ಕೇರಳಂಗೆ ಮುಂಗಾರು ಪ್ರವೇಶ: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಂತೆ!
4 ದಿನ ತಡವಾಗಿಯಾದರೂ ಕೇರಳಂಗೆ ಮುಂಗಾರು ಪ್ರವೇಶಿಸಿದೆ. ಎಲ್ ನಿನೋ ಪರಿಣಾಮ ಈ ಬಾರಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂಬುದು ಹವಾಮಾನ ಇಲಾಖೆಯ ಮುನ್ಸೂಚನೆ.

Published : June 4, 2026 at 1:41 PM IST
ನವದೆಹಲಿ: ಭಾರತದ ಕೃಷಿಯ ಜೀವಸೆಲೆಯಾದ ಮುಂಗಾರು ಮಾರುತಗಳು ಕಡೆಗೂ ಇಂದು ಕೇರಳಂ ಪ್ರವೇಶಿಸಿವೆ. ಸಾಮಾನ್ಯವಾಗಿ ಜೂನ್ 1ರಂದು ನೈಋತ್ಯ ಮುಂಗಾರು ಮಾರುತಗಳು ಕೇರಳಂ ಮೂಲಕ ಭಾರತ ಪ್ರವೇಶಿಸುತ್ತಿದ್ದವು. ಆದರೆ, ಈ ಋತುವಿನಲ್ಲಿ 4 ದಿನ ತಡವಾಗಿ ಬಂದಿವೆ.
ಮುಂಗಾರು ಮಾರುತಗಳು ಕೇರಳಂ ಪ್ರವೇಶಿಸಿದ್ದನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೃಢಪಡಿಸಿದೆ. "ನೈಋತ್ಯ ಮುಂಗಾರು ಮಾರುತಗಳು ಇಂದು, ಅಂದರೆ 2026ರ ಜೂನ್ 4ರಂದು ಕೇರಳದ ಮೂಲಕ ಭಾರತ ಪ್ರವೇಶಿಸಿವೆ. ಇವುಗಳು ನೈಋತ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಉಳಿದ ಭಾಗಗಳು, ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಲಕ್ಷ ದ್ವೀಪಗಳು, ಕೇರಳ ಮತ್ತು ಪುದುಚೇರಿ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳು, ಕೊಮೊರಿನ್ ಪ್ರದೇಶದ (ಕನ್ಯಾಕುಮಾರಿ) ಉಳಿದ ಭಾಗಗಳು, ಆಗ್ನೇಯ ಬಂಗಾಳ ಕೊಲ್ಲಿ ಹಾಗೂ ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳತ್ತ ಮುನ್ನಡೆದಿವೆ" ಎಂದು ಐಎಂಡಿ ತಿಳಿಸಿದೆ.
ವಾಡಿಕೆಗಿಂತ ಕಡಿಮೆ ಮಳೆ: ಮುಂಗಾರು ದೇಶ ಪ್ರವೇಶಿಸಿದೆ ಎಂಬ ಖುಷಿಯ ಜೊತೆಗೆ ಬೇಸರದ ಸಂಗತಿ ಎಂದರೆ, ಈ ವರ್ಷದ ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಮುನ್ಸೂಚನೆ. ಹವಾಮಾನ ಇಲಾಖೆ, ಈ ವರ್ಷದ ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿದೆ. ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅಂದಾಜಿಸಿದೆ. ಈ ವರ್ಷ ಭಾರತದಲ್ಲಿ ದೀರ್ಘಾವಧಿ ಸರಾಸರಿಯ ಶೇ.90ರಷ್ಟು ಮಳೆಯಾಗಬಹುದು ಎಂದು ಐಎಂಡಿ ನಿರೀಕ್ಷಿಸಿದೆ.
ಏನಿದು ದೀರ್ಘಾವಧಿ ಸರಾಸರಿ ಮಳೆ?: ದೀರ್ಘಾವಧಿ ಸರಾಸರಿ (ಎಲ್ಪಿಎ) ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸುರಿದ ಮಳೆಯನ್ನು ಒಂದು ತಿಂಗಳು ಅಥವಾ ಹಂಗಾಮಿನ ಆಧಾರದ ಮೇಲೆ (ಸಾಮಾನ್ಯವಾಗಿ 30ರಿಂದ 50 ವರ್ಷಗಳು) ಲೆಕ್ಕ ಹಾಕಲಾಗುವ ಸರಾಸರಿ ಪ್ರಮಾಣ. 1971 ರಿಂದ 2020 ರವರೆಗಿನ ದತ್ತಾಂಶದ ಆಧಾರದ ಮೇಲೆ ದೇಶದ ಒಟ್ಟಾರೆ ಮುಂಗಾರು ಹಂಗಾಮಿನ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ 87 ಸೆಂಟಿಮೀಟರ್ ಆಗಿದೆ. ಒಂದು ವೇಳೆ ಮುಂಗಾರು ಹಂಗಾಮಿನಲ್ಲಿ ಎಲ್‌ಪಿಎಯ ಶೇಕಡಾ 90ಕ್ಕಿಂತ ಕಡಿಮೆ ಮಳೆಯಾದರೆ, ಅದನ್ನು ಹವಾಮಾನ ಇಲಾಖೆಯು 'ಕೊರತೆ' ಮಳೆ ಎಂದು ಪರಿಗಣಿಸುತ್ತದೆ.
ಕಡಿಮೆ ಮಳೆಗೆ ಎಲ್ ನಿನೋ ಕಾರಣ: ಈ ಬಾರಿ ಭಾರತದಲ್ಲಿ ಕಡಿಮೆ ಮಳೆಯಾಗಲು ಎಲ್ ನಿನೋ (ಬಿಸಿ ಗಾಳಿ) ಕಾರಣ ಎಂದು ತಜ್ಞರು ಹೇಳಿದ್ದಾರೆ. ಭೂಮಧ್ಯರೇಖೆಯ ಪೆಸಿಫಿಕ್ ವಲಯದಲ್ಲಿ ತಟಸ್ಥವಾಗಿದ್ದ ಎಲ್ ನಿನೋ ಈಗ ಬದಲಾಗಿದೆ. ಆದಾಗ್ಯೂ, ಇದರ ಪ್ರಭಾವ ಜೂನ್ ತಿಂಗಳಲ್ಲಿ ಕ್ಷೀಣವಾಗಿರಲಿದ್ದು, ಸೆಪ್ಟೆಂಬರ್ ವೇಳೆಗೆ ಮಧ್ಯಮದಿಂದ ತೀವ್ರತೆ ಪಡೆಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಈ ಹಿಂದೆ, ಹವಾಮಾನ ಇಲಾಖೆಯು ಮೇ 26ರಂದೇ ಕೇರಳದ ಮೂಲಕ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿತ್ತು. ಮುಂಗಾರು ಆಗಮನ 4 ದಿನ ತಡವಾಗಿದೆ.
ಇವುಗಳನ್ನೂ ಓದಿ:

