ETV Bharat / bharat

ಚಿನ್ನ ಮಾರಾಟ ಮಾಡಿಲ್ಲ, ಈಗಲೂ 880.52 ಟನ್​ ಬಂಗಾರ ದಾಸ್ತಾನಿದೆ: ಆರ್​ಬಿಐ ಸ್ಪಷ್ಟನೆ

ದೇಶದ ಚಿನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಆರ್​ಬಿಐ ಸ್ಪಷ್ಟನೆ ನೀಡಿದೆ.

RBI CLARIFIES ON GOLD HOLDINGS
ಆರ್​ಬಿಐ (IANS)
author img

By ANI

Published : June 3, 2026 at 1:41 PM IST

2 Min Read
Choose ETV Bharat

ನವದೆಹಲಿ: ವಿದೇಶಿ ವಿನಿಮಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತನ್ನಲ್ಲಿ ದಾಸ್ತಾನಿದ್ದ ಚಿನ್ನವನ್ನು ಮಾರಾಟ ಮಾಡುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ, ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರಾಕರಿಸಿದೆ.

ಸದ್ಯ ದೇಶದ ಆಸ್ತಿಯಾಗಿ ತನ್ನ ಬಳಿ 880.52 ಟನ್‌ ಭೌತಿಕ ಚಿನ್ನ ದಾಸ್ತಾನಿದೆ. ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇಂದ್ರ ಬ್ಯಾಂಕ್ ತನ್ನ ಮೀಸಲು ಚಿನ್ನದ ಒಂದು ಭಾಗವನ್ನು ಮಾರಾಟ ಮಾಡಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದು ಸುಳ್ಳು ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ.

ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆರ್‌ಬಿಐ, "ಮೀಸಲು ಚಿನ್ನವನ್ನು ಮಾರಾಟ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿವೆ. ಆರ್‌ಬಿಐ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಭೌತಿಕ ಚಿನ್ನದ ದಾಸ್ತಾನಿನ ವಿವರಗಳನ್ನು ಬಹಿರಂಗಪಡಿಸುತ್ತದೆ. ಇದರ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇಂದಿನ ದಿನಾಂಕದವರೆಗೆ ಭೌತಿಕ ಚಿನ್ನ 880.52 ಟನ್‌ಗಳಷ್ಟು ದಾಸ್ತಾನಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ" ಎಂದು ಅದು ಸ್ಪಷ್ಟಪಡಿಸಿದೆ.

ಮಾಧ್ಯಮಗಳ ವರದಿ ಸುಳ್ಳು: ಕೆಲ ಮಾಧ್ಯಮಗಳಲ್ಲಿ ಭಿತ್ತರವಾದ ವರದಿಗಳನ್ನ ಅಲ್ಲಗಳೆದಿರುವ ಆರ್​​ಬಿಐ, ಇಂತಹ ದೃಢೀಕರಿಸದ ಮತ್ತು ಅಪೂರ್ಣ ಮಾಹಿತಿಯನ್ನು ಜನರು ನಂಬದಂತೆ ಕೇಂದ್ರ ಬ್ಯಾಂಕ್ ಸಲಹೆ ನೀಡಿದೆ. ಜೊತೆಗೆ, ಹೆಚ್ಚಿನ ಮಾಹಿತಿಗಾಗಿ ಜನರು ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​​ನಲ್ಲಿ ಮಾಹಿತಿಯನ್ನು ಪರಿಶೀಲಿಸಬಹುದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆರ್​ಬಿಐನ ದತ್ತಾಂಶಗಳ ಪ್ರಕಾರ, ಒಟ್ಟಾರೆ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಇತ್ತೀಚಿನ ತಿಂಗಳುಗಳಲ್ಲಿ ಕುಸಿಯುವ ಬದಲು ಹೆಚ್ಚಳವಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು 2025 ರ ಸೆಪ್ಟೆಂಬರ್ ಅಂತ್ಯದಲ್ಲಿದ್ದ ಶೇಕಡಾ 13.92 ರಿಂದ 2026 ರ ಮಾರ್ಚ್ 31 ರ ವೇಳೆಗೆ ಶೇಕಡಾ 16.70 ಕ್ಕೆ ಏರಿಕೆಯಾಗಿದೆ. ಇದು 2026 ರ ಮೇ 22ರ ಹೊತ್ತಿಗೆ ಶೇಕಡಾ 16.85 ಕ್ಕೆ ಏರಿದೆ ಎಂದು ಕೇಂದ್ರ ಬ್ಯಾಂಕ್‌ನ ಅಂಕಿ - ಅಂಶಗಳು ಸ್ಪಷ್ಟಪಡಿಸಿವೆ.

ಮೇ ತಿಂಗಳ ಅಂತ್ಯದವರೆಗಿನ ಕೇಂದ್ರ ಬ್ಯಾಂಕ್‌ನ ವಾರ ಪತ್ರಿಕೆಯ ಅಂಕಿ - ಅಂಶಗಳ ಪ್ರಕಾರ, ಒಟ್ಟು ಮೀಸಲು ನಿಧಿಯು 686,064 ಮಿಲಿಯನ್ ಯುಎಸ್ ಡಾಲರ್ ಮತ್ತು 703,308 ಮಿಲಿಯನ್ ಯುಎಸ್ ಡಾಲರ್ ನಡುವೆ ಏರಿಳಿತ ಕಂಡಿದೆ. ಇದೇ ಅವಧಿಯಲ್ಲಿ ವಿದೇಶಿ ಕರೆನ್ಸಿ ಆಸ್ತಿಗಳು 550,000 ಮಿಲಿಯನ್ ಯುಎಸ್ ಡಾಲರ್‌ಗಿಂತ ಹೆಚ್ಚಿನ ಮಟ್ಟದಲ್ಲಿದ್ದರೆ, ಚಿನ್ನದ ಮೌಲ್ಯದ ಅಂಕಿ-ಅಂಶಗಳು 113,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿವೆ ಎಂದಿದೆ.

ಚಿನ್ನ ಮಾರಾಟದ ವರದಿ: ವಿದೇಶಿ ವಿನಿಮಯ ನಿಯಂತ್ರಿಸಲು ಆರ್​ಬಿಐ ಮೇ 22 ರ ವೇಳೆಗೆ ಸುಮಾರು 12 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರೂಪಾಯಿ ಮೇಲಿನ ಒತ್ತಡ ಮತ್ತು ಹೆಚ್ಚುತ್ತಿರುವ ಆಮದು ವೆಚ್ಚದ ನಡುವೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಲಪಡಿಸುವ ಮತ್ತು ರಕ್ಷಿಸುವ ಪ್ರಯತ್ನವಾಗಿ ಈ ಮಾರಾಟ ನಡೆದಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ಇವುಗಳನ್ನೂ ಓದಿ: