ಸಣ್ಣ ತಪ್ಪಿಗೆ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ನೀಡಿದ ಶಿಕ್ಷಕಿ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಶಾಲೆಯಲ್ಲಿ ಮಕ್ಕಳು ತಪ್ಪು ಮಾಡೋದು ಸಹಜ. ಹಾಗಂತ, ದೊಡ್ಡ ಶಿಕ್ಷೆ ನೀಡುವುದು ಸರಿಯಲ್ಲ. ಖಾಸಗಿ ಶಾಲೆಯೊಂದರ ಶಿಕ್ಷಕಿಯ ಕಠಿಣ ನಿಲುವಿಗೆ 15 ವರ್ಷದ ವಿದ್ಯಾರ್ಥಿ ತನ್ನ ಜೀವನವನ್ನೇ ಅಂತ್ಯಗೊಳಿಸಿದ್ದಾನೆ.

Published : May 2, 2026 at 3:19 PM IST
|Updated : May 2, 2026 at 3:33 PM IST
ಗುರುದಾಸ್ಪುರ (ಪಂಜಾಬ್): ಕೆಲವೊಮ್ಮೆ ಖಾಸಗಿ ಶಾಲೆಗಳ ಅತಿಯಾದ ಶಿಸ್ತು, ಕಠಿಣ ನಿಯಮಗಳು ಮಕ್ಕಳನ್ನು ಸಾವಿನ ಹಂತಕ್ಕೆ ತರುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಾಡಿದ ಸಣ್ಣ ತಪ್ಪಿಗಾಗಿ ವಿದ್ಯಾರ್ಥಿಯನ್ನು 1 ಗಂಟೆಗೂ ಅಧಿಕ ಬಿಸಿಲಿನಲ್ಲಿ ನಿಲ್ಲಿಸಿದ್ದರಿಂದ ಮನನೊಂದ ಆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ಗುರುದಾಸ್ಪುರ ಜಿಲ್ಲೆಯ ಕಹ್ನುವಾನ್ ಬ್ಲಾಕ್‌ನ ಝಂಡಾ ಲುಬಾನಾ ಗ್ರಾಮದ ಖಾಸಗಿ ಶಾಲೆಯ 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲಾ ಆಡಳಿತ ಮತ್ತು ಶಿಕ್ಷಕಿಯ ವಿರುದ್ಧ ಕುಟುಂಬಸ್ಥರು ಮತ್ತು ಇತರೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಎಪ್ರಿಲ್ 27 ರಂದು ವಿದ್ಯಾರ್ಥಿಯನ್ನು ಶಿಕ್ಷಕಿಯೊಬ್ಬರು ಕ್ಲಾಸಿನ 2 ಅವಧಿಯಷ್ಟು ಸತತ ಬಿಸಿಲಿನಲ್ಲಿ ನಿಲ್ಲಿಸಿದ್ದರು. ಇದರಿಂದ, ಆತ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾಗಿದ್ದ. ಜೊತೆಗೆ ಶಿಕ್ಷಕಿಯ ಕಠಿಣ ಶಿಕ್ಷೆಯಿಂದ ಅವಮಾನಿತನಾಗಿದ್ದ ಎಂದು ಆರೋಪಿಸಲಾಗಿದೆ.
ಮನೆಗೆ ಬಂದ ಬಳಿಕ ವಿದ್ಯಾರ್ಥಿ ವಿಷಕಾರಿ ಔಷಧ ಸೇವಿಸಿದ್ದ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ, ಶುಕ್ರವಾರ ಅಸುನೀಗಿದ್ದಾನೆ. ವಿದ್ಯಾರ್ಥಿಯ ಸಾವಿನಿಂದ ಕುಟುಂಬಸ್ಥರು ಮತ್ತು ಇತರೆ ವಿದ್ಯಾರ್ಥಿಗಳು ಶಿಕ್ಷಕರ ಕಠಿಣ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವಿದ್ಯಾರ್ಥಿಗೆ ಶಿಕ್ಷೆ ನೀಡಿದ್ದೇಕೆ? ಅಂದು ನಡೆದ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಹಪಾಠಿ ವಿದ್ಯಾರ್ಥಿ, ಸ್ನೇಹಿತ ನನ್ನ ಬಳಿ ಬಂದು ಆತನ ಫ್ರೆಂಡ್ಅನ್ನು ಭೇಟಿ ಮಾಡುವ ಬಗ್ಗೆ ತಿಳಿಸಿದ್ದ. ಇಬ್ಬರೂ ಸೇರಿ, ಶಾಲೆಯಿಂದ ಹೊರಹೋಗುತ್ತಿದ್ದಾಗ ನಮ್ಮನ್ನು ಕಂಡ ಶಿಕ್ಷಕಿ ಕರೆದು ವಿಚಾರಿಸಿದರು. ಇದಕ್ಕೆ ಶಿಕ್ಷೆಯಾಗಿ ಅವರು, ಅವನಿಗೆ ಕ್ಲಾಸಿನ (ಪೀರಿಯಡ್ಸ್) ಎರಡು ಅವಧಿಗೆ ಬಿಸಿಲಿನಲ್ಲಿ ನಿಲ್ಲುವಂತೆ ಆದೇಶಿಸಿದ್ದರು. ಇದರಿಂದ, ಆತ ಸಾಕಷ್ಟು ನೊಂದುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.
ಇದೇ ವೇಳೆ, ಮತ್ತೊಬ್ಬ ವಿದ್ಯಾರ್ಥಿಯೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿಲುವುಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾನೆ. 'ಶಾಲಾ ಶಿಕ್ಷಕರು ಆಗಾಗ್ಗೆ ನಮ್ಮನ್ನು ಥಳಿಸುತ್ತಾರೆ. ಕೆಲವೊಮ್ಮೆ ಪೇಟದ ಬಣ್ಣದ ಸಲುವಾಗಿಯೂ ಶಿಕ್ಷಿಸುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೂ ನಮ್ಮನ್ನು ಬೆದರಿಸುತ್ತಾರೆ. ಮೃತ ಸಿಂಗ್‌ನಂತೆ ಬೇರೆ ಯಾರಿಗೂ ಈ ಸ್ಥಿತಿ ಬರಬಾರದು. ಶಾಲೆಯಲ್ಲಿನ ಕಠಿಣ ನಿಯಮಗಳಿಗೆ ಕಡಿವಾಣ ಹಾಕಬೇಕು ಎಂದು ಆತ ಒತ್ತಾಯಿಸಿದ್ದಾನೆ.
ಪೋಷಕರ ಆಗ್ರಹ: ಇತ್ತ, ಮಗನನ್ನು ಕಳೆದುಕೊಂಡ ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಂದು ನಮ್ಮ ಮಗ ಸಾವನ್ನಪ್ಪಿದ್ದಾನೆ. ಭವಿಷ್ಯದಲ್ಲಿ ಬೇರೆ ಮಕ್ಕಳಿಗೆ ಈ ಸ್ಥಿತಿ ಬರಬಾರದು. ಆದ್ದರಿಂದ, ಪೊಲೀಸರು ಶಾಲಾ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವಿದ್ಯಾರ್ಥಿಯ ತಾಯಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಕುಲ್ವಂತ್ ಸಿಂಗ್ ಮಾನ್ ತಿಳಿಸಿದ್ದಾರೆ.
ಇವುಗಳನ್ನೂ ಓದಿ:

