ETV Bharat / bharat

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಅಮಿತ್ ಸಿಂಗ್ ರಾಣಾ ರಸ್ತೆ ಅಪಘಾತದಲ್ಲಿ ನಿಧನ

ಅಮಿತ್ ರಾಣಾ ಭಾರತೀಯ ನೌಕಾಪಡೆಯ ಅತಿ ಪ್ರಮುಖ ಮೆರೈನ್ ಕಮಾಂಡೋ ಪಡೆ, ಮಾರ್ಕೋಸ್‌ನಲ್ಲಿ ಸೇವೆ ಸಲ್ಲಿಸಿದ್ದರು.

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಅಮಿತ್ ಸಿಂಗ್ ರಾಣಾ ರಸ್ತೆ ಅಪಘಾತದಲ್ಲಿ ನಿಧನ
ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಅಮಿತ್ ಸಿಂಗ್ ರಾಣಾ ರಸ್ತೆ ಅಪಘಾತದಲ್ಲಿ ನಿಧನ (File)
author img

By ETV Bharat Karnataka Team

Published : June 3, 2026 at 9:22 AM IST

2 Min Read
Choose ETV Bharat

ಕಾಂಗ್ರಾ, ಹಿಮಾಚಲ ಪ್ರದೇಶ: ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಸ್ (MARCOS) ಪ್ರಮುಖ ಸದಸ್ಯ ಮತ್ತು ಶೌರ್ಯ ಚಕ್ರ ಪುರಸ್ಕೃತ ಅಮಿತ್ ಸಿಂಗ್ ರಾಣಾ (32) ಹಿಮಾಚಲ ಪ್ರದೇಶದ ಲಹ್ರು ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಸೋಮವಾರ ರಾತ್ರಿ ರಾಣಾ ಕಾರು ನಿಯಂತ್ರಣ ತಪ್ಪಿ ಸುಮಾರು 500 ಅಡಿ ಆಳದ ಕಮರಿಗೆ ಉರುಳಿದೆ. ಸೋಮವಾರ ಬೆಳಗ್ಗೆ ರಾಣಾ ರಜೆಯ ಮೇಲೆ ಮನೆಗೆ ಬಂದಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಸ್ನೇಹಿತನನ್ನು ಭೇಟಿಯಾಗಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಕಾರು ಲಹ್ರು ಬಳಿಯ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಉರುಳಿ ಬಿದ್ದಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ರಾಷ್ಟ್ರದ ರಕ್ಷಣೆಯಲ್ಲಿ ಅದಮ್ಯ ಧೈರ್ಯ ಮತ್ತು ಶೌರ್ಯ ಮೆರೆದಿದ್ದ ಧೈರ್ಯಶಾಲಿ ಯೋಧನ ನಿಧನವು ಇಡೀ ಪ್ರದೇಶದಾದ್ಯಂತ ಶೋಕದ ಅಲೆಯನ್ನು ಸೃಷ್ಟಿಸಿದೆ.

ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಅಮಿತ್ ಸಿಂಗ್ ರಾಣಾ ರಸ್ತೆ ಅಪಘಾತದಲ್ಲಿ ನಿಧನ
ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಅಮಿತ್ ಸಿಂಗ್ ರಾಣಾ ರಸ್ತೆ ಅಪಘಾತದಲ್ಲಿ ನಿಧನ (ETV Bharat/Special Arrangement)

ಒಂದು ಗಂಟೆ ತಡವಾದ ರಕ್ಷಣಾ ಕಾರ್ಯಾಚರಣೆ: ಅಪಘಾತದ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸ್​ ತಂಡ ಸ್ಥಳಕ್ಕೆ ಧಾವಿಸಿತು. ಕಮರಿಯ ಆಳ ತೀರಾ ಹೆಚ್ಚಾಗಿದ್ದರಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸಾಕಷ್ಟು ಸವಾಲುದಾಯಕವಾಗಿತ್ತು.

ಸುಮಾರು ಒಂದು ಗಂಟೆಯ ಕಠಿಣ ಪ್ರಯತ್ನದ ನಂತರ, ರಾಣಾ ಅವರನ್ನು ಗಂಭೀರ ಸ್ಥಿತಿಯಲ್ಲಿ ರಸ್ತೆಗೆ ಕರೆತರಲಾಯಿತು ಮತ್ತು ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅಪಘಾತ ಸಂಭವಿಸಿದ ಸ್ಥಳವನ್ನು ತಲುಪುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು.

ರಾಣಾ ಅವರ ತಂದೆ ತಾಯಿಗೆ ಇದ್ದ ಏಕೈಕ ಪುತ್ರರಾಗಿದ್ದಾರೆ. ಇವರಿಗೆ ಇಬ್ಬರು ಸಹೋದರಿಯರಿದ್ದಾರೆ. ಅವರ ತಾಯಿ ಪವನ್ ಕುಮಾರಿ, ತಂದೆ ನಾಯಬ್ ಸುಬೇದಾರ್ ಕೇವಲ್ ಸಿಂಗ್ ರಾಣಾ, ಪತ್ನಿ ಮೀನಾಕ್ಷಿ ರಾಣಾ ಮತ್ತು ಅವರ ನಾಲ್ಕು ವರ್ಷದ ಮಗ ಬದುಕುಳಿದಿದ್ದಾರೆ.

Shaurya Chakra Awardee Amit Singh Rana Dies In Himachal Road Accident
ಕಾರು ಲಹ್ರು ಬಳಿಯ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಉರುಳಿದೆ (ETV Bharat/Special Arrangement)

ಆಪರೇಷನ್ ರಕ್ಷಕದಲ್ಲಿ ಅದಮ್ಯ ಶೌರ್ಯ ಪ್ರದರ್ಶಿಸಿದ್ದ ರಾಣಾ: ಅಮಿತ್ ರಾಣಾ ಭಾರತೀಯ ನೌಕಾಪಡೆಯ ಪ್ರಮುಖ ಮೆರೈನ್ ಕಮಾಂಡೋ ಪಡೆ ಮಾರ್ಕೋಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಪರೇಷನ್ ರಕ್ಷಕ ಸಮಯದಲ್ಲಿ ಅವರು ಹಲವಾರು ನಿರ್ಣಾಯಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಕಠಿಣ ಪರಿಸ್ಥಿತಿಗಳ ನಡುವೆ ತಮ್ಮ ತಂಡದೊಂದಿಗೆ ಅಪಾರ ಧೈರ್ಯ ಪ್ರದರ್ಶಿಸಿದ ಅವರು ಎಂಟು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅವರ ಧೈರ್ಯ, ನಾಯಕತ್ವ ಸಾಮರ್ಥ್ಯ ಮತ್ತು ಕರ್ತವ್ಯದ ಮೇಲಿನ ಅಚಲ ನಿಷ್ಠೆ ಗುರುತಿಸಿ ಆಗಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು, 2021 ರಲ್ಲಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದರು.

ಅಪಘಾತದ ನಂತರ ಸ್ಥಳೀಯರು ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದುರಂತ ಸಂಭವಿಸಿದ ನಿರ್ದಿಷ್ಟ ಸ್ಥಳದಲ್ಲಿ ಅಪಘಾತದ ತಡೆಗೋಡೆಗಳು ಮತ್ತು ಸಾಕಷ್ಟು ಸುರಕ್ಷತಾ ಕ್ರಮಗಳು ಇರಲಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಹೆಚ್ಚಿಸುವಂತೆ ಸ್ಥಳೀಯ ನಿವಾಸಿಗಳು ಆಡಳಿತವನ್ನು ಒತ್ತಾಯಿಸಿದ್ದಾರೆ. ಮೃತ ಅಮಿತ್ ರಾಣಾ ಅವರ ಅಂತಿಮ ವಿಧಿಗಳನ್ನು ಮಂಗಳವಾರ ಮಧ್ಯಾಹ್ನ ಅವರ ಪೂರ್ವಜರ ಗ್ರಾಮದಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ.

ಇವುಗಳನ್ನೂ ಓದಿ:

ಎರಡು ಬಸ್‌ಗಳ ನಡುವೆ ಭೀಕರ ಅಪಘಾತ: ಒಂದು ಬಸ್ ಬೆಂಕಿಗಾಹುತಿ, ಐವರು ಪ್ರಯಾಣಿಕರು ಸಾವು

ತರಬೇತಿ ಮುಗಿಸಿದ ಖುಷಿಯಲ್ಲಿ ಸೇನಾ ಹೆಲಿಕಾಪ್ಟರ್​ ಮುಂದೆಯೇ ಪ್ರೇಯಸಿಗೆ ಪ್ರಪೋಸ್​ ಮಾಡಿದ ಪೈಲಟ್​!-ವಿಡಿಯೋ

CBSE OSM ಲೋಪ: ಸಂಸದೀಯ ಸಮಿತಿ ಮುಂದೆ ಖುದ್ದು ಹಾಜರಾಗಿ ದೂರಿದ 17 ವರ್ಷದ ವಿದ್ಯಾರ್ಥಿ