ETV Bharat / bharat

ಅಬ್ಬಾ!.. ಒಂದು ಎಕರೆಗೆ 269 ಕೋಟಿ ರೂ.: ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್​​ನಲ್ಲಿ ಸಾರ್ವಕಾಲಿಕ ದಾಖಲೆ!!

ಹೈದರಾಬಾದ್​ನ ರಾಯದುರ್ಗಂ ಐಟಿ ಕಾರಿಡಾರ್‌ನಲ್ಲಿ ಒಂದು ಎಕರೆ ಭೂಮಿಗೆ ದಾಖಲೆಯ ಬೆಲೆಯ ಬಿಡ್ ಮಾಡುವ ಮೂಲಕ ವಂಶಿರಾಮ್ ಬಿಲ್ಡರ್ಸ್ ಹೊಸ ದಾಖಲೆ ನಿರ್ಮಿಸಿದೆ.

Rs269 Crore Per Acre  Hyderabad Rayadurgam Land Auction Rewrites Records
ರಾಯದುರ್ಗಂ ಐಟಿ ಕಾರಿಡಾರ್‌ (ETV Bharat)
author img

By ETV Bharat Karnataka Team

Published : August 29, 2026 at 7:31 PM IST

3 Min Read
Choose ETV Bharat

ಹೈದರಾಬಾದ್: ನಗರದಲ್ಲಿ ಭೂಮಿಯ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ರಾಯದುರ್ಗಂ ಐಟಿ ಕಾರಿಡಾರ್‌ನಲ್ಲಿ ಒಂದು ಎಕರೆ ಭೂಮಿಯ ಬೆಲೆ ಬರೋಬ್ಬರಿ 269 ಕೋಟಿ ರೂಪಾಯಿ ತಲುಪಿದ್ದು, ದಾಖಲೆ ನಿರ್ಮಿಸಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ, ಇಲ್ಲಿ ಒಂದು ಎಕರೆ ಭೂಮಿಯ ಬೆಲೆ 264 ಕೋಟಿ ರೂಪಾಯಿ ಇತ್ತು. ವಾರದ ಹಿಂದಿನ ದಾಖಲೆಯನ್ನು ಈ ಬಿಡ್​ ಧ್ವಂಸ ಮಾಡಿದೆ.

ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ (ಟಿಜಿಐಐಸಿ)ವು ಶುಕ್ರವಾರ ರಾಯದುರ್ಗಂನ ಸರ್ವೆ ಸಂಖ್ಯೆ 83/1 ರಲ್ಲಿನ 5.38 ಎಕರೆಯ ಭೂಮಿ ಹರಾಜು ನಡೆಸಿತು. ಕನಿಷ್ಠ ಬೆಲೆ 175 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. 10 ಕೋಟಿ ರೂಪಾಯಿ ಮುಂಗಡವಾಗಿ ಪಾವತಿಸಿದವರಿಗೆ ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇದರೊಂದಿಗೆ, ಹಲವು ರಿಯಲ್ ಎಸ್ಟೇಟ್ ಕಂಪನಿಗಳು ಹರಾಜಿನಲ್ಲಿ ಸ್ಪರ್ಧಿಸಿದ್ದವು. ಸ್ಥಳೀಯ ಮತ್ತು ರಾಷ್ಟ್ರೀಯ ರಿಯಲ್ ಎಸ್ಟೇಟ್ ಸಂಸ್ಥೆಗಳು ಭಾಗಿಯಾಗಿದ್ದವು. ಇವುಗಳ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು.

ಬ್ರಿಗೇಡ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಕೊನೆಯವರೆಗೂ ಕಣದಲ್ಲಿ ಕಸರತ್ತು ನಡೆಸಿತಾದರೂ, ಹೈದರಾಬಾದ್ ಮೂಲದ ವಂಶಿರಾಮ್ ಬಿಲ್ಡರ್ಸ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಎಕರೆಗೆ 269 ಕೋಟಿ ರೂಪಾಯಿ ಬಿಡ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ವಂಶಿರಾಮ್ ಬಿಲ್ಡರ್ಸ್ ಒಟ್ಟು 5.38 ಎಕರೆ ಭೂಮಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಸರ್ಕಾರ ನಿಗದಿಪಡಿಸಿದ ಆರಂಭಿಕ ಮೀಸಲು ಬೆಲೆಗೆ ಹೋಲಿಸಿದರೆ ಇದು ಶೇ.52.3ರಷ್ಟು ಹೆಚ್ಚು ಎಂದು ಹೇಳಲಾಗುತ್ತಿದೆ. 5.38 ಎಕರೆಗಳಷ್ಟು ವಿಸ್ತಾರವಾದ ಪ್ಲಾಟ್ P2 ಹರಾಜಿನಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 1,447.22 ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಹೈದರಾಬಾದ್ ಮತ್ತೊಮ್ಮೆ ದೇಶದ ಅತ್ಯಂತ ದುಬಾರಿ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿ ಒಂದಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ವಾರದ ಅಂತರಲ್ಲಿ ದಾಖಲೆ ಬೆಲೆಗೆ ಮಾರಾಟ: ಕಳೆದ ವಾರವಷ್ಟೇ ಇದೇ ಪ್ರದೇಶದಲ್ಲಿ ನಡೆದ ಪ್ಲಾಟ್ ಪಿ1 ಹರಾಜಿನಲ್ಲಿ, ಒಂದು ಎಕರೆ ಭೂಮಿಗೆ 264 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಆಗ ಒಟ್ಟು 5.25 ಎಕರೆಗೆ ರಾಜ್ಯ ಸರ್ಕಾರಕ್ಕೆ 1,386 ಕೋಟಿ ರೂಪಾಯಿ ಆದಾಯ ಹರಿದು ಬಂದಿತ್ತು. ಬಿಡ್ ಮಾಡಿದ ರಿಯಲ್ ಎಸ್ಟೇಟ್ ಕಂಪನಿಯು ಈಗಾಗಲೇ ಮೊದಲ ಕಂತಿನ ಭಾಗವಾಗಿ ಹರಾಜು ಮೌಲ್ಯದ 25 ಪ್ರತಿಶತವನ್ನು ರಾಜ್ಯ ಸರ್ಕಾರಕ್ಕೆ ಠೇವಣಿ ಮಾಡಿದೆ ಎಂದು ಟಿಜಿಐಐಸಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಲ್ಲದೇ, ರಾಯದುರ್ಗದ ಭೂಮಿಯು ರಾಜ್ಯ ಸರ್ಕಾರದ ಖಜಾನೆಗೆ ಚಿನ್ನದ ಗಣಿಯಾಗಿ ಮಾರ್ಪಟ್ಟಿದೆ ಎಂದು ರಿಯಲ್ ಎಸ್ಟೇಟ್ ದಿಗ್ಗಜರು ಪ್ರಸ್ತುತ ಮಾತನಾಡಿಕೊಳ್ಳುತ್ತಿದ್ದಾರೆ.

