ಸೋನಿಯಾ ಗಾಂಧಿ ಅಸ್ವಸ್ಥ: ದೆಹಲಿಯ ಆಸ್ಪತ್ರೆಗೆ ದಾಖಲು
ದೆಹಲಿ ವಾಯು ಮಾಲಿನ್ಯದಿಂದಾಗಿ ಸೋನಿಯಾ ಗಾಂಧಿ ಕೆಮ್ಮಿನ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


Published : January 6, 2026 at 2:48 PM IST
ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ತಪಾಸಣೆ ನಡೆಸಿದ್ದಾರೆ. ನಗರದ ಮಾಲಿನ್ಯದಿಂದಾಗಿ ಅವರು ದೀರ್ಘಕಾಲದ ಕೆಮ್ಮಿನ ಸಮಸ್ಯೆ ಹೊಂದಿದ್ದು, ಈ ಕಾರಣದಿಂದ ಸೋಮವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಗಂಗಾ ರಾಮ್ ಆಸ್ಪತ್ರೆ, ಸೋನಿಯಾ ಗಾಂಧಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದೆ.
ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಅಜಯ್ ಸ್ವರೂಪ್ ಮಾತನಾಡಿ, ಸೋನಿಯಾ ಗಾಂಧಿ ಅವರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದ್ದು, ದೆಹಲಿಯಲ್ಲಿ ಶೀತ ಹವಾಮಾನ ಮತ್ತು ಮಾಲಿನ್ಯದ ಪರಿಣಾಮಗಳಿಂದಾಗಿ ಅವರಲ್ಲಿ ಶ್ವಾಸನಾಳದ ಆಸ್ತಮಾ ಸ್ವಲ್ಪ ಉಲ್ಬಣಗೊಂಡಿದೆ ಎಂದು ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು ಅವರನ್ನು ನಿಗಾ ಹೆಚ್ಚಿಸಿದ್ದಾರೆ. ಆ್ಯಂಟಿಬಯೋಟಿಕ್ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರು ಕಳೆದ ಡಿಸೆಂಬರ್ನಲ್ಲಿ 79 ವರ್ಷ ಪೂರ್ಣಗೊಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದು ದೈನಂದಿನ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ ಕಳಪೆ ವರ್ಗದಲ್ಲಿ ಮುಂದುವರೆದಿದೆ. ಇದರಿಂದಾಗಿ ಜನಸಾಮಾನ್ಯರ ಆರೋಗ್ಯದಲ್ಲೂ ಏರುಪೇರು ಉಂಟಾಗಿದ್ದು, ಈ ಕುರಿತು ವೈದ್ಯರು ಕೂಡ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಉದರದ ಸೋಂಕು: ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಬಿಡುಗಡೆ

