ETV Bharat / bharat

ಆನ್​ಲೈನ್​ ಆಟದ ಗೀಳು, ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬ: ತಂದೆ - ಮಗಳು ಸಾವು, ತಾಯಿ ಸ್ಥಿತಿ ಗಂಭೀರ

ಘಟನೆಯ ಸಮಯದಲ್ಲಿ 15 ವರ್ಷದ ಮಗ ಮನೆಯಲ್ಲಿ ಇರಲಿಲ್ಲ, ಹಾಗಾಗಿ ಅವನು ದುರಂತದಿಂದ ಪಾರಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat and IANS)
author img

By ETV Bharat Karnataka Team

Published : February 26, 2026 at 11:15 AM IST

3 Min Read
Choose ETV Bharat

ಶಹದೋಲ್ (ಮಧ್ಯಪ್ರದೇಶ): ಆನ್​ಲೈನ್​ ಗೇಮಿಂಗ್​ ವ್ಯಸನಕ್ಕೆ ಬಿದ್ದು, ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್​ ಜಿಲ್ಲೆಯಲ್ಲಿ ನಡೆದಿದೆ.

ಆನ್​ಲೈನ್​ ಗೇಮಿಂಗ್​ ಆಡಿ, ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಸಾಲದ ಹೊರೆಯಿಂದ ಬಳಲುತ್ತಿದ್ದ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ತಂದೆ, ತಾಯಿ, ಹಾಗೂ ಮಗಳು ಮೂವರು ವಿಷ ಸೇವಿಸಿದ್ದು, ತಂದೆ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಪತ್ನಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

ಆನ್‌ಲೈನ್ ಗೇಮಿಂಗ್​ಗಾಗಿ ಮಾಡಿದ ಸಾಲ ಈಗ ಒಂದು ಕುಟುಂಬವನ್ನೇ ದ್ವಂಸಗೊಳಿಸಿದೆ. ಶಾಹದೋಲ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪುರಾಣಿ ಬಸ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ಆನ್‌ಲೈನ್ ಗೇಮಿಂಗ್‌ನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಸಾಲದ ಹೊರೆಯಿಂದ ಬಳಲುತ್ತಿದ್ದ ತಂದೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ತಂಪು ಪಾನೀಯಕ್ಕೆ ವಿಷ ಬೆರೆಸಿ ಪತ್ನಿ ಮತ್ತು ಮಗಳಿಗೆ ನೀಡಿ, ನಂತರ ತಾವೂ ಅದನ್ನು ಕುಡಿದಿದ್ದಾರೆ ಎಂದು ವರದಿಯಾಗಿದೆ.

16 ವರ್ಷದ ಮಗಳು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಕುಟುಂಬದವರು ಆಕೆಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ತಂದೆ ಶಂಕರ್ ಲಾಲ್ ಗುಪ್ತಾ (40) ಕೂಡ ನಿಧನರಾಗಿದ್ದಾರೆ. ಅವರ ಪತ್ನಿ 34 ವರ್ಷದ ರಾಜಕುಮಾರಿ ಗುಪ್ತಾ ಪ್ರಸ್ತುತ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಬದುಕುಳಿದ ಮಗ: ಘಟನೆಯ ಸಮಯದಲ್ಲಿ 15 ವರ್ಷದ ಮಗ ಮನೆಯಲ್ಲಿ ಇರಲಿಲ್ಲ, ಅದಕ್ಕಾಗಿಯೇ ಅವನು ದುರಂತದಿಂದ ಪಾರಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಾಲಕ ಈಗ ತಂದೆ ಮತ್ತು ಸಹೋದರಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾನೆ. ತಾಯಿಯ ಸ್ಥಿತಿಯೂ ಗಂಭೀರವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಪ್ರಸ್ತುತ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ.

ಏನಿದು ಘಟನೆ?: ಶಂಕರ್ ಲಾಲ್ ಗುಪ್ತಾ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು. ಅವುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಆನ್​ಲೈನ್​ ಗೇಮಿಂಗ್​ಗಗಿ, ಅವರು ಸುಮಾರು 4 ಲಕ್ಷ ರೂ. ಕಳೆದುಕೊಂಡಿದ್ದರು. ಅದಕ್ಕಾಗಿ ಸಾಲವನ್ನು ಕೂಡ ಮಾಡುತ್ತಿದ್ದರು. ಹೆಚ್ಚುತ್ತಿರುವ ಸಾಲಗಳಿಂದಾಗಿ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಅವರು ಈ ಭಯಾನಕ ಹೆಜ್ಜೆ ಇಟ್ಟಿದ್ದಾರೆ.

ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ದಿವಾನ್ ಮಾತನಾಡಿ, "ನಿನ್ನೆ ರಾತ್ರಿ, ಜಿಲ್ಲಾ ಆಸ್ಪತ್ರೆಯ ಹೊರಠಾಣೆಯಲ್ಲಿ ಘಟನೆ ಬಗ್ಗೆ ವರದಿ ಆಗಿದೆ. ಬೆಳಗ್ಗೆ, ವಿಷ ಸೇವಿಸಿದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು 17 ವರ್ಷದ ಬಾಲಕಿ ಸೇರಿದ್ದಾರೆ. ವಿಷ ಸೇವಿಸಿ ಮೂವರ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ತಕ್ಷಣ ಚಿಕಿತ್ಸೆ ನೀಡಲಾಯಿತು. ಹುಡುಗಿಯ ಸ್ಥಿತಿ ಹದಗೆಟ್ಟಿದ್ದು, ಅವಳನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ತಿಳಿಸಲಾಯಿತು. ಅವಳು ಅಲ್ಲಿಯೇ ಸಾವನ್ನಪ್ಪಿದಳು. ಸ್ವಲ್ಪ ಸಮಯದ ನಂತರ ತಂದೆ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ." ಎಂದು ತಿಳಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಶಂಕರ್ ಲಾಲ್ ಗುಪ್ತಾ ಎಂಬ ವ್ಯಕ್ತಿ ಈ ಹಿಂದೆ ಆಟೋ ಪಾರ್ಟ್ಸ್ ಅಂಗಡಿಯನ್ನು ಹೊಂದಿದ್ದರು. ಆದರೆ ಕೆಲವು ಸಮಯದಿಂದ ಅವರು ಫುಲ್ಕಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಅವರ ಪತ್ನಿ ನೀಡಿದ ಪ್ರಾಥಮಿಕ ಹೇಳಿಕೆಯಲ್ಲಿ, 'ಅವರು ಮನೆಗೆ 2 ಲೀಟರ್ ತಂಪು ಪಾನೀಯದ ಬಾಟಲಿಯನ್ನು ತಂದು ಸ್ವತಃ ಕುಡಿದು ತಮ್ಮ ಪತ್ನಿ ಮತ್ತು ಮಗಳಿಗೆ ಕೊಟ್ಟಿದ್ದರು. ಆ ಸಮಯದಲ್ಲಿ ಅವರ ಮಗ ಮನೆಯಲ್ಲಿ ಇರಲಿಲ್ಲ. ತಂಪು ಪಾನೀಯ ಕುಡಿದ ನಂತರ, ಮೂವರೂ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು. ಮತ್ತು ಅವರ ಆರೋಗ್ಯ ಹದಗೆಟ್ಟಿತು. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಆತ್ಮಹತ್ಯೆ

ಆತ್ಮಹತ್ಯೆ ಪರಿಹಾರವಲ್ಲ; ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಯಾರಾದರೂ ನಿಮ್ಮ ನೋವನ್ನು ಕೇಳಲು ಇರುತ್ತಾರೆ. ಅದಕ್ಕಾಗಿ ಸ್ನೇಹ ಫೌಂಡೇಶನ್‌ಗೆ ಕರೆ ಮಾಡಿ - 04424640050 (24x7 ಲಭ್ಯವಿದೆ) ಅಥವಾ iCall, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 9152987821, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿರುತ್ತದೆ.