ಸಾವಿರ ವರ್ಷಗಳ ಹಿಂದಿನ ದಾಳಿಗಳ ಬಳಿಕವೂ ನಂಬಿಕೆ, ಸ್ವಾಭಿಮಾನದ ನೆಲೆ ಸೋಮನಾಥ: ಪ್ರಧಾನಿ ಮೋದಿ
ಗುಜರಾತ್ ಕರಾವಳಿ ತೀರದಲ್ಲಿರುವ ಇತಿಹಾಸ ಪ್ರಸಿದ್ಧ, ಭವ್ಯ ಶ್ರೀ ಸೋಮನಾಥ ದೇಗುಲದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ವಿಶೇಷ ಲೇಖನ ಇಲ್ಲಿದೆ.


Published : January 5, 2026 at 1:27 PM IST
ಸೋಮನಾಥ. ಈ ಪದ ಕೇಳಿದಾಗ ನಮ್ಮ ಮನಸ್ಸಿನಲ್ಲಿ ಹೆಮ್ಮೆಯ ಭಾವ ಮೂಡುತ್ತದೆ. ಇದು ಭಾರತದ ಆತ್ಮದ ಶಾಶ್ವತ ಸ್ಥಳ. ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್ನ ಪ್ರಭಾತ್ ಪಠಾಣ್ ಎಂಬಲ್ಲಿ ಭವ್ಯ ದೇಗುಲವಿದೆ. ಭಾರತದೆಲ್ಲೆಡೆ 12 ಜ್ಯೋತಿರ್ಲಿಂಗಗಳ ಸ್ತ್ರೋತ್ರದ ಉಲ್ಲೇಖ ಕಾಣಬಹುದು. ಈ ಸ್ತ್ರೋತ್ರ "ಸೌರಾಷ್ಟ್ರೇ ಸೋಮನಾಥಂ ಚ.."ಶ್ಲೋಕದೊಂದಿಗೆ ಶುರುವಾಗುತ್ತದೆ. ಇದು ಮೊದಲ ಜ್ಯೋತಿರ್ಲಿಂಗವಾಗಿರುವ ಸೋಮನಾಥದ ಆಧ್ಯಾತ್ಮಿಕ ಮಹತ್ವವನ್ನು ಸಂಕೇತಿಸುತ್ತದೆ.
ಸೋಮಲಿಂಗಂ ನರೋ ದೃಷ್ಟ್ವಾ ಸರ್ವಪಾಪೈಃ ಪ್ರಮುಚ್ಯತೇ।, ಲಭತೇ ಫಲಂ ಮನಃಕೃತಂ ಸ್ವರ್ಗಂ ಸಮಾಶ್ರಯೇತ್॥ ಎಂದೂ ಕೂಡ ಈ ಸ್ತ್ರೋತ್ರ ತಿಳಿಸುತ್ತದೆ. ಸೋಮನಾಥ ಶಿವಲಿಂಗವನ್ನು ನೋಡುವುದರಿಂದಲೇ ವ್ಯಕ್ತಿ ಪಾಪಗಳಿಂದ ಮುಕ್ತನಾಗುತ್ತಾನೆ. ಆತ ನೀತಿವಂತ ಆಸೆಗಳನ್ನು ಸಾಧಿಸಿ, ಮರಣಾನಂತರ ಸ್ವರ್ಗ ಪಡೆಯುತ್ತಾನೆ ಎಂಬುದು ಇದರರ್ಥ.
ದುರಂತವೆಂದರೆ, ಲಕ್ಷಾಂತರ ಜನರ ಶ್ರದ್ಧಾ, ಭಕ್ತಿ ಮತ್ತು ಪ್ರಾರ್ಥನೆಗಳ ನಡುವೆ ಸೋಮನಾಥ ದೇಗುಲವನ್ನು ಗುರಿಯಾಗಿಸಿಕೊಂಡು ವಿದೇಶಿ ಆಕ್ರಮಣಕಾರರು ಹಲವು ಬಾರಿ ದಾಳಿ ಮಾಡಿದರು.

ಈ ವರ್ಷ, 2026 ಸೋಮನಾಥ ದೇಗುಲಕ್ಕೆ ಮಹತ್ವದ್ದು. ಏಕೆಂದರೆ ದೇಗುಲದ ಮೇಲೆ ದಾಳಿ ನಡೆದು 1,000 ವರ್ಷಗಳು ಕಳೆಯುತ್ತಿವೆ. 1026ರ ಜನವರಿಯಲ್ಲಿ ಮೊಹಮ್ಮದ್ ಘಜ್ನಿ ಈ ದೇವಾಲಯದ ಮೇಲೆ ದಾಳಿ ಮಾಡಿದ್ದ. ಅತ್ಯಂತ ಹಿಂಸಾತ್ಮಕ ಮತ್ತು ಅನಾಗರಿಕ ಆಕ್ರಮಣದ ಮೂಲಕ ನಂಬಿಕೆ ಮತ್ತು ನಾಗರಿಕತೆಯ ಮಹಾನ್ ಸಂಕೇತವಾಗಿರುವ ದೇಗುಲವನ್ನು ನಾಶಮಾಡಲು ಆತ ಪ್ರಯತ್ನಿಸಿದ್ದ.
ಇದಾಗಿ ಸಾವಿರ ವರ್ಷಗಳ ಬಳಿಕವೂ ದೇಗುಲದ ಭವ್ಯತೆಯನ್ನು ಕಾಪಾಡಲು ನಡೆದ ಹಲವು ಪ್ರಯತ್ನಗಳಿಂದಾಗಿ ಅದೇ ಭವ್ಯತೆಯಿಂದ ದೇಗುಲ ಇಂದು ತಲೆ ಎತ್ತಿ ನಿಂತಿದೆ. ಈ ರೀತಿಯ ಒಂದು ಮೈಲಿಗಲ್ಲು 2026ರಲ್ಲಿ ಪೂರ್ಣಗೊಂಡು 75 ವರ್ಷವಾಗುತ್ತಿದೆ. 1951ರ ಮೇ 11ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಪುನಃಸ್ಥಾಪಿಸಿದ ದೇಗುಲ ಭಕ್ತರಿಗೆ ಮುಕ್ತವಾಗಿತ್ತು.
1026ರಲ್ಲಿ ಅಂದರೆ, ಸಾವಿರ ವರ್ಷಗಳ ಹಿಂದೆ ಮೊದಲ ಬಾರಿಗೆ ಸೋಮನಾಥ ದೇಗುಲದ ಮೇಲಿನ ದಾಳಿ, ನಗರದ ಜನರ ಮೇಲೆ ನಡೆದ ಕ್ರೌರ್ಯ ಮತ್ತು ದೇವಾಲಯದ ಮೇಲೆ ಉಂಟಾದ ವಿನಾಶವನ್ನು ವಿವಿಧ ಐತಿಹಾಸಿಕ ಸಂದರ್ಭಗಳಲ್ಲಿ ವಿವರವಾಗಿ ದಾಖಲಿಸಲಾಗಿದೆ. ಅವುಗಳನ್ನು ನೀವು ಓದಿದಾಗ ಹೃದಯ ನಡುಗುತ್ತದೆ, ಪ್ರತಿಯೊಂದು ಸಾಲೂ ಕೂಡಾ ದುಃಖ, ಕ್ರೌರ್ಯ ಮತ್ತು ಕಾಲದೊಂದಿಗೆ ಮರೆತು ಹೋಗಲು ನಿರಾಕರಿಸುವ ದುಃಖದ ಭಾರದಿಂದ ಕೂಡಿದೆ.

ಆದರೂ, ಮೊದಲ ದಾಳಿಯ ಸಾವಿರ ವರ್ಷಗಳ ನಂತರ ಸೋಮನಾಥನ ಕಥೆಯನ್ನು ವಿನಾಶದಿಂದ ವ್ಯಾಖ್ಯಾನಿಸಿಲ್ಲ. ಬದಲಾಗಿ, ಭಾರತ ಮಾತೆಯ ಕೋಟ್ಯಂತರ ಮಕ್ಕಳ ಧೈರ್ಯದಿಂದ ವ್ಯಾಖ್ಯಾನಿಸಲಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಿದೆ.
ಮಧ್ಯಕಾಲಿನ ಕ್ರೌರ್ಯ ಇತರೆ ದೇಗುಲಗಳ ಮೇಲೂ ಪದೇ ಪದೇ ದಾಳಿಗೆ ಪ್ರೇರೇಪಿಸಿತು. ಇದು ನಮ್ಮ ಜನರು ಮತ್ತು ಸಂಸ್ಕೃತಿಯನ್ನು ಗುಲಾಮರನ್ನಾಗಿ ಮಾಡುವ ಪ್ರಯತ್ನದ ಆರಂಭವಾಗಿತ್ತು. ಆದರೆ, ಪ್ರತೀ ಬಾರಿ ದೇವಾಲಯದ ಮೇಲೆ ದಾಳಿಯಾದಾಗಲೂ ಅನೇಕ ಮಹಾನ್ ಪುರುಷರು ಮತ್ತು ಮಹಿಳೆಯರು ತ್ಯಾಗದ ಮೂಲಕ ಅದನ್ನು ರಕ್ಷಿಸಲು ಎದ್ದು ನಿಂತರು. ಪೀಳಿಗೆಯಿಂದ ಪೀಳಿಗೆಗೆ ನಮ್ಮ ಜನರು ಈ ದೇವಾಲಯವನ್ನು ಪುನರ್ನಿರ್ಮಿಸಿ, ಪುನರುಜ್ಜೀವನಗೊಳಿಸಿದರು. ಸೋಮನಾಥದ ಅಭಿವೃದ್ಧಿಗೋಸ್ಕರ ಶ್ರಮಿಸಿದವರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರಂತಹ ಶ್ರೇಷ್ಠರು ಇದ್ದಾರೆ.
1890ರಲ್ಲಿ ಸ್ವಾಮಿ ವಿವೇಕಾನಂದರು ಸೋಮನಾಥ ದೇಗುಲಕ್ಕೆ ಭೇಟಿ ನೀಡಿದರು. ಈ ಅನುಭವವನ್ನು ಅವರು 1897ರಲ್ಲಿ ಚೆನ್ನೈ ಭಾಷಣದಲ್ಲಿ ತಿಳಿಸಿದ್ದರು. ದಕ್ಷಿಣ ಭಾರತದ ಕೆಲವು ಪುರಾತನ ದೇಗುಲಗಳು ಗುಜರಾತ್ನ ಸೋಮನಾಥದಂತೆ ಜ್ಞಾನದ ಮೌಲ್ಯವನ್ನು ಕಲಿಸುತ್ತವೆ. ಎಷ್ಟೋ ಪುಸ್ತಕಗಳಿಗಿಂತ ಅಪಾರ ಪ್ರಮಾಣದ ಒಳನೋಟವನ್ನು ನೀಡುತ್ತದೆ ಎಂದು ಅವರು ಕೊಂಡಾಡಿದ್ದರು.
ಈ ದೇವಾಲಯಗಳು ನೂರು ದಾಳಿಗಳು ಮತ್ತು ನೂರು ಪುನರ್ಜನ್ಮಗಳ ಗುರುತುಗಳನ್ನು ಹೇಗೆ ಹೊಂದಿವೆ ಎಂಬುದನ್ನು ಗಮನಿಸಿ, ನಿರಂತರವಾಗಿ ನಾಶವಾಗುತ್ತವೆ ಮತ್ತು ಅವಶೇಷಗಳಿಂದ ನಿರಂತರವಾಗಿ ಪುನರ್ ಸ್ಥಾಪನೆಯಾಗಿ ಹೊರಹೊಮ್ಮಿ ಬಲಗೊಳ್ಳುತ್ತವೆ. ಅದು ದೇಶದ ಮನಸ್ಸು, ಅದು ದೇಶದ ಪ್ರಸ್ತುತ ಜೀವನ. ಇದನ್ನು ಅನುಸರಿಸಿದರೆ, ಅದು ಮತ್ತೆ ಬೆಳಗುತ್ತದೆ. ಬಿಟ್ಟರೆ, ಸಾಯುತ್ತದೆ. ಸಾವು ಒಂದೇ ಫಲಿತಾಂಶ.

ಸ್ವಾತಂತ್ರ್ಯಾ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಸೋಮನಾಥ ದೇವಾಲಯವನ್ನು ಪುನರ್ನಿರ್ಮಿಸುವ ಕಾರ್ಯ ಮಾಡಿದರು. 1947ರಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ದೇವಾಲಯವನ್ನು ಪುನರ್ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಅಂತಿಮವಾರಿ 1951ರ ಮೇ 1951ರಂದು ಸೋಮನಾಥ ದೇವಾಲಯವು ಭಕ್ತರಿಗೆ ಬಾಗಿಲು ತೆರೆಯಿತು. ಈ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಈ ಐತಿಹಾಸಿಕ ದಿನವನ್ನು ನೋಡಲು ಮಹಾನ್ ಸರ್ದಾರ್ ಸಾಹಿಬ್ ಜೀವಂತವಾಗಿರಲಿಲ್ಲ. ಆದರೆ ಅವರ ಕನಸು ದೇಶದ ಮುಂದೆ ಎದ್ದು ನಿಂತಿತು. ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಈ ಬೆಳವಣಿಗೆ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ. ರಾಷ್ಟ್ರಪತಿಗಳು ಮತ್ತು ಸಚಿವರು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಅವರು ಇಷ್ಟಪಡಲಿಲ್ಲ. ಈ ಘಟನೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಉಂಟುಮಾಡಿತು ಎಂದು ಅವರು ಹೇಳಿದರು. ಆದರೆ ಡಾ.ರಾಜೇಂದ್ರ ಪ್ರಸಾದ್ ದೃಢವಾಗಿ ನಿಂತರು. ಇನ್ನುಳಿದಿದ್ದು ಇತಿಹಾಸ. ಸರ್ದಾರ್ ಪಟೇಲ್ ಅವರನ್ನು ಬಹಳ ಪರಿಣಾಮಕಾರಿಯಾಗಿ ಬೆಂಬಲಿಸಿದ ಕೆ.ಎಂ.ಮುನ್ಷಿ 'ಸೋಮನಾಥ: ದಿ ಶ್ರೈನ್ ಎಟರ್ನಲ್' ಪುಸ್ತಕ ಸೇರಿದಂತೆ ಸೋಮನಾಥದ ಕುರಿತಾದ ಅವರ ಕೃತಿಗಳು ಅತ್ಯಂತ ಮಾಹಿತಿಯುಕ್ತ ಮತ್ತು ಶೈಕ್ಷಣಿಕವಾಗಿವೆ.
ಮುನ್ಷಿ ಅವರ ಪುಸ್ತಕದ ಶೀರ್ಷಿಕೆ ತಿಳಿಸುವಂತೆ, ನಮ್ಮ ನಾಗರಿಕತೆಯು ಚೈತನ್ಯ ಮತ್ತು ವಿಚಾರಗಳ ಶಾಶ್ವತತೆಯ ಬಗ್ಗೆ ದೃಢನಿಶ್ಚಯವನ್ನು ಹೊಂದಿದೆ. ಪ್ರಸಿದ್ಧ ಗೀತಾ ಶ್ಲೋಕ "ನಾನಂ ಛಿಂದನ್ತಿ ಶಸ್ತ್ರಾಣಿ..."ಯಲ್ಲಿ ವಿವರಿಸಿರುವಂತೆ ಶಾಶ್ವತವಾದದ್ದು ಅವಿನಾಶಿ ಎಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ನಾಗರಿಕತೆಯ ಅದಮ್ಯ ಚೈತನ್ಯಕ್ಕೆ ಸೋಮನಾಥಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಎಲ್ಲ ಅಡೆತಡೆಗಳು ಮತ್ತು ಹೋರಾಟಗಳನ್ನು ಮೀರಿ ದೇಗುಲ ಭವ್ಯವಾಗಿ ನಿಂತಿದೆ.
ಇದೇ ಉತ್ಸಾಹ ದೇಶದಲ್ಲೂ ಕಾಣಬಹುದಾಗಿದೆ. ಜಾಗತಿಕ ಬೆಳವಣಿಗೆಯಲ್ಲೂ ಇದೇ ಮನೋಭಾವ ಗೋಚರಿಸುತ್ತಿದೆ. ನಮ್ಮ ಮೌಲ್ಯ ವ್ಯವಸ್ಥೆಗಳು ಮತ್ತು ನಮ್ಮ ಜನರ ದೃಢಸಂಕಲ್ಪವೇ ಭಾರತವನ್ನು ಇಂದು ಜಾಗತಿಕ ಗಮನದ ಕೇಂದ್ರಬಿಂದುವನ್ನಾಗಿ ಮಾಡಿದೆ. ಜಗತ್ತು ಭಾರತವನ್ನು ಭರವಸೆ ಮತ್ತು ಆಶಾವಾದವಾಗಿ ನೋಡುತ್ತಿದೆ. ನಮ್ಮ ಯುವಕರ ಅವಿಷ್ಕಾರದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ನಮ್ಮ ಕಲೆ, ಸಂಸ್ಕೃತಿ, ಸಂಗೀತ ಮತ್ತು ಹಲವಾರು ಉತ್ಸವಗಳು ಜಾಗತಿಕವಾಗಿ ಬೆಳೆಯುತ್ತಿವೆ. ಯೋಗ ಮತ್ತು ಆಯುರ್ವೇದವು ವಿಶ್ವಾದ್ಯಂತ ಪ್ರಭಾವ ಬೀರುತ್ತಿದ್ದು, ಆರೋಗ್ಯಕರ ಜೀವನ ಹೆಚ್ಚುತ್ತಿದೆ. ಕೆಲವು ಜಾಗತಿಕ ಸವಾಲುಗಳಿಗೆ ಭಾರತದಿಂದ ಪರಿಹಾರ ಸಿಗುತ್ತಿದೆ.
ಅನಾದಿ ಕಾಲದಿಂದಲೂ, ಸೋಮನಾಥ ವಿವಿಧ ಕ್ಷೇತ್ರಗಳ ಜನರನ್ನು ಒಟ್ಟುಗೂಡಿಸಿದೆ. ಶತಮಾನಗಳ ಹಿಂದೆ, ಜೈನ ಸನ್ಯಾಸಿ ಹೇಮಚಂದ್ರಾಚಾರ್ಯರು ಸೋಮನಾಥಕ್ಕೆ ಬಂದಿದ್ದರು. ಅಲ್ಲಿ ಪ್ರಾರ್ಥಿಸಿ, "ಭವಬೀಜಾಂಗ್ಕುರಜನನ ರಾಗಾದ್ಯಃ ಕ್ಷಯಮುಪಗತಾ ಯಸ್ಯ।" ಎಂಬ ಶ್ಲೋಕವನ್ನು ಪಠಿಸಿದ್ದರು ಎಂದು ಹೇಳಲಾಗುತ್ತದೆ. ಇದರ ಅರ್ಥ ಯಾರಲ್ಲಿ ಲೌಕಿಕತೆ ನಾಶವಾಗುತ್ತವೆಯೋ, ಯಾರಲ್ಲಿ ಉತ್ಸಾಹ ಮತ್ತು ಎಲ್ಲಾ ದುಃಖಗಳು ಒಣಗಿ ಹೋಗಿವೆಯೋ ಅವನಿಗೆ ನಮಸ್ಕಾರಗಳು” ಎಂದು. ಇಂದು, ಸೋಮನಾಥನು ಮನಸ್ಸು ಮತ್ತು ಆತ್ಮದೊಳಗಿನ ಆಳದಲ್ಲಿ ಜಾಗೃತಿಗೊಳಿಸುವ ಸಾಮರ್ಥ್ಯ ಹೊಂದಿದ್ದಾನೆ.
1026ರಲ್ಲಿ ನಡೆದ ಮೊದಲ ದಾಳಿಯ ಸಾವಿರ ವರ್ಷಗಳ ನಂತರವೂ ಸೋಮನಾಥ ದೇಗುಲ ಸಮುದ್ರದ ತೀರದಲ್ಲಿ ಅದೇ ವೈಭವದಿಂದ ಘರ್ಜಿಸುತ್ತಿದೆ. ಸೋಮನಾಥದ ತೀರವನ್ನು ತಲುಪುವ ಪ್ರತಿ ಅಲೆಗಳು ಒಂದು ಕಥೆಯನ್ನು ಹೇಳುತ್ತವೆ. ಏನೇ ಇರಲಿ, ಅಲೆಗಳಂತೆಯೇ, ಅದು ಮತ್ತೆ ಮತ್ತೆ ಮೇಲೇರುತ್ತಲೇ ಇರುತ್ತದೆ.

