ಸೋಮನಾಥ ದೇವಾಲಯಕ್ಕೆ ಇಂದು ಪ್ರಧಾನಿ ಭೇಟಿ: ಓಂಕಾರ ಮಂತ್ರ ಪಠಣೆಯಲ್ಲಿ ಭಾಗಿ
ಸ್ವಾಭಿಮಾನ ಪರ್ವದ ಸಂಭ್ರಮಾಚರಣೆಗೆ ದೇಶಾದ್ಯಂತ ನೂರಾರು ಸಾಧು ಸಂತರು ಸಾಕ್ಷಿಯಾಗಲಿದ್ದು, ದೇಗುಲದ ಆವರಣದಲ್ಲಿ 72ಗಂಟೆಗಳ ಓಂಕಾರ ಮಂತ್ರ ಪಠಣೆ ನಡೆಯಲಿದೆ.


By PTI
Published : January 10, 2026 at 1:35 PM IST
ನವದೆಹಲಿ: ಸೋಮನಾಥ ಸ್ವಾಭಿಮಾನ ಪರ್ವದ ಸಮಾರಂಭದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ಗೆ ತೆರಳಲಿದ್ದಾರೆ. ಸಂಜೆ ಸೋಮನಾಥ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸೋಮನಾಥ ಸ್ವಾಭಿಮಾನ ಪರ್ವವು ನಮ್ಮ ಆಧ್ಯಾತ್ಮಿಕ ಸಂಪ್ರದಾಯದ ಪ್ರಬಲ ಸಂಕೇತವಾಗಿದ್ದು, ಇದನ್ನು ದೇಶಾದ್ಯಂತ ಬಹಳ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಈ ಸಂಬಂಧ ರಾತ್ರಿ 8 ಗಂಟೆ ಸುಮಾರಿಗೆ ಸೋಮನಾಥ ದೇವಾಲಯದಲ್ಲಿ ಓಂಕಾರ ಮಂತ್ರದ ದಿವ್ಯ ಪಠಣದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಗಲಿದೆ ಎಂದಿದ್ದರು.
ಜನವರಿ 7 ರಿಂದ 11ರವರೆಗೆ ಸೋಮನಾಥ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದ ಭಾಗವಾಗಿ ಮೆಗಾ ಡ್ರೋನ್ ಶೋವನ್ನು ಕೂಡ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಕುರಿತು ಶುಕ್ರವಾರ ಪ್ರಕಟಣೆ ಹೊರಡಿಸಿದ್ದ ಪಿಎಂಒ ಕಚೇರಿ, ಭವಿಷ್ಯದ ಪೀಳಿಗೆಯ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರೇರೇಪಿಸುತ್ತಿರುವ ದೇವಾಲಯವನ್ನು ರಕ್ಷಿಸಲು ತ್ಯಾಗ ಮಾಡಿದ ಭಾರತದ ಅಸಂಖ್ಯಾತ ನಾಗರಿಕರನ್ನು ಸ್ಮರಿಸಲು ಈ ಪರ್ವವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವೂ ಸೋಮನಾಥ ದೇವಾಲಯದ ಮೇಲೆ ಮಹಮ್ಮದ್ ಘಜ್ನಿ ಆಕ್ರಮಣ ಮಾಡಿ 1,000 ವರ್ಷಗಳನ್ನು ಪೂರೈಸಿದೆ ಎಂಬುದನ್ನು ಉಲ್ಲೇಖಿಸಿದೆ ಎಂದು ತಿಳಿಸಲಾಗಿದೆ.
ಶತಮಾನಗಳಿಂದ ಹಲವು ದಾಳಿಗಳ ಬಳಿಕ ಸೋಮನಾಥ ದೇಗುಲವೂ ಇಂದು ಕೂಡ ಸ್ಥಿತಿಸ್ಥಾಪಕತ್ವದ ಪ್ರಬಲ ಸಂಕೇತ ಮತ್ತು ನಂಬಿಕೆ ಮತ್ತು ದೇಶದ ಹೆಮ್ಮೆಯಾಗಿ ಒಗ್ಗಟ್ಟಿನ ಪ್ರಯತ್ನದ ಪುನರ್ಸ್ಥಾಪನೆಯಾಗಿ ಉಳಿದಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಸ್ವಾತಂತ್ರ್ಯದ ನಂತರ, ದೇವಾಲಯದ ಪುನಃಸ್ಥಾಪನೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಯತ್ನಗಳನ್ನು ಕೈಗೆತ್ತಿಕೊಂಡರು. 1951ರಲ್ಲಿ ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಪುನಃಸ್ಥಾಪಿಸಿದ ದೇಗುಲ ಭಕ್ತರಿಗೆ ಮುಕ್ತವಾಯಿತು.
75 ವರ್ಷಗಳ ಐತಿಹಾಸಿಕ ಪುನರ್ಸ್ಥಾಪನೆ ಕೂಡ ಸೋಮನಾಥ ಸ್ವಾಭಿಮಾನ ಪರ್ವದ ವಿಶೇಷ ಮಹತ್ವವನ್ನು ಹೊಂದಿದೆ. ಈ ಸಂಭ್ರಮಾಚರಣೆಗೆ ದೇಶಾದ್ಯಂತ ನೂರಾರು ಸಾಧು ಸಂತರು ಸಾಕ್ಷಿಯಾಗಲಿದ್ದು, ದೇಗುಲದ ಆವರಣದಲ್ಲಿ 72ಗಂಟೆಗಳ ಓಂಕಾರ ಮಂತ್ರ ಪಠಣೆ ನಡೆಯಲಿದೆ.
ಜನವರಿ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶೌರ್ಯ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ಮೆರವಣಿಗೆಯಾಗಿದೆ. ಶೌರ್ಯ ಯಾತ್ರೆಯು 108 ಕುದುರೆಗಳ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿದ್ದು, ಇದು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುತ್ತದೆ.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಗುಲದಲ್ಲಿ ಪ್ರಾರ್ಥನೆ ಮತ್ತು ಸೋಮನಾಥ ಸ್ವಾಭಿಮಾನ ಪರ್ವದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇವುಗಳನ್ನೂ ಓದಿ:
ಸೋಮನಾಥ ದೇಗುಲಕ್ಕೆ ಹಾರ್ದಿಕ್ ಪಾಂಡ್ಯ ಭೇಟಿ; ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ
ಸಾವಿರ ವರ್ಷಗಳ ಹಿಂದಿನ ದಾಳಿಗಳ ಬಳಿಕವೂ ನಂಬಿಕೆ, ಸ್ವಾಭಿಮಾನದ ನೆಲೆ ಸೋಮನಾಥ: ಪ್ರಧಾನಿ ಮೋದಿ