  • 2025 ಮತ್ತು 2026ರಲ್ಲಿ, ರಾಯದುರ್ಗದಲ್ಲಿ 41.74 ಎಕರೆ ಭೂಮಿಯನ್ನು ಹರಾಜು ಮಾಡಿ ಒಟ್ಟು 8,457.47 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಟಿಜಿಐಐಸಿ ದಾಖಲೆಗಳು ತೋರಿಸುತ್ತವೆ.
  • 2014ರಿಂದ 2024ರವರೆಗೆ, ತೆಲಂಗಾಣ ಸರ್ಕಾರ 31.88 ಎಕರೆ ಭೂಮಿಯನ್ನು ಹರಾಜು ಮಾಡಿದ್ದು, ಇದರಿಂದ 730.66 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.
  • 2007ರಿಂದ 2013ರವರೆಗೆ, 102.49 ಎಕರೆಗಳನ್ನು ಹರಾಜಿನಲ್ಲಿ ಇಡಲಾಗಿದ್ದು, ಸರ್ಕಾರಕ್ಕೆ 2,143.69 ಕೋಟಿ ರೂ. ಆದಾಯ ಬಂದಿತ್ತು.

ಸತತ ಎರಡು ಹರಾಜಿನಲ್ಲಿ ದಾಖಲೆಯ ಬೆಲೆಗೆ ಭೂಮಿ ಬಿಡ್​ ಆಗಿದ್ದು, ಇದು ರಾಯದುರ್ಗಂ ಪ್ರದೇಶದ ಬಗ್ಗೆ ಹೂಡಿಕೆದಾರರು ಹೊಂದಿರುವ ಬಲವಾದ ಆಸಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಟಿಜಿಐಐಸಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಶಶಾಂಕ ಹೇಳಿದ್ದಾರೆ.

ಭೂಮಿಗೆ ಭಾರಿ ಬೇಡಿಕೆ ಬರಲು ಕಾರಣ?:

  • ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯದಿಂದಾಗಿ ರಾಯದುರ್ಗಂ ಪ್ರದೇಶದಲ್ಲಿ ಕಚೇರಿಗಳನ್ನು ಆರಂಭಿಸಲು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿನ ಭೂಮಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಲು ಆಸಕ್ತಿ ತೋರಿಸುತ್ತಿದ್ದಾರೆ.
  • ಬೆಂಗಳೂರು, ಪುಣೆ, ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಿಗೆ ಹೋಲಿಸಿದರೆ ಜೀವನ ವೆಚ್ಚ ಕಡಿಮೆ ಮತ್ತು ಮಾನವ ಸಂಪನ್ಮೂಲಗಳ ಹೆಚ್ಚಿನ ಲಭ್ಯತೆಯಿಂದಾಗಿ ಜಿಸಿಸಿಗಳು ಮತ್ತು ಡೇಟಾ ಸೆಂಟರ್‌ಗಳನ್ನು ಸ್ಥಾಪನೆ ಮಾಡುತ್ತಿರುವುದು.
  • ಇದರೊಂದಿಗೆ, ರಿಯಲ್ ಎಸ್ಟೇಟ್ ಕಂಪನಿಗಳು ವಿಶಾಲವಾದ ಪ್ರದೇಶಗಳನ್ನು ಖರೀದಿಸಿ ಸ್ಕೈ ಟವರ್‌ಗಳಂತಹ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಅವುಗಳನ್ನು ಗುತ್ತಿಗೆಗೆ ನೀಡುತ್ತಿರುವುದರಿಂದ ಈ ಬೇಡಿಕೆ ಎನ್ನಲಾಗಿದೆ.

ಇದನ್ನೂ ಓದಿ: ಐಟಿಐ ಭೂಮಿ ಹರಾಜಿಗೆ ಸಿದ್ಧತೆ, ಸಿಎಂ ಡಿಕೆಶಿ ತೀವ್ರ ಆಕ್ಷೇಪ: ಕೆಪಿಸಿಸಿಯಿಂದಲೂ ಕೇಂದ್ರ ಸಚಿವರಿಗೆ ಪತ್ರ