ETV Bharat / bharat

ನಟ ದರ್ಶನ್‌ಗೆ ಮತ್ತೆ ಹಿನ್ನಡೆ: ಜಾಮೀನು ಅರ್ಜಿ ತಿದ್ದುಪಡಿ ಮನವಿ ತಿರಸ್ಕರಿಸಿದ ಸುಪ್ರೀಂ

ಕೊಲೆ ಪ್ರಕರಣದ ಆರೋಪಿ ದರ್ಶನ್ ಸಲ್ಲಿಸಿದ್ದ ಆದೇಶ ಮಾರ್ಪಾಡು ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

SC declines to entertain Darshan's plea for clarification on one-year bail bar
ನಟ ದರ್ಶನ್‌ (IANS)
author img

By ETV Bharat Karnataka Team

Published : July 3, 2026 at 7:48 PM IST

|

Updated : July 3, 2026 at 9:00 PM IST

3 Min Read
Choose ETV Bharat

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಈ ವರ್ಷ ಮೇ 15 ರಂದು 1 ವರ್ಷದ ವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್​ನ ಆದೇಶ ತಿದ್ದುಪಡಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಖುದ್ದು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್​ ಅವರೇ ಈ ಅರ್ಜಿಯನ್ನ ತಿರಸ್ಕರಿಸಿದ್ದಾರೆ.

ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ಆರೋಪಿ ದರ್ಶನ್‌ ಮನವಿ ಮಾಡಿದ್ದರು. ಆದರೆ, ಇದು ಅರ್ಹವಲ್ಲದ ಅರ್ಜಿ, ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮಾಹಿತಿ ನೀಡಿ ಅರ್ಜಿ ತಿರಸ್ಕರಿಸಲಾಗಿದೆ. ಮಾರ್ಪಾಡು ಕೋರುವ ನೆಪದಲ್ಲಿ ಆದೇಶವನ್ನು ಪರಿಶೀಲಿಸಲು ಕೋರಲಾದ ಈ ಅರ್ಜಿಯನ್ನು ರಿಜಿಸ್ಟ್ರಾರ್ ನ್ಯಾಯಾಲಯ ಗಮನಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸುಪ್ರೀಂ ಕೋರ್ಟ್ ವೆಬ್‌ಸೈಟ್ ಪ್ರಕಾರ, ದರ್ಶನ್ ಅವರ ಅರ್ಜಿಯ ಸ್ಥಿತಿ ನಿಷ್ಕ್ರಿಯಗೊಂಡಿದೆ ಎಂದು ತೋರಿಸುತ್ತಿದೆ. ಆದರೆ, ಯಾವುದೇ ಆದೇಶವನ್ನು ಅಪ್ಲೋಡ್​ ಮಾಡಲಾಗಿಲ್ಲ.

ಅರ್ಜಿಯಲ್ಲಿ ದರ್ಶನ್​, ಮೇ 15ರಂದು ರಿಟ್​ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​, ಪ್ರಕರಣದ ವಿಚಾರಣೆಯ ಪ್ರಗತಿಯನ್ನು ಗಮನಿಸಿರುವುದು ಖುಷಿ ಇದೆ. ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಣನೀಯ ಬೆಳವಣಿಗೆ ಕಾಣದಿದ್ದಲ್ಲಿ ಅರ್ಜಿದಾರರು ಮತ್ತೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿರುವುದನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್​ 2025ರ ಆಗಸ್ಟ್​ನಿಂದ ನಿರಂತರವಾಗಿ ಜೈಲಿನಲ್ಲಿದ್ದಾರೆ. ಸಂಬಂಧಪಟ್ಟ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ನಿರ್ದೇಶನಗಳನ್ನು ಪಾಲಿಸಿದ್ದಾರೆ. ಯಾವುದೇ ಹಂತದಲ್ಲೂ ವಿಚಾರಣೆಗೆ ಹಾಜರಾಗುವುದರಲ್ಲಿ ವಿಳಂಬ ಮಾಡಿಲ್ಲ. ವಿಚಾರಣೆಯ ಪ್ರಗತಿಗೆ ಅಡ್ಡಿಪಡಿಸಲು ಪ್ರಯತ್ನಿಸಿಲ್ಲ. ನ್ಯಾಯಾಂಗ ಪ್ರಕ್ರಿಯೆಯ ಉದ್ದಕ್ಕೂ ಸಹಕರಿಸಿದ್ದಾರೆ. ಕಾನೂನಿನ ಪ್ರಕಾರ ವಿಚಾರಣೆ ಎದುರಿಸಲು ಲಭ್ಯವಿದ್ದಾರೆ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿದಾರರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ 262 ಸಾಕ್ಷಿಗಳ ವಿಚಾರಣೆ ಮಾಡುವುದಕ್ಕೆ ಪ್ರಸ್ತಾಪಿಸಿದೆ. ಆದರೆ, ಗಣನೀಯ ವಿಳಂಬದ ಹೊರತಾಗಿಯೂ ಕೆಲವೇ ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ. ಇದು ಸುದೀರ್ಘ ಕಾಲದವರೆಗೆ ವಿಚಾರಣೆ ಮುಂದುವರಿಯುವ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದರು.

ಮೇ 15ರ ಆದೇಶವನ್ನು ಉಲ್ಲೇಖಿಸಿ, ಈ ನ್ಯಾಯಾಲಯವು ತ್ವರಿತ ವಿಚಾರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ಆ ಆದೇಶದ ನಂತರ ಕೇವಲ ಇಬ್ಬರು ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಗಮನಾರ್ಹವಾಗಿ, ಇಬ್ಬರೂ ಸಾಕ್ಷಿಗಳು ಕೇವಲ ಔಪಚಾರಿಕ/ಮಹಜರ್ ಸಾಕ್ಷಿಗಳಾಗಿದ್ದು, ಅವರ ಸಾಕ್ಷ್ಯವು ಪ್ರಾಸಿಕ್ಯೂಷನ್ ಪ್ರಕರಣದ ವಸ್ತುನಿಷ್ಠ ತೀರ್ಪನ್ನು ಮುಂದುವರಿಸುವುದಿಲ್ಲ. ಮೇ 15ರ ಆದೇಶದ ನಂತರ ಯಾವುದೇ ಪ್ರಮುಖ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿ, ದೂರುದಾರರ ಸಾಕ್ಷಿ, ತನಿಖಾ ಅಧಿಕಾರಿ ಅಥವಾ ಇತರ ನಿರ್ಣಾಯಕ ಸಾಕ್ಷಿಯನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಆದೇಶವು ಸಂಪೂರ್ಣ ನಿಷೇಧವಲ್ಲ ಎಂದು ಸ್ಪಷ್ಟಪಡಿಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಪರಿಗಣಿಸಿ ಸಕ್ಷಮ ನ್ಯಾಯಾಲಯಗಳು ಪರಿಶೀಲಿಸುವುದಕ್ಕೆ ಅವಕಾಶ ಇರುವುದನ್ನು ಸ್ಪಷ್ಟಪಡಿಸಬೇಕು ಎಂದೂ ಕೋರಿದ್ದರು. ವಿಚಾರಣೆ ಪ್ರಗತಿ ಸ್ಥಗಿತಗೊಂಡಲ್ಲಿ, ದೀರ್ಘಕಾಲ ಕಸ್ಟಡಿಯಲ್ಲಿರುವುದರಿಂದ, ಕೇವಲ ಔಪಚಾರಿಕ ಸಾಕ್ಷಿಗಳ ಪರೀಕ್ಷೆಯಾಗುತ್ತಿದ್ದಲ್ಲಿ, ಮುಖ್ಯ ಪ್ರಾಸಿಕ್ಯೂಷನ್ ಸಾಕ್ಷ್ಯಗಳಲ್ಲಿ ವಿಳಂಬವಾದಲ್ಲಿ ಅಥವಾ ವೈದ್ಯಕೀಯ ಹಾಗೂ ಮಾನವೀಯ ಕಾರಣಗಳಿಂದ ಅವರ ಸ್ವಾತಂತ್ರ್ಯ ಪ್ರಭಾವಿತಗೊಂಡಲ್ಲಿ ಪುನಃ ನ್ಯಾಯಾಲಯದ ಮೊರೆ ಹೋಗುವ ಅವಕಾಶವಿರುವುದನ್ನು ಸ್ಪಷ್ಟಪಡಿಸುವಂತೆ ನಟ ತಮ್ಮ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಕಳೆದ ವರ್ಷದ ಆಗಸ್ಟ್ ನಲ್ಲಿ ಸುಪ್ರೀಂಕೋರ್ಟ್ ಹೇಳಿದ್ದೇನು?: ಅವರು ಯಾರೇ ಆಗಿರಲಿ, ಎಷ್ಟೇ ಉನ್ನತ ಸ್ಥಾನದಲ್ಲಿರಲಿ, ಕಾನೂನಿಗಿಂತ ಮೇಲಲ್ಲ ಎಂದು ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಹೇಳಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ಕಾನೂನುಬದ್ಧವಾಗಿ ಮತ್ತು ಕಾರ್ಯವಿಧಾನದ ದೃಷ್ಟಿಯಿಂದ ದೋಷಪೂರಿತ ಎಂದು ವಿಮರ್ಶಿಸಿತ್ತು. ಇದು ನ್ಯಾಯಾಂಗ ಪ್ರಕ್ರಿಯೆಗೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂಬುದನ್ನು ಗಮನಿಸಿತ್ತು.

ಮೇ 15, 2026 ರಂದು ಸುಪ್ರೀಂ ಕೋರ್ಟ್ ನೀಡಿದ ತನ್ನ ಆದೇಶದಲ್ಲಿ ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದಲ್ಲಿ ವಿಷಯವನ್ನು ಪುನಃ ಪರಿಶೀಲಿಸುವುದಾಗಿ ತಿಳಿಸಿತ್ತು. ಗಣನೀಯ ಪ್ರಗತಿ ಇಲ್ಲದಿದ್ದಲ್ಲಿ ದರ್ಶನ್ ಮತ್ತೆ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿತ್ತು. ಈಗ ದರ್ಶನ್ ಅವರು ಹೊಸದಾಗಿ ಅರ್ಜಿ ಸಲ್ಲಿಸಿ, ಮತ್ತೆ ಜಾಮೀನು ಅರ್ಜಿ ಸಲ್ಲಿಸಲು ಅಗತ್ಯವಿರುವ ಅವಧಿಯನ್ನು ಕಡಿಮೆಗೊಳಿಸುವಂತೆ ಕೋರಿದ್ದರು.

ಇದನ್ನು ಓದಿ:

Last Updated : July 3, 2026 at 9:00 PM IST