ಅಗ್ನಿ ಅವಘಡ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಜನರ ಸಾವು; ರಾಜಕೀಯ ಮುಖಂಡರಿಂದ ಸಂತಾಪ
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡವು ಮಕರ ಸಂಕ್ರಾಂತಿಯ ಸಂಭ್ರಮವನ್ನು ಶೋಕವಾಗಿ ಮಾರ್ಪಡಿಸಿದೆ.

Published : January 15, 2026 at 2:17 PM IST
ಸಿರ್ಮೌರ್ (ಹಿಮಾಚಲ ಪ್ರದೇಶ): ಜಿಲ್ಲೆಯ ಸಂಗ್ರಾ ಉಪವಿಭಾಗದ ನೌಹ್ರಧರ್‌ನ ತಲಂಗನಾ ಗ್ರಾಮದಲ್ಲಿನ ಮನೆಯೊಂದರಲ್ಲಿ ಬುಧವಾರ ತಡರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನರು ಸುಟ್ಟು ಕರಕಲಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಿರ್ಮೌರ್ ಜಿಲ್ಲಾಧಿಕಾರಿ ಪ್ರಿಯಾಂಕಾ ವರ್ಮಾ ಅವರು ಬೆಂಕಿ ಅವಘಡವನ್ನು ದೃಢಪಡಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅವರು ಕೂಡ ನಹಾನ್ನಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಏಳು ಜನರು ತಡರಾತ್ರಿ ಮನೆಯಲ್ಲಿ ಮಲಗಿದ್ದರು. ಆಗ ಅವಘಡ ಸಂಭವಿಸಿದೆ. ಶವಗಳು ತೀವ್ರವಾಗಿ ಸುಟ್ಟಿದ್ದು, ಅವರನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಹೆಸರನ್ನು ಬಿಡುಗಡೆಗೊಳಿಸಿದ್ದಾರೆ.
ನರೇಶ್ (S/O ದುರ್ಗಾ ಸಿಂಗ್) ಟಪ್ರೋಲ್ ತೆಹಸಿಲ್, ರಾಜ್‌ಗಡ್
ಟ್ರಿಪ್ಟಾ (S/O ನರೇಶ್) ಟಪ್ರೋಲ್ ತೆಹಸಿಲ್, ರಾಜ್‌ಗಢ್
ಖುಮ್ರಾ ತಹಸಿಲ್‌ನ ಕವಿತಾ (S/O ಲೋಕೇಂದ್ರ), ಚೌಪಾಲ್
ಖುಮ್ರಾ ತಹಸಿಲ್‌ನ ಸಾರಿಕಾ (S/O ಲೋಕೇಂದ್ರ), ಚೌಪಾಲ್
ಕೃತಿಕಾ (S/O ಲೋಕೇಂದ್ರ) ಖುಮ್ರಾ ತಹಸಿಲ್, ಚೌಪಾಲ್
ಕೃತಿಕ್ (S/O ಲೋಕೇಂದ್ರ) ಖುಮ್ರಾ ತಹಸಿಲ್, ಚೌಪಾಲ್.
ಸಿರ್ಮೌರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ಸಿರ್ಮೌರ್ ಜಿಲ್ಲೆಯ ಶ್ರೀ ರೇಣುಕಾಜಿ ವಿಧಾನಸಭಾ ಕ್ಷೇತ್ರದ ನೌಹ್ರಧರ್ ಪ್ರದೇಶದ ಗ್ರಾಮ ಪಂಚಾಯತ್ ಘದುರಿಯ ತಲಂಗನ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡವು ಅತ್ಯಂತ ಹೃದಯವಿದ್ರಾವಕವಾಗಿದೆ. ಈ ದುರಂತ ಅಪಘಾತದಲ್ಲಿ ಆರು ಜನರ ಅಕಾಲಿಕ ಮರಣದ ಸುದ್ದಿ ಅತ್ಯಂತ ನೋವು ತಂದಿದೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳನ್ನು ಸೂಚಿಸಲು ಬಯಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ನಾನು ಆಡಳಿತ ಮತ್ತು ಸ್ಥಳೀಯ ಜನರನ್ನು ಕೋರುತ್ತೇನೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ" ಎಂದು ಜೈರಾಮ್ ಠಾಕೂರ್ ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್‌ನಲ್ಲಿ ಬರೆದೆಕೊಂಡಿದ್ದಾರೆ.
ಸಿರ್ಮೌರ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ 6 ಜನರು ಸಾವು : ಏತನ್ಮಧ್ಯೆ, ರೇಣುಕಾ ಜಿ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್ ಅವರು ಅವಘಡದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ, "ನಮ್ಮ ರೇಣುಕಾ ಜಿ ವಿಧಾನಸಭಾ ಕ್ಷೇತ್ರದ ಘಂಡೂರಿ ಗ್ರಾಮ ಪಂಚಾಯತ್‌ನ ತಲಂಗನ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಈ ದುರಂತ ಘಟನೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ದೇವರು ಶಕ್ತಿ ನೀಡಲಿ ಮತ್ತು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ. ಬೆಂಕಿಯ ಬಗ್ಗೆ ತಕ್ಷಣ ತನಿಖೆ ನಡೆಸಲು ಮತ್ತು ಪೀಡಿತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಆಡಳಿತಾತ್ಮಕ ಸಹಾಯವನ್ನು ಒದಗಿಸುವಂತೆ ನಾನು ಆಡಳಿತಕ್ಕೆ ಸೂಚಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಡಾ. ರಾಜೀವ್ ಬಿಂದಾಲ್ ಅವರು ರೇಣುಕಾ ಜಿ ಅವರ ಘಂಡೂರಿ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
"ಸಿರ್ಮೌರ್ ಜಿಲ್ಲೆಯ ಶ್ರೀ ರೇಣುಕಾ ಜಿ ಪ್ರದೇಶದ ಘಂಡೂರಿ ಗ್ರಾಮ ಪಂಚಾಯತ್‌ನ ತಲಂಗನಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಆರು ಜೀವಗಳು ಬಲಿಯಾಗಿರುವ ಸುದ್ದಿ ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕವಾಗಿದೆ. ಈ ದುರಂತ ಘಟನೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ನಾವು ನಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ನಾವು ಸರ್ಕಾರ ಮತ್ತು ಆಡಳಿತವನ್ನು ಒತ್ತಾಯಿಸುತ್ತೇವೆ. ಓಂ ಶಾಂತಿ..." ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ONGC ತೈಲ ಬಾವಿಯಲ್ಲಿ ಬೆಂಕಿ: ಎರಡನೇ ದಿನವೂ ಭಾರೀ ಸ್ಫೋಟ, ಬೆಂಕಿ ನಂದಿಸಲು ದೆಹಲಿ - ಮುಂಬೈನಿಂದ ತಂಡಗಳ ರವಾನೆ

