದೀಗ, ಜೂನ್​ 4 ರ ಸುಮಾರಿಗೆ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಐಎಂಡಿ ಮಂಗಳವಾರ ತಿಳಿಸಿದೆ. ಸಾಮಾನ್ಯವಾಗಿ, ಜೂನ್ 1 ರ ಸುಮಾರಿಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುತ್ತದೆ. ಇದು ದೇಶದಲ್ಲಿ ನೈಋತ್ಯ ಮುಂಗಾರು ಅವಧಿಯ (ಜೂನ್-ಸೆಪ್ಟಂಬರ್) ಆರಂಭವನ್ನು ಸೂಚಿಸುತ್ತದೆ.

"ಜೂನ್ 4 ರ ಸುಮಾರಿಗೆ ನೈಋತ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷದ್ವೀಪದ ದ್ವೀಪಗಳು, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ನೈಋತ್ಯ ಮುಂಗಾರು ತಲುಪುವ ಪರಿಸ್ಥಿತಿಗಳು ಅನುಕೂಲಕರವಾಗಿವೆ" ಎಂದು ಐಎಂಡಿ ತಿಳಿಸಿದೆ.

ಇದೇ ಅವಧಿಯಲ್ಲಿ ಮುಂಗಾರು ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಇನ್ನೂ ಕೆಲವು ಭಾಗಗಳಿಗೆ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯ ಉಳಿದ ಭಾಗಗಳಿಗೂ ವ್ಯಾಪಿಸಲಿದೆ ಎಂದು ಇಲಾಖೆ ಸೇರಿಸಿದೆ.

ನಿರೀಕ್ಷೆಗಿಂತ 10 ದಿನ ತಡ: ಮುಂಗಾರು ಮೇ 26 ರಂದೇ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ತಿಳಿಸಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಜೂನ್​ 4 ರಂದು ಮುಂಗಾರು ಭಾರತ ಪ್ರವೇಶಿಸಲಿದೆ ಎಂಬುದು ಈಗಿನ ಅಂದಾಜು. ಅಂದರೆ, 10 ದಿನ ತಡವಾಗಿ ಮುಂಗಾರು ಮಾರುತಗಳು ಪ್ರವೇಶಿಸುತ್ತಿವೆ.

ಕಳೆದ ವಾರ, ಹವಾಮಾನ ಇಲಾಖೆಯು ಈ ಋತುವಿನ ಮಳೆ ಪ್ರಮಾಣದ ಕುರಿತು ತನ್ನ ಪರಿಷ್ಕೃತ ಮುನ್ಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಭಾರತವು ಈ ವರ್ಷ ದೀರ್ಘಾವಧಿ ಸರಾಸರಿಯ ಶೇಕಡಾ 90ರಷ್ಟು ಮಳೆಯನ್ನು ಕಾಣುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ದೀರ್ಘಾವಧಿ ಸರಾಸರಿ (ಎಲ್‌ಪಿಎ) ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಿಂಗಳುಗಟ್ಟಲೆ ಸುರಿಯುವ ಮಳೆಯನ್ನು ಆಧರಿಸಿ ಲೆಕ್ಕ ಹಾಕುವುದಾಗಿದೆ. 1971 ರಿಂದ 2020 ರವರೆಗಿನ ದತ್ತಾಂಶದ ಆಧಾರದ ಮೇಲೆ, ದೇಶಾದ್ಯಂತ ಮುಂಗಾರು ಅವಧಿಯ ಒಟ್ಟಾರೆ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣವು 87 ಸೆಂಟಿಮೀಟರ್ ಆಗಿದೆ. ಮುಂಗಾರು ಹಂಗಾಮಿನಲ್ಲಿ ಎಲ್‌ಪಿಎ ಸರಾಸರಿಗಿಂತ ಶೇಕಡಾ 90 ಕ್ಕಿಂತ ಕಡಿಮೆ ಮಳೆಯಾದರೆ, ಹವಾಮಾನ ಇಲಾಖೆಯು ಅದನ್ನು 'ಕೊರತೆ' ಎಂದು ಪರಿಗಣಿಸುತ್ತದೆ.

ಎಲ್​ ನಿನೋ ಎಫೆಕ್ಟ್​: ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲು ಉಷ್ಣ ವಲಯದ ಫೆಸಿಪಿಕ್​ ಸಮುದ್ರದಲ್ಲಿ ಉಂಟಾಗುವ 'ಎಲ್-ನಿನೋ' (ಬಿಸಿ ಗಾಳಿ) ಕಾರಣವಾಗಲಿದೆ. ಇದು ಮುಂಗಾರು ಅವಧಿಯಲ್ಲಿ ಕಡಿಮೆ ಮಳೆ ಸುರಿಸುತ್ತದೆ. ಪ್ರಸ್ತುತ ಎಲ್​ ನಿನೋ ಪ್ರಭಾವ ಹೆಚ್ಚಾಗಿದೆ. ಆದಾಗ್ಯೂ, ಇದರ ಪ್ರಭಾವವು ಜೂನ್‌ನಲ್ಲಿ ಕ್ಷೀಣವಾಗಿರಲಿದ್ದು, ಸೆಪ್ಟಂಬರ್ ವೇಳೆಗೆ ಮಧ್ಯಮದಿಂದ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಅಂದಾಜಿಸಿದೆ.

ಇವುಗಳನ್ನೂ ಓದಿ: