ETV Bharat / bharat

ಇಂದು ಪ.ಬಂಗಾಳ, ತಮಿಳುನಾಡು ಚುನಾವಣೆ: ಎರಡೂ ರಾಜ್ಯಗಳಲ್ಲಿ ₹1072 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆದ ಚು.ಆಯೋಗ

ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆಗೆ ಇಂದು ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಚುನಾವಣಾ ಆಯೋಗ ₹1072.13 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.

ASSEMBLY ELECTION 2026
ಕೇಂದ್ರ ಚುನಾವಣಾ ಆಯೋಗ (ETV Bharat)
author img

By ETV Bharat Karnataka Team

Published : April 22, 2026 at 8:10 PM IST

|

Updated : April 23, 2026 at 6:44 AM IST

2 Min Read
Choose ETV Bharat

ನವದೆಹಲಿ: ಇಂದು (ಎಪ್ರಿಲ್ 23) ಚುನಾವಣೆ ನಡೆಯಲಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 1,072.13 ಕೋಟಿ ರೂಪಾಯಿ ಮೌಲ್ಯದ ನಗದು, ಅಮೂಲ್ಯ ಲೋಹಗಳು, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಪಶ್ಚಿಮ ಬಂಗಾಳದಲ್ಲಿ 27.48 ಕೋಟಿ ನಗದು, 102.45 ಕೋಟಿ ಮೌಲ್ಯದ ಮದ್ಯ, 108.11 ಕೋಟಿಯ ಮಾದಕ ವಸ್ತುಗಳು, 55.88 ಕೋಟಿಯ ಅಮೂಲ್ಯ ಲೋಹಗಳು, 178.83 ಕೋಟಿ ಮೌಲ್ಯದ ಉಚಿತವಾಗಿ ಹಂಚಲು ಸಾಗಿಸುತ್ತಿದ್ದ ಇತರೆ ವಸ್ತುಗಳೂ ಸೇರಿದಂತೆ ಒಟ್ಟು 472.89 ಕೋಟಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನಲ್ಲಿ 100.19 ಕೋಟಿ ನಗದು, 3.85 ಕೋಟಿ ಮೌಲ್ಯದ ಮದ್ಯ, 76.72 ಕೋಟಿಯ ಮಾದಕ ವಸ್ತು, 159.31 ಕೋಟಿಯ ಅಮೂಲ್ಯ ಲೋಹಗಳು, 259.14 ಕೋಟಿ ಮೌಲ್ಯದ ಉಚಿತವಾಗಿ ಹಂಚಲು ಸಾಗಿಸುತ್ತಿದ್ದ ಇತರೆ ವಸ್ತುಗಳೂ ಸೇರಿದಂತೆ ಒಟ್ಟು 599.24 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

ತಮಿಳುನಾಡಿದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಮಾತನಾಡಿ, ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 163 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶವು ವಿವಿಧ ವೇದಿಕೆಗಳಿಂದ 2,180 URLಗಳನ್ನು ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯ ವಿವರ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 5.73 ಕೋಟಿ ಮತದಾರರು ಇದ್ದಾರೆ. ಇದರಲ್ಲಿ 2.93 ಕೋಟಿ ಮಹಿಳಾ ಮತದಾರರು, 2.83 ಕೋಟಿ ಪುರುಷ ಮತದಾರರು ಮತ್ತು 7,728 ತೃತೀಯ ಲಿಂಗಿ ಮತದಾರರು ಇದ್ದಾರೆ. ಇದೇ ಮೊದಲ ಬಾರಿಗೆ 14,59,039 ಜನರು ಮತ ಚಲಾಯಿಸಲಿದ್ದಾರೆ.

ರಾಜ್ಯದ 33,133 ಸ್ಥಳಗಳಲ್ಲಿ ಒಟ್ಟು 75,064 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1,06,418 ಬ್ಯಾಲೆಟ್ ಯೂನಿಟ್‌ಗಳು ಮತ್ತು 75,064 ವಿವಿಪ್ಯಾಟ್​ ಯಂತ್ರಗಳನ್ನು ನೀಡಲಾಗಿದೆ. ಸುಗಮ ಮತ್ತು ಸಮಗ್ರ ಮತದಾನಕ್ಕಾಗಿ ಆಯೋಗವು ಎಲ್ಲ ವ್ಯವಸ್ಥೆ ಮಾಡಿದೆ. 249 ಮಾದರಿ ಮತದಾನ ಕೇಂದ್ರಗಳು, 325 ಕೇಂದ್ರಗಳು ಮಹಿಳೆಯರಿಂದ ನಿರ್ವಹಿಸಲಾಗುತ್ತದೆ. 71 ಕೇಂದ್ರಗಳನ್ನು ವಿಕಲಚೇತನರಿಗಾಗಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಬಿಗಿ ಭದ್ರತೆ: ಭದ್ರತೆ ಮತ್ತು ಸುವ್ಯವಸ್ಥೆ ಕಾಪಾಡಲು 83,875 ಸ್ಥಳೀಯ ಪೊಲೀಸರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 300 ಪಡೆಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳ ಒಳಗೆ ಮೊಬೈಲ್​ ಫೋನ್​ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಮತಗಟ್ಟೆ ಕೇಂದ್ರಗಳ ಹೊರಗೆ ಮೊಬೈಲ್ ಸಂಗ್ರಹಣಾ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಎಂದು ತಿಳಿಸಿದರು.

ಇವುಗಳನ್ನೂ ಓದಿ:

Last Updated : April 23, 2026 at 6:44 AM IST