ಕಾಶ್ಮೀರದ ಹಳ್ಳಿಯೊಂದರ ಮನೆಗೆ ಬಂದು ಉಂಡೂ ಹೋದ ಕೊಂಡೂ ಹೋದ ಉಗ್ರರು
ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಮತ್ತೆ ಉಗ್ರರು ಕಾಣಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Published : December 21, 2025 at 1:29 PM IST
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯೊಳಗೆ ಉಗ್ರರು ನುಸುಳಿದ್ದಾರೆ. ಇಲ್ಲಿನ ಹಳ್ಳಿಯೊಂದರ ಮನೆಯಿಂದ ಆಹಾರ ತೆಗೆದುಕೊಂಡು ಹತ್ತಿರದ ಅರಣ್ಯ ಪ್ರದೇಶದೊಳಗೆ ನುಗ್ಗಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾರಂಭಿಸಿವೆ.
ಡಿಸೆಂಬರ್ 15ರಂದು ಈ ಹಳ್ಳಿಯಿಂದ 5 ಕಿ.ಮೀ ದೂರದ ಮಜಲ್ಟಾ ಪ್ರದೇಶದ ಚೋರ್ ವೋಟು ಮತ್ತು ಅದರ ಪಕ್ಕದ ಅರಣ್ಯ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು.
ಇದೀಗ, ಇದೇ ಪ್ರದೇಶದಲ್ಲಿ ಮತ್ತೆ ಉಗ್ರರು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಚೋರ್ ಮೋಟು ಗ್ರಾಮದಲ್ಲಿರುವ ಮಂಗ್ತು ರಾಮ್ ಅವರ ಮನೆಗೆ ಶನಿವಾರ ಸಂಜೆ 6.30ರ ಸುಮಾರಿಗೆ ಭೇಟಿ ನೀಡಿದ ಇಬ್ಬರು ಉಗ್ರರು ಆಹಾರ ಸೇವಿಸಿ, ಕೊಂಡೊಯ್ದಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿದೆ. ತಕ್ಷಣವೇ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ಸಜ್ಜುಗೊಳಿಸಲಾಯಿತು. ಆದರೆ, ಭಯೋತ್ಪಾದಕರು ಪತ್ತೆಯಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶವನ್ನು ಸುತ್ತುವರೆದಿದ್ದು, ಭಾನುವಾರ ಬೆಳಗಿನ ಜಾವದಿಂದಲೇ ವಿವಿಧ ಕಡೆಗಳಿಂದ ಏಕಕಾಲದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓರ್ವ ಪೊಲೀಸ್ ಸಾವು: ಇದಕ್ಕೂ ಮೊದಲು ಡಿಸೆಂಬರ್ 15ರಂದು ಮಜಲ್ಟಾ ಪ್ರದೇಶದ ಸೋನ್ ಗ್ರಾಮದಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ಉಗ್ರರು ಈ ಪ್ರದೇಶದಲ್ಲಿ ಸುಳಿದಾಡುತ್ತಿದ್ದಾರೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಬಳಿಕ ಉಗ್ರರು ದಟ್ಟವಾದ ಕಾಡು ಮತ್ತು ಕತ್ತಲೆಯ ಲಾಭ ಪಡೆದು ತಪ್ಪಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದಿನ ಘಟನೆ: ಕಳೆದ ತಿಂಗಳು ಇಲ್ಲಿನ ಕುಪ್ವಾರದ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಕುಪ್ವಾರಾದ ಕೇರನ್ ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಈ ಭಾಗದಲ್ಲಿ ಇನ್ನಷ್ಟು ಉಗ್ರರು ಇದ್ದಾರೆಯೇ ಎಂಬುದನ್ನು ತಿಳಿಯಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಗಡಿಯಲ್ಲಿ ಭದ್ರತೆಯ ಜವಾಬ್ದಾರಿ ಹೊಂದಿರುವ ಸೇನೆಯ ಕಾರ್ಯತಂತ್ರ ಗುಂಪಾದ ಚಿನಾರ್ ಕಾರ್ಪ್‌ನ ವಕ್ತಾರರು ತಿಳಿಸಿದ್ದರು.
ಇವುಗಳನ್ನೂ ಓದಿ:

