ಶಿಕ್ಷಕರಿಗೆ ಟಿಇಟಿ ಕಡ್ಡಾಯ: ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 2028ರ ಆಗಸ್ಟ್ 31ರವರೆಗೆ ಸಮಯಾವಕಾಶ
ಸೇವಾ ನಿರತ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಬರೆದು ಅರ್ಹತೆ ಪಡೆಯಬೇಕೆಂದು ಪುನರುಚ್ಚರಿಸಿರುವ ಸುಪ್ರೀಂ ಕೋರ್ಟ್, ಪರೀಕ್ಷೆ ಬರೆಯುವ ಅವಧಿಯನ್ನು ವಿಸ್ತರಿಸಿದೆ.

Published : May 31, 2026 at 9:46 AM IST
ನವದೆಹಲಿ: ಸೇವಾ ನಿರತ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪುನರುಚ್ಚರಿಸಿದೆ. ಇದೇ ವೇಳೆ, ಸೇವೆಯಲ್ಲಿ ಉಳಿಯಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 2028ರ ಆಗಸ್ಟ್ 31ರ ವರೆಗೆ ಸಮಯಾವಕಾಶವನ್ನು ವಿಸ್ತರಿಸಿತು.
ಅಂಜುಮನ್ ಇಶಾತ್-ಎ-ತಲೀಮ್ ಟ್ರಸ್ಟ್ ಪ್ರಕರಣದಲ್ಲಿ ನ್ಯಾಯಾಲಯದ ಹಿಂದಿನ ತೀರ್ಪನ್ನು ಪ್ರಶ್ನಿಸಿ ಹಲವಾರು ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಘಗಳು ಮತ್ತು ಶಿಕ್ಷಕರು ವೈಯಕ್ತಿಕವಾಗಿ ಸಲ್ಲಿಸಿದ್ದ 65ಕ್ಕೂ ಹೆಚ್ಚು ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ವಜಾಗೊಳಿಸಿದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009 ಜಾರಿಗೆ ಬರುವ ಮೊದಲು ನೇಮಕವಾಗಿರುವ ಮತ್ತು ನಿವೃತ್ತಿಗೆ 5 ವರ್ಷಗಳಿಗಿಂತ ಹೆಚ್ಚು ಸಮಯ ಬಾಕಿ ಇರುವ ಶಿಕ್ಷಕರು 2025ರ ಸೆಪ್ಟೆಂಬರ್ 1ರಿಂದ ಎರಡು ವರ್ಷಗಳೊಳಗೆ ಟಿಇಟಿ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎಂದು 2025ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಅರ್ಜಿದಾರರು ಮನವಿ ಮಾಡಿದ್ದರು.
ಟಿಇಟಿಯನ್ನು ಸಂಬಂಧಿತ ಅಧಿಕಾರಿಗಳು ತ್ವರಿತವಾಗಿ ನಡೆಸಬೇಕು. ಅದಕ್ಕೆ ಬೇಕಿರುವ ಸಮಯ ಮತ್ತು ಸಂಪನ್ಮೂಲಗಳು ಸೀಮಿತವಾಗಿವೆ. ನಾವು ಕಾಲಮಿತಿಯನ್ನು 2ರಿಂದ 3 ವರ್ಷಗಳಿಗೆ ಬದಲಾಯಿಸುತ್ತೇವೆ ಹಾಗು ವಿಸ್ತರಣೆ ಮಾಡುತ್ತೇವೆ. ಈ ಹಿಂದೆ ನೀಡಿದ ನಿರ್ದೇಶನ 2027ರ ಆಗಸ್ಟ್ 31ಕ್ಕೆ ಬದಲು ಇದೀಗ 2028ರ ಆಗಸ್ಟ್ 31ರೊಳಗೆ ಶಿಕ್ಷಕರು ಅರ್ಹತೆ ಪಡೆಯಬೇಕು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಇದೇ ಸಂದರ್ಭದಲ್ಲಿ, ಆರ್‌ಟಿಇ ಕಾಯ್ದೆಯ ಚೌಕಟ್ಟಿನಂತೆ ಸೇವಾವಧಿಯಲ್ಲಿರುವ ಶಿಕ್ಷಕರೂ ಸಹ ನಿಗದಿತ ಸಮಯದೊಳಗೆ ಕನಿಷ್ಠ ಅರ್ಹತೆಗಳನ್ನು ಪಡೆಯುವುದು ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಿತು.
ಶಿಕ್ಷಕರ ಪ್ರತಿಭಟನೆ: ಬಡ್ತಿ, ಕೆಲಸದಲ್ಲಿ ಮುಂದುವರಿಯಲು ಶಿಕ್ಷಕರು ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾಗಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಶಿಕ್ಷಕರು ಇತ್ತೀಚಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರಾಮ್ಲೀಲಾ ಮೈದಾನದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಶಿಕ್ಷಕರು, ಟೀಚರ್ಸ್ ಫೆಡರೇಶನ್ ಆಫ್ ಇಂಡಿಯಾ ಬ್ಯಾನರ್ ಅಡಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸುಪ್ರೀಂ ಕೋರ್ಟ್ನ ಆದೇಶದಿಂದ 20 ಲಕ್ಷ ಶಿಕ್ಷಕರು ಅಪಾಯ ಎದುರಿಸುತ್ತಿದ್ದಾರೆ. ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸ್ ಮಾಡಬೇಕು, ಇಲ್ಲವಾದಲ್ಲಿ ರಾಜೀನಾಮೆ ನೀಡಬಹುದೆಂಬ ತೀರ್ಪು ಜೀವನೋಪಾಯಕ್ಕೆ ಕುತ್ತು ತರುತ್ತದೆ. ತಕ್ಷಣವೇ ರಾಜ್. ಸರ್ಕಾರಗಳು ಮಧ್ಯಪ್ರವೇಶಿಸಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾನಿರತ ಶಿಕ್ಷಕರು ಒತ್ತಾಯಿಸಿದ್ದರು.
ಇದನ್ನೂ ಓದಿ: ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ: ಮಧು ಬಂಗಾರಪ್ಪ

