ETV Bharat / bharat

ಉದ್ವಿಗ್ನತೆಯ ಮಧ್ಯೆ ಇಸ್ರೇಲ್ ಪ್ರಧಾನಿಗೆ ಮೋದಿ ಕರೆ: ಬೆಳವಣಿಗೆಗಳ ಬಗ್ಗೆ ಕಳವಳ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತನಾಡಿದ್ದಾರೆ.

IRAN ISRAEL WAR  US ISRAELI STRIKES ON IRAN  MIDDLE EAST CONFLICT  ಇಸ್ರೇಲ್ ಪ್ರಧಾನಿಗೆ ಮೋದಿ ಕರೆ PM MODI DIALS NETANYAHU
ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ಭಾರತದ ಪ್ರಧಾನಿ ಮೋದಿ (IANS)
author img

By ETV Bharat Karnataka Team

Published : March 2, 2026 at 9:48 AM IST

2 Min Read
Choose ETV Bharat

ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಂಭಾಷಣೆಯಲ್ಲಿ ನಾಗರಿಕರ ಸುರಕ್ಷತೆಯ ಬಗ್ಗೆ ಒತ್ತಿ ಹೇಳಿ, ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇಸ್ರೇಲ್ ಪ್ರಧಾನಿ ಜೊತೆಗಿನ ಸಂಭಾಷಣೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, "ಸದ್ಯದ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ, ಜೊತೆಗೆ ಬೇಗನೇ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದೆ" ಎಂದು ಬರೆದುಕೊಂಡಿದ್ದಾರೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ಮಧ್ಯದ ಯುದ್ಧದಿಂದಾಗಿ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಜಾಗತಿಕ ಭದ್ರತಾ ಆತಂಕ ಮೂಡಿರುವ ಮಧ್ಯೆ ಪ್ರಧಾನಿ ಮೋದಿ ಮತ್ತು ನೆತನ್ಯಾಹು ಸಂಭಾಷಣೆ ನಡೆದಿದೆ. ಸ್ಥಿರತೆಯನ್ನು ಪುನಃಸ್ಥಾಪಿಸಲು ನಿರಂತರವಾಗಿ ಸಂಯಮ, ಸಂವಾದ ಮತ್ತು ರಾಜತಾಂತ್ರಿಕತೆಗೆ ಭಾರತ ಕರೆ ನೀಡಿದೆ.

ರಾಜಸ್ಥಾನ, ಗುಜರಾತ್, ತಮಿಳುನಾಡು ಮತ್ತು ಪುದುಚೇರಿಗಳ ಎರಡು ದಿನಗಳ ಪ್ರವಾಸದಿಂದ ಹಿಂದಿರುಗಿದ ನಂತರ ಪ್ರಧಾನಿ ಮೋದಿ ಅವರು ಭಾನುವಾರ ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಸಿದರು. ಸರ್ಕಾರಿ ಮೂಲಗಳ ಪ್ರಕಾರ, ಪ್ರಧಾನಿ ಮೋದಿ ರಾತ್ರಿ 9.30ರ ಸುಮಾರಿಗೆ ದೆಹಲಿಗೆ ತಲುಪಿದ ಬಳಿಕ ತಕ್ಷಣವೇ ಸದ್ಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸೇರಿದಂತೆ ಹಿರಿಯ ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ ಎಂದು ವರದಿಗಳು ಸೂಚಿಸುತ್ತವೆ.

ಪ್ರಧಾನಿ ಮೋದಿ ಅವರು ಇಸ್ರೇಲ್‌ನ ಎರಡು ದಿನಗಳ ಭೇಟಿಯನ್ನು ಕಳೆದ ಗುರುವಾರ (ಫೆಬ್ರವರಿ 26) ಮುಕ್ತಾಯಗೊಳಿಸಿದ್ದರು. ಈ ಪ್ರವಾಸದ ವೇಳೆ, ಉಭಯ ನಾಯಕರು ಭಾರತ-ಇಸ್ರೇಲ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ಒಪ್ಪಿಕೊಂಡಿದ್ದರು. ಜೊತೆಗೆ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದರು. ಹಾಗೆಯೇ, ದ್ವಿಪಕ್ಷೀಯ ಸಂಬಂಧಗಳ ಬಲವನ್ನು ಪುನರುಚ್ಚರಿಸಿದ್ದರು.

ಯುಎಇ ಜೊತೆಗಿದ್ದೇವೆ ಎಂದ ಮೋದಿ: ಅಮೆರಿಕ ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಗಲ್ಫ್ ರಾಷ್ಟ್ರದ ಮೇಲಿನ ಇರಾನ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಭಾನುವಾರ ರಾತ್ರಿ ಕರೆ ಮಾಡಿ, ಸಂಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ಭಾರತ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್ ಬಿಕ್ಕಟ್ಟು: ಭಾರತದಲ್ಲಿ ತೈಲ, ನೈಸರ್ಗಿಕ ಅನಿಲ ಬೆಲೆ ಏರುವುದೇ? ಎಷ್ಟು ದಿನಕ್ಕಿದೆ ದಾಸ್ತಾನು?