ಪುಣೆ ಪೋರ್ಷೆ ಅಪಘಾತ: ಆರೋಪಿ ತಂದೆ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ಪುಣೆ ಪೋರ್ಷೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ತಂದೆ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

By PTI
Published : February 26, 2026 at 3:00 PM IST
ನವದೆಹಲಿ : 2024ರ ಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿರುವ ಅಪ್ರಾಪ್ತನ ತಂದೆ ಸಲ್ಲಿಸಿದ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಮೇ 19, 2024 ರಂದು ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರು ಚಲಾಯಿಸುತ್ತಿದ್ದಾಗ ಇಬ್ಬರು ಐಟಿ ಉದ್ಯೋಗಿಗಳು ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಶಾಲ್ ಅಗರ್ವಾಲ್ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಲಾಗಿದೆ. ಡಿಸೆಂಬರ್ 16, 2025ರಂದು ಹೈಕೋರ್ಟ್ ಅಗರ್ವಾಲ್ ಮತ್ತು ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಫೆಬ್ರವರಿ 2 ರಂದು ಸುಪ್ರೀಂ ಕೋರ್ಟ್ ಮೂವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಆದರೆ, ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಘಟನೆಗಳಿಗೆ ಪೋಷಕರೇ ಹೊಣೆಯಾಗಬೇಕು. ಏಕೆಂದರೆ, ಅವರಿಗೆ ತಮ್ಮ ಮಕ್ಕಳ ಮೇಲೆ ನಿಯಂತ್ರಣವಿಲ್ಲ ಎಂದಿತ್ತು.
ಆರೋಪಿಗಳಾದ ಅಮರ್ ಸಂತೋಷ್ ಗಾಯಕ್ವಾಡ್ (ಆರೋಪಿ ಮಧ್ಯವರ್ತಿ), ಆದಿತ್ಯ ಅವಿನಾಶ್ ಸೂದ್ ಮತ್ತು ಆಶಿಶ್ ಸತೀಶ್ ಮಿತ್ತಲ್ (ಕಾರಿನಲ್ಲಿದ್ದ ಇತರ ಇಬ್ಬರು ಬಾಲಾಪರಾಧಿಗಳ ಪೋಷಕರು) 18 ತಿಂಗಳಿನಿಂದ ಬಂಧನದಲ್ಲಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಜನವರಿ 23 ರಂದು, ಜಾಮೀನು ಕೋರಿ ಗಾಯಕ್ವಾಡ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಇದಕ್ಕೂ ಮೊದಲು, ಜನವರಿ 7 ರಂದು ಪ್ರಕರಣದಲ್ಲಿ ಜಾಮೀನು ಕೋರಿ ಇತರೆ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು.
ಕಳೆದ ವರ್ಷ ಡಿಸೆಂಬರ್ 16 ರಂದು ಬಾಂಬೆ ಹೈಕೋರ್ಟ್ ಗಾಯಕ್ವಾಡ್, ಸೂದ್ ಮತ್ತು ಮಿತ್ತಲ್ ಸೇರಿದಂತೆ ಎಂಟು ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಇದಕ್ಕೂ ಮೊದಲು, ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ಅಪ್ರಾಪ್ತ ಆರೋಪಿಗೆ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧ ಬರೆಯುವಂತೆ ಷರತ್ತು ವಿಧಿಸಿ ಜಾಮೀನು ನೀಡಿದ ನಂತರ ಆಕ್ರೋಶ ಭುಗಿಲೆದ್ದಿತ್ತು.
ಈ ಗದ್ದಲದಿಂದಾಗಿ ಪುಣೆ ಪೊಲೀಸರು ತಮ್ಮ ನಿರ್ಧಾರವನ್ನು ಪರಿಶೀಲಿಸಲು ಜೆಜೆಬಿಯನ್ನು ಸಂಪರ್ಕಿಸಿದ್ದರು. ನಂತರ ಮಂಡಳಿಯು ಆದೇಶವನ್ನು ಮಾರ್ಪಡಿಸಿ ಬಾಲಾಪರಾಧಿಯನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಿತ್ತು.
ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಪ್ರಕರಣ: ED ಮುಂದೆ ಅನಿಲ್ ಅಂಬಾನಿ ಹಾಜರು