ಈಗ ಗಾಳಿಯಲ್ಲಿ ಧೂಳಿನಂತೆ ಹಿಂದಿನ ಆಕ್ರಮಣಕಾರರು ಇದ್ದಾರೆ. ಅವರ ಹೆಸರುಗಳು ವಿನಾಶಕ್ಕೆ ಸಮಾನಾರ್ಥಕವಾಗಿವೆ. ಅವರು ಇತಿಹಾಸದ ವಾರ್ಷಿಕೋತ್ಸವಗಳಲ್ಲಿದ್ದರೆ, ಸೋಮನಾಥವು ಪ್ರಕಾಶಮಾನವಾಗಿ ನಿಂತಿದೆ, ದಿಗಂತವನ್ನು ಮೀರಿ ಹೊರಹೊಮ್ಮುತ್ತಿದೆ. ದೇಗುಲವ 1026ರ ದಾಳಿಯಿಂದ ಕಡಿಮೆಯಾಗದೆ ಉಳಿದಿರುವ ಶಾಶ್ವತ ಚೈತನ್ಯವಾಗಿದೆ. ಸೋಮನಾಥ ಭರವಸೆಯ ಹಾಡಾಗಿದ್ದು, ದ್ವೇಷ ಮತ್ತು ಮತಾಂಧತೆಯು ಒಂದೇ ಕ್ಷಣ ನಾಶಮಾಡುವ ಶಕ್ತಿಯನ್ನು ಹೊಂದಿದ್ದರೂ, ಒಳ್ಳೆಯತನದ ಶಕ್ತಿಯ ಮೇಲಿನ ನಂಬಿಕೆ ಮತ್ತು ದೃಢನಿಶ್ಚಯವು ಶಾಶ್ವತವಾಗಿ ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ.
ಸಾವಿರ ವರ್ಷಗಳ ಹಿಂದೆ ದಾಳಿಗೊಳಗಾಗಿ ನಿರಂತರ ದಾಳಿಗಳನ್ನು ಎದುರಿಸಿದ ಸೋಮನಾಥ ದೇವಾಲಯವು ಮತ್ತೆ ಮತ್ತೆ ಮೇಲೇರಲು ಸಾಧ್ಯವಾದರೆ, ನಮ್ಮ ಮಹಾನ್ ದೇಶವನ್ನು ಸಾವಿರ ವರ್ಷಗಳ ಹಿಂದೆ ಆಕ್ರಮಣಗಳ ಬಳಿಕ ಮತ್ತೆ ವೈಭವಕ್ಕೆ ಮರಳಿ ತರಬಹುದು. ಶ್ರೀ ಸೋಮನಾಥ ಮಹಾದೇವರ ಆಶೀರ್ವಾದದೊಂದಿಗೆ, ನಾಗರಿಕತೆಯ ಜ್ಞಾನವು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಕೆಲಸ ಮಾಡಲು ನಮಗೆ ಮಾರ್ಗದರ್ಶನ ನೀಡುವ ವಿಕಸಿತ ಭಾರತ ನಿರ್ಮಿಸುವ ನವೀಕೃತ ಸಂಕಲ್ಪದೊಂದಿಗೆ ನಾವು ಮುಂದುವರಿಯುತ್ತೇವೆ. ಜೈ ಸೋಮನಾಥ.
ಓದುಗರು ಗಮನಿಸಿ: ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿವೆ.
ಇದನ್ನೂ ಓದಿ: '2025 ಸುಧಾರಣೆಯ ವರ್ಷ': ಸರ್ಕಾರದ ಸಾಧನೆಗಳ ಕುರಿತು ಪ್ರಧಾನಿ ಮೋದಿ ವಿಶೇಷ ಲೇಖನ

