ಕೇರಳ ಸಿಎಂ ಸತೀಶನ್ ವಿರುದ್ಧ ಪೋಸ್ಟ್: ನಿವೃತ್ತಿಗೆ ಎರಡು ದಿನ ಮುನ್ನ ಶಿಕ್ಷಕನಿಗೆ ಅಮಾನತು ಶಿಕ್ಷೆ
ಕೇರಳದಲ್ಲಿ ದಶಕದ ಬಳಿಕ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಕೆಲವೇ ದಿನಗಳಲ್ಲಿ ಶಿಕ್ಷಕರೊಬ್ಬರ ಅಮಾನತಿನ ವಿಷಯವಾಗಿ ಟೀಕೆಗೆ ಗುರಿಯಾಗಿದೆ.

Published : May 30, 2026 at 2:02 PM IST
ತಿರುವನಂತಪುರಂ (ಕೇರಳ): ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ವಿರುದ್ಧ ಫೇಸ್ಬುಕ್ನಲ್ಲಿ ಅಪಮಾನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರನ್ನು ಅಮಾನತು ಮಾಡಲಾಗಿದೆ. ಅದೂ ಆ ಶಿಕ್ಷಕ ನಿವೃತ್ತಿಯಾಗಲು ಎರಡೇ ದಿನ ಇದ್ದಾಗ ಈ ಕ್ರಮ ಜರುಗಿಸಿದ್ದು, ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ ಈ ಕ್ರಮವು ರಾಜಕೀಯ ದ್ವೇಷ ಮತ್ತು ಅಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ವಿರೋಧ ಪಕ್ಷಗಳು, ಶಿಕ್ಷಕರ ಸಂಘಟನೆಗಳು, ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಸರ್ಕಾರಿ ಶಾಲೆಯ ಪ್ರಾಂಶುಪಾಲ ಜಾವದ್ ಎಸ್. ಎಂಬುವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಶುಕ್ರವಾರ (ಮೇ 29) ಅಮಾನತುಗೊಳಿಸಿದೆ. ಈ ಶಿಕ್ಷಕ ಮೇ 31 ರಂದು ನಿವೃತ್ತಿ ಹೊಂದಬೇಕಾಗಿತ್ತು. ಎರಡು ದಿನ ಮುನ್ನವಷ್ಟೇ ಯುಡಿಎಫ್ ಸರ್ಕಾರ ಕ್ರಮ ಜರುಗಿಸಿದ್ದರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ರಾಜ್ಯಾದ್ಯಂತ ರಾಜಕೀಯ ಕಿಡಿ ಹೊತ್ತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ #StandWithJavad ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ಶಿಕ್ಷಕನ ಪೋಸ್ಟ್ನಲ್ಲಿ ಏನಿತ್ತು? ರಾಜ್ಯದ ಖಜಾನೆಗೆ ಸಂಬಂಧಿಸಿದಂತೆ ಸಿಎಂ ಸತೀಶನ್ ಅವರು ಮಾಡಿದ್ದ ಸರಣಿ ಕಾಮೆಂಟ್‌ಗಳನ್ನು ಅಣಕಿಸುವ ಬೇರೊಬ್ಬರು ಮಾಡಿದ ಪೋಸ್ಟ್ ಅನ್ನು ಶಿಕ್ಷಕ ಜಾವದ್ ಅವರು ಮರುಪೋಸ್ಟ್ ಮಾಡಿದ್ದರು. ಅದರಲ್ಲಿ ಸತೀಶನ್ ಅವರು ಚಿನ್ನ, ಹಣದ ಪೆಟ್ಟಿಗೆಯ ಮೇಲೆ ಮಲಗಿದ ಮಾದರಿಯಲ್ಲಿ ಚಿತ್ರಿಸಲಾಗಿದೆ.
ಇದರ ವಿರುದ್ಧ ಯೂತ್ ಕಾಂಗ್ರೆಸ್‌ನ ಅಖಿಲ್ ಎ.ಪಿ ಎಂಬುವರು ದೂರು ನೀಡಿದ್ದರು. ಸೈಬರ್ ಕ್ರೈಮ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 336(4) ಮತ್ತು 356(1) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಶಿಕ್ಷಣ ಇಲಾಖೆಯಿಂದ ಅಮಾನತು: ಇತ್ತ, ಪ್ರಕರಣ ದಾಖಲಾದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡವಳಿಕೆ ನಿಯಮ ಉಲ್ಲಂಘನೆ ಆರೋಪದ ಮೇಲೆ ಶಿಕ್ಷಕ ಜಾವದ್ ಅವರನ್ನು ಅಮಾನುಗೊಳಿಸಿ ಆದೇಶಿಸಿದೆ. ಮುಖ್ಯಮಂತ್ರಿ ವಿರುದ್ಧ ಮಾನಹಾನಿಕರ ವಿಷಯವನ್ನು ಹಂಚಿಕೊಂಡಿದ್ದಾರೆ. ಇಂತಹ ಪೋಸ್ಟ್‌ಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ 'ರಾಜಕೀಯ ಧ್ರುವೀಕರಣ'ಕ್ಕೆ ಕಾರಣವಾಗಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಆದೇಶದಲ್ಲಿದೆ. ಜೊತೆಗೆ, ಕೇರಳ ಪೊಲೀಸರು ಅವರ ವಿರುದ್ಧ ಕಠಿಣ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಿದೆ.
ಯಾವುದೇ ಸರ್ಕಾರಿ ನೌಕರರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಸಾರ್ವಜನಿಕ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಯಾವುದೇ ಪಕ್ಷದ, ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.
ಇದು ರಾಜಕೀಯ ದ್ವೇಷ- ಶಿಕ್ಷಕ: ಶಿಕ್ಷಕ ಜಾವದ್ ಮತ್ತು ಅವರ ಬೆಂಬಲಿಗರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು ಸರ್ಕಾರವನ್ನು ವಿಮರ್ಶಿಸುವವರನ್ನು ಹೆದರಿಸಲು ಕೈಗೊಂಡ ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸಿದ್ದಾರೆ. ಜಾವದ್ ಅವರು ಶಿಕ್ಷಕರಾಗಿ 29 ವರ್ಷ ಮತ್ತು ಪ್ರಾಂಶುಪಾಲರಾಗಿ 3 ವರ್ಷ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಗೆ ಎರಡೇ ದಿನ ಬಾಕಿ ಇರುವಾಗ ಅವರನ್ನು ಅಮಾನತು ಮಾಡಿರುವುದು ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶ ಇದಾಗಿದೆ ಎಂದು ಎಡಪಂಥೀಯ ಬೆಂಬಲಿತ ಶಿಕ್ಷಕರ ಸಂಘಟನೆಗಳು ಆಕ್ಷೇಪಿಸಿವೆ.
ಇವುಗಳನ್ನೂ ಓದಿ:

