ಆಂಧ್ರದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 21 ಜನ ಸಾವು, ಹಲವರಿಗೆ ಗಾಯ
ಆಂಧ್ರಪ್ರದೇಶದ ಗ್ರಾಮವೊಂದರ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ ಪರಿಣಾಮ 21 ಜನ ಸಾವನ್ನಪ್ಪಿದ್ದಾರೆ.

Published : February 28, 2026 at 3:41 PM IST
ಕಾಕಿನಾಡ (ಆಂಧ್ರಪ್ರದೇಶ): ಇಲ್ಲಿನ ಕಾಕಿನಾಡ ಜಿಲ್ಲೆಯ ವೆಟ್ಲಪಲೆಂ ಎಂಬ ಗ್ರಾಮದಲ್ಲಿನ ಸೂರ್ಯಶ್ರೀ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 21 ಜನ ಸಾವನ್ನಪ್ಪಿರುವ ಭಯಾನಕ ಘಟನೆ ಇಂದು ಮಧ್ಯಾಹ್ನ 2 ಗಂಟೆಗೆ (ಶನಿವಾರ) ನಡೆದಿದೆ. ಘಟನೆಯಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿದ್ದು, ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದುರಂತ ಸಮಯದಲ್ಲಿ ಒಟ್ಟು 34 ಕಾರ್ಮಿಕರು ಕಾರ್ಖಾನೆಯಲ್ಲಿದ್ದರು.
ಪೊಲೀಸರು ಇಲ್ಲಿಯವರೆಗೆ 11 ಮಂದಿ ಮೃತರನ್ನು ಗುರುತಿಸಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಕಾರ್ಖಾನೆಯ ಮಹಿಳಾ ಕಾರ್ಮಿಕರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಖಾನೆಯು ಅಡಪ ನಾಣಿ ಎಂಬುವರ ಕುಟುಂಬಕ್ಕೆ ಸೇರಿದ್ದು, ಗ್ರಾಮದ ಒಂದು ಹೊಲದ 6 ಶೆಡ್‌ಗಳಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಸ್ಥಳೀಯರ ಪ್ರಕಾರ, ಸ್ಫೋಟದ ಶಬ್ದವು ಸ್ಥಳದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಕೇಳಿಸಿದ್ದು, ಸ್ಫೋಟದ ಭೀಕರತೆಗೆ ನೆರೆಯ ಹಳ್ಳಿಯ ಖಾಸಗಿ ಶಾಲೆಯ ಛಾವಣಿಯಲ್ಲಿ ಬಿರುಕುಗಳು ಉಂಟಾಗಿವೆ. ಸ್ಫೋಟಕ್ಕೆ ಛಿದ್ರ ಛಿದ್ರಗೊಂಡ ಕಾರ್ಮಿಕರ ಮೃತದೇಹಗಳು ಜಮೀನುಗಳಿಗೆ ಎಸೆಯಲ್ಪಟ್ಟಿವೆ. ಕಾರ್ಖಾನೆಯು ಹೊಲಗಳ ಮಧ್ಯದಲ್ಲಿ ಇರುವುದರಿಂದ ತುರ್ತು ವಾಹನಗಳು ಸ್ಥಳಕ್ಕೆ ತಲುಪಲು ಯಾವುದೇ ರಸ್ತೆ ಸಂಪರ್ಕ ಇಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಅಡೆಚಣೆ ಉಂಟಾಗಿದೆ.
ತಕ್ಷಣ ಪರಿಹಾರಕ್ಕೆ ಮುಖ್ಯಮಂತ್ರಿ ಘೋಷಣೆ: ಸಿಎಂ ಚಂದ್ರಬಾಬು ನಾಯ್ಡು ಅವರು ಘಟನಾ ಸ್ಥಳಕ್ಕೆ ತಲುಪಿದ್ದು, ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯನಗರ ಪ್ರವಾಸದಲ್ಲಿದ್ದಾಗ ಘಟನೆಯ ಬಗ್ಗೆ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವರು ಗೃಹ ಸಚಿವ ವಂಗಲಪುಡಿ ಅನಿತಾ ಅವರನ್ನು ಘಟನೆಯ ಸ್ಥಳಕ್ಕೆ ಹೋಗಲು ಆದೇಶಿಸುವುದರ ಜೊತೆಗೆ ತಕ್ಷಣ ಪರಿಹಾರ ಕ್ರಮಕ್ಕೆ ಆದೇಶಿಸಿದ್ದಾರೆ. "ಈ ಅಪಘಾತದಲ್ಲಿ ಹಲವಾರು ಜೀವಗಳು ಬಲಿಯಾಗಿರುವುದು ಹೃದಯವಿದ್ರಾವಕವಾಗಿದೆ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಂತ್ರಸ್ತರಿಗೆ ತಕ್ಷಣ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದೇನೆ. ಪರಿಹಾರ ಕ್ರಮಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ದುಃಖಿತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ" ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
కాకినాడ జిల్లా వేట్లపాలెంలోని బాణాసంచా తయారీ కేంద్రంలో జరిగిన పేలుడు ఘటన తీవ్ర దిగ్భాంతిని కలిగించింది. ఈ ప్రమాదంలో పలువురు ప్రాణాలు కోల్పోవడం విచారకరం. ఘటనపై ఉన్నతాధికారులతో మాట్లాడాను. బాధితులకు అవసరమైన తక్షణ సాయం అందించాలని ఆదేశించాను. సహాయక చర్యలను పర్యవేక్షిస్తున్నాము. బాధిత…
— N Chandrababu Naidu (@ncbn) February 28, 2026
ಮರುಗಿದ ಡಿಸಿಎಂ ಪವನ್ ಕಲ್ಯಾಣ್: ಪಟಾಕಿ ಕಾರ್ಖಾನೆಯ ದುರಂತಕ್ಕೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ಕಂದುಲ ದುರ್ಗೇಶ್ ಮತ್ತು ಸಚಿವ ಲೋಕೇಶ್ ಅವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದು, ಸರ್ಕಾರ ಮೃತರ, ಗಾಯಾಳುಗಳ ಕುಟುಂಬಗಳ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಘಟನಾ ಸ್ಥಳದಲ್ಲಿದ್ದು, ಪರಿಸ್ಥಿತಿ ಮತ್ತು ಪರಿಹಾರ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ಕಾಕಿನಾಡಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಎಂದು ಪ್ರಿಯಕರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಹಿಳೆ

